Site icon Vistara News

Amrit Mahotsav | ಅಮರವಾಗಿದೆ ಅಮರ ಸುಳ್ಯ ದಂಗೆ-1837; ಬ್ರಿಟಿಷರ ವಿರುದ್ಧ ರೈತರ ಕೆಚ್ಚೆದೆಯ ಹೋರಾಟ

Amrit Mahotsav

| ಗಂಗಾಧರ ಕಲ್ಲಪಳ್ಳಿ, ಸುಳ್ಯ
ಬ್ರಿಟಿಷರ ದಬ್ಬಾಳಿಕೆಯ ಸಂಕೊಲೆಯಲ್ಲಿ ನಲುಗಿದ ಭಾರತೀಯರ ಆಕ್ರೋಶದ ದನಿ ಮೊಳಗಿದ್ದು 1857ರಲ್ಲಿ ಎಂಬುದು ಇತಿಹಾಸದ ಪುಟಗಳನ್ನು ತೆರೆದಾಗ ನಮಗೆ ತಿಳಿಯುತ್ತದೆ. ಇದನ್ನು ಮೊದಲ ಸ್ವಾತಂತ್ರ್ಯ ಸಂಗ್ರಾಮ (Amrit Mahotsav) ಎಂದು ಇತಿಹಾಸಕಾರರು ಪರಿಗಣಿಸಿದ್ದಾರೆ. ಆದರೆ, ಇದಕ್ಕೂ ಎರಡು ದಶಕಗಳ ಮೊದಲೇ 1837ರಲ್ಲಿ ರೈತಾಪಿ ವರ್ಗದಿಂದ ರಾಜ್ಯದಲ್ಲಿ ನಡೆದಿತ್ತು ‘ಅಮರ ಸುಳ್ಯ ದಂಗೆ’ ಅಥವಾ ‘ಕೊಡಗು-ಕೆನರಾ ಬಂಡಾಯ’…

1837ರಲ್ಲಿ ನಡೆದ ಆ ಹೋರಾಟದಲ್ಲಿ ಬ್ರಿಟಿಷರನ್ನು ಸೋಲಿಸಿ ಮಂಗಳೂರಿನ ಬಾವುಟಗುಡ್ಡೆಯಲ್ಲಿ ವಿಜಯ ಪತಾಕೆಯನ್ನು ಹಾರಿಸಿ 13 ದಿನಗಳ ಕಾಲ ಮಂಗಳೂರನ್ನು ಆಳಿದ್ದರು. ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿರುವಾಗ ಅಮರ ಸುಳ್ಯ ಹೋರಾಟದ ನೆನಪುಗಳು ಶಾಶ್ವತವಾಗಿ ಉಳಿಯಲು ಯೋಜನೆ ರೂಪಿಸಲಾಗಿದೆ. ಅಂದಿನ ಹೋರಾಟದ ನೇತೃತ್ವ ವಹಿಸಿದ್ದ ಸಮರ ವೀರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಮಂಗಳೂರಿನಲ್ಲಿ ಸ್ಥಾಪಿಸಿರುವುದು ಅದರ ಪ್ರಮುಖ ಭಾಗ.

ಕ್ರಿ.ಶ.1799ರಲ್ಲಿ ನಡೆದ 4ನೇ ಆಂಗ್ಲೋ-ಮೈಸೂರು ಯುದ್ಧದ ರಣಾಂಗಣದಲ್ಲಿ ಟಿಪ್ಪು ಮಡಿದ ನಂತರ ಮಂಗಳೂರು ಸಂಪೂರ್ಣವಾಗಿ ಇಂಗ್ಲಿಷರ ವಶವಾಯಿತು. ಅದಾದ ಕೆಲವೇ ದಿನಗಳಲ್ಲಿ ವಿಟ್ಲದ ರವಿವರ್ಮ ನರಸಿಂಹ ದೊಂಬ ಹೆಗ್ಗಡೆ ತಾನು ಸ್ವತಂತ್ರ ರಾಜನೆಂದು ಘೋಷಿಸಿಕೊಂಡ, ಆದರೆ ಮಂಗಳೂರನ್ನು ಗೆಲ್ಲುವ ಆತನ ಉದ್ದೇಶ ವಿಫಲವಾಯಿತು. ಹೆಗ್ಗಡೆ ಮತ್ತು ಆತನ ಸೇನಾಧಿಕಾರಿಯನ್ನು ಬಂಧಿಸಿದ ಇಂಗ್ಲಿಷರು ಅವರಿಗೆ ಗಲ್ಲು ಶಿಕ್ಷೆ ನೀಡುತ್ತಾರೆ. ಮುಂದೆ ಕ್ರಿ.ಶ.1811ರಲ್ಲಿ ಮಂಗಳೂರು ಮತ್ತು ಸುತ್ತಲ ಗ್ರಾಮಗಳ ರೈತರು ಅಸಹಕಾರ ಚಳವಳಿಗೆ ಧುಮುಕಿದರು. ಶಾಂತ ರೀತಿಯ ಪ್ರತಿಭಟನೆಗೆ ಮಹತ್ತರವಾದ ಬದಲಾವಣೆಗಳಾಗದಿದ್ದರೂ ಅಲ್ಪಸ್ವಲ್ಪ ಪರಿಹಾರದ ದಾರಿಯನ್ನು ತೋರಿಸಿದ ಬ್ರಿಟಿಷರು ಹೋರಾಟವನ್ನು ತಣ್ಣಗಾಗಿಸಿದರು.

ಇದನ್ನೂ ಓದಿ | Amrit Mahotsav | ಬ್ರಿಟಿಷರ ವಿರುದ್ಧ ದಂಗೆ ಸಂಘಟಿಸಿದ್ದ ಅಪ್ಪಾಸಾಹೇಬ ಪಟವರ್ಧನ್‌

ಇದು ನಡೆದು 20 ವರ್ಷಗಳಾಗುತ್ತಿದ್ದಂತೆ ಕೆನರಾ ಜಿಲ್ಲೆಯ ಗಡಿಪ್ರದೇಶವಾದ ಇಂದಿನ ಶಿವಮೊಗ್ಗ ಜಿಲ್ಲೆಯ ನಗರ ಎಂಬ ಊರಿನಲ್ಲಿ ರೈತ ಹೋರಾಟವೊಂದು ಮೊಗ್ಗೊಡೆಯಿತು. ಮೈಸೂರು ಮುಮ್ಮುಡಿ ಕೃಷ್ಣರಾಜ ಒಡೆಯರ್‌ನ ಕಂದಾಯ ನೀತಿಯ ವಿರುದ್ಧ ನಡೆದ ಬಂಡಾಯವದು. ತಣ್ಣಗೆ ಆರಂಭವಾದ ಈ ‘ನಗರ ರೈತದಂಗೆ’ ಮುಂದೆ ಉಗ್ರ ಸ್ವರೂಪವನ್ನು ಪಡೆದುಕೊಂಡಿತು. ಇದೇ ಸಮಯದಲ್ಲಿ ಮಂಗಳೂರಿನ ರೈತರು ಕೂಡ ಬ್ರಿಟಿಷರನ್ನು ಪ್ರತಿಭಟಿಸುವ ದಾರಿಯನ್ನು ಹಿಡಿದರು. ಶಾಂತ ಸ್ವರೂಪದ ಪ್ರತಿಭಟನೆ ನಂತರ ದಿನಗಳಲ್ಲಿ ಹಿಂಸಾತ್ಮಕ ರೂಪ ಪಡೆಯಿತು. ಈ ವಿಶಿಷ್ಟ ಪ್ರತಿಭಟನೆಯು ‘ ಮಂಗಳೂರು ಕೂಟ ಹೋರಾಟ ‘ ಎಂದು ಪ್ರಸಿದ್ಧಿಯನ್ನು ಪಡೆದಿದೆ . ಈ ಹೋರಾಟದಲ್ಲಿ ಭಾಗಿಗಳಾದ ದೇರೆಬೈಲು ರಾಮಯ್ಯ, ಸಂಕು ಪೂಂಜ ಸೂರಪ್ಪ , ಕೃಷ್ಣರಾವ್ ಮೊದಲಾದವರನ್ನು ಬ್ರಿಟಿಷರು ಬಂಧಿಸಿ ಬಿಡುಗಡೆಗೊಳಿಸಿದರು, ಮುಂದೆ ಈ ಹೋರಾಟ ಅಂತ್ಯವಾಯಿತು.

