ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಭಾಗವಾಗಿ ಬೆಂಗಳೂರು ಜಿಲ್ಲಾ ಬಿಜೆಪಿ ಕಂಠೀರವ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ಅಮೃತ ಭಾರತಿಗೆ ಕರುನಾಡ ಜಾತ್ರೆ ಕಾರ್ಯಕ್ರಮ ಒಂದು ಹಂತಕ್ಕೆ ಬಿಜೆಪಿ ಸಮಾವೇಶವಾಗಿ ಮಾರ್ಪಟ್ಟಿತು. ಜತೆಗೆ ಕಾಂಗ್ರೆಸ್ ಆಯೋಜಿಸಿದ ಪಾದಯಾತ್ರೆಗೆ ಕೌಂಟರ್ ಅಟ್ಯಾಕ್ ಅಗಿ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಯಿತು. ಬಿ.ಎಸ್. ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಬಹುತೇಕ ಎಲ್ಲ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಶಕ್ತಿಯನ್ನು ವಿಜೃಂಭಿಸುವಂತೆ ಮಾಡಿದರು. ಜತೆಗೆ ಪ್ರತಿ ಪಕ್ಷಗಳಿಗೆ ಠಕ್ಕರ್ ನೀಡಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಂತೂ ಕಾಂಗ್ರೆಸ್‌ನ ಎಲ್ಲ ಭ್ರಮೆಗಳನ್ನು ಕಳಚಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದಾಗಿ ಘೋಷಿಸಿದರು.
ಕಾಂಗ್ರೆಸ್ ಕಥೆ ಊರೂರು ಹೇಳ್ತೇನೆ
ʻʻನಮಗೆ ಸ್ವಾತಂತ್ರ್ಯ ಗಳಿಸಿಕೊಟ್ಟ ಮಹಾತ್ಮ ಗಾಂಧಿಯವರನ್ನು, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸ್ಮರಿಸಿಕೊಳ್ಳುವ ದಿನ. ಆದರೆ, ಅಂಬೇಡ್ಕರ್ ಅವರಿಗೆ ಈ ಕಾಂಗ್ರೆಸ್ ಎಷ್ಟು ಕಿರುಕುಳ ಕೊಟ್ಟಿದೆ ಎನ್ನುವುದನ್ನೂ ನಾವು ಜನರಿಗೆ ಹೇಳಬೇಕು. ಈ ಬಗ್ಗೆ ರಾಜ್ಯಾದ್ಯಂತ ಪ್ರವಾಸ ಮಾಡಿ ಜನರಿಗೆ ತಿಳಿಸುತ್ತೇನೆ. ಕಾಂಗ್ರೆಸ್‌ನವರು ಈಗಾಗಲೇ ಅಧಿಕಾರಕ್ಕೆ ಬಂದೆವು ಅನ್ನೋ ಭ್ರಮೆಯಲ್ಲಿದ್ದಾರೆ. ಅದನ್ನು ಕಳಚುವ ಕೆಲಸವನ್ನು ಬಿಜೆಪಿ ಮಾಡಲಿದೆʼʼ ಎಂದರು ಬಿ.ಎಸ್. ಯಡಿಯೂರಪ್ಪ.
ʻʻನಾಡಿನಲ್ಲಿ ಮತ್ತೆ ಪ್ರವಾಸ ಮಾಡಿ, ಬಿಜೆಪಿಯನ್ನ ಮತ್ತೆ ಅಧಿಕಾರಕ್ಕೆ ತರುತ್ತೇವೆ. ನಾವು ಮಾಡಿದ ಅಭಿವೃದ್ಧಿ ಕಾರ್ಯ ಇಟ್ಟುಕೊಂಡು ಓಡಾಟ ಮಾಡಿದರೆ ಕಾಂಗ್ರೆಸ್‌ಗೆ ಉಸಿರುಗಟ್ಟುವ ವಾತಾವರಣ ಬರಲಿದೆʼʼ ಎಂದು ಹೇಳಿದರು ಬಿಎಸ್‌ವೈ
ʻʻನರೇಂದ್ರ ಮೋದಿ ಅವರನ್ನು ಪ್ರಧಾನ ಮಂತ್ರಿಯಾಗಿ ಪಡೆದ ನಾವೇ ಪುಣ್ಯವಂತರು. ಹಗಲು, ಇರುಳೆನ್ನದೆ ಅವರು ಕೆಲಸ ಮಾಡುತ್ತಿದ್ದಾರೆ. ಅಂತ ಕೆಲಸವನ್ನು ರಾಜ್ಯದಲ್ಲಿ ಮಾಡಿದರೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆʼʼ ಎಂದು ಹೇಳಿದರು.
