Site icon Vistara News

Infosys: ಇನ್ಫೋಸಿಸ್‌ನಿಂದ 32 ಸಾವಿರ ಕೋಟಿ ರೂ. ತೆರಿಗೆ ವಂಚನೆ; ಜಿಎಸ್‌ಟಿ ನೋಟಿಸ್‌ ರವಾನೆ

Infosys

Infosys gets GST notice of Rs 32,000 crore for alleged tax evasion

ಬೆಂಗಳೂರು: ದೇಶದ ಎರಡನೇ ಬೃಹತ್‌ ಐಟಿ ಕಂಪನಿ (IT Company) ಎನಿಸಿರುವ, ಕರ್ನಾಟಕದ ಎನ್‌.ಆರ್.ನಾರಾಯಣ ಮೂರ್ತಿ ಸೇರಿ ಹಲವರು ಹುಟ್ಟುಹಾಕಿರುವ ಐಟಿ ದೈತ್ಯ ಇನ್ಫೋಸಿಸ್‌ ಕಂಪನಿ (Infosys) ವಿರುದ್ಧ ತೆರಿಗೆ ವಂಚನೆಯ (Tax Evasion) ಆರೋಪ ಕೇಳಿಬಂದಿದೆ. ತೆರಿಗೆ ವಂಚನೆಯ ಆರೋಪದ ಹಿನ್ನೆಲೆಯಲ್ಲಿ ಇನ್ಫೋಸಿಸ್‌ ಕಂಪನಿಗೆ ಜಿಎಸ್‌ಟಿ ಗುಪ್ತಚರ ಮಹಾ ನಿರ್ದೇಶನಾಲಯವು (DGGI) 32 ಸಾವಿರ ಕೋಟಿ ರೂಪಾಯಿ ಮೌಲ್ಯದ ಜಿಎಸ್‌ಟಿ ನೋಟಿಸ್‌ ಜಾರಿ ಮಾಡಿದೆ.

“ಇನ್ಫೋಸಿಸ್‌ ಕಂಪನಿಯು ಬೇರೆ ದೇಶಗಳಲ್ಲಿ ಹೊಂದಿರುವ ಬ್ರ್ಯಾಂಚ್‌ ಆಫೀಸ್‌ಗಳಿಂದ 2017-18ರಿಂದ 2021-22ರಲ್ಲಿ ಸರಬರಾಜು ಮಾಡಲಾಗಿರುವ ಸ್ವೀಕೃತಿಗಳ ಬದಲಾಗಿ ಬ್ರ್ಯಾಂಚ್‌ ಆಫೀಸ್‌ಗಳ ವೆಚ್ಚ ಎಂಬುದಾಗಿ ಉಲ್ಲೇಖಿಸಲಾಗಿದೆ. ಹಾಗಾಗಿ, ರಿವರ್ಸ್‌ ಚಾರ್ಜ್‌ ಮೆಕ್ಯಾನಿಸಂ ನಿಯಮಗಳ ಪ್ರಕಾರ ಭಾರತದಿಂದ ಹೊರಗಿರುವ ಬ್ರ್ಯಾಂಚ್‌ಗಳಿಂದ ಸರಬರಾಜು ಮಾಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಇನ್ಫೋಸಿಸ್‌ ಲಿಮಿಟೆಡ್‌ ಕಂಪನಿಯು 32,403 ಕೋಟಿ ರೂ. ಐಜಿಎಸ್‌ಟಿ ಪಾವತಿಸಬೇಕು” ಎಂಬುದಾಗಿ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ‌