ನಂತರ ನಡೆದ ಅತ್ಯಂತ ಪ್ರಮುಖ ಹೋರಾಟವೆಂದರೆ 1837ರಲ್ಲಿ ನಡೆದ ʼಅಮರಸುಳ್ಯ ದಂಗೆ’ ಅಥವಾ ʼಕೊಡಗು-ಕೆನರಾʼ ಬಂಡಾಯ ಎಂದು ಕರೆಯಲಾಗಿರುವ ಬ್ರಿಟಿಷ್ ವಿರೋಧಿ ಸಶಸ್ತ್ರ ಕದನ. ಈ ಹೋರಾಟ ಆರಂಭಗೊಳ್ಳಲು ಮೂಲ ಕಾರಣ, ಕೊಡಗಿನ ಹಾಲೇರಿ ವಂಶದ ಅರಸ ಚಿಕ್ಕವೀರರಾಜೇಂದ್ರ ಒಡೆಯನ ವಿರುದ್ಧ ಬ್ರಿಟಿಷರು ಸುಳ್ಳು ಆರೋಪಗಳನ್ನು ಹೊರಿಸಿ ಆತನನ್ನು ಕುತಂತ್ರದಿಂದ ಪದಚ್ಯುತಿಗೊಳಿಸಿ ಜನರ ಇಚ್ಛೆಗೆ ವಿರುದ್ಧವಾಗಿ ಕಾಶಿಗೆ ಗಡಿಪಾರು ಮಾಡಿದುದು.

ವ್ಯಗ್ರರಾದ ರೈತರು

ಚಿಕ್ಕವೀರರಾಜನ ಹಿರಿಯರು ಇಂಗ್ಲಿಷರಿಗೆ ಆಪ್ತರಾಗಿದ್ದರೂ ಆತ ಮಾತ್ರ ಅವರ ವಿರುದ್ಧ ಬಹಿರಂಗವಾಗಿ ತೊಡೆತಟ್ಟಿ ಪಂಥಾಹ್ವಾನ ನೀಡಿದ್ದ. ಶಿವಮೊಗ್ಗದ ನಗರ ದಂಗೆಗೆ ಬೆಂಬಲ ಕೊಟ್ಟಿದ್ದಲ್ಲದೆ, ಬೆಂಗಳೂರಿನ ಬ್ರಿಟಿಷ್ ಮಿಲಿಟಲಿ ದಂಡಿನಲ್ಲಿ ಕ್ಷೋಭೆಯನ್ನು ಹುಟ್ಟಿಸುವಲ್ಲಿ ಯಶಸ್ವಿಯಾಗಿದ್ದ. ಹೈದರಾಬಾದ್, ಪಂಜಾಬ್ ರಾಜರೊಡನೆ ಸೇರಿ ಬ್ರಿಟಿಷ್ ವಿರೋಧಿ ಒಕ್ಕೂಟವನ್ನು ರೂಪಿಸುವ ಪ್ರಯತ್ನ ನಡೆಸಿದ್ದ. ಇದೇ ಹೊತ್ತಲ್ಲಿ ಕೊಡಗಿನೊಳಗೆ ರಾಜಕುಟುಂಬದಲ್ಲಿದ್ದ ಆಂತರಿಕ ಭಿನ್ನಾಭಿಪ್ರಾಯವನ್ನು ಬಳಸಿ ಅವನನ್ನು ಸಿಂಹಾಸನದಿಂದ ಕೆಳಗಿಳಿಸಲಾಯಿತು. ಇದರಿಂದ ರಾಜನ ಆಪ್ತರಾದ ಒಂದು ವರ್ಗದ ರೈತರು ವ್ಯಗ್ರರಾದರು. ಅದು ಮುಂದೆ 1837ರ ಹೋರಾಟದ ಮೂಲದ್ರವ್ಯವಾಯಿತು.

ಕೆದಂಬಾಡಿ ರಾಮಯ್ಯ ಗೌಡ

ಆಶ್ರಮದಲ್ಲಿ ಶಸ್ತ್ರಾಸ್ತ್ರ ತರಬೇತಿ

ಹೋರಾಟವನ್ನು ಶಿಸ್ತುಬದ್ಧವಾಗಿ ಸಂಘಟಿಸಿದ ಸುಳ್ಯ ಉಬರಡ್ಕ ಗ್ರಾಮದ ಕೆದಂಬಾಡಿ ರಾಮಯ್ಯ ಗೌಡ ಎಂಬ ಪ್ರಭಾವಶಾಲಿಯಾದ ಶ್ರೀಮಂತ ಜಮೀನ್ದಾರ, ಜನನಾಯಕನಾಗಿ ಹೊರಹೊಮ್ಮುತ್ತಾರೆ. ಸಶಸ್ತ್ರ ಸಮರಕ್ಕೆ ನಾಯಕನೊಬ್ಬ ಅನಿವಾರ್ಯ, ಅಂತಹ ನಾಯಕ ರಾಜ ಮನೆತನಕ್ಕೆ ಸೇರಿದವನಾದರೆ ಜನಸಾಮಾನ್ಯರು ಭಾವನಾತ್ಮಕತೆಯಿಂದ ಆಪ್ತತೆಯಿಂದ ಸ್ವೀಕರಿಸುತ್ತಾರೆ ಎಂದು ತಿಳಿದಿದ್ದ ಇವರು, ಶನಿವಾರಸಂತೆ ಹೆಮ್ಮನೆಯಿಂದ ಪುಟ್ಟಬಸಪ್ಪ ಎಂಬ ತರುಣನನ್ನು ಕರೆತರುತ್ತಾರೆ. ಅವನಿಗೆ ಸನ್ಯಾಸಿಯ ವೇಷ ತೊಡಿಸುತ್ತಾರೆ. ‘ಕಲ್ಯಾಣಸ್ವಾಮಿ’ ಎಂಬ ಹೆಸರನ್ನು ಇಡುತ್ತಾರೆ. ಸನಿಹದ ಪೂಮಲೆ ಕಾಡಲ್ಲಿ ಆಶ್ರಮ ಕಟ್ಟಿಸಿ ನೆಲೆ ನಿಲ್ಲಿಸುತ್ತಾರೆ. ಈತ ಹಾಲೇರಿ ರಾಜವಂಶಸ್ಥ ಎಂಬ ಸುದ್ದಿ ಎಲ್ಲೆಡೆ ಹರಡುತ್ತದೆ. ಜನ ಆಶ್ರಮಕ್ಕೆ ಭೇಟಿ ಕೊಡುತ್ತಾರೆ. ಈ ಮೂಲಕ ಸುಳ್ಯದ ಸುತ್ತಲಿನ ಗ್ರಾಮಗಳ ಯುವಕರನ್ನು ಯುದ್ಧಕ್ಕೆ ಸನ್ನದ್ಧಗೊಳಿಸಿ, ಶಸ್ತ್ರಾಸ್ತ್ರ ತರಬೇತಿ ನೀಡಲಾಗುತ್ತದೆ.

