Site icon Vistara News

ಸಿದ್ದರಾಮೋತ್ಸವಕ್ಕೆ ಡಿ.ಕೆ. ಶಿವಕುಮಾರ್‌ ಅತಿಥಿ ಅಷ್ಟೆ: ಅಧ್ಯಕ್ಷರನ್ನು ದೂರವಿಟ್ಟ ಸಮಿತಿ

DK Shivakumar ED trail

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ 75ನೇ ವರ್ಷದ ಸಂದರ್ಭದಲ್ಲಿ ಆಚರಿಸಲಾಗುತ್ತಿರುವ ಅಮೃತ ಮಹೋತ್ಸವ ಕಾರ್ಯಕ್ರಮದ ಕುರಿತು ಕಾಂಗ್ರೆಸ್‌ನಲ್ಲಿ ದಿನೇದಿನೆ ಹೊಸ ಬೆಳವಣಿಗೆಗಳು ನಡೆಯುತ್ತಿದ್ದು, ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಕಾರ್ಯಕ್ರಮದಿಂದ ದೂರ ಇಟ್ಟಿರುವುದು ಸ್ಪಷ್ಟವಾಗಿದೆ.

ಸಿದ್ದರಾಮೋತ್ಸವ ಎಂದೇ ಪ್ರಸಿದ್ಧಿ ಪಡೆದಿರುವ ಕಾರ್ಯಕ್ರಮ ಕರ್ನಾಟಕದ ಮಧ್ಯಭಾಗ ದಾವಣಗೆರೆಯಲ್ಲಿ ಆಗಸ್ಟ್‌ 3ರಂದು ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಅರವತ್ತಕ್ಕೂ ಹೆಚ್ಚು ಜನರ ಸಮಿತಿ ರಚನೆ ಮಾಡಲಾಗಿದ್ದು, ಸಿದ್ದರಾಮಯ್ಯ ಆಪ್ತರು ಎಂದೇ ಗುರುತಿಸಿಕೊಂಡ ಆರ್‌.ವಿ. ದೇಶಪಾಂಡೆ, ಕೆ.ಎನ್‌. ರಾಜಣ್ಣ, ಎಚ್‌.ಸಿ. ಮಹದೇವಪ್ಪ, ಬಸವರಾಜ ರಾಯರಡ್ಡಿ, ಭೈರತಿ ಸುರೇಶ್‌ ಪ್ರಮುಖರಾಗಿದ್ದಾರೆ. ಉಳಿದಂತೆ ಡಿ.ಕೆ. ಶಿವಕುಮಾರ್‌ ಅವರ ಬೆಂಬಲಿಗರು ಎಂದು ಹೆಸರಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್‌, ಪ್ರಿಯಾಂಕ್‌ ಖರ್ಗೆ ಮುಂತಾದವರು, ಡಿ.ಕೆ. ಶಿವಕುಮಾರ್‌ ಸಹೋದರ ಡಿ.ಕೆ. ಸುರೇಶ್‌ ಅವರನ್ನೂ ಸ್ವಾಗತ ಸಮಿತಿಗೆ ಸೇರಿಸಿಕೊಳ್ಳಲಾಗಿದೆ.

ಉತ್ಸವ ನಡೆಯಲಿದೆ ಎಂದು ಪ್ರಾರಂಭದಲ್ಲಿ ತಿಳಿದುಬಂದಾಗ, ಇದು ಸಿದ್ದರಾಮಯ್ಯ ಅವರ ಆಪ್ತರು ನಡೆಸುತ್ತಿರುವ ಉತ್ಸವ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದ್ದರು. ಕಾರ್ಯಕ್ರಮಕ್ಕೆ ರಾಹುಲ್‌ ಗಾಂಧಿ ಅವರನ್ನು ಆಹ್ವಾನಿಸಿರುವ ವಿಚಾರ ತಿಳಿದಿಲ್ಲ ಎಂದಿದ್ದರು. ಪಕ್ಷದಲ್ಲಿ ವ್ಯಕ್ತಿ ಪೂಜೆ ಇಲ್ಲ, ಸಂಘಟನೆಯ ಎಲ್ಲ ಕಾರ್ಯಕರ್ತರಿಗೂ ಇದೇ ಮಾತನ್ನು ಹೇಳುತ್ತೇನೆ ಎಂದು ಹೇಳಿದ್ದರು. ಸಂಸದ ಡಿ.ಕೆ. ಸುರೇಶ್‌ ಸಹ ಇದೇ ಮಾತನ್ನು ಪುನರುಚ್ಚರಿಸಿದ್ದರು. ಆದರೆ ನಂತರದ ದಿನಗಳಲ್ಲಿ ಡಿ.ಕೆ. ಶಿವಕುಮಾರ್‌ ಧ್ವನಿ ಬದಲಾಗಿತ್ತು.

