ಬೆಂಗಳೂರು: ಕಾಂಗ್ರೆಸ್ ಭರ್ಜರಿ ಬಹುಮತ ಪಡೆದು ಅಧಿಕಾರಕ್ಕೆ ಏರಬೇಕು ಎಂದು ಜನ ಆದೇಶ ನೀಡಿದರೂ ನಾಲ್ಕು ದಿನಗಳು ರೈಲು ಹಳಿಗೆ ಬರಲೇ ಇಲ್ಲ. ಸಿಎಂ ಯಾರು ಆಗಬೇಕು ಎಂದು ಚರ್ಚೆಯನ್ನು ನವದೆಹಲಿಯಲ್ಲಿ ಆರಂಭಿಸಿದ ಕಾಂಗ್ರೆಸ್ ಹೈಕಮಾಂಡ್, ಬರೊಬ್ಬರಿ ನಾಲ್ಕು ದಿನ ತೆಗೆದುಕೊಂಡಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಂತೂ ತಾಳ್ಮೆಯ ಸಾಕಾರ ಮೂರ್ತಿಯಂತೆ ಒಬ್ಬೊಬ್ಬರನ್ನೇ ಕರೆದು ಸಭೆ ನಡೆಸಿದರು. ಬಿಟ್ಟ ಕಣ್ಣು ಬಿಟ್ಟಂತೆಯೇ ಎದುರಿದ್ದವರ ಮಾತನ್ನು ಕೇಳಿಸಿಕೊಳ್ಳುವುದರಲ್ಲೇ ದಿನ ದೂಡಿದರು. ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರನ್ನು ಒಟ್ಟೊಟ್ಟಿಗೆ ಕರೆದು ಜಗಳ ಆಗಲು ಅವಕಾಶ ಕೊಡುವುದಕ್ಕಿಂತ, ಪ್ರತ್ಯೇಕವಾಗಿ ಸಂವಾದದ ಮಾರ್ಗ ಆಯ್ಕೆ ಮಾಡಿಕೊಂಡರು.
ಹಾಗೆ ನೋಡಿದರೆ ಕಾಂಗ್ರೆಸ್ ಮಟ್ಟಿಗೆ ಇದು ಹೊಸದು. ಇಲ್ಲಿ ಫಲಿತಾಂಶ ಏನೇ ಬಂದರೂ ದೆಹಲಿಯಲ್ಲಿ ನಾಯಕರು ಪ್ರತ್ಯೇಖ ಸಭೆ ನಡೆಸುತ್ತಿದ್ದರು. ರಾಜ್ಯದಿಂದ ಯಾರಿಗೂ ಪ್ರವೇಶ ಇರುತ್ತಿರಲಿಲ್ಲ. ನೆಹರೂ ಕುಟುಂಬದ ಸುತ್ತ ಇರುವ ನಾಲ್ಕಾರು ಹೊಗಳುಭಟರು ಅವರವರ ಅನುಕೂಲಕ್ಕೆ ತಕ್ಕಂತೆ ಯಾರದ್ದೋ ಹೆಸರನ್ನು ಸೂಚಿಸುತ್ತಿದ್ದರು. ಇಲ್ಲಿದ್ದವರು ಸುಮ್ಮನೆ ಒಪ್ಪಿಕೊಂಡೊ, ಜಗಳ ಮಾಡಿಕೊಂಡೊ ಒಟ್ಟಿನಲ್ಲಿ ಸುಮ್ಮನಾಗುತ್ತಿದ್ದರು.
