ನವದೆಹಲಿ: “ಭಾರತವು ಕಳೆದ ೭೫ ವರ್ಷಗಳಲ್ಲಿ ಏಳಿಗೆಯತ್ತ ಮುಖ ಮಾಡಿದೆ. ಕರ್ನಾಟಕ ಸಂಘಕ್ಕೂ ೭೫ ವರ್ಷ ತುಂಬುತ್ತಿದ್ದು, ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು. ದೇಶದ ಏಳಿಗೆಗೆ ಕರ್ನಾಟಕದ ಜನರೂ ಮತ್ತಷ್ಟು ಕೊಡುಗೆ ನೀಡಲಿ. ರಾಮಾಯಣದ ಕಾಲದಿಂದಲೂ ಹನುಮಂತನ ರೂಪದಲ್ಲಿ ದೇಶಕ್ಕೆ ಕರ್ನಾಟಕದ ಕೊಡುಗೆ ಅಪಾರವಾಗಿದೆ. ಹನುಮಂತನ ಹೊರತಾಗಿ ರಾಮಾಯಣ ಪೂರ್ಣವಾಗುವುದಿಲ್ಲ. ಕರ್ನಾಟಕದ ಹೊರತಾಗಿ ಭಾರತದ ವೈವಿಧ್ಯತೆ ಪೂರ್ಣವಾಗುವುದಿಲ್ಲ” ಎಂದು (Barisu Kannada Dindimava) ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ದೆಹಲಿಯ ಕರ್ನಾಟಕ ಸಂಘದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ದೆಹಲಿಯ ತಾಲಕಟೋರಾ ಸ್ಟೇಡಿಯಂನಲ್ಲಿ ಆಯೋಜಿಸಿರುವ ‘ಬಾರಿಸುವ ಕನ್ನಡ ಡಿಂಡಿಮವ ಸಾಂಸ್ಕೃತಿಕ ಸಂಭ್ರಮ’ಕ್ಕೆ (Barisu Kannada Dindimava) ಮೋದಿ ಅವರು ಚಾಲನೆ ನೀಡಿದ ಬಳಿಕ ಮಾತನಾಡಿದರು.
“ದೇವರ ದಾಸೀಮಯ್ಯ, ಬಸವಣ್ಣ, ಡೋಹರ ಕಕ್ಕಯ್ಯ, ಮಾದಾರ ಚನ್ನಯ್ಯ, ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರು ಅನಾದಿ ಕಾಲದಲ್ಲಿ ಭಾರತಕ್ಕೆ ಪ್ರೇರಣೆ ನೀಡಿದ್ದಾರೆ. ಹಾಗೆಯೇ, ಆಧುನಿಕ ಕಾಲದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ, ಸರ್ ಎಂ.ವಿಶ್ವೇಶ್ವರಯ್ಯ, ಕುವೆಂಪು ಅವರು ದೇಶಕ್ಕೆ ಸ್ಫೂರ್ತಿಯಾಗಿದ್ದಾರೆ” ಎಂದು ಸ್ಮರಿಸಿದರು.
ಕರ್ನಾಟಕದ ಕುರಿತು ಮೋದಿ ಮಾತು
ಕುವೆಂಪು ಅವರನ್ನು ಸ್ಮರಿಸಿದ ಪ್ರಧಾನಿ
ರಾಷ್ಟ್ರಕವಿ ಕುವೆಂಪು ಅವರನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದರು. “ಕುವೆಂಪು ಅವರು ಕರ್ನಾಟಕದ ನಾಡಗೀತೆ ರಚಿಸಿದರು. ಭಾರತ ಮಾತೆಯ ಪುತ್ರಿ ಕರ್ನಾಟಕ ಎಂದು ಗೀತೆ ರಚಿಸಿದರು. ಇದು ಅವರ ಏಕ ಭಾರತ್, ಶ್ರೇಷ್ಠ ಭಾರತ್ ಕಲ್ಪನೆಯ ದ್ಯೋತಕವಾಗಿದೆ. ಬಸವಣ್ಣನವರು ಜಗತ್ತಿಗೆ ಜ್ಞಾನದ ಬೆಳಕು ನೀಡಿದರು. ಅವರ ಮೂರ್ತಿಯನ್ನು ಲಂಡನ್‌ನಲ್ಲಿ ಪ್ರತಿಷ್ಠಾಪಿಸಲಾಗಿದೆ. ಕರ್ನಾಟಕವು ತಂತ್ರಜ್ಞಾನ, ಸಂಸ್ಕೃತಿ, ಕೃತಕ ಬುದ್ಧಿಮತ್ತೆಯ ತವರೂರಾಗಿದೆ” ಎಂದು ಬಣ್ಣಿಸಿದರು.