ಪಕ್ಷದ್ದೇ ಕಾರ್ಯಕ್ರಮ ಎಂದಿದ್ದರು

ತಮ್ಮ ಹಾಗೂ ಸಿದ್ದರಾಮಯ್ಯ ನಡುವಿನ ಭಿನ್ನಮತ ಪಕ್ಷದಲ್ಲಿ ಬಿರುಕಿಗೆ ಕಾರಣವಾಗಬಹುದು ಎಂಬ ಕಾರಣಕ್ಕೆ ಡಿ.ಕೆ. ಶಿವಕುಮಾರ್‌ ವರಸೆ ಬದಲಾಯಿಸಿದ್ದರು. ಎಐಸಿಸಿ ನಾಯಕ ರಾಹುಲ್‌ ಗಾಂಧಿಯವರು ಕಾರ್ಯಕ್ರಮಕ್ಕೆ ಬರುತ್ತಿರುವುದರಿಂದ ಇದು ಪಕ್ಷದ್ದೇ ಕಾರ್ಯಕ್ರಮ ಎಂದು ಹೇಳಿ ಅಚ್ಚರಿ ಮೂಡಿಸಿದ್ದರು. ಪಕ್ಷದ ನಾಯಕರುಗಳೇ ಸೇರಿ ಕಾರ್ಯಕ್ರಮ ನಡೆಸುತ್ತಿದ್ದಾರೆ ಎಂದು ಹೇಳಿದ್ದರು. ಸಿದ್ದರಾಮೋತ್ಸವಕ್ಕೆ ಎಲ್ಲರೂ ಹೋಗಬೇಕು ಎಂದು ತೀರ್ಮಾನ ಮಾಡಿದ್ದೇವೆ. ನಮ್ಮ ಪಕ್ಷದ ನಾಯಕರಾದ ರಾಹುಲ್‌ ಗಾಂಧಿಯವರು ಆಗಮಿಸಲಿದ್ದಾರೆ. ಇದು ನಮ್ಮ ಪಕ್ಷದ ಕಾರ್ಯಕ್ರಮ. ಪಕ್ಷದ ವೇದಿಕೆಯಲ್ಲೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದ್ದರು.

ಎಚ್ಚೆತ್ತ ಸಿದ್ದರಾಮಯ್ಯ ಆಪ್ತರು

ಸಿದ್ದರಾಮಯ್ಯ ಅವರು ಮುಂದಿನ ಸಿಎಂ ಅಭ್ಯರ್ಥಿ ಎಂದು ಬಿಂಬಿಸುವ ಸಲುವಾಗಿಯೇ ಈ ಕಾರ್ಯಕ್ರಮ ಆಯೋಜನೆಯಾಗಿದೆ ಎನ್ನುವುದು ಕಾಂಗ್ರೆಸ್‌ನಲ್ಲಿ ಚರ್ಚೆ ನಡೆಯುತ್ತಿದೆ. ಇದಕ್ಕೆ ಪೂರಕವೆಂಬಂತೆ, ಕಾರ್ಯಕ