1837ರ ಮಾರ್ಚ್ 30ರಂದು ಹೋರಾಟಕ್ಕೆ ಸಜ್ಜುಗೊಳ್ಳುತ್ತಾರೆ, ಕಲ್ಯಾಣಸ್ವಾಮಿಯನ್ನು ಪೂಮಲೆ ಕಾಡಿನ ಆಶ್ರಮದಿಂದ ಗೌರಪೂರ್ವಕವಾಗಿ ಕರೆದುಕೊಂಡು ಬರುತ್ತಾರೆ. ಈ ದಿನ ಕೆದಂಬಾಡಿ ರಾಮಯ್ಯ ಗೌಡನ ಮಗನ ಮದುವೆಯೆಂಬ ಯುದ್ಧಸನ್ನದ್ಧತೆಯ ಸಂಕೇತದ ಸುದ್ದಿಯನ್ನು ಸಾರಲಾಗಿರುತ್ತದೆ. ಜನ ಆಯುಧಪಾಣಿಗಳಾಗಿ ಕೆದಂಬಾಡಿ ರಾಮಯ್ಯ ಗೌಡರ ಮನೆಯ ಮುಂದಿನ ಗದ್ದೆಯಲ್ಲಿ ಸೇರುತ್ತಾರೆ. ಕನಿಷ್ಠ 2000 ಹೋರಾಟಗಾರರು ಅಲ್ಲಿ ಸೇರಿರುತ್ತಾರೆ. ಅದೇ ದಿನ ಪೆರಾಜೆ, ಸುಳ್ಯ, ಸುಬ್ರಹ್ಮಣ್ಯ, ಮಂಜ್ರಾಬಾದ್, ಬಿಸಲೆ ಮೊದಲಾದ ಕಡೆಗಳಲ್ಲಿ ಯುದ್ಧದ ನಿರೂಪಗಳನ್ನು (War proclamation ) ಪ್ರಕಟಿಸಲಾಗುತ್ತದೆ.

ಯುದ್ಧದ ನಾಯಕತ್ವದ ಪಟ್ಟ

ಕೊಡಗಿನ ದಿವಾನನಾಗಿದ್ದ ತುದಿಯಡ್ಕ ಲಕ್ಷ್ಮೀನಾರಾಯಣರ ತಮ್ಮನಾದ ಅಟ್ಲೂರು ರಾಮಪ್ಪಯ್ಯ ಸುಳ್ಯದ ಪ್ರಭಾವದ ವ್ಯಕ್ತಿಯಾಗಿದ್ದ. ಹೋರಾಟಕ್ಕೆ ಮೊದಲು ಬೆಂಬಲ ನೀಡಿದ್ದರೂ ಕೊನೆಗೆ ವಿರುದ್ಧ ದಿಕ್ಕಿಗೆ ವಾಲಿಕೊಂಡಿದ್ದ. ದಂಡು ಹೊರಡುವ ಮೊದಲು ಅವನನ್ನು ಕರೆತರಲು ಕೆದಂಬಾಡಿ ರಾಮಯ್ಯ ಗೌಡರು ತಂಡವೊಂದನ್ನು ರಚಿಸಿ ಪಯಸ್ವಿನಿ ನದಿಯ ಪಶ್ಚಿಮದ ದಡದಲ್ಲಿನ ಅಟ್ಲೂರಿಗೆ ಕಳುಹಿಸುತ್ತಾರೆ. ಆದರೆ ರಾಮಪ್ಪಯ್ಯನ ಜನ ಇವರ ವಿರುದ್ಧ ಕಾದಾಟ ನಿಲ್ಲುತ್ತಾರೆ. ಆತನನ್ನು ಬಂಧಿಸಿ ಕರೆತರುವುದು ಅವರಿಗೆ ಅನಿವಾರ್ಯವಾಗುತ್ತದೆ. ಇಂದು ಮದುವೆಗದ್ದೆಯೆಂದು ಕರೆಯುವ ಮನೆಯ ಮುಂಭಾಗದ ಗದ್ದೆಯಲ್ಲಿ ಕಲ್ಯಾಣಸ್ವಾಮಿಗೆ ರಾಮಯ್ಯಗೌಡರ ನೇತೃತ್ವದಲ್ಲಿ ನಡೆದ ಕಾರ್ಯಯೋಜನೆಯಂತೆ ಯುದ್ಧದ ನಾಯಕತ್ವದ ಪಟ್ಟವನ್ನು ಕಟ್ಟಲಾಗುತ್ತದೆ.

ಇದನ್ನೂ ಓದಿ | Amrit Mahotsav | ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಕೂ ಆ್ಯಪ್ ವಿಶೇಷ ಅಭಿಯಾನ

ಕಲ್ಯಾಣಸ್ವಾಮಿಗೆ ಬಣ್ಣದ ಕುದುರೆಯನ್ನು ರಾಜಾಶ್ವವಾಗಿ ಅರ್ಪಿಸಲಾಗುತ್ತದೆ. ಜತೆಗೆ ಪ್ರೀತಿ, ಗೌರವದ ಪರಾಕಾಷ್ಟೆ ಎಂಬಂತೆ ಮಿತ್ತೂರು ನಾಯರ್ ದೈವದ ಕೆಂಪು ಕೊಡೆಯನ್ನು ಹಿಡಿಯುತ್ತಾರೆ. ಮಿತ್ತೂರ್ ನಾಯರ್‌ ಸುಳ್ಯ ಪರಿಸರದ ಅತ್ಯಂತ ಕಾರಣಿಕದ ದೈವವೆಂಬ ನಂಬಿಕೆ ಇಂದಿಗೂ ಪ್ರಚಲಿತದಲ್ಲಿದೆ. ಇಂತಹ ದೈವದ ಛತ್ರಚಾಮರವನ್ನು ಮನುಷ್ಯ ಮಾತ್ರನೊಬ್ಬನಿಗೆ ಹಿಡಿಯುವುದೆಂದರೆ ಈ ಹೋರಾಟದ ಬಗ್ಗೆ ಜನ ಸಾಮಾನ್ಯರಿಗಿದ್ದ ಅರ್ಪಣಾ ಮನೋಭಾವ ಅರ್ಥವಾಗುತ್ತದೆ. ಮದುವೆ ಗದ್ದೆಯಲ್ಲಿ ಕ್ರಿ.ಶ.1837 ಮಾರ್ಚ್ 30 ರಂದು ರೈತ ಸೈನ್ಯ ಜಮಾವಣೆಯಾದಲ್ಲಿಂದ ಕೆದಂಬಾಡಿ ರಾಮಯ್ಯ ಗೌಡರ ನಾಯಕತ್ವದ ಗುಣಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ. ಮೊದಲು ಈ ದಂಡು ಬೆಳ್ಳಾರೆಯತ್ತ ಸಾಗಿ ಕಂಪನಿಯ ಖಜಾನೆಯನ್ನು ಸ್ವಾಧೀನಕ್ಕೆ ಪಡೆದುಕೊಳ್ಳುತ್ತದೆ. ಆಗ ಸ್ಥಳೀಯ ಶಿರಸ್ತೇದಾರ ದೇವಪ್ಪನ ಪ್ರತಿಭಟನೆ ನಿಷ್ಪಲಗೊಳ್ಳುತ್ತದೆ.