“ಬೆಂಗಳೂರಿನಲ್ಲಿ ಜಿ-೨೦ ಸಭೆ ನಡೆಯುತ್ತಿದೆ. ಸಂಪ್ರದಾಯ ಹಾಗೂ ತಂತ್ರಜ್ಞಾನವು ಭಾರತದ ಏಳಿಗೆಯ ಸಂಕೇತವಾಗಿದೆ. ಇಂತಹ ಔನ್ನತ್ಯಪೂರ್ಣ ವಿಚಾರಗಳೊಂದಿಗೆ ಭಾರತ ಮುನ್ನುಗ್ಗುತ್ತಿದೆ. ಭಾರತದಲ್ಲಿ ಪ್ರಾಚೀನ ದೇವಾಲಯ (ರಾಮಮಂದಿರ)ವನ್ನೂ ಸ್ಥಾಪಿಸಲಾಗುತ್ತಿದೆ. ಹಾಗೆಯೇ, ಡಿಜಿಟಲ್ ಪೇಮೆಂಟ್ ವ್ಯವಸ್ಥೆಯು ಭಾರತವು ಜಗತ್ತಿಗೆ ಮಾದರಿಯಾಗಿದೆ” ಎಂದರು.
ಎಲ್ಲಾದರೂ ಇರು, ಎಂತಾದರೂ ಇರು ಎಂದ ಮೋದಿ
ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಸಾಲುಗಳನ್ನು ನರೇಂದ್ರ ಮೋದಿ ನೆನೆದರು. “ದೇಶವು ಸ್ವಾತಂತ್ರ್ಯ ಗಳಿಸಿ ೭೫ನೇ ವರ್ಷದ ಸಂಭ್ರಮ ಆಚರಿಸುತ್ತಿರುವ ವೇಳೆಯೇ ದೆಹಲಿ ಕರ್ನಾಟಕ ಸಂಘವೂ ಅಮೃತ ಮಹೋತ್ಸವ ಆಚರಿಸುತ್ತಿರುವುದು ಸಂತಸದ ವಿಷಯ” ಎಂದು ಹೇಳಿದರು.
“ನಾವು ಅಧಿಕಾರಕ್ಕೆ ಬಂದ ಬಳಿಕ ಕರ್ನಾಟಕಕ್ಕೆ ವಾರ್ಷಿಕ ೩೦ ಸಾವಿರ ಕೋಟಿ ರೂ. ನೀಡಲಾಗುತ್ತಿದೆ. ಕರ್ನಾಟಕದ ರೈಲು ವ್ಯವಸ್ಥೆಗೆ ೨೦೦೯ರಿಂದ ೨೦೧೪ರ ಐದು ವರ್ಷದಲ್ಲಿ ಕರ್ನಾಟಕಕ್ಕೆ ೪ ಸಾವಿರ ಕೋಟಿ ರೂ. ನೀಡಲಾಗಿತ್ತು. ಆದರೆ, ನಾವು ಇದೇ ವರ್ಷದ ಬಜೆಟ್‌ನಲ್ಲಿ ೭ ಸಾವಿರ ಕೋಟಿ ರೂ. ಕರ್ನಾಟಕಕ್ಕೆ ನೀಡಿದ್ದೇವೆ. ಆ ಮೂಲಕ ಕರ್ನಾಟಕದ ಏಳಿಗೆಗೆ ಕೇಂದ್ರ ಸರ್ಕಾರ ಕೊಡುಗೆ ನೀಡಿದೆ” ಎಂದು ಮಾಹಿತಿ ನೀಡಿದರು.