ಡಿ.ಕೆ. ಶಿವಕುಮಾರ್‌ ಅವರು ಸಿದ್ದರಾಮೋತ್ಸವವನ್ನು ಪಕ್ಷದ್ದೇ ಕಾರ್ಯಕ್ರಮ ಎಂದು ಹೇಳುತ್ತಿರುವುದರಿಂದ ಎಲ್ಲಿ ತಮ್ಮ ಪ್ರತ್ಯೇಕ ಗುರುತು ಮರೆಯಾಗಿಬಿಡುತ್ತದೆಯೋ ಎಂದು ಸಿದ್ದರಾಮಯ್ಯ ಆಪ್ತರು ಎಚ್ಚೆತ್ತಿದ್ದಾರೆ. ಇದು ಪಕ್ಷದ ಕಾರ್ಯಕ್ರಮ ಅಲ್ಲ, ಇದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ. ಇದು ಶುದ್ಧವಾಗಿ ಸಿದ್ದರಾಮಯ್ಯ ಅವರ ಕಾರ್ಯಕ್ರಮ ಎಂದು ಬಿಂಬಿತವಾಗಬೇಕು. ಇದೇ ಕಾರಣಕ್ಕೆ ಡಿಢೀರನೆ, ಕಾರ್ಯಕ್ರಮ ಆಯೋಜನೆ ಸಮಿತಿಯವರು ಡಿ.ಕೆ. ಶಿವಕುಮಾರ್‌ ಅವರ ಮನೆಗೆ ಮಂಗಳವಾರ ಆಗಮಿಸಿದ್ದರು. ಬಸವರಾಜ ರಾಯರಡ್ಡಿ, ಅಶೋಕ್‌ ಪಟ್ಟಣ್‌ ಹಾಗೂ ಎಚ್‌.ಸಿ. ಮಹದೇವಪ್ಪ ಆಗಮಿಸಿ, ಸಿದ್ದರಾಮೋತ್ಸವಕ್ಕೆ ಆಗಮಿಸುವಂತೆ ಡಿ.ಕೆ. ಶಿವಕುಮಾರ್‌ ಅವರಿಗೆ ಆಹ್ವಾನ ನೀಡಿದ್ದಾರೆ.

ಇದನ್ನೂ ಓದಿ | ಸಿದ್ದರಾಮೋತ್ಸವ Vs ಶಿವಕುಮಾರೋತ್ಸವ? ಸಿದ್ದು, ಡಿಕೆಶಿ ಬೆಂಬಲಿಗರ ಪೈಪೋಟಿ ಶುರು

ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕರೊಬ್ಬರು, ಪಕ್ಷದ್ದೇ ಕಾರ್ಯಕ್ರಮ ಎಂದು ಕೆಪಿಸಿಸಿ ಅಧ್ಯಕ್ಷರೇ ಹೇಳಿದ ಮೇಲೆ ಆಹ್ವಾನ ಪತ್ರಿಕೆ ನೀಡುವ ಅಗತ್ಯವೇನಿತ್ತು? ನಾವೆಲ್ಲರೂ ಹೋಗುತ್ತೇವೆ ಎಂದು ಬಹಿರಂಗವಾಗಿಯೇ ಶಿವಕುಮಾರ್‌ ಅವರು ತಿಳಿಸಿದ್ದಾರೆ. ಆದರೂ ಆಹ್ವಾನ ಪತ್ರಿಕೆ ನೀಡುವ ಮೂಲಕ, ಈ ಕಾರ್ಯಕ್ರಮ ಸಿದ್ದರಾಮಯ್ಯ ಅವರದ್ದು ಎಂಬ ಸಂದೇಶ ನೀಡಿದ್ದಾರೆ. ಹೀಗಾಗಿ ಡಿ.ಕೆ. ಶಿವಕುಮಾರ್‌ ಅವರೂ ಕಾರ್ಯಕ್ರಮದಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ನಾನು ಗೆಸ್ಟ್‌ ಆಗಿ ಹೋಗುತ್ತೇವೆ

