Site icon Vistara News

Inside Story : ಕಿಚ್ಚ ಸುದೀಪ್‌ ರಾಜಕೀಯ ಎಂಟ್ರಿ; ಜಾರಕಿಹೊಳಿ, ರಾಮುಲು ಕಕ್ಕಾಬಿಕ್ಕಿಯಾಗಿದ್ದು ಏಕೆ?

Kiccha Sudeep's political entry big impact on valmiki community politics

#image_title

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲ ಸೂಚಿಸಿ, ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟ ನಟ ಕಿಚ್ಚ ಸುದೀಪ್‌ ರಾಜ್ಯದ ಪರಿಶಿಷ್ಟ ಪಂಗಡದ (ಎಸ್‌ಟಿ) ರಾಜಕೀಯ ನಾಯಕರಲ್ಲಿ ಸಂಚಲನ ಮೂಡಿಸಿದ್ದು, ಹೀಗೆ ಆದರೆ ನಮ್ಮ ಮುಂದಿನ ಕತೆ ಏನು ಎಂದು (Inside Story) ಯೋಚಿಸಲಾರಂಭಿಸಿದ್ದಾರೆ.

ಇಂದು ಬಿಜೆಪಿ ಪರವಾಗಿ ಪ್ರಚಾರಕ್ಕೆ ಬಂದವರು ನಾಳೆ ಸಕ್ರಿಯ ರಾಜಕಾರಣಕ್ಕೆ ಬಂದರೆ ಸಿನಿಮಾ ಜನಪ್ರಿಯತೆಯಿಂದಾಗಿ ಅವರು ಅಜಾತಶತ್ರುವಾಗಿ ಬೆಳೆದು ಜಾತಿ ರಾಜಕಾರಣದಲ್ಲಿನ ತಮ್ಮೆಲ್ಲ ಅವಕಾಶಗಳನ್ನು ಬಾಚಿಕೊಳ್ಳಬಹುದು ಎಂಬ ಭಯ ಈ ನಾಯಕರನ್ನು ಕಾಡಲಾರಂಭಿಸಿದೆ.

ರಾಜ್ಯ ರಾಜಕಾರಣದಲ್ಲಿ ವಾಲ್ಮೀಕಿ ಸಮುದಾಯ ಮಹತ್ವದ ಪಾತ್ರ ವಹಿಸಿಕೊಂಡೇ ಬಂದಿದೆ. 15 ವಿಧಾನಸಭಾ ಕ್ಷೇತ್ರಗಳು ಎಸ್‌ಟಿಗೆ ಮೀಸಲಾಗಿವೆ. 2018ರಲ್ಲಿ 19 ಮಂದಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಸಂಘಟಿತವಾಗುತ್ತಿರುವ ಈ ಬಹುದೊಡ್ಡ ಸಮುದಾಯವನ್ನು ಸೆಳೆದುಕೊಳ್ಳುವ ಪ್ರಯತ್ನವನ್ನು ಪ್ರತಿಯೊಂದು ಪಕ್ಷವೂ ಮಾಡುತ್ತಿವೆ. ಈ ಸಮುದಾಯದ ನಾಯಕರಿಗೆ ಎಲ್ಲಿಲ್ಲದ ಪ್ರಾಮುಖ್ಯತೆ ನೀಡಲಾಗುತ್ತಿದೆ. ಒಂದು ವೇಳೆ ನಟ ಸುದೀಪ್‌ ರಾಜಕೀಯಕ್ಕೆ ಬಂದಲ್ಲಿ ಈಗಿರುವ ನಾಯಕರ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾಗುವ ಸಾಧ್ಯತೆಗಳಿವೆ.

ಬೊಮ್ಮಾಯಿ ಕೊಟ್ಟ ಮಾಸ್ಟರ್ ಸ್ಟ್ರೋಕ್!

ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಾಲ್ಮೀಕಿ ಸಮುದಾಯ ಬಹುತೇಕವಾಗಿ ಬಿಜೆಪಿಯನ್ನು ಬೆಂಬಲಿಸಿದೆ. ಬೆಳಗಾವಿಯ ಜಾರಕಿಹೊಳಿ ಬ್ರದರ್ಸ್‌, ಸಚಿವ ಬಿ. ಶ್ರೀರಾಮಲು, ರಾಜೂಗೌಡ ಮತ್ತಿತರರು ಈ ಸಮುದಾಯದ ಮತ ಸೆಳೆಯುವ ಕೆಲಸ ಮಾಡುತ್ತಿದ್ದಾರೆ.