Narayana Murthy

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ನಿಯಮಗಳ ಪ್ರಕಾರ, ಸರಕು ಅಥವಾ ಸೇವೆಗಳನ್ನು ಸ್ವೀಕರಿಸುವವರು ಪೂರೈಕೆದಾರರ ಬದಲಿಗೆ ತೆರಿಗೆ ಪಾವತಿಸಬೇಕು ಎಂಬುದೇ ರಿವರ್ಸ್‌ ಚಾರ್ಜ್‌ ಮೆಕ್ಯಾನಿಸಂ ಆಗಿದೆ. ರಫ್ತು ಮಾಡಲಾದ ಉತ್ಪನ್ನಗಳ ಇನ್‌ವಾಯ್ಸ್‌ನಲ್ಲಿ ಇನ್ಫೋಸಿಸ್‌ ಘಟಕಗಳ ಖರ್ಚು ವೆಚ್ಚಗಳನ್ನೂ ನಮೂದಸಿರುವುದು ಜಿಎಸ್‌ಟಿ ಗುಪ್ತಚರ ವಿಭಾಗದ ಕಣ್ಣು ಕೆಂಪಗಾಗಿಸಿದೆ. ಇದರಿಂದಾಗಿಯೇ ಇನ್ಫೋಸಿಸ್‌ಗೆ 32 ಸಾವಿರ ಕೋಟಿ ರೂ. ಜಿಎಸ್‌ಟಿ ನೋಟಿಸ್‌ ಜಾರಿಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ಕಂಪನಿಯ ಸ್ಪಷ್ಟನೆ ಏನು?

ಜಿಎಸ್‌ಟಿ ನೋಟಿಸ್‌ ಕುರಿತು ಇನ್ಫೋಸಿಸ್‌ ಸ್ಪಷ್ಟನೆ ನೀಡಿದೆ. ಇನ್ಫೋಸಿಸ್‌ ಕಂಪನಿಯು ಯಾವುದೇ ಜಿಎಸ್‌ಟಿ ಪಾವತಿ ಬಾಕಿಯನ್ನು ಉಳಿಸಿಕೊಂಡಿಲ್ಲ. ಐಟಿ ಸೇವೆಗಳ ರಫ್ತಿನ ಮೇಲೆ ಜಿಎಸ್‌ಟಿ ರಿಫಂಡ್‌ ಪಡೆಯುವ ಅವಕಾಶ ಇದೆ. ಅದರಂತೆ, ಕ್ಲೇಮ್‌ ಮಾಡಲಾಗಿದೆ. ಇನ್ನು, ಕಂಪನಿಗೆ ಪ್ರಿ-ಶೋಕಾಸ್‌ ನೋಟಿಸ್‌ ಜಾರಿಗೊಳಿಸಲಾಗಿದ್ದು, ಈ ಕುರಿತು ಕಂಪನಿಯು ಪ್ರತಿಕ್ರಿಯೆ ನೀಡಿದೆ ಎಂಬುದಾಗಿ ಸ್ಪಷ್ಟಪಡಿಸಿದೆ.

ನಾರಾಯಣಮೂರ್ತಿ ಹೇಳಿಕೆ ಟ್ರೋಲ್

ಚೀನಾ ನಮ್ಮ ದೇಶಕ್ಕಿಂತ ಆರು ಪಟ್ಟು ಹೆಚ್ಚಿನ ಜಿಡಿಪಿ(GDP)ಯನ್ನು ಹೊಂದಿದ್ದು, ಅದರ ಉತ್ಪಾದನಾ ಸಾಮರ್ಥ್ಯವನ್ನು ಮ್ಯಾಚ್‌ ಮಾಡಲು ಭಾರತಕ್ಕೆ ಸಾಧ್ಯವಿಲ್ಲ. ಜನ ವಾದ ಮಾಡದೆ ಸುಮ್ಮನೆ ಕೆಲಸ ಮಾಡುವುದರಿಂದ ಚೀನಾ ನಮ್ಮ ದೇಶಕ್ಕಿಂತ ಮುಂದಿದೆ. ಉತ್ಪಾದನಾ ಕೇಂದ್ರವಾಗುವ ಭಾರತದ ಕನಸು ಇನ್ನು ಬಹಳ ದೂರದಲ್ಲಿದೆ ಎಂದು ಇನ್ಫೋಸಿಸ್‌ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಾರಾಯಣ ಮೂರ್ತಿ ಅವರ ಹೇಳಿಕೆಯ ಕುರಿತು ಜನ ಟ್ರೋಲ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ: GST Fraud: ಜಿಎಸ್‌ಟಿ ತೆರಿಗೆ ವಂಚನೆ ಪತ್ತೆ ಹಚ್ಚಲು ಎಐ, ಅನಾಲಿಟಿಕ್ಸ್ ಟೂಲ್ಸ್ ಬಳಕೆ

Exit mobile version