ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚಲನ ಉಂಟು ಮಾಡಿರುವ ಸ್ಯಾಂಟ್ರೋ ರವಿ (Santro Ravi case) ವಿಚಾರ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರಿಗೆ ಸಂಕಷ್ಟ ತಂದೊಡ್ಡಿದೆ. ಮೈಸೂರಿನಲ್ಲಿ ರವಿ ವಿರುದ್ಧ ಪ್ರಕರಣ ದಾಖಲಾಗಿದ್ದರೂ ತನಿಖೆಯ ಬಿಸಿ ಬೆಂಗಳೂರಿಗೂ ತಟ್ಟಿದೆ. ಸ್ಯಾಂಟ್ರೋ ರವಿ ಮಾತು ಕೇಳಿ ಮಾಡಬಾರದ್ದು ಮಾಡಿದ ಈ ಪೊಲೀಸ್ ಇನ್ಸ್‌ಪೆಕ್ಟರ್ ಬಗ್ಗೆ ಪೊಲೀಸ್ ಕಮೀಷನರ್ ವರದಿ ಪಡೆದಿದ್ದಾರೆ. ಹೀಗಾಗಿ ಕಾಟನ್‌ಪೇಟೆಯ ಈ ಇನ್ಸ್‌ಪೆಕ್ಟರ್ ಪ್ರವೀಣ್ ಅಮಾನತು ಆಗೋದು ಗ್ಯಾರಂಟಿ ಆಗಿದೆ.
ನಗರದ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಸ್ಯಾಂಟ್ರೋ ರವಿ ಎರಡನೇ ಪತ್ನಿ ಮತ್ತು ನಾದಿನಿ ವಿರುದ್ಧದ ದರೋಡೆ ಪ್ರಕರಣವೇ ಈಗ ಇನ್ಸ್‌ಪೆಕ್ಟರ್‌ಗೆ ಮುಳುವಾಗಿದೆ. ಸ್ಯಾಂಟ್ರೋ ರವಿ ಮಾತು ಕೇಳಿ ಪ್ರವೀಣ್ ಸುಳ್ಳು ಕೇಸು ದಾಖಲಿಸಿದ್ದರು ಎನ್ನುವುದು ತನಿಖೆಯಿಂದ ಬಯಲಾಗಿದೆ.
ಏನಿದು ಪ್ರಕರಣ?
2022ರ ನವೆಂಬರ್‌ನಲ್ಲಿ ಸ್ಯಾಂಟ್ರೋ ರವಿ ಎರಡನೇ ಪತ್ನಿ ಮತ್ತು ನಾದಿನಿ ತನ್ನನ್ನು ದರೋಡೆ ಮಾಡಿದ್ದಾರೆ ಎಂದು ಪ್ರಕಾಶ್ ಎಂಬುವರು ಕಾಟನ್ ಪೇಟೆ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಈ ಪ್ರಕರಣದಲ್ಲಿ ಸ್ಯಾಂಟ್ರೋ ರವಿ ಪತ್ನಿ ರಶ್ಮಿ ಹಾಗೂ ಆಕೆಯ ತಂಗಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಇದೊಂದು ಸುಳ್ಳು ಪ್ರಕರಣ, ಸ್ಯಾಂಟ್ರೋ ರವಿ ಮಾತು ಕೇಳಿ ಇನ್ಸ್‌ಪೆಕ್ಟರ್ ಪ್ರವೀಣ್ ತಮ್ಮ ವಿರುದ್ಧ ಸುಳ್ಳು ಕೇಸು ದಾಖಲಿಸಿದ್ದರು ಎಂದು ರವಿ ಪತ್ನಿ ಇತ್ತೀಚೆಗೆ ಮೈಸೂರಿನ ವಿಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಬಗ್ಗೆ ಮಾಹಿತಿ ಪಡೆದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಡಿಸಿಪಿ ಲಕ್ಷ್ಮಣ್ ನಿಂಬರಗಿ ಅವರಿಗೆ ಸೂಚಿಸಿದ್ದರು. ಡಿಸಿಪಿ ಲಕ್ಷ್ಮಣ್ ನಿಂಬರಗಿ ತನಿಖೆ ನಡೆಸಿ ಕಮೀಷನರ್ ಪ್ರತಾಪ್ ರೆಡ್ಡಿಯವರಿಗೆ ವರದಿ ನೀಡಿದ್ದಾರೆ. ಕಮೀಷನರ್ ಅವರು ವರದಿಯನ್ನು ಡಿಜಿಪಿ ಪ್ರವೀಣ್ ಸೂದ್ ಅವರಿಗೆ ರವಾನೆ ಮಾಡಿದ್ದಾರೆ.
