ಕಾರವಾರ: ದೇಶಾದ್ಯಂತ ಉಗ್ರ ಚಟುವಟಿಕೆಗಳಿಗೆ ಪ್ರಚೋದನೆ, ಹಣಕಾಸು ನೆರವು ನೀಡಿದ ಆರೋಪದಲ್ಲಿ ಪಿಎಫ್‌ಐನ ನೂರಾರು ಮುಖಂಡರನ್ನು ಬಂಧಿಸಿದ ಬೆನ್ನಲ್ಲೇ, ಪ್ರತಿಭಟನೆ ಮಾಡುವಂತೆ ಪ್ರೋತ್ಸಾಹಿಸಿದ ಆರೋಪದ ಮೇಲೆ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪಿಎಫ್ಐ ಸಂಘಟನೆಯ ಮೂವರು ಸದಸ್ಯರನ್ನು ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಶಿರಸಿಯ ಟಿಪ್ಪು ನಗರದ ಅಬ್ದುಲ್ ರಜಾಕ್ ಅಬ್ದುಲ್ ಶುಕುರ್ ಹೊನ್ನಾವರ್(28), ಅತಾವುಲ್ಲಾ ಅಬ್ದುಲ್ ಘನಿ ತಡಸ್(29) ಹಾಗೂ ಕೆರೆಕೊಪ್ಪ ಗ್ರಾಮದ ಇಮಾಮ್ ಅಬ್ದುಲ್ ಸಮ್ಮದ್ ಸಾಬ್(32) ಬಂಧಿತರು. ಸಾರ್ವಜನಿಕ ಆಸ್ತಿಪಾಸ್ತಿ ಹಾನಿ, ಶಾಂತಿಗೆ ಭಂಗ ತರುವಂತಹ ಕೃತ್ಯಗಳಲ್ಲಿ ತೊಡಗುವ ಸಾಧ್ಯತೆಯಿಂದ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ | ಮನೆಯಲ್ಲಿ ಮಲಗಿದ್ದ ಬಾಲಕನನ್ನು ಅವನಪ್ಪನ ಕಾರಿನಲ್ಲೇ ಕಿಡ್ನ್ಯಾಪ್ ಮಾಡಿ 15 ಲಕ್ಷ ರೂ. ವಸೂಲಿ ಮಾಡಿದ್ದ ದುಷ್ಕರ್ಮಿಗಳ ಸೆರೆ
ಸೆಪ್ಟೆಂಬರ್ 22ರಂದು ರಾಜ್ಯ ಪೊಲೀಸರು ಹಾಗೂ ಐಬಿ ದಾಳಿ ನಡೆಸಿ ಶಿರಸಿಯ ಪಿಎಫ್‌ಐ ಮುಖಂಡ ಅಜೀಜ್ ಅಬ್ದುಲ್ ಶುಕೂರ್ ಹೊನ್ನಾವರ್ ಎಂಬಾತನನ್ನು ಬೆಂಗಳೂರಿನ ಡಿಜೆ ಹಳ್ಳಿ ಗಲಭೆ ಪ್ರಕರಣ ಸಂಬಂಧ ಬಂಧನ ಮಾಡಿದ್ದರು. ಈತನ ಕೊನೆಯ ಸಹೋದರನೇ ಇದೀಗ ಬಂಧನಕ್ಕೊಳಗಾಗಿರುವ ಅಬ್ದುಲ್ ರಜಾಕ್ ಅಬ್ದುಲ್ ಶುಕುರ್ ಹೊನ್ನಾವರ್ ಆಗಿದ್ದು, ಈತನೊಂದಿಗೆ ಇನ್ನಿಬ್ಬರು ಸೇರಿ ಯುವಕರನ್ನು ಪಿಎಫ್‌ಐ ಮುಖಂಡರ ಬಂಧನದ ವಿರುದ್ಧ ಪ್ರತಿಭಟಿಸಲು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿ ಕದಡುವ ಸಂದೇಶಗಳನ್ನು ಹಾಕಲು ಪ್ರಚೋದಿಸುತ್ತಿದ್ದ ಆರೋಪದ ಮೇಲೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಯುವಕರನ್ನು ಗುಂಪು ಸೇರಿಸಿ ಗಲಭೆ ಮಾಡುವ ಉದ್ದೇಶ ಹಾಗೂ ಎನ್‌ಐಎ ದಾಳಿ ವಿರುದ್ಧ ಅಪಪ್ರಚಾರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಿಆರ್‌ಪಿಸಿ 107, 151 ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಡಿಎಸ್‌ಪಿ ರವಿ ಡಿ. ನಾಯ್ಕ್, ಸಿಪಿಐ ರಾಮಚಂದ್ರ ನಾಯಕ್ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಪ್ರತಾಪ್, ಭೀಮಾಶಂಕರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರಿನಲ್ಲಿ ಕೆಲವೇ ಗಂಟೆಯಲ್ಲಿ ಬಂಧಿತರ ಬಿಡುಗಡೆ
ಚಿಕ್ಕಮಗಳೂರು: ಪ್ರತಿಭಟನೆಗೆ ಕುಮ್ಮಕ್ಕು ನೀಡಿ, ಕಾನೂನಿನ ವಿರುದ್ಧ ಘೋಷಣೆ ಕೂಗಿದ್ದಕ್ಕೆ ಜಿಲ್ಲೆಯಲ್ಲಿ ವಶಕ್ಕೆ ಪಡೆದಿದ್ದ ಎಸ್‌ಡಿಪಿಐ ಹಾಗೂ ಪಿಎಫ್‌ಐ ಕಾರ್ಯಕರ್ತರನ್ನು ಕೆಲವೇ ಗಂಟೆಯಲ್ಲಿ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಗೌಸ್ ಮುನೀರ್, ಮಗ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಮಾಜಿ ಜಿಲ್ಲಾಧ್ಯಕ್ಷ ಇಮ್ರಾನ್ ಸೇರಿ 24 ಎಸ್‌ಡಿಪಿಐ, ಪಿಎಫ್‌ಐ ಸದಸ್ಯರನ್ನು ಪೊಲೀಸರು ಬಂಧಿಸಿದ್ದರು. ಅವರನ್ನು ತಹಸೀಲ್ದಾರ್ ಮುಂದೆ ಹಾಜರುಪಡಿಸಲಾಗಿತ್ತು. ಆದರೆ ಷರತ್ತಿನ ಮೇಲೆ ತಾಲೂಕು ದಂಡಾಧಿಕಾರಿಗಳು ಆರೋಪಿಗಳನ್ನು ಬಿಡುಗಡೆ ಮಾಡಿದ್ದಾರೆ. ಚಿಕ್ಕಮಗಳೂರು, ಮೂಡಿಗೆರೆ, ಆಲ್ದೂರು, ಕಡೂರಿನಲ್ಲಿ 24 ಮಂದಿಯನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ | Murder Case | ಶೀಲ ಶಂಕಿಸಿ ಪತ್ನಿಯ ಕೊಲೆ ಮಾಡಿದ ಪತಿ