ನವದೆಹಲಿ: ದೇಶದಲ್ಲಿ ಈಗಾಗಲೇ ಅಗತ್ಯ ವಸ್ತುಗಳ ಬೆಲೆಯೇರಿಕೆಯಾಗಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆಯೇರಿಕೆ ಜತೆಗೆ ಇತ್ತೀಚೆಗೆ ಟೊಮ್ಯಾಟೊ (Tomato Price Hike) ಬೆಲೆಯೇರಿಕೆಯೂ ಜನರ ಜೇಬಿಗೆ ಭಾರವಾಗಿತ್ತು. ಹೀಗೆ ಬೆಲೆಯೇರಿಕೆಯ ಬಲೆಗೆ ಸಿಲುಕಿ ಜನ ಒದ್ದಾಡುತ್ತಿರುವ ಬೆನ್ನಲ್ಲೇ ಸಕ್ಕರೆ ಬೆಲೆಯು (Sugar Price) ಆರು ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದೆ. ಇದು ಗ್ರಾಹಕರ ತಿಂಗಳ ಬಜೆಟ್ ಮೇಲೆ ಮತ್ತಷ್ಟು ಹೊರೆ ಬೀಳಲಿದೆ.
ಕಳೆದ 15 ದಿನದಲ್ಲಿಯೇ ಸಕ್ಕರೆ ಬೆಲೆಯು ಶೇ.3ರಷ್ಟು ಏರಿಕೆಯಾಗಿದೆ. ಒಂದು ಟನ್ ಸಕ್ಕರೆ ಬೆಲೆ ಈಗ 37,750 ರೂ. ಆಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆಯಾಗಲಿದೆ. ಗಣೇಶ ಚತುರ್ಥಿ, ದಸರಾ, ದೀಪಾವಳಿ ಸೇರಿ ಸಾಲು ಸಾಲು ಹಬ್ಬಗಳು ಬರುತ್ತಿದ್ದು, ಹಬ್ಬಗಳ ದಿನ ಸಿಹಿ ತಿನಿಸು ಮಾಡಿ ಸವಿಯುವ ಖುಷಿಗೆ ಬೆಲೆಯೇರಿಕೆಯ ಬಿಸಿ ತಾಗುವುದಂತೂ ನಿಶ್ಚಿತವಾಗಿದೆ.
ಬೆಲೆಯೇರಿಕೆಗೆ ಕಾರಣವೇನು?
ಕರ್ನಾಟಕ, ಮಹಾರಾಷ್ಟ್ರ, ಪಂಜಾಬ್ ಸೇರಿ ದೇಶದ ಬಹುತೇಕ ಭಾಗಗಳಲ್ಲಿ ಈ ಬಾರಿ ಮುಂಗಾರು ಮಳೆಯ ಕೊರತೆಯುಂಟಾಗಿದೆ. ಇದರಿಂದಾಗಿ ಕಬ್ಬಿನ ಉತ್ಪಾದನೆಯು ಕುಂಠಿತವಾಗಿ, ಸಕ್ಕರೆ ಕಾರ್ಖಾನೆಗಳಲ್ಲಿ ಸಕ್ಕರೆ ಉತ್ಪಾದನೆ ಇಳಿಕೆಯಾಗಿದೆ. ಹಾಗಾಗಿ ಸಕ್ಕರೆ ಬೆಲೆಯು ದಿಢೀರನೆ ಏರಿಕೆಯಾಗಿದೆ. ಸಕ್ಕರೆ ಬಳಕೆಯಲ್ಲಿ ಜಗತ್ತಿನಲ್ಲೇ ಭಾರತ ಅಗ್ರ ಸ್ಥಾನದಲ್ಲಿದೆ. ಹಾಗೆಯೇ, ಉತ್ಪಾದನೆಯಲ್ಲೂ ಮುಂದಿದೆ. ಆದರೆ, ಉತ್ಪಾದನೆಯೇ ಕುಂಠಿತವಾದ ಕಾರಣ ಬೆಲೆಯೇರಿಕೆಯ ಬಿಸಿ ತಾಗುತ್ತಿದೆ.
ಇದನ್ನೂ ಓದಿ: Banana Price Hike : ಟೊಮ್ಯಾಟೊ ಬಳಿಕ ಶತಕ ಬಾರಿಸಿದ ಕೀರ್ತಿ ಬಾಳೆ ಹಣ್ಣಿನದ್ದು!
ಭಾರತವು ಈಗಾಗಲೇ ಸಕ್ಕರೆ ರಫ್ತನ್ನು ನಿಯಮಿತಗೊಳಿಸಿದೆ. ಕಳೆದ ವರ್ಷ ಭಾರತ ಜಗತ್ತಿನ ಹಲವು ರಾಷ್ಟ್ರಗಳಿಗೆ 1.11 ಕೋಟಿ ಟನ್ ಸಕ್ಕರೆ ರಫ್ತು ಮಾಡಿತ್ತು. ಆದರೆ, ಈ ಬಾರಿ ಸಕ್ಕರೆ ರಫ್ತನ್ನು 61 ಲಕ್ಷ ಟನ್‌ಗೆ ಇಳಿಸಿದೆ. ಆದರೂ, ಸಕ್ಕರೆ ಉತ್ಪಾದನೆ ಕುಂಠಿತವಾದ ಕಾರಣ ಬೆಲೆ ಏರಿಕೆಯಾಗಿದೆ. ಆದಾಗ್ಯೂ, ದೇಶಾದ್ಯಂತ ಸಕ್ಕರೆ ದಾಸ್ತಾನು ಉತ್ತಮವಾಗಿದ್ದು, ಬೇಡಿಕೆಗೆ ತಕ್ಕ ಪೂರೈಕೆಯಾಗಲಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರವು ಸಕ್ಕರೆ ರಫ್ತು ನಿಷೇಧಿಸಿದರೂ ನಿಷೇಧಿಸಬಹುದು ಎನ್ನಲಾಗುತ್ತಿದೆ.