ರಾಮನಗರ: ಮಾಡಿದ ಯಾವುದೋ ತಪ್ಪಿನಿಂದ ಅಪ್ಪನಾದವನು ಜೈಲು ಸೇರಿದ್ದಾನೆ. ಇತ್ತ ಪತಿ ಜೈಲು ಸೇರಿದ್ದೇ ಪತ್ನಿಯ ವರಸೆ ಬದಲಾಗಿದೆ, ಅನೈತಿಕ ಸಂಬಂಧ (Illicit Relationship) ಶುರುವಾಗಿದೆ. ಪ್ರಿಯಕರನ ಜತೆ ಸಲ್ಲಾಪವನ್ನು ಶುರುವಿಟ್ಟಿದ್ದಾಳೆ. ಆದರೆ, ಇದಕ್ಕೆ ಅಡ್ಡಿಯಾಗುತ್ತಿದ್ದ ಮಕ್ಕಳ ಮೇಲೆ ನಿರಂತರವಾಗಿ ಹಿಂಸೆ ಕೊಡುತ್ತಾ ಬಂದಿದ್ದಾಳೆ. ಇದಕ್ಕೆ ಆಕೆಯ ಪ್ರಿಯಕರನೂ ಸಾಥ್ ಕೊಟ್ಟಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ. ಈ ನಿಮಿತ್ತ ಇವರಿಬ್ಬರ ಮೇಲೆ ಈಗ ಎಫ್‌ಐಆರ್ ದಾಖಲಾಗಿದೆ.
ಬಿಡದಿ ಕುಂಬಳಗೋಡಿನಲ್ಲಿ ಈ ಪ್ರಕರಣ ನಡೆದಿದ್ದು, ಅನಂತಲಕ್ಷ್ಮಿ ಹಾಗೂ ಪ್ರಿಯಕರ ಗಿರೀಶ್ ಎಂಬಿಬ್ಬರೇ ಮಕ್ಕಳಿಗೆ ಹಿಂಸೆ ನೀಡಿದವರು. ಪತಿ ಕೃಷ್ಣ ಕೊಲೆ ಪ್ರಕರಣದಲ್ಲಿ ಚಿತ್ರದುರ್ಗದ ಜೈಲುಪಾಲಾಗಿದ್ದ. ಇದಾಗಿದ್ದೇ ಈಕೆ ಬೆಂಗಳೂರಿನಲ್ಲಿ ಮನೆ ಮಾಡಿದ್ದು, ಗಿರೀಶ್ ಎಂಬಾತನೊಂದಿಗೆ ಪ್ರೀತಿಯಾಗಿದೆ. ಇಲ್ಲಿಂದಲೇ ಅಸಲಿ ಸಮಸ್ಯೆ ಪ್ರಾರಂಭವಾಗಿದೆ. ಆತ ಮನೆಗೆ ಬರುತ್ತಿದ್ದಂತೆ ಮಕ್ಕಳ ಮೇಲೆ ಹಲ್ಲೆ ಮಾಡುವುದು, ಕೆಟ್ಟ ಕೆಟ್ಟ ಪದಗಳಿಂದ ನಿಂದಿಸುವುದು ಮಾಡುತ್ತಿದ್ದ. ಮಕ್ಕಳನ್ನು ಅರೆಬರೆ ಬಟ್ಟೆಯಲ್ಲಿ ನಿಲ್ಲಿಸಿ ಹಲ್ಲೆ ಮಾಡುತ್ತಿದ್ದ. ಇದಕ್ಕೆ ಅನಂತಲಕ್ಷ್ಮಿ ಸಹ ಸಹಕರಿಸುತ್ತಿದ್ದಳು ಎನ್ನಲಾಗಿದೆ.
ಕಳೆದ 6-7 ತಿಂಗಳಿನಿಂದಲೂ ಮಕ್ಕಳಿಗೆ ಚಿತ್ರಹಿಂಸೆ ನೀಡುತ್ತಾ ಬರುತ್ತಿದ್ದು, ಮಕ್ಕಳಿಗೆ ಏನು ಮಾಡಬೇಕು? ಎಲ್ಲಿಗೆ ಹೋಗಬೇಕು ಎಂಬುದೇ ತಿಳಿಯದಾಗಿದೆ. ಇತ್ತ ಅಪ್ಪನ ಬಳಿ ಹೇಳೋಣವೆಂದರೆ ಆತ ಜೈಲು ಸೇರಿದ್ದಾನೆ. ಅಪ್ಪ ಬೇಕು ಎಂದರೆ ಎಲ್ಲಿ ಬರುತ್ತಾನೆ ಅನ್ನುವ ನೋವಿನಲ್ಲೇ ದಿನ ದೂಡುತ್ತಿದ್ದರು. ಈ ವೇಳೆ ಮನೆಗೆ ಅಜ್ಜಿ ಬಂದಿದ್ದಾರೆ. ಅವರ ಬಳಿ ನಡೆದ ಎಲ್ಲ ಸಂಗತಿಯನ್ನೂ ಮಕ್ಕಳು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Vasant Panchami 2023 : ನಾಳೆ ಸರಸ್ವತಿ ಅವತರಿಸಿದ ದಿನ ವಸಂತ ಪಂಚಮಿ
ತಾಯಿಯು ಇನ್ನೊಬ್ಬನ ಜತೆಗೆ ಸಂಬಂಧವನ್ನು ಹೊಂದಿದ್ದು, ನಮಗೆ ನಿರಂತರವಾಗಿ ಕಿರುಕುಳ ನೀಡುತ್ತಾ ಬರುತ್ತಿದ್ದಾಳೆ. ನಮಗೆ ತೀವ್ರವಾಗಿ ಹೊಡೆಯುತ್ತಾರೆ. ಅರೆ ಬಟ್ಟೆಯಲ್ಲಿ ನಿಲ್ಲಿಸಿ ಬಾರಿಸುತ್ತಾರೆ ಎಂಬಿತ್ಯಾದಿ ನೋವನ್ನು ತೋಡಿಕೊಂಡಿದ್ದಾರೆ. ತಕ್ಷಣವೇ ಮೊಮ್ಮಕ್ಕಳನ್ನು ಕರೆದುಕೊಂಡು ಹೋದ ಅಜ್ಜಿ, ಬಿಡದಿ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದಾಖಲು ದಾಖಲಿಸಿದ್ದಾರೆ. ಸದ್ಯ ಮಕ್ಕಳ ಹೇಳಿಕೆ ಹಾಗೂ ಅಜ್ಜಿ ದೂರಿನ ಮೇಲೆ ಅನಂತಲಕ್ಷ್ಮಿ ಹಾಗೂ ಪ್ರಿಯಕರ ಗಿರೀಶ್ ಮೇಲೆ ಎಫ್ಐಆರ್ ದಾಖಲಾಗಿದೆ.