ಸಿದ್ದರಾಮೋತ್ಸವ ಕುರಿತು ಚರ್ಚೆ ಬಿರುಸು ಪಡೆಯುತ್ತಿರುವಾಗಲೇ, ಈ ಕಾರ್ಯಕ್ರಮಕ್ಕೆ ಪರ್ಯಾಯವಾಗಿ ಶಿವಕುಮಾರೋತ್ಸವ ಆಚರಿಸಬೇಕು ಎಂದು ಡಿ.ಕೆ ಶಿವಕುಮಾರ್ ಬೆಂಬಲಿಗ ಜೆ.ಸಿ ರಾಜು ಮನವಿ ಮಾಡಿದ್ದಾರೆ. ಸಿದ್ದರಾಮೋತ್ಸವ ಕಾರ್ಯಕ್ರಮ ಆಯೋಜನೆ ಮಾಡಿರುವ ಪಕ್ಷದ ಕಮಿಟಿ ನೇತೃತ್ವದಲ್ಲಿಯೇ ಶಿವಕುಮಾರೋತ್ಸವ ಮಾಡುವಂತೆ ಒತ್ತಾಯಿಸಿದ್ದಾರೆ. ಡಿ.ಕೆ ಶಿವಕುಮಾರ್ ಅವರಿಗೆ 60 ವರ್ಷ ಆಗಿದೆ. ಪಕ್ಷಕ್ಕಾಗಿ ಚಿಕ್ಕ ವಯಸ್ಸಿನಿಂದ ದುಡಿದಿದ್ದಾರೆ. ಅವರ ಪಕ್ಷ ನಿಷ್ಠೆ ನೋಡಿ ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಂಇಸಲಾಗಿದೆ. ಆದ್ದರಿಂದ ಶಿವಕುಮಾರೋತ್ಸವ ಕಾರ್ಯಕ್ರಮ ಮಾಡಬೇಕು. ಮಂಗಳವಾರ (ಜುಲೈ 13) ನಡೆಯುವ ಸಿದ್ದರಾಮೋತ್ಸವ ಸಿದ್ಧತೆಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿ, ತೀರ್ಮಾನಿಸಬೇಕು ಎಂದು ಜೆ.ಸಿ ರಾಜು ಮನವಿ ಮಾಡಿದ್ದಾರೆ.

ಈ ಕುರಿತು ಸದಾಶಿವನಗರದ ತಮ್ಮ ನಿವಾಸದಲ್ಲಿ ಬುಧವಾರ (ಜುಲೈ 13) ಪ್ರತಿಕ್ರಿಯಿಸಿರುವ ಡಿ.ಕೆ ಶಿವಕುಮಾರ್‌, ಸಿದ್ದರಾಮೋತ್ಸವ ಆಚರಣೆ ಮಾಡಬೇಕು ಎನ್ನುವುದು ಸಿದ್ದರಾಮಯ್ಯ ಅವರ ಅಭಿಮಾನಿಗಳ ವಿಚಾರ. ಶಿವಕುಮಾರೋತ್ಸವ ಆಚರಣೆ ಮಾಡಬೇಕು ಎನ್ನುವುದು ರಾಜು ಅವರ ವೈಯಕ್ತಿಕ ವಿಚಾರ. ನನಗೆ ಯಾವ ಉತ್ಸವವೂ ಬೇಡ ಎಂದು ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದಾಗಲೇ ಹೇಳಿದ್ದೇನೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ನನಗೆ ಕಾಂಗ್ರೆಸ್‌ ಉತ್ಸವ ಬೇಕು, ದೇಶದ ಉತ್ಸವ ಬೇಕು, ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಬೇಕು ಎನ್ನುವುದಷ್ಟೆ ನನಗೆ ಮುಖ್ಯ ಎಂದಿದ್ದಾರೆ.

ಸಿದ್ದರಾಮೋತ್ಸವಕ್ಕೆ ತೆರಳುವ ಕುರಿತು ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌, ಕಾರ್ಯಕ್ರಮಕ್ಕೆ ನನಗೆ ಆಹ್ವಾನ ನೀಡಿದ್ದಾರೆ, ಗೆಸ್ಟ್‌ ಆಗಿ ನಾನು ಹೋಗುತ್ತೇನೆ ಎಂದಷ್ಟೆ ಹೇಳಿದ್ದಾರೆ.

ಇದನ್ನೂ ಓದಿ | ಸಿದ್ದರಾಮೋತ್ಸವ ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮ: ಡಿ.ಕೆ. ಶಿವಕುಮಾರ್‌ ಅಚ್ಚರಿಯ ಹೇಳಿಕೆ

Exit mobile version