೪ ತಂಡಗಳಾಗಿ ವಿಂಗಡನೆ

ಪೈಶ್ಕಾರನ ಕಚೇರಿಯ ಮುಖ್ಯ ಶಿರಸ್ತೇದಾರ, ತಹಸೀಲ್ದಾರ್ ಇನ್ನಿತರ ಉದ್ಯೋಗಿಗಳನ್ನು ಸೆರೆ ಹಿಡಿಯುತ್ತಾರೆ. ಬೆಳ್ಳಾರೆಯಲ್ಲಿ 3000ಕ್ಕಿಂತಲೂ ಹೆಚ್ಚು ಹೋರಾಟಗಾರರು ಜಮಾವಣೆಗೊಂಡಿದ್ದರು. ದಂಡಿನಲ್ಲಿ ಕುದುರೆ ಮತ್ತು ಆನೆಗಳೂ ಇದ್ದವು. ಬೆಳ್ಳಾರೆಯಲ್ಲಿ ಹೋರಾಟದ ಸೇನಾಳುಗಳನ್ನು ನಾಲ್ಕು ತಂಡಗಳಾಗಿ ವಿಂಗಡಿಸಲಾಗುತ್ತದೆ. 800 ಜನರ ಮೊದಲ ದಂಡು ಕುಡೆಕಲ್ಲು ಪುಟ್ಟ ಗೌಡ ಹಾಗೂ ಕುಂಚಡ್ಕ ರಾಮ ಗೌಡರ ನೇತೃತ್ವದಲ್ಲಿ ಕುಂಬ್ಳೆ- ಕಾಸರಗೋಡು ಮಂಜೇಶ್ವರಗಳನ್ನು ಗೆಲ್ಲಲು ಕಳುಹಿಸಲಾಯಿತು. ಎರಡನೇ ದಳ ಬಂಟ್ವಾಳ ಕಾರ್ಕಳಕ್ಕೆ ಮತ್ತು ಮೂರನೇ ತಂಡವು ಕೂಜುಗೋಡು ಮಲ್ಲಪ್ಪ ಗೌಡ ಹಾಗೂ ಅಪ್ಪಯ್ಯ ಗೌಡರ ಮುಂದಾಳುತನದಲ್ಲಿ ಉಪ್ಪಿನಂಗಡಿ – ಬಿಸಲೆ- ಐಗೂರಿಗೆ ಹೋಗುತ್ತದೆ. ಕಲ್ಯಾಣಸ್ವಾಮಿ, ಕೆದಂಬಾಡಿ ರಾಮಯ್ಯ ಗೌಡ, ಗುಡ್ಡೆಮನೆ ಅಪ್ಪಯ್ಯ ಗೌಡ ಹಾಗೂ ಕುಕ್ಕುನೂರು ಚೆನ್ನಯ್ಯ ಇವರಿದ್ದ ಪ್ರಧಾನ ಸೈನ್ಯವು ಮಂಗಳೂರಿಗೆ ಹೊರಟಿತು. ಜನಪ್ರಿಯವಾಗಿ ಕರೆಯಲಾಗುತ್ತಿದ್ದ ಮಂಗಳೂರಿಗೆ ಹೊರಟ ಮುಖ್ಯ ಸೈನ್ಯ ಮೊದಲು ಪುತ್ತೂರಿಗೆ ಲಗ್ಗೆ ಇಟ್ಟಿತು.

ಕಾಸರಗೋಡು ಕದನ

ಜನಸಮರದ ಸುದ್ದಿ ತಿಳಿದ ಕೆನರಾ ಜಿಲ್ಲೆಯ ಕಲೆಕ್ಟರ್ ಲೆವಿನ್ ಮಂಗಳೂರಿನಿಂದ ಹೊರಟು ತುಕಡಿಯೊಂದಿಗೆ ಪುತ್ತೂರಿಗೆ ಆಗಮಿಸಿದ. ಪುತ್ತೂರಲ್ಲಿ ಕಂಪನಿ ಕಚೇರಿ ಸುಲಭವಾಗಿ ಹೋರಾಟಗಾರರ ವಶಕ್ಕೆ ಬಂತು. ಅಲ್ಲಿನ ಉದ್ಯೋಗಿಗಳು ಬಂಧನಕ್ಕೊಳಗಾದರು. ಎರಡು ದಿನ ದೂರದಲ್ಲಿದ್ದು ಹೊಂಚು ಹಾಕಿದ ಲೆವಿನ್ ಯುದ್ಧ ನಡೆಸಿದರೆ ತನಗೇ ಅಪಾಯ ಎಂದು ತಿಳಿದು ಏಪ್ರಿಲ್ 2ರಂದು ರಾತ್ರಿ ಅಲ್ಲಿಂದ ಮಂಗಳೂರು ಕಡೆ ಕಾಲ್ಕಿತ್ತ. ಪುತ್ತೂರಲ್ಲಿ ಅದಾಗಲೇ ಅಪಾರ ಪ್ರಮಾಣದ ಸಶಸ್ತ್ರ ಜನ ಸೇರಿದ್ದರು. ಅಲ್ಲಿ ಅಪಾಯವನ್ನು ಎದುರು ಹಾಕಿಕೊಳ್ಳುವುದಕ್ಕಿಂತ ದುರ್ಬಲ ಮಂಗಳೂರನ್ನು ರಕ್ಷಿಸಲು ಮುಂದಾಗುವುದು ಒಳಿತೆಂದು ಲೆವಿನ್ ಭಾವಿಸಿದ. ಮಂಗಳೂರಲ್ಲಿ ಸಹ ಅಲ್ಲಿನ ನಿವಾಸಿಗಳ ಅಸಹಕಾರ ಲೆವಿನ್ ಗಮನಕ್ಕೆ ಬಂತು. ಪುತ್ತೂರಿಂದ ಮಂಗಳೂರಿಗೆ ಹೋಗುವ ದಾರಿಯಲ್ಲಿ ಲೆವಿನ್ ಸೈನಿಕರನ್ನು ಒಟ್ಟು ಸೇರಿಸಿ ಬಂದೂಕು ಮತ್ತು ಮದ್ದುಗುಂಡುಗಳನ್ನು ಕೊಟ್ಟರೂ ಅವರು ತಮಗೆ ಕೊಟ್ಟ ಕೆಲಸವನ್ನು ನಿರ್ವಹಿಸುವ ಬದಲು ಯಾರಿಗೂ ತಿಳಿಸದೆ ನಾಪತ್ತೆಯಾದರು. ಈ ಕಲೆಕ್ಟರ್ ಮಂಗಳೂರಿಗೆ ತಲಪುವ ಹೊತ್ತಿಗೆ ಊರು ನಿರ್ಜನವಾಗಿತ್ತು. ಅಲ್ಲಿನ ಜನ ಹೋರಾಟಗಾರರೊಂದಿಗೆ ಸಂಪರ್ಕದಲ್ಲಿರುವುದು ಅವನ ಗಮನಕ್ಕೆ ಬಂದಿತು. ನಗರದ ಕಾವಲು ಪಡೆ ಸಹ ಅವರೊಂದಿಗೆ ಸೇರಿಕೊಂಡಿತ್ತು.

