ರಾಯಚೂರು: ಕಲಿಕೆಯಲ್ಲಿ ಪ್ರತಿಭಾನ್ವಿತೆಯಾಗಿದ್ದ ವಿದ್ಯಾರ್ಥಿನಿಯೊಬ್ಬಳು ಡೆತ್ ನೋಟ್ ಬರೆದಿಟ್ಟು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ರಾಯಚೂರು ಜಿಲ್ಲೆಯ ಸಿಂಧನೂರಿನ ಸರ್ವೋದಯ ಶಾಲೆಯ ವಿದ್ಯಾರ್ಥಿನಿ ಸಾರಿಕಾ (೧೬) ಶುಕ್ರವಾರ ರಾತ್ರಿ, ಗಣೇಶ ವಿಸರ್ಜನೆಗಾಗಿ ಮಾಡಿದ ಕೆರೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ.
ತರಗತಿಯಲ್ಲಿ ಮುಂಚೂಣಿಯಲ್ಲಿದ್ದ ಸಾರಿಕಾ ತನ್ನ ವಿದ್ಯಾಭ್ಯಾಸಕ್ಕೆ ಮನೆಯಲ್ಲಿ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ ಎಂಬ ಬೇಸರದಿಂದ ಸಾಯುತ್ತಿರುವುದಾಗಿ ಆಕೆ ಡೆತ್ ನೋಟ್‌ನಲ್ಲಿ ಬರೆದಿದ್ದಾಳೆ. ʻʻʻನನ್ನ ಸಾವಿಗೆ ನಾನೇ ಕಾರಣʼʼ ಎಂದಿರುವ ಸಾರಿಕಾ ʻʻನನಗೆ ಬಂದ ಸ್ಥಿತಿ ನನ್ನ ಫ್ರೆಂಡ್ಸ್ ಗೆ ಬರುವುದು ಬೇಡʼʼ ಎಂದಿದ್ದಾಳೆ.
ಸಾರಿಕಾ ರಾತ್ರಿ ಕೆರೆಗೆ ಹಾರಿದ್ದಾಳಾದರೂ ಶನಿವಾರ ಬೆಳಗ್ಗೆ ೯.೩೦ರ ಹೊತ್ತಿಗೆ ಸಾರ್ವಜನಿಕರು ಕೆರೆಯಲ್ಲಿ ಶವ ಇರುವುದನ್ನು ನೋಡಿ ಮನೆಯವರಿಗೆ ಮಾಹಿತಿ ನೀಡಿದರು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾರಿಕಾ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು, ಹಲವು ಬಹುಮಾನಗಳನ್ನು ಪಡೆದಿದ್ದಾಳೆ. ಆಕೆ ಮಾಡಿದ ಕೆಲವು ಅನ್ವೇಷಣಾತ್ಮಕ ಪ್ರಯೋಗಗಳು ಮೆಚ್ಚುಗೆ ಗಳಿಸಿದ್ದವು.
ಮನೆಯಲ್ಲಿ ಕಾಣಿಸಿಕೊಂಡ ಬೆಂಕಿ
ವಿಜಯಪುರ ನಗರದ ಕನಕದಾಸ ಬಡಾವಣೆಯ ನಬಿಸಾಬ ಕೊಡಗಾನೂರ ಎಂಬವರ ಮನೆ ಶಾರ್ಟ್ ಸರ್ಕ್ಯೂಟ್‌ನಿಂದ ಮನೆ ಅಗ್ನಿಗಾಹುತಿಯಾಗಿದೆ. ಟಿವಿ, ಬ್ರಿಡ್ಜ್, ಕಂಪ್ಯೂಟರ್ ಸೇರಿದಂತೆ ವಸ್ತುಗಳು ಸುಟ್ಟು ಕರಕಲಾಗಿದ್ದು, ನಾಲ್ಕು ಲಕ್ಷ ರೂ.ನಷ್ಟು ನಷ್ಟ ಉಂಟಾಗಿದೆ ಎಂದು ಹೇಳಲಾಗಿದೆ.