“ದೆಹಲಿಯಲ್ಲಿರುವ ಕರ್ನಾಟಕ ಸಂಘವು ಮುಂದಿನ ೨೫ ವರ್ಷಗಳವರೆಗೆ ಮತ್ತಷ್ಟು ಉತ್ಸಾಹದಿಂದ ಕಾರ್ಯನಿರ್ವಹಿಸಲಿ. ಕನ್ನಡ ಭಾಷೆಯು ತುಂಬ ಸುಂದರವಾಗಿದೆ, ಸಾಹಿತ್ಯವು ತುಂಬ ಸಮೃದ್ಧವಾಗಿದೆ. ಇಂದು ಕನ್ನಡದಲ್ಲಿ ಯಾವುದೇ ಪುಸ್ತಕ ಪ್ರಕಟವಾಗಲಿ, ಅದು ಕೆಲವೇ ದಿನಗಳಲ್ಲಿ ಮರುಮುದ್ರಣವಾಗುತ್ತದೆ. ಇದು ಕನ್ನಡ ಭಾಷೆಯ ಶಕ್ತಿ” ಎಂದು ಹೇಳಿದರು.
ಕನ್ನಡ ಕಲಿಯಿರಿ, ಕನ್ನಡ ಕಲಿಸಿರಿ: ಮೋದಿ ಕರೆ
“ದೆಹಲಿಯಲ್ಲಿರುವ ಕನ್ನಡಿಗರ ಮಕ್ಕಳು ಕನ್ನಡದಲ್ಲಿಯೇ ಅಧ್ಯಯನ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಇದು ಕನ್ನಡಿಗರ ಜತೆ ಬೇರೆಯವರೂ ಕನ್ನಡ ಕಲಿಯಲು ನೆರವಾಗುತ್ತದೆ. ಕನ್ನಡ ಕಲಿಯಿರಿ, ಕನ್ನಡ ಕಲಿಸಿರಿ ಎಂಬ ಧ್ಯೇಯ ನಿಮ್ಮದಾಗಲಿ. ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಸಂತಸ ತಂದಿದೆ. ಭರತನಾಟ್ಯದಿಂದ ಯಕ್ಷಗಾನದವರೆಗೆ ಕರ್ನಾಟಕದ ಕಲಾವಿದರು ಕಲೆಯನ್ನು ಬೆಳಗಿದ್ದಾರೆ. ಇದೇ ರೀತಿ ದೆಹಲಿ ಕರ್ನಾಟಕ ಸಂಘವು ಮತ್ತಷ್ಟು ಮಹೋನ್ನತ ಕಾರ್ಯಕ್ರಮಗಳನ್ನು ಆಯೋಜಿಸಲಿ. ದೆಹಲಿ ಕನ್ನಡಿಗರು ಕನ್ನಡತನ, ಕರ್ನಾಟಕದ ವೈಭವವನ್ನು ಮೆರೆಯಲಿ” ಎಂದು ಮೋದಿ ಹೇಳಿದರು.
ಕರ್ನಾಟಕವು ಭಾರತ ಸಿರಿಧಾನ್ಯಗಳ ಪ್ರಮುಖ ಕೇಂದ್ರ: ಮೋದಿ
“ಸಿರಿಧಾನ್ಯ ವರ್ಷವನ್ನು ಆಚರಿಸಲಾಗುತ್ತಿದೆ. ಭಾರತದಲ್ಲಿ ಕರ್ನಾಟಕವು ಸಿರಿಧಾನ್ಯದ ಪ್ರಮುಖ ಕೇಂದ್ರವಾಗಿದೆ. ಅನ್ನ, ರಾಗಿಯ ನಾಡಾಗಿ ಕರ್ನಾಟಕವು ಸಿರಿಧಾನ್ಯಗಳ ವಿಷಯದಲ್ಲಿ ಸಮೃದ್ಧವಾಗಿದೆ. ಸಿರಿಧಾನ್ಯಗಳಿಗೆ ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿರುವುದರಿಂದ ಕರ್ನಾಟಕದ ಸಣ್ಣ ರೈತರಿಗೆ ಅನುಕೂಲವಾಗಲಿದೆ”
ಇದನ್ನೂ ಓದಿ: Barisu Kannada Dindimava: ದೆಹಲಿಯಲ್ಲಿ ನಗಾರಿ ಬಾರಿಸಿ ‘ಬಾರಿಸು ಕನ್ನಡ ಡಿಂಡಿಮವ’ ಕಾರ್ಯಕ್ರಮಕ್ಕೆ ಮೋದಿ ಚಾಲನೆ