ಕೊಲೆ ಕೇಸ್‌ನಲ್ಲಿ ಕೃಷ್ಣ ಜೈಲುಪಾಲು
೨೦೧೯ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಕೃಷ್ಣ ಚಿತ್ರದುರ್ಗ ಟೌನ್ ಪೊಲೀಸರ ಕೈಗೆ ಸಿಕ್ಕಿಬಿದ್ದು, ಅಲ್ಲಿನ ಜೈಲು ಸೇರಿದ್ದ. ಇದಾದ ಬಳಿಕ ಅನಂತಲಕ್ಷ್ಮಿ ತನ್ನ ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿನ ಶ್ರೀನಗರದಲ್ಲಿರುವ ತನ್ನ ತಾಯಿ ಮನೆಗೆ ಹೋಗಿ ವಾಸವಾಗಿದ್ದಳು. ಅಲ್ಲಿ ಒಂದು ವರ್ಷಗಳ ಕಾಲ ವಾಸವಿದ್ದವಳು, ನಂತರ ಅಲ್ಲಿಯೇ ಬಾಡಿಗೆ ಮನೆಯೊಂದನ್ನು ಪಡೆದು ಮಕ್ಕಳೊಂದಿಗೆ ವಾಸವಿದ್ದಳು. ಈಗ ಒಂದು ಆರೇಳು ತಿಂಗಳ ಹಿಂದೆ ಅಲ್ಲಿಂದ ಹೊಸಕೆರೆ ಹಳ್ಳಿ ಬಳಿ ಬಾಡಿಗೆ ಮನೆ ಮಾಡಿ ವಾಸವಿದ್ದಳು.
ಇದನ್ನೂ ಓದಿ: Tech Layoffs : ಗೂಗಲ್‌ನಲ್ಲಿ ನಿರುದ್ಯೋಗ ತಾಂಡವ, 1.5 ಲಕ್ಷ ಸಿಬ್ಬಂದಿ ವಜಾಗೊಳಿಸಲು ಸಿಇಒ ಸುಂದರ್ ಪಿಚೈಗೆ ಒತ್ತಡ
೨೦೨೩ರ ಜನವರಿ ೧೭ರಂದು ಅನಂತಲಕ್ಷ್ಮಿ ತಾಯಿ ಮೊಮ್ಮಕ್ಕಳನ್ನು ಕರೆದುಕೊಂಡು ಬಂದು ಕೃಷ್ಣನ ತಾಯಿ ಗಂಗಮ್ಮ ಅವರ ಬಳಿ ಬಿಟ್ಟುಹೋಗಿದ್ದರು. ಅನಂತಲಕ್ಷ್ಮಿಯ ಕೃತ್ಯಗಳ ಬಗ್ಗೆ ಮಗಳು ತನ್ನ ಅತ್ತೆ ಬಳಿ (ಗಂಗಮ್ಮ ಅವರ ಮಗಳು) ವಿಸ್ತೃತವಾಗಿ ಹೇಳಿದ್ದಾಳೆ. ಹೊಸಕೆರೆ ಹಳ್ಳಿ ಮನೆಗೆ ಗಿರೀಶ್ ಎಂಬಾತ ಪ್ರತಿದಿನ ಬರುತ್ತಿದ್ದ. ತನಗೆ ಮತ್ತು ಸಹೋದರಿಗೆ ಹೊಡೆಯುವುದು, ಕೆಟ್ಟ ಶಬ್ದಗಳಿಂದ ನಿಂದಿಸುವುದನ್ನು ಮಾಡುತ್ತಿದ್ದ. ಕೆಲವೊಮ್ಮೆ ತಮ್ಮಿಬ್ಬರ ಮೈಮೇಲಿನ ಬಟ್ಟೆಗಳನ್ನು ಬಿಚ್ಚಿಸಿ ಹಲ್ಲೆ ಮಾಡುತ್ತಿದ್ದ. ಒಂದು ದಿನ ತನ್ನ ಹಲ್ಲನ್ನೂ ಮುರಿದು ಹಾಕಿದ್ದ. ಈ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಕ್ಕಳ ಅಜ್ಜಿ ಗಂಗಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.