ಇತ್ತೀಚೆಗೆ ಬೆಳಗಾವಿಯಲ್ಲಿನ ರಾಜಕೀಯ ಬೆಳವಣಿಗೆಯಿಂದಾಗಿ ಜಾರಕಿಹೊಳಿ ಸಹೋದರರು ರಾಜ್ಯ ಬಿಜೆಪಿ ನಾಯಕತ್ವದ ಬಗ್ಗೆ ಮುನಿಸಿಕೊಂಡಿದ್ದಾರೆ. ಮೊನ್ನೆ ನಡೆದ ಬೆಳಗಾವಿ ಜಿಲ್ಲಾ ಕೋರ್‌ ಕಮಿಟಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನೇ ರಮೇಶ್‌ ಜಾರಕಿಹೊಳಿ ತರಾಟೆಗೆ ತೆಗೆದುಕೊಂಡಿದ್ದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ನಾವೇ ಕಾರಣ ಎಂದು ಬೆನ್ನುತಟ್ಟಿಕೊಂಡಿದ್ದರು. ಕೊನೆಗೆ ಮಧ್ಯಪ್ರವೇಶೀಸಿದ್ದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಜಾರಕಿಹೊಳಿ ಸಹೋದರರಿಗೆ ಎಚ್ಚರಿಕೆ ನೀಡಿ, ʻನೀವು ನಿಮ್ಮ ಕ್ಷೇತ್ರವನ್ನು ಮಾತ್ರ ನೋಡಿಕೊಳ್ಳಿ, ಬೇರೆ ಕ್ಷೇತ್ರಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿʼ ಎಂಬ ಎಚ್ಚರಿಕೆಯನ್ನೂ ನೀಡಿದ್ದರು.

ಹೀಗಾಗಿ ಜಾರಕಿಹೊಳಿ ಸಹೋದರರಿಗೆ ʻಬುದ್ಧಿ ಕಲಿಸಲುʼ ಅದೇ ಸಮುದಾಯಕ್ಕೆ ಸೇರಿದ ನಟ ಕಿಚ್ಚ ಸುದೀಪ್‌ರನ್ನು ಸಿಎಂ ಬಸವರಾಜ ಬೊಮ್ಮಾಯಿ ಪಕ್ಷದ ಪರ ಪ್ರಚಾರಕ್ಕೆ ಕರೆತಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಬಿಜೆಪಿ ರಾಜ್ಯ ನಾಯಕರೊಂದಿಗೆ ಮುನಿಸಿಕೊಂಡಿರುವ ಸಚಿವ ಬಿ ಶ್ರೀರಾಮುಲುಗೂ ಎಚ್ಚರಿಕೆಯನ್ನೂ ಸಹ ನೀಡಿದ್ದಾರೆ.

ವಾಲ್ಮೀಕಿ ಮತ; ಯಾವ ಕ್ಷೇತ್ರದಲ್ಲಿ ಎಷ್ಟು? ​

ಕೇವಲ ಬಿಜೆಪಿ ನಾಯಕರಿಗೆ ಮಾತ್ರವಲ್ಲ ಪರಿಶಿಷ್ಟ ಪಂಗಡದ ಇತರ ರಾಜಕೀಯ ಪಕ್ಷಗಳ ನಾಯಕರಿಗೂ ಸುದೀಪ್‌ ರಾಜಕೀಯ ಎಂಟ್ರಿ ಹೊಸ ಸವಾಲು ಸೃಷ್ಟಿಸುವ ಸಾಧ್ಯತೆಗಳಿವೆ.

ಈ ಹಿಂದಿನಿಂದಲೂ ನಡೆದಿತ್ತು ಪ್ರಯತ್ನ

ನಟ ಕಿಚ್ಚ ಸುದೀಪ್‌ ಅವರನ್ನು ರಾಜಕೀಯಕ್ಕೆ ಕರೆತರಲು ಹಿಂದಿನಿಂದಲೂ ಪ್ರಯತ್ನ ವಿವಿಧ ರಾಜಕೀಯ ಪಕ್ಷಗಳ ನಾಯಕರು ನಡೆಸಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿದ್ದ ನಟಿ ಸುಮಲತಾ ಅಂಬರೀಶ್‌ ಪರವಾಗಿ ಪ್ರಚಾರಕ್ಕೆ ಹೋಗಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತಾದರೂ ಅವರು ಪ್ರಚಾರಕ್ಕೆ ಹೋಗದೆ ಆಶ್ಚರ್ಯ ಮೂಡಿಸಿದ್ದರು. ಜೆಡಿಎಸ್‌ನ ನಾಯಕ ಎಚ್.ಡಿ. ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ ಅವರನ್ನು ಭೇಟಿಯಾಗಿ ತಮ್ಮ ಪಕ್ಷಕ್ಕೆ ಆಹ್ವಾನಿಸಿದ್ದರು.

ಈಗ ನಟ ಸುದೀಪ್‌ ಮುಖ್ಯವಾಗಿ ನಾಯಕ, ವಾಲ್ಮೀಕಿ ಸಮುದಾಯದ ಮತದಾರರು ನಿರ್ಣಯಕವಾಗಿರುವ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುವ ಸಾಧ್ಯತೆಗಳಿವೆ. ಫಲಿತಾಂಶದ ಮೇಲೆ ಇದು ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದರ ಮೇಲೆ ಈ ಸಮುದಾಯದ ರಾಜಕೀಯ ಹಾಲಿ ರಾಜ್ಯ ನಾಯಕರ ಭವಿಷ್ಯ ಅಡಗಿದೆ.

ಇದನ್ನೂ ಓದಿ :Inside Story : ಕಿಚ್ಚ ಸುದೀಪ್ ಅವರನ್ನ ರಾಜಕೀಯಕ್ಕೆ ಎಳೆ ತಂದರೇ ಅಮಿತ್ ಶಾ ಮಗ ಜಯ್ ಶಾ?

Exit mobile version