ಒಂದೆಡೆ ಹೋರಾಟಗಾರರೊಂದಿಗೆ ಕಾದಾಡುತ್ತಾ, ಇನ್ನೊಂದೆಡೆ ಯುರೋಪಿಯನ್ ಕುಟುಂಬಗಳನ್ನು ಮಂಗಳೂರಿನಿಂದ ತೆರವು ಮಾಡಿ ಅಪಾಯಕಾರಿಯಲ್ಲದ ಸ್ಥಳಕ್ಕೆ ಕಳುಹಿಸಲು ಕಂಪನಿಯ ಅಧಿಕಾರಿಗಳು ತೀರ್ಮಾನಿಸಿದ್ದರು. ಏಪ್ರಿಲ್ 5ರಂದು ಅವರನ್ನು ಹಡಗಿಗೆ ಹತ್ತಿಸಲು ನಿರ್ಧರಿಸಿದ್ದರೂ ಅದು ಸಾಧ್ಯವಾಗಲಿಲ್ಲ. ಈ ನಡುವೆ ಖಜಾನೆಯನ್ನು ಸಂರಕ್ಷಿಸುವ ಪ್ರಯತ್ನದಿಂದ ಅವರ ಉಳಿದ ಕೆಲಸಕ್ಕೂ ಅಡಚಣೆಯಾಯಿತು. ಕೊನೆಗೂ ಆ ಸಾಹಸವನ್ನು ಕೈಬಿಡಬೇಕಾಯಿತು. ಅಂತೂ ಇಂತೂ ಏಪ್ರಿಲ್ 6 ಮತ್ತು 7 ರಂದು ಒಂದಷ್ಟು ಜನ ಮಂಗಳೂರು ತೊರೆದು ಕಣ್ಣನೂರಿಗೆ ಪಲಾಯನ ಮಾಡಿದರು. 1837ರ ಹೋರಾಟದ ಸೈನ್ಯವು ಮಂಗಳೂರಿನ ಕಡೆ ಸಾಗುತ್ತಿದ್ದಂತೆ ಅಪಾರವಾದ ಜನಬೆಂಬಲ, ನೆರವು ದೊರಕುತ್ತದೆ. ಧರ್ಮಸ್ಥಳದ ಧರ್ಮಾಧಿಕಾರಿ ಮಂಜಯ್ಯ ಹೆಗ್ಗಡೆ ಫಿರಂಗಿ, ಕುದುರೆ ಹಾಗೂ ಅಪಾರ ಪ್ರಮಾಣದ ಹಣವನ್ನು ನೀಡುತ್ತಾರೆ. ನಂದಾವರದಲ್ಲಿದ್ದ ಬಂಗಾಡಿ ಅರಸು ಮನೆತನದ ಲಕ್ಷ್ಮಪ್ಪ ಬಂಗರಸ ದೊಡ್ಡ ಸಂಖ್ಯೆಯ ಯೋಧರೊಂದಿಗೆ ನೇರವಾಗಿ ಯುದ್ಧಕ್ಷೇತ್ರಕ್ಕೆ ಧಾವಿಸುತ್ತಾರೆ. ಉಪ್ಪಿನಂಗಡಿಯಲ್ಲಿ ಕಂಪನಿಯ ಉದ್ಯೋಗಿ ಮಂಜ ದಂಡಿಗೆ ಜನರನ್ನು ಜಮಾವಣೆಗೊಳಿಸುತ್ತಾರೆ. ಬೆಳ್ಳಾರೆಯಿಂದ ಮಾರ್ಚ್ 30ರಂದು ಕಾಸರಗೋಡನ್ನು ಲಗ್ಗೆ ಹಾಕಲು ಹೊರಟ ತಂಡವು ಅದರಲ್ಲಿ ಯಶಸ್ಸನ್ನು ಕಂಡಿತು.

ಕಾಸರಗೋಡು, ಕುಂಬ್ಳೆ, ಮಂಜೇಶ್ವರಗಳನ್ನು ಗೆದ್ದ ಆ ರೈತರು ಪುತ್ತೂರಿನಿಂದ ಸೇನೆಯು ಮಂಗಳೂರು ಸೇರುವ ಸಮಯಕ್ಕೆ ಸರಿಯಾಗಿ ಅಲ್ಲಿಗೆ ತಲುಪಿತು. ಈ ನಡುವೆ ಚಂದ್ರಗಿರಿ ಫೆರಿ, ಬಿಸಿಲೆ ಪಾಸ್ ಮತ್ತಿತರ ದಾರಿಗಳ ಮೂಲಕ ನಡೆಯುತ್ತಿದ್ದ ಕಂಪನಿಯ ಟಪಾಲು ವ್ಯವಸ್ಥೆಯನ್ನು ಸಂಪೂರ್ಣವಾಗಿ ವಿಫಲಗೊಳಿಸಲಾಗಿತ್ತು. ಹೋರಾಟಗಾರರು ಪ್ರತಿಯೊಂದು ಉಕ್ಕಡದಲ್ಲಿಯೂ, ಪ್ರತಿಯೊಂದು ಗಡಿಯಲ್ಲಿಯೂ ಕಾವಲು ಪಡೆಯನ್ನು ನಿಯೋಜಿಸಿದ್ದರು. ಉದ್ದೇಶಿತ ಹೋರಾಟ ಪ್ರಥಮ ಹಂತದಲ್ಲಿ ಅಭೂತಪೂರ್ವ ಜಯವನ್ನು ಗಳಿಸಿ ಸುಳ್ಯ, ಸುಬ್ರಹ್ಮಣ್ಯ , ಬಿಸಲೆ, ಉಪ್ಪಿನಂಗಡಿ, ಬೆಳ್ತಂಗಡಿ, ಕುಂಬ್ಳೆ , ಕಾಸರಗೋಡು, ಮಂಜೇಶ್ವರ, ಬಂಟ್ವಾಳ, ಮುಲ್ಕಿ, ಸುರತ್ಕಲ್, ಪುತ್ತೂರು ಈ ಎಲ್ಲ ಊರುಗಳೂ ರೈತಸೈನ್ಯದ ಕೈವಶವಾಗುತ್ತವೆ. ಕೊನೆಗೆ ನಡೆದ ಮಂಗಳೂರು ಆಕ್ರಮಣದಲ್ಲಿ ಕೆದಂಬಾಡಿ ರಾಮಯ್ಯ ಗೌಡರು ಮತ್ತಿತರರು ಅಪ್ರತಿಮ ಹೋರಾಟದಲ್ಲಿ ಭಾಗಿಯಾಗುತ್ತಾರೆ. ಕೆನರಾ ಜಿಲ್ಲೆಯ ಕೇಂದ್ರಸ್ಥಾನ ಪತನಗೊಳ್ಳುತ್ತದೆ. ಆ ಸಮಯದಲ್ಲಿ ಸಂಗ್ರಾಮದ ಯೋಧರ ಸಂಖ್ಯಾಬಲ 10 ರಿಂದ 12 ಸಾವಿರದಷ್ಟು ಇತ್ತು ಎಂದು ಬ್ರಿಟಿಷ್ ದಾಖಲೆಗಳು ತಿಳಿಸುತ್ತವೆ.

