ಚಾಮರಾಜಪೇಟೆ: ಬಿಬಿಎಂಪಿಯ ಕಡತಗಳಲ್ಲಿ ಈದ್ಗಾ ಮೈದಾನ ಎಂಬ ಉಲ್ಲೇಖವೇ ಇಲ್ಲ, ಅದು ಕೇವಲ ಆಟದ ಮೈದಾನ ಎಂದು ಅಧಿಕಾರಿಗಳು ಸ್ಪಷ್ಟಪಡಿಸುತ್ತಿದ್ದಂತೆಯೇ, ಚಾಮರಾಜಪೇಟೆಯ ವಿವಾದಿತ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಅವಕಾಶ ಕೋರಿ ಮನವಿ ಸಲ್ಲಿಸಲಾಗಿದೆ.
ವಿಶ್ವ ಸನಾತನ ಪರಿಷತ್‌ನ ಅಧ್ಯಕ್ಷ ಭಾಸ್ಕರ್ ಅವರ ನೇತೃತ್ವದ ನಿಯೋಗವೊಂದು ಮಂಗಳವಾರ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತರನ್ನು ಭೇಟಿ ಮಾಡಿ ಆಗಸ್ಟ್ 15ರಂದು ಇಲ್ಲಿ ತ್ರಿವರ್ಣ ಧ್ವಜಾರೋಹಣಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿತು.
ಚಾಮರಾಜಪೇಟೆಯ ಈದ್ಗಾ ಮೈದಾನಕ್ಕೆ ಸಂಬಂಧಿಸಿ ಹಲವು ವರ್ಷಗಳಿಂದ ವಿವಾದವಿತ್ತು. ಇಲ್ಲಿ ವರ್ಷಕ್ಕೆ ಎರಡು ಬಾರಿ ಮುಸ್ಲಿಮರ ಸಾಮೂಹಿಕ ಪ್ರಾರ್ಥನೆ ಮತ್ತು ವರ್ಷಕ್ಕೊಮ್ಮೆ ದೊಡ್ಡ ಮಟ್ಟದ ಕುರಿ ವ್ಯಾಪಾರಕ್ಕೆ ಮಾತ್ರ ಅನುಮತಿ ನೀಡಲಾಗುತ್ತಿತ್ತು. ಉಳಿದಂತೆ ಇಲ್ಲಿ ಸಾಮಾನ್ಯವಾಗಿ ಮಕ್ಕಳು ಆಟವಾಡುತ್ತಿದ್ದರು. ಇದರ ಹೆಸರು ಈದ್ಗಾ ಮೈದಾನ ಇದ್ದುದರಿಂದ ಇದು ಮುಸ್ಲಿಮ್ ಸಂಸ್ಥೆಗೆ ಸೇರಿದ ಜಾಗ ಎಂದೇ ಎಲ್ಲರೂ ತಿಳಿದಿದ್ದರು. ಆದರೆ, ಇದರ ಬಗ್ಗೆ ಮತ್ತೆ ವಿವಾದ ತಲೆದೋರಿದಾಗ ಬಿಬಿಎಂಪಿಯು ಇದು ಸರಕಾರದ ಸ್ವತ್ತು, ಆಟದ ಮೈದಾನ ಎಂದು ಸ್ಪಷ್ಟಪಡಿಸಿತು.
ಕಾನೂನಿನ ಪ್ರಕಾರ ಪಾಲಿಕೆ ಜಂಟಿ ಆಯುಕ್ತರಿಗೆ ಮನವಿ ಸಲ್ಲಿಸಿದ್ದೇವೆ. ಇನ್ನು ಐದು ದಿನದ ಒಳಗೆ ನಮ್ಮ ಮನವಿಗೆ ಉತ್ತರ ನೀಡಲಾಗುವುದು ಎಂದು ಜಂಟಿ ಆಯುಕ್ತರು ಹೇಳಿಕೆ ನೀಡಿದ್ದಾರೆ. ಎಂದು ವಿಶ್ವ ಸನಾತನ ಪರಿಷತ್ ಅಧ್ಯಕ್ಷರು ಹೇಳಿದರು.
ಚರ್ಚಿಸಿ ಕ್ರಮ
ವಿಶ್ವ ಸನಾತನ ಪರಿಷತ್‌ನ ನಿಯೋಗದ ಮನವಿ ಸ್ವೀಕರಿಸಿ ಮಾತನಾಡಿದ ಆಯುಕ್ತರು. ಹಿಂದುಪರ ಸಂಘಟನೆಗಳು ಈ ಬಾರಿ ಆಗಸ್ಟ್ 15ರಂದು ಧ್ವಜಾರೋಹಣ ಮಾಡಲು ಅವಕಾಶ ಕೋರಿದ್ದಾರೆ. ಈ ಬಗ್ಗೆ ಪೊಲೀಸ್ ಆಯುಕ್ತರು ಹಾಗೂ ಸ್ಥಳೀಯ ಪೊಲೀಸ್ ಠಾಣೆ ಮುಖ್ಯಸ್ಥರ ಬಳಿ ಚರ್ಚಿಸಿ ಕ್ರಮಕ್ಕೆ ಕೈಗೊಳ್ತಿವಿ ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಚಾಮರಾಜಪೇಟೆಯಲ್ಲಿ ಮತ್ತೆ ಶುರುವಾದ ಮೈದಾನ ವಿವಾದ
ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಾಮರಾಜಪೇಟೆ ಮೈದಾನ ಬಿಬಿಎಂಪಿ ಸ್ವತ್ತು ಎಂದು ಸ್ಪಷ್ಟಪಡಿಸಿದ್ದ ಅಧಿಕಾರಿಗಳು ಇದುವರೆಗೆ ಯಾವ ಸಂಸ್ಥೆಗಳೂ ಹಬ್ಬ, ಸ್ವಾತಂತ್ರ್ಯೋತ್ಸವ ಆಚರಣೆಗೆ ಅನುಮತಿ ಕೇಳಿರಲಿಲ್ಲ ಎಂದು ಹೇಳಿದ್ದರು. ಆಗ ಈ ಬಾರಿ ಆಗಸ್ಟ್ 15ರಂದು ತ್ರಿವರ್ಣ ಧ್ವಜಾರೋಹಣಕ್ಕೆ ಅನುಮತಿ ನೀಡುವಂತೆ ಪೊಲೀಸರಿಗೆ ಮನವಿ ಸಲ್ಲಿಸಲಾಗುತ್ತದೆ. ಬಿಬಿಎಂಪಿ ಕೇಳುತ್ತಿರುವುದು ಸತ್ಯವೋ ಸುಳ್ಳೊ ಎನ್ನುವುದು ಆಗ ತಿಳಿಯುತ್ತದೆ ಎಂದು ಸಂಘಟನೆಯ ಮುಖಂಡರೊಬ್ಬರು ಹೇಳಿದ್ದರು.
ಇದನ್ನೂ ಓದಿ: ಚಾಮರಾಜಪೇಟೆ ಈದ್ಗಾ ಮೈದಾನ ಸರ್ವ ಜನಾಂಗದ ಸ್ವತ್ತು!