Site icon Vistara News

Independence day| ರಾಷ್ಟ್ರಧ್ವಜ ಕಟ್ಟುವ ವೇಳೆ ಮಹಡಿಯಿಂದ ಬಿದ್ದು ಸಾಫ್ಟ್‌ವೇರ್‌ ಎಂಜಿನಿಯರ್‌ ಮೃತ್ಯು

tiranga at home

ಬೆಂಗಳೂರು: ದೇಶದೆಲ್ಲೆಡೆ ಮನೆ ಮನೆಯಲ್ಲೂ ತಿರಂಗಾ ಹಾರಿಸುವ ಹುಮ್ಮಸ್ಸು. ಎಚ್‌ಬಿಆರ್‌ ಲೇಔಟ್‌ನ ಆ ಮನೆಯಲ್ಲೂ ಅದೇ ಸಂಭ್ರಮವಿತ್ತು. ಆದರೆ, ಆ ಸಂಭ್ರಮವೀಗ ಶೋಕವಾಗಿ ಮಾರ್ಪಟ್ಟಿದೆ. ಯಾಕೆಂದರೆ, ತ್ರಿವರ್ಣ ಧ್ವಜ ಕಟ್ಟಲು ಹೋದ ಮನೆ ಮಾಲೀಕನೇ ಇನ್ನಿಲ್ಲ.

ಎಚ್‌ಬಿಆರ್‌ ಲೇಔಟ್‌ನಲ್ಲಿ ಮನೆ ಮೇಲೆ ರಾಷ್ಟ್ರ ಧ್ವಜ ಕಟ್ಟಲು ಹೋಗಿ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ವೃತ್ತಿಯಲ್ಲಿ ಸಾಫ್ಟ್‌ ವೇರ್‌ ಎಂಜಿನಿಯರ್‌ ಆಗಿರುವ ವಿಶು ಕುಮಾರ್‌ (೩೩) ಅವರೇ ಮೃತ ವ್ಯಕ್ತಿ. ಅವರು ತ್ರಿವರ್ಣ ಧ್ವಜ ಕಟ್ಟುತ್ತಿರುವಾಗ ಎರಡನೇ ಮಹಡಿಯಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.

ಎಲ್ಲರ ಮನೆಯಂತೆಯೇ ಅವರ ಮನೆಯಲ್ಲೂ ಖುಷಿಯ ವಾತಾವರಣವಿತ್ತು. ಅಕ್ಕಪಕ್ಕದ ಮನೆಗಳಲ್ಲೂ ತಿರಂಗಾ ರಾರಾಜಿಸುತ್ತಿತ್ತು. ಹಾಗಾಗಿ ತಾನೂ ಕಟ್ಟಬೇಕು ಎನ್ನುವ ಉತ್ಸಾಹದಲ್ಲಿ ಅವರು ಧ್ವಜ ತಂದಿದ್ದರು. ಎರಡನೇ ಮಹಡಿಯ ಮೇಲೆ ಹತ್ತಿ ಕಟ್ಟಲು ಟೆರೇಸ್‌ ಹತ್ತಿದರು. ಭಾನುವಾರ ಮಧ್ಯಾಹ್ನ ೧.೪೫ರ ಹೊತ್ತಿಗೆ ಅವರು ಟೆರೇಸ್‌ ಏರಿದ್ದರು. ಆದರೆ, ಹಾಗೆ ಕಟ್ಟುವ ವೇಳೆ ಆಯತಪ್ಪಿದರು. ಅಲ್ಲಿಂದ ಸುಮಾರು ೩೦ ಅಡಿ ಕೆಳಗೆ ಬಿದ್ದರು.

ಘಟನೆಯಲ್ಲಿ ವಿಶುಕುಮಾರ್ ತಲೆಗೆ ಗಂಭೀರ ಪೆಟ್ಟಾಗಿತ್ತು. ತಕ್ಷಣ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ರಾತ್ರಿ ವಿಶುಕುಮಾರ್ ಕೊನೆಯುಸಿರೆಳೆದರು.

ಘಟನೆ ಸಂಬಂಧ ವಿಶುಕುಮಾರ್ ತಂದೆ ನಾರಾಯಣ ಭಟ್ ದೂರು ನೀಡಿದ್ದಾರೆ. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ| Har Ghar tiranga Shimogga| ತಿರಂಗಾ ಮೆರವಣಿಗೆಯಲ್ಲಿ ಮನೆ ಮನೆಗೂ ತೆರಳಿ ಗಮನ ಸೆಳೆದ ದನದ ಕರು!

Exit mobile version