ಮಂಗಳೂರನ್ನು ಆಕ್ರಮಿಸಿದ ಹೋರಾಟಗಾರರ ಸೈನ್ಯ ಮೊದಲು ಮಾಡಿದ ಕೆಲಸವೆಂದರೆ ಲೈಟ್‌ಹೌಸ್‌ ಪ್ರದೇಶದಲ್ಲಿದ್ದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ 7 ಬಾವುಟವನ್ನು ಕೆಳಗಿಳಿಸಿ ಹಾಲೇರಿ ರಾಜಲಾಂಛನದ ಧ್ವಜವನ್ನು ಹಾರಿಸಲಾಗುತ್ತದೆ. ಹೋರಾಟದ ಮುಖ್ಯಸ್ಥರಲ್ಲೊಬ್ಬನಾದ ಗುಡ್ಡೆಮನೆ ತಮ್ಮಯ್ಯರು ರಾಮಯ್ಯ ಗೌಡರ ಸೂಚನೆಗೆ ಅನುಗುಣವಾಗಿ ಈ ಕಾರ್ಯವನ್ನು ನೆರವೇರಿಸಿ ವಿಜಯದ ಸಂಕೇತವನ್ನು ಸಾರುತ್ತಾರೆ. ಅಂದಿನಿಂದ ಮಂಗಳೂರಿನ ಈ ಉನ್ನತ ಮತ್ತು ಪ್ರಮುಖ ಪ್ರದೇಶವು “ಬಾವುಟ ಗುಡ್ಡ” ಎಂಬ ಪ್ರಖ್ಯಾತಿಯನ್ನು ಪಡೆದುಕೊಳ್ಳುತ್ತದೆ. ನಂತರ ಸೈನ್ಯವು ಇಂಗ್ಲಿಷರ ಕಟ್ಟಡ, ಕುರುಹುಗಳನ್ನು ಸುಟ್ಟು ಹಾಕುತ್ತದೆ. ಸೆರೆಮನೆಯನ್ನು ಒಡೆದು, ಬ್ರಿಟಿಷ್ ನ್ಯಾಯವ್ಯವಸ್ಥೆಯಲ್ಲಿ ವಿನಾಕಾರಣ ಶಿಕ್ಷೆಗೆ ಈಡಾಗಿದ್ದ ಸ್ಥಳೀಯ ಜನರನ್ನು ಮುಕ್ತಗೊಳಿಸಲಾಗುತ್ತದೆ. ಅವರು ಸ್ವಂತ ಇಚ್ಛೆಯಿಂದ ಸೈನ್ಯಕ್ಕೆ ಸೇರ್ಪಡೆಗೊಳ್ಳುತ್ತಾರೆ. ನಂತರ ಮಂಗಳೂರಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತದೆ. ಆಡಳಿತವನ್ನು ವಹಿಸಿಕೊಂಡ ಹೋರಾಟಗಾರರು ರೈತರಿಗೆ ಕಂದಾಯ ವಿನಾಯಿತಿಯನ್ನು ಘೋಷಿಸುತ್ತಾರೆ. ಮಂಗಳೂರಿನ ವರ್ತಕರ ಬೆಂಬಲವನ್ನು ಪಡೆದುಕೊಳ್ಳುತ್ತಾರೆ. ಎಲ್ಲವೂ ಸುಗಮವಾಗಿ ನಡೆಯುತ್ತದೆ.

ರೈತಸೇನೆಯ ಕಾದಾಟ ಕೊನೆಗೂ ಫಲಪ್ರದವಾಗಲಿಲ್ಲ

ಮಂಗಳೂರನ್ನು ಭದ್ರಪಡಿಸಿದ ನಂತರ ಹೋರಾಟಗಾರರ ಹಲವು ಪ್ರಮುಖರು ಮಡಿಕೇರಿ ಪಟ್ಟಣಕ್ಕೆ ಲಗ್ಗೆ ಹಾಕಲು ಸುಳ್ಯ, ಸುಬ್ರಹ್ಮಣ್ಯದ ಕಡೆ ಹಿಂದಿರುಗುತ್ತಾರೆ. ಕೂಜುಗೋಡು ಅಪ್ಪಯ್ಯ ಗೌಡ ಮತ್ತು ಕೂಜುಗೋಡು ಮಲ್ಲಪ್ಪ ಗೌಡ ಇವರ ನೇತೃತ್ವದಲ್ಲಿ ಬಿಸಿಲೆ ಘಾಟಿಯ ಮುಖಾಂತರ ರೈತಸೈನ್ಯ ಮಡಿಕೇರಿಯ ಕಡೆ ಸಾಗಿತು. ಬಲಮುರಿಯ ಗುಡ್ಡೆಮನೆ ಅಪ್ಪಯ್ಯ ಗೌಡ ಮಡಿಕೇರಿಗೆ ಮುತ್ತಿಗೆ ಹಾಕಲು ಜನರನ್ನು ಒಟ್ಟು ಸೇರಿಸಲು ಪಾಡಿ ನಾಲ್ಕುನಾಡಿನ ಕಡೆ ತೆರಳಿದರು. ಆದರೆ ಅಷ್ಟು ಹೊತ್ತಿಗಾಗಲೇ ಮೇಜರ್ ಡ್ರಾಯರ್‌ನ ಬೆಟಾಲಿಯನ್‌ ಪಾಂಡವಪುರದಿಂದ ಮಡಿಕೇರಿ ತಲುಪಿಯಾಗಿತ್ತು. ಮಡಿಕೇರಿಯ ಉತ್ತರ ದಿಕ್ಕಿನ ಉಕ್ಕಡದ ಬಳಿ ಉಗ್ರವಾಗಿ ಗುಂಡಿನ ಕಾಳಗ ನಡೆಯಿತು. ಆದರೆ ರೈತಸೇನೆಯ ಕಾದಾಟ ಕೊನೆಗೂ ಫಲಪ್ರದವಾಗಲಿಲ್ಲ. ಗುಡ್ಡೆಮನೆ ಅಪ್ಪಯ್ಯ ಗೌಡ ಮತ್ತಿತರರ ಕೆಚ್ಚೆದೆಯ ಪ್ರತಾಪವು ಸಾಫಲ್ಯವನ್ನು ಪಡೆಯಲಿಲ್ಲ. ಸಂಗ್ರಾಮದಲ್ಲಿ ವೀರೋಚಿತ ಸೋಲು ಎದುರಾಯಿತು. ಅತ್ತ ಮಂಗಳೂರಿನ ಸಹಾಯಕ್ಕೆ ಮುಂಬೈನಿಂದ ಸೈನ್ಯ , ಮದ್ದುಗುಂಡು, ಸಂಗ್ರಾಮ ಸಾಧನಗಳು ಬರುವ ವ್ಯವಸ್ಥೆಯಾಯಿತು. ಸೈನಿಕರನ್ನೂ, ಸಾಮಾನು ಸರಂಜಾಮನ್ನು ಒಯ್ಯಲು ಜಹಜುಗಳು ಸಿದ್ಧವಾದವು. ಧಾರವಾಡ, ಬೆಳಗಾವಿಯಿಂದ ಸೈನ್ಯ ಮಂಗಳೂರಿಗೆ ಹೊರಟವು. ಕೆನರಾ ಸೈನ್ಯಗಳ ನಾಯಕ ಬ್ರಿಗೇಡಿಯರ್ ಅಲನ್‌ಗೆ ಮಂಗಳೂರಿನ ಸಮಾಚಾರ ಹೋಯಿತು. ಕೂಡಲೇ ಕರ್ನಲ್ ಗ್ರೀನ್ ನಾಯಕತ್ವದಲ್ಲಿ ಸೈನ್ಯವನ್ನು ಮಂಗಳೂರಿಗೆ ಕಳುಹಿಸಿಸಲಾಯಿತು. ಮುಂಬೈ ಕಡೆಯಿಂದಲೂ ಸೈನ್ಯ ಬಂತು.

ಇದನ್ನೂ ಓದಿ | Amrit Mahotsav | ದೆಹಲಿ ಕೆಂಪುಕೋಟೆ ಮೇಲೆ ಹಾರಾಡೋದು ಧಾರವಾಡದಲ್ಲಿ ತಯಾರಾದ ಧ್ವಜ!

ಬ್ರಿಟಿಷ್‌ ಮೇಲುಗೈ

ಏಪ್ರಿಲ್ 16ರ ವೇಳೆಗೆ ಬ್ರಿಟಿಷ್ ಅಧಿಕಾರಿಗಳೆಲ್ಲ ಚರ್ಚಿಸಿ ಹೋರಾಟಗಾರರನ್ನು ಎದುರಿಸುವ ನಿಶ್ಚಯ ಮಾಡಿದರು. 1200 ಮಂದಿ ಯುರೋಪಿಯನ್ನರು ಮತ್ತು ಸಿಪಾಯಿಗಳ ನೇತೃತ್ವವನ್ನು ಗ್ರೀನ್ ವಹಿಸಿದ ಮೇಜರ್ ಎವರೆಸ್ಟನೂ ಮುಂಬಯಿ ಸೈನ್ಯದೊಂದಿಗೆ ಬಂದು ಸೇರಿಕೊಂಡ. ಹಲವು ಕಡೆ ಬ್ರಿಟಿಷರ ಸುಸಜ್ಜಿತ ಸೇನೆಗೂ ರೈತಸೈನ್ಯಕ್ಕೂ ನಡುವೆ ಕಾಳಗ ನಡೆಯಿತು. ಭೀಕರ ಕದನವನ್ನು ನಡೆಸಿದರೂ ಹೋರಾಟಗಾರರಿಗೆ ಮಂಗಳೂರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗೆ ವಿವಿಧ ಪ್ರದೇಶಗಳಲ್ಲಿ ಸೋಲು ಹಿಂಬಾಲಿಸಿತು. ಪ್ರಮುಖ ನಾಯಕರು ಒಬ್ಬೊಬ್ಬರಾಗಿ ಬ್ರಿಟಿಷರ ಸೆರೆಯಾದರು. ಸ್ಥಳೀಯ ಗೇಣಿಕಾರರ ನೆರವಿನಿಂದ ಇಂಗ್ಲಿಷರು ಹೋರಾಟಗಾರರ ವಿರುದ್ಧ ಮೇಲುಗೈ ಸಾಧಿಸಲು ಸಾಧ್ಯವಾಯಿತು. ಪುಟ್ಟಬಸಪ್ಪ ತನ್ನ ಸ್ವಂತ ಊರು ಹೆಮ್ಮನೆಯಲ್ಲಿ ಸೆರೆಯಾದರೆ, ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಮಡಿಕೇರಿಯಲ್ಲಿ ವಶಕ್ಕೆ ಪಡೆದುಕೊಳ್ಳಲಾಯಿತು. ಉಪ್ಪಿನಂಗಡಿ ಮಂಜ ಮತ್ತು ಲಕ್ಷ್ಮಪ್ಪ ಬಂಗರಸ ಮಂಗಳೂರಿನಲ್ಲಿ ಬಂಧಿಸಲ್ಪಡುತ್ತಾರೆ. ಈ ನಡುವೆ ಶಿವಮೊಗ್ಗದ ನಗರ ಪ್ರಾಂತದ ಹೋರಾಟಗಾರರ ಬೆಂಬಲದಿಂದ ಮತ್ತೆ ಸೈನ್ಯವನ್ನು ಆಯೋಜಿಸಲು ಹೊರಟಿದ್ದ ಕೆದಂಬಾಡಿ ರಾಮಯ್ಯ ಗೌಡರನ್ನು ಕಾರ್ಕಳದ ಸಮೀಪ ಕಬ್ಬನಾಲೆಯಲ್ಲಿ ಸೆರೆಹಿಡಿಯಲಾಯಿತು.

ಬಿಕರ್ನಕಟ್ಟೆಯಲ್ಲಿ ಗಲ್ಲು

ಕ್ರಿ.ಶ. 1837ರ ಹೋರಾಟಕ್ಕೆ ಸಂಬಂಧಿಸಿದಂತೆ ಒಟ್ಟು 1115 ಜನರನ್ನು ಬಂಧಿಸಲಾಗಿತ್ತು. ಅವರಲ್ಲಿ 12 ಮಂದಿಯನ್ನು ಕೋರ್ಟ್‌ ಮಾರ್ಷಲ್‌ಗೆ ಒಳಪಡಿಸಲಾಯಿತು. ವಿಶೇಷ ಆಯೋಗದ ಮುಂದೆ 54 ಕೇಸು ನಡೆದಿತ್ತು‌, ಅಲ್ಲಿ ಒಟ್ಟು 416 ಜನರ ವಿಚಾರಣೆ ನಡೆಸಲಾಗಿತ್ತು. ಕ್ರಿಮಿನಲ್ ನ್ಯಾಯಾಲಯದಲ್ಲಿ 133 ಜನರ ವಿಚಾರಣೆ ನಡೆಸಲಾಯಿತು. 35 ವಿಚಾರಣಾಧೀನ ಕೈದಿಗಳು ಸೆರೆಮನೆ ವಾಸದಲ್ಲಿದ್ದಾಗಲೇ ಮೃತಪಟ್ಟಿದ್ದರು. ಕೆಲವರನ್ನು ಮುಚ್ಚಳಿಕೆ ಪಡೆದು ಬಿಡಲಾಯಿತು. ಎಲ್ಲ ಬಂದಿಗಳನ್ನು ಸೆರೆಮನೆಯಲ್ಲಿಡಲು ಸೂಕ್ತ ವ್ಯವಸ್ಥೆ ಇರಲಿಲ್ಲ. 1837ರ ಹೋರಾಟದಲ್ಲಿ ಭಾಗವಹಿಸಿದ ಲಕ್ಷ್ಮಪ್ಪ ಬಂಗರಸನನ್ನು 1837ರ ಮೇ 23 ರಂದು, ಉಪ್ಪಿನಂಗಡಿಯ ಮಂಜನನ್ನು ಮೇ 30 ರಂದು ಮತ್ತು ಕಲ್ಯಾಣಸ್ವಾಮಿ ಎಂಬ ಹೆಸರಿನ ಪುಟ್ಟಬಸಪ್ಪನನ್ನು ಜೂನ್ 19ರಂದು ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಗಲ್ಲಿಗೇರಿಸಲಾಯಿತು. ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಅದೇ ವರ್ಷ ಅಕ್ಟೋಬರ್ 31ರಂದು ಮಡಿಕೇರಿ ಕೋಟೆಯೊಳಗೆ ನೇಣುಗಂಬಕ್ಕೆ ಏರಿಸಲಾಯಿತು.