ಆದರೆ ಈ ಚುನಾವಣೆಯ ಆರಂಭದಿಂದಲೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಹಾಗೂ ಮಲ್ಲಿಕಾರ್ಜುನ ಖರ್ಗೆ ಮಹತ್ವದ ಪಾತ್ರ ವಹಿಸಿದರು. ಚುನಾವಣೆಗೆ ನಾಲ್ಕಾರು ತಿಂಗಳು ಇರುವಾಗಲೇ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ನವದೆಹಲಿಯಲ್ಲಿ ಮೂರು ದಿನ ಮನವೊಲಿಸಿದರು. ರಾಹುಲ್ ಗಾಂಧಿ ಜತೆಗೆ ಕುಳಿತು ನಿರಂತರ ಮಾತುಕತೆ ನಡೆಸಿದರು. ಮೊದಲಿಗೆ ಪಕ್ಷ ಅಧಿಕಾರಕ್ಕೆ ಬರಬೇಕು, ಅದಕ್ಕಾಗಿ ಇಬ್ಬರೂ ಒಟ್ಟಾಗಿ ಸೆಣೆಸಬೇಕು. ಚುನಾವಣೆಯಲ್ಲಿ ಗೆದ್ದ ನಂತರ ಮತ್ತೆ ಇದೇ ರೀತಿ ಸಭೆ ನಡೆಸಿ ಅಂತಿಮಗೊಳಿಸೋಣ. ಈಗಲೇ ಏನೂ ನಿರ್ಧಾರ ಬೇಡ ಎಂದರು. ಅದಕ್ಕೆ ಒಪ್ಪಿದ ಇಬ್ಬರೂ ನಾಯಕರು, ಆಗಾಗ್ಗೆ ಸಣ್ಣ ಪುಟ್ಟ ವೈಮನಸ್ಯ ಬಿಟ್ಟರೆ ಎಲ್ಲೂ ಬಿರುಕು ಮೂಡಲು ಬಿಡಲಿಲ್ಲ. ಅದರಲ್ಲೂ, ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟವಾಗುತ್ತದೆ, ಅದರಿಂದ ತಮಗೆ ಲಾಭವಾಗುತ್ತದೆ ಎಂದು ಬಿಟ್ಟ ಬಾಯಿ ಬಿಟ್ಟಂತೆ ಆಕಾಶ ನೋಡುತ್ತ ಕುಳಿತಿದ್ದ ಬಿಜೆಪಿಗೆ ಲಾಭವಾಗುವಷ್ಟು ಭಿನ್ನಮತ ಏಳಲೇ ಇಲ್ಲ.
ಚುನಾವಣೆ ಫಲಿತಾಂಶದ ನಂತರವೂ ಇದೇ ಮಾತುಗಳು ಕೇಳಿಬಂದಿದ್ದವು. ಅಧಿಕಾರ ಹಂಚಿಕೆ ಸಮಯದಲ್ಲಿ ಕಾಂಗ್ರೆಸ್ ಒಡೆದು ಹೋಗುತ್ತದೆ, ಇಬ್ಬರಲ್ಲಿ ಯಾರಿಗೆ ಸಿಎಂ ಮಾಡಿದರೂ ಪಕ್ಷ ಒಡೆಯುವುದು ಖಚಿತ ಎಂಬ ಚರ್ಚೆಗಳು ನಡೆದವು. ಇದೆಲ್ಲವನ್ನೂ ಊಹಿಸಿದ ಮಲ್ಲಿಕಾರ್ಜುನ ಖರ್ಗೆ, ಈ ವಿಚಾರವನ್ನು ಸಂಪೂರ್ಣ ಬಗೆಹರಿಸುವ ನಿರ್ಧಾರ ಮಾಡಿದರು. ಇಬ್ಬರ ಅಹವಾಲುಗಳನ್ನೂ ಪ್ರತ್ಯೇಕವಾಗಿ ತೆಗೆದುಕೊಂಡು ಅದನ್ನು ಇನ್ನೊಬ್ಬರ ಬಳಿ ಪ್ರಸ್ತಾಪಿಸಿ ಪರಿಹರಿಸಿದರು. ಇದೇ ರೀತಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬಳಿಯೂ ಚರ್ಚೆಗೆ ಕಳಿಸಿ ಭಿನ್ನಮತ ಶಮನಗೊಳಿಸಿದರು.