ತಿರಂಗಾ ಹಾರಿಸಲೂ ಅವಕಾಶವಿರಲಿಲ್ಲ
ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ʻʻಮೋದಿ ಅವರು ಇವತ್ತು ಪ್ರತಿಯೊಂದು ಮನೆಯಲ್ಲೂ ತಿರಂಗಾ ಹಾರುವಂತೆ ಮಾಡಿದ್ದಾರೆ. ಆದರೆ, ಒಂದು ಕಾಲದಲ್ಲಿ ನಮ್ಮಲ್ಲೇ ಹಲವು ಕಡೆ ತಿರಂಗಾ ಹಾರಿಸಲು ಅವಕಾಶ ಇರಲಿಲ್ಲ ಎನ್ನುವುದನ್ನು ನೆನಪು ಮಾಡಿಕೊಳ್ಳಿ. ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಬಾವುಟ ಹಾರಿಲು ಪ್ರಾಣ ಬಲಿ ಆಗಿದ್ದನ್ನು ನೆನಪಿಟ್ಟುಕೊಳ್ಳಿʼʼ ಎಂದು ಹೇಳಿದರು.
ಜಗತ್ತು ನೋಡುವಂತೆ ಆಚರಣೆ: ಅಶೋಕ್
ʻʻಸ್ವಾತಂತ್ರ್ಯ ಬಂದು 25, 50ವರ್ಷ ಹೇಗೆ ಆಚರಣೆ ಮಾಡಿದ್ರು ಅಂತ ನಮಗೆ ಯಾರಿಗೂ ನೆನಪಿಲ್ಲ. ಆದರೆ, 75ನೇ ವರ್ಷವನ್ನು ನರೇಂದ್ರ ಮೋದಿಯವರು ಇಡೀ ರಾಷ್ಟ್ರ, ಜಗತ್ತು ನೋಡುವಂತೆ ಮಾಡಿದರುʼʼ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ʻʻಸಿದ್ದರಾಮಯ್ಯ ಹೇಳ್ತಿದ್ರು ಸ್ವಾತಂತ್ರ್ಯ ನಾವು ತಂದು ಕೊಟ್ಟೆವು ಅಂತ. ಸಿದ್ದರಾಮಯ್ಯ ಅಂತೂ ತರಲಿಲ್ಲ. ಯಾಕೆಂದರೆ ಅವರದ್ದು ಈಗ ಮೂರನೇ ಪಾರ್ಟಿʼʼ ಎಂದು ಲೇವಡಿ ಮಾಡಿದರು ಅಶೋಕ್.
ಅಂಬೇಡ್ಕರ್‌ಗೆ ಅವಮಾನ
ʻʻಗರೀಬಿ ಹಠಾವೋ ಅಂದ್ರು, ಗರೀಬಿ ಹಠಾವೋ ಆಯ್ತಾ? ಕಾಂಗ್ರೆಸ್‌ನವರು ದೇಶಕ್ಕೆ ಅನೇಕ ಪ್ರಧಾನಿಗಳನ್ನು ಕೊಟ್ಟರು. ಒಪ್ಪಿಕೊಳ್ಳೋಣ. ಲಾಲ್ ಬಹದ್ದೂರ್ ಶಾಸ್ತ್ರಿ ಬಿಟ್ರೆ ಯಾರೂ ಕೆಲಸ ಮಾಡಲಿಲ್ಲ. ಸಂವಿಧಾನ ಕೊಟ್ಟ ಅಂಬೇಡ್ಕರ್ ಅವರನ್ನ ಪಾರ್ಲಿಮೆಂಟ್ ಪ್ರವೇಶಿಸಲಿಕ್ಕೂ ಅವರು ಬಿಡಲಿಲ್ಲ. ಅಂಬೇಡ್ಕರ್ ಸತ್ತಾಗ ಮೂರಡಿ, ಆರಡಿ ಜಾಗ ಕೊಡಲಿಲ್ಲ. ಇಂದು ಅವರ ಫೋಟೊ ಹಾಕಿಕೊಳ್ತಾರೆʼʼ ಎಂದರು ಅಶೋಕ್.
ಇದನ್ನೂ ಓದಿ| Independence day | ನೆಹರು ವಿವಾದ: ಮಾಣೆಕ್ ಶಾದಲ್ಲಿ ಸಾಫ್ಟ್, ಕಂಠೀರವದಲ್ಲಿ ಅಟ್ಯಾಕ್ ಮಾಡಿದ ಸಿಎಂ