ಕೆದಂಬಾಡಿ ರಾಮಯ್ಯ ಗೌಡ, ಅವರ ಮಗ ಸಣ್ಣಯ್ಯ ಗೌಡ, ಚೆಟ್ಟಿ ಕುಡಿಯ, ಕುಕ್ಕುನೂರು ಚೆನ್ನಯ್ಯ, ಕೂಜುಗೋಡು ಮಲ್ಲಪ್ಪ ಗೌಡ, ಬೀರಣ್ಣ ಬಂಟ, ಕಾರ್ಯಕಾರ ಸುಬೇದಾರ್ ಕೃಷ್ಣಯ್ಯ, ಗುಡ್ಡೆಮನೆ ತಮ್ಮಯ್ಯ ಮೊದಲಾದವರನ್ನು ಪ್ರಾಣಿಗಳಂತೆ ಬೋನಿನಲ್ಲಿ ತುಂಬಿಸಿ ಸಿಂಗಾಪುರ, ಬರ್ಮಾ ಮುಂತಾದ ಸಮುದ್ರದಾಚೆಗಿನ ಊರುಗಳಿಗೆ ಸಾಗಹಾಕಿ ಜೀವನದುದ್ದಕ್ಕೂ ಕೈಕಾಲುಗಳಿಗೆ ಕೋಳ ತೊಡಿಸಿ ಪ್ರಖರವಾದ ಶಿಕ್ಷೆಯನ್ನು ಕೊಟ್ಟು ಅವರ ಶವವೂ ದೊರಕದಂತೆ ನೋವು ನೀಡಲಾಯಿತು. ಉಳುವಾರು ಕೃಷ್ಣ, ಗೌಡಳ್ಳಿ ಸುಬ್ಬಪ್ಪು, ಕುಕ್ಕೆಟ್ಟಿ ಸುಬ್ಬ, ಶೇಕ್, ದೇರಾಜೆ ಬಚ್ಚ ಪಟೇಲ, ನೆಡುಂಪಳ್ಳಿ ದೇವಪ್ಪ ರೈ, ಗುಂಡ್ಲ ಸುಬ್ಬಪ್ಪ ಮತ್ತು ಇತರ ಕೆಲವರಿಗೆ ಜೀವಾವಧಿ ಶಿಕ್ಷೆ ನೀಡಲಾಗಿತ್ತು. ಇನ್ನು ಹಲವು ಮಂದಿಗೆ 14 ವರ್ಷ, 10 ವರ್ಷ ಮತ್ತು 7 ವರ್ಷಗಳ ಕಾರಾಗೃಹವಾಸದ ಶಿಕ್ಷೆಯನ್ನು ವಿಧಿಸಲಾಗಿತ್ತು. ಮಾನ್ಯದ ರಂಗಪ್ಪ ರಣರಂಗದಲ್ಲಿ ಮೃತ ಪಟ್ಟರೆ, ಚೆರಂಜಿ ಸುಬ್ರಾಯ ಗಾಯಾಳುವಾಗಿ ಸೆರೆ ಸಿಕ್ಕಿ ಜೈಲಿನಲ್ಲಿಯೇ ಮೃತಪಟ್ಟಿದ್ದರು.

ಜಮೀನು ಮುಟ್ಟುಗೋಲು

ಹೋರಾಟದ ಅಪ್ರತಿಮ ನಾಯಕ ಕೆದಂಬಾಡಿ ರಾಮಯ್ಯ ಗೌಡರಿಗೆ ಸುಳ್ಯದ ಉಬರಡ್ಕ ಮತ್ತು ಭಾಗಮಂಡಲದ ಚೆಟ್ಟಮಾನಿ ಎರಡು ಸ್ಥಳಗಳಲ್ಲಿ ಮನೆಗಳು ಇದ್ದು, ಅಪಾರ ಪ್ರಮಾಣದ ಜಮೀನುಗಳ ಮಾಲೀಕನಾಗಿದ್ದರು. ಕೊಡಗಿನ ರಾಜಕುಟುಂಬದ ಜತೆ ಇವರಿಗೆ ಉತ್ತಮ ಬಾಂಧವ್ಯವಿತ್ತು. ಅವರ ಒಬ್ಬ ಮಗನ ಹೆಸರು ಸಣ್ಣಯ್ಯ ಗೌಡ, ಮಗಳ ಗಂಡನ ಹೆಸರು ಮಡಿಯಾಲ ತಮ್ಮಯ್ಯ, ಅಣ್ಣ ಕೃಷ್ಣಪ್ಪ ಗೌಡ, ಕೆದಂಬಾಡಿ ರಾಮಯ್ಯ ಗೌಡರ ಕುಟುಂಬದ ಪ್ರತಿಯೊಬ್ಬ ಸದಸ್ಯನೂ ಶಿಕ್ಷೆಗೆ ಈಡಾಗುತ್ತಾರೆ. ಅವರ ಜಮೀನುಗಳನ್ನು ಕಂಪನಿ ಮುಟ್ಟುಗೋಲು ಹಾಕಿಕೊಳ್ಳುತ್ತದೆ.

ತುಳುನಾಡಿನ ಹಳ್ಳಿಯಲ್ಲಿ ಹುಟ್ಟಿ, ಸಾಮ್ರಾಜ್ಯಶಾಹಿ ಬ್ರಿಟಿಷರ ವಿರುದ್ಧ ಪುಟಿದೆದ್ದಿದ್ದ ಅಪ್ರತಿಮ ಹೋರಾಟಗಾರ, ಧೀರೋದಾತ್ತ ನಾಯಕ ಕೆದಂಬಾಡಿ ರಾಮಯ್ಯ ಗೌಡ ಮತ್ತವರ ಕುಟುಂಬ ವರ್ಗವು, ಇಂದಿನ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳನ್ನು ಸಂಪೂರ್ಣವಾಗಿ, ಉಡುಪಿ ಹಾಗೂ ಕೊಡಗು ಜಿಲ್ಲೆಗಳನ್ನು ಭಾಗಶಃ ಗೆದ್ದಿದ್ದರು. ಈ ಮೂಲಕ ೨ ವಾರಗಳ ಕಾಲ ಬ್ರಿಟಿಷರ ಕಪಿಮುಷ್ಟಿಯಿಂದ ಈ ಭಾಗವನ್ನು ರಕ್ಷಿಸಿದ್ದರು. ಕೊನೆಗೆ ಗುರುತು, ಪರಿಚಯವಿಲ್ಲದ ಕಡಲಾಚೆಗಿನ ಪ್ರದೇಶದಲ್ಲಿ ತಮ್ಮ ಜೀವನದ ಅಂತ್ಯವನ್ನು ಕಾಣುವಂತಾಯಿತು. ಇವರಲ್ಲದೆ ಇನ್ನೂ ಹಲವು ಜನ ನಾಡಿಗಾಗಿ ತ್ಯಾಗ ಮಾಡಿದ್ದಾರೆ.

ಇದನ್ನೂ ಓದಿ | Amrit Mahotsav | ಮುಳುಬಾಗಿಲು ಸ್ವಾಮಿ ಎಂಬ ಕ್ರಾಂತಿಕಾರಿ

Exit mobile version