ಇದೆಲ್ಲದರ ನಡುವೆ ಖರ್ಗೆ ಅವರಿಗೆ ತಲೆನೋವಾಗಿದ್ದು ಡಿ.ಕೆ. ಸುರೇಶ್. ಸೋನಿಯಾ ಗಾಂಧಿ ಮಾತನಾಡಿಸಿದರೆ ಅದೇ ಪುಣ್ಯ ಎಂದು ತಿಳಿಯುವ ಡಿ.ಕೆ. ಶಿವಕುಮಾರ್, ಡಿಸಿಎಂ ಸ್ಥಾನಕ್ಕೆ ತಲೆದೂಗಿ ಬರುತ್ತಾರೆ ಎಂದು ಡಿ.ಕೆ. ಸುರೇಶ್ ಅಂದಾಜಿಸಿದ್ದರು. ಅದಕ್ಕೆ ಶಿವಕುಮಾರ್‌ಗೂ ಮೊದಲೇ ನವದೆಹಲಿಗೆ ತೆರಳಿ ಅಲ್ಲಿ ಭೂಮಿಕೆ ಸಿದ್ಧಪಡಿಸಿದರು. ಶಿವಕುಮಾರ್ ಬಂದ ಕೂಡಲೆ, “ಅಣ್ಣಾ, ಅವರು ಏನು ಬೇಕಾದರೂ ಹೇಳಲಿ ಎಲ್ಲವನ್ನೂ ಕೇಳಿಸಿಕೊ. ಸಿಎಂ ಬಿಟ್ಟು ಬೇರೆ ಯಾವುದಕ್ಕೂ ಒಪ್ಪಿಕೊಳ್ಳಬಾರದು. ಹಾಗೇನಾದ್ರೂ ಒಪ್ಪಿಕೊಂಡರೆ ಪರಿಸ್ಥಿತಿ ನೆಟ್ಟಗಿರಲ್ಲ” ಎಂದು ಪ್ರೀತಿಯಿಂದಲೇ ಎಚ್ಚರಿಕೆ ನೀಡಿದರು. ಪ್ರತಿ ಬಾರಿ ಡಿ.ಕೆ. ಶಿವಕುಮಾರ್ ಸಭೆಯಿಂದ ಹೊರಬಂದಾಗಲೂ ಸುರೇಶ್ ಕೇಳುತ್ತಿದ್ದದ್ದು, ಆಯ್ತಾ-ಇಲ್ವ? ಎಂದು ಅಷ್ಟೆ. ಸಿಎಂ ಸ್ಥಾನ ಸಿಗುವುದೊಂದನ್ನು ಬಿಟ್ಟು ಸುರೇಶ್‌ಗೆ ಬೇರೆ ಏನೂ ಬೇಕಾಗಿರಲಿಲ್ಲ.
ತಾವು ಡಿ.ಕೆ. ಶಿವಕುಮಾರ್ ಜತೆಗೆ ಏನೇ ಮಾತನಾಡಿದರೂ ಅದು ಸುರೇಶ್ ಜತೆ ಮಾತನಾಡಿದಂತೆ ಆಗುವುದಿಲ್ಲ ಎನ್ನುವುದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅರಿವಾಯಿತು. ಕೊನೆಗೆ ಸುರೇಶ್ ಅವರನ್ನೇ ಕರೆದು ಒಂದು ಗಂಟೆ ಚರ್ಚೆ ನಡೆಸಿಸಮಾಧಾನ ಮಾಡಿದರು. ಅಧಿಕಾರ ಬೇಕು ಎನ್ನುವವರಿಗಿಂತ ಇವರನ್ನು ಸಮಾಧಾನ ಮಾಡುವಷ್ಟರಲ್ಲೆ ಖರ್ಗೆ ಸುಸ್ತಾಗಿಹೋದರು. ಕೊನೆಗೂ ಲೋಕಸಭೆ ಚುನಾವಣೆವರೆಗೆ ಸಿಎಂ ಆಗಿರಲಿದ್ದಾರೆ ಎನ್ನುವವರೆಗೆ ಸುರೇಶ್‌ಗೆ ತಿಳಿಸಿ ಕಳಿಸಿದ್ದಾರೆ. ನಂತರದ ವಿಚಾರ ಏನು ಎಂದು ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡುವುದಾಗಿ ಹೇಳಿ ಕಳಿಸಿದ್ದಾರೆ. ಅಷ್ಟರ ಮಟ್ಟಿಗೆ ಸುರೇಶ್ ಸ್ವಲ್ಪ ಸಮಾಧಾನವಾದಾಗ ಕೊನೆಗೆ ಪರಿಸ್ಥಿತಿ ತಿಳಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Siddaramaiah Profile : ಹಲವು ಏಳು-ಬೀಳು ಕಂಡ ಜನಪರ ನಾಯಕ ಸಿದ್ದರಾಮಯ್ಯ; ಇಲ್ಲಿದೆ ಅವರ ಜೀವನಚಿತ್ರ