ಆವತ್ತು ಆಗಿದ್ದೇನು?
ಸ್ಯಾಂಟ್ರೋ ರವಿ ಎರಡನೇ ಪತ್ನಿ ರಶ್ಮಿ ಹಾಗೂ ಆಕೆಯ ತಂಗಿ ವಿರುದ್ಧ ಕಾಟನ್ ಪೇಟೆಯಲ್ಲಿ ಐಪಿಸಿ 397 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇಬ್ಬರು ಮಹಿಳೆಯರು ಹಾಗೂ ಶೇಕ್ ಎಂಬಾತನ ಮೇಲೆ ದರೋಡೆ ಕೇಸು ದಾಖಲಿಸಿ ಬಂಧಿಸಲಾಗಿತ್ತು.
ಸ್ಯಾಂಟ್ರೋ ರವಿ ಪತ್ನಿ ಮತ್ತು ನಾದಿನಿ ಅವರು ಪ್ರಕಾಶ್ ಎಂಬುವರ ಬಳಿ ತುರ್ತಾಗಿ ಐದು ಲಕ್ಷ ಹಣ ಬೇಕು ಎಂದು ಕೇಳಿದ್ದಂತೆ. ಚೆಕ್ ಪಡೆದು ಹಣ ಕೊಡಲು ಪ್ರಕಾಶ್ ಒಪ್ಪಿದ್ದರಂತೆ. ನಂತರ ಪ್ರಕಾಶ್‌ಗೆ ಹಣ ಮರಳಿಸಲು ಸ್ಯಾಂಟ್ರೋ ರವಿ ಪತ್ನಿ ಮುಂದಾಗಿದ್ದು, ನವೆಂಬರ್ 23ರಂದು ಮೆಜೆಸ್ಟಿಕ್ ಬಳಿಯ ಖೋಡೇಸ್ ಸರ್ಕಲ್ ಗೆ ಬರಲು ಹೇಳಿದ್ದರಂತೆ. ಈ ವೇಳೆ ಇಬ್ಬರ ನಡುವೆ ಚೆಕ್ ಮತ್ತು ಹಣ ಪಡೆಯುವ ವಿಚಾರಕ್ಕೆ ಗಲಾಟೆ ನಡೆದು ಸ್ಯಾಂಟ್ರೋ ರವಿ ಪತ್ನಿ ಮತ್ತು ನಾದಿನಿ ಚಾಕು ತೋರಿಸಿ ತನ್ನನ್ನು ದರೋಡೆ ಮಾಡಿದ್ದಾರೆ ಎಂದು ಪ್ರಕಾಶ್ ಆರೋಪಿಸಿದ್ದರು.
ನಿಜವೆಂದರೆ ಇದೆಲ್ಲವೂ ಸ್ಯಾಂಟ್ರೋ ರವಿ ತನ್ನ ಪತ್ನಿ ಮತ್ತು ನಾದಿನಿ ವಿರುದ್ಧ ಹೆಣೆದ ತಂತ್ರವಾಗಿದ್ದು, ಅವರನ್ನು ಬಂಧಿಸಿ ಜೈಲಿಗಟ್ಟಲು ದರೋಡೆ ನಾಟಕ ಹೆಣೆದಿದ್ದ. ಅದಕ್ಕೆ ಇನ್ಸ್‌ಪೆಕ್ಟರ್ ಪ್ರವೀಣ್ ಸಹಕಾರ ನೀಡಿದ್ದ ಎನ್ನುವುದು ಈಗ ತಿಳಿದುಬಂದಿರುವ ಸತ್ಯ!
ಇದನ್ನೂ ಓದಿ | Santro Ravi case | ಹಾಗಿದ್ದರೆ ಸ್ಯಾಂಟ್ರೋ ರವಿ ದುಡ್ಡೆಣಿಸಿದ್ದು ಯಾರ ಮನೆಯಲ್ಲಿ?: ಆರಗಗೆ ಎಚ್‌ಡಿಕೆ ಪ್ರಶ್ನೆ