ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ವರ್ಷದ ಜನ್ಮ ದಿನ ಕಾರ್ಯಕ್ರಮವನ್ನು ದಾವಣಗೆರೆಯಲ್ಲಿ ಆಗಸ್ಟ್ 3ರಂದು ಆಯೋಜಿಸಲಾಗುತ್ತಿದೆ ಎನ್ನುವುದು ಈಗಾಗಲೆ ಸಾಕಷ್ಟು ಚರ್ಚೆಯಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಈಗಾಗಲೆ ಮುನಿಸಿಗೆ ಕಾರಣವಾಗಿರುವ ಸಿದ್ದರಾಮೋತ್ಸವ ಕೇವಲ ಒಂದು ದಿನದ ಕಾರ್ಯಕ್ರಮ ಅಲ್ಲ. ಅದು ನಿಶ್ಚಿತವಾಗಿ ಸಿದ್ದರಾಮಯ್ಯ ಅವರನ್ನು ಮುಂದಿನ ಸಿಎಂ ಮಾಡುವ ಪ್ರಯತ್ನ ಎಂಬುದು ದಿನೇದಿನೆ ಸ್ಪಷ್ಟವಾಗುತ್ತಿದೆ.
ಸಿದ್ದರಾಮೋತ್ಸವವನ್ನು ಕರ್ನಾಟಕದ ಮಧ್ಯಭಾಗವಾದ ದಾವಣಗೆರೆಯಲ್ಲಿ ಆಯೋಜನೆ ಮಾಡಲಾಗಿದೆ. ರಾಜ್ಯದ ಎಲ್ಲ ಕಡೆಗಳಿಂದಲೂ ಸಿದ್ದರಾಮಯ್ಯ ಅಭಿಮಾನಿಗಳು ಆಗಮಿಸಲು ಅನುಕೂಲವಾಗಲಿ ಎಂಬ ಕಾರಣ ಪ್ರಮುಖವಾದದ್ದು. ಸಿದ್ದರಾಮೋತ್ಸವಕ್ಕಾಗಿ ಒಂದು ಪ್ರತ್ಯೇಕ ಕಾಲ್ ಸೆಂಟರನ್ನೇ ಬೆಂಗಳೂರಿನಲ್ಲಿ ತೆರೆಯಲಾಗಿರುವುದು ಎನ್ನುವುದು ಒಟ್ಟಾರೆ ಕಾರ್ಯಕ್ರಮದ ಗಂಭೀರತೆಯನ್ನು ತೋರಿಸಿಕೊಟ್ಟಿದೆ.
ಆರ್ ವಿ ದೇಶಪಾಂಡೆ ಅಧ್ಯಕ್ಷ
ಮಾಜಿ ಸಚಿವ ಆರ್.ವಿ. ದೇಶಪಾಂಡೆ ಅವರನ್ನು ಅಮೃತ ಮಹೋತ್ಸವ ಸಮಿತಿ ಗೌರವ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಸಮಿತಿಯ ಅಧ್ಯಕ್ಷರಾಗಿ ಮಧುಗಿರಿಯ ಮಾಜಿ ಶಾಸಕ ಕೆ.ಎನ್. ರಾಜಣ್ಣ, ಸ್ವಾಗತ ಸಮಿತಿ ಅಧ್ಯಕ್ಷರಾಗಿ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ, ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಮಾಜಿ ಸಚಿವ ಬಸವರಾಜ ರಾಯರಡ್ಡಿ, ಖಜಾಂಚಿಯಾಗಿ ಭೈರತಿ ಸುರೇಶ್ ನೇಮಕವಾಗಿದ್ದಾರೆ.
ಸಿದ್ದರಾಮೋತ್ಸವಕ್ಕೆ ಮಾಜಿ ಪಿ.ಜಿ.ಆರ್. ಸಿಂಧ್ಯಾ, ಬಿ.ಎಲ್. ಶಂಕರ್, ವಿ.ಆರ್. ಸುದರ್ಶನ್, ಎಂ.ಬಿ. ಪಾಟೀಲ್, ಕೆ.ಜೆ. ಜಾರ್ಜ್, ಜಮೀರ್ ಅಹ್ಮದ್, ಗೋವಿಂದರಾಜು, ನಜೀರ್ ಅಹ್ಮದ್, ಎಲ್. ಹನುಮಂತಯ್ಯ, ಜಯಮಾಲಾ, ಎಚ್.ಎಂ. ರೇವಣ್ಣ ಸೇರಿ ಅನೇಕರು ಜತೆಗೂಡಿದ್ದಾರೆ.
ದೇಶಪಾಂಡೆ ದಶಕಗಳಿಂದಲೂ ಸಿದ್ದರಾಮಯ್ಯ ಅವರ ಸ್ನೇಹಿತರಾಗಿರುವವರು. ಈ ಹಿಂದೆ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದಾಗ ದೇಶಪಾಂಡೆ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಎಚ್.ಸಿ. ಮಹದೇವಪ್ಪ, ಕೆ.ಎನ್. ರಾಜಣ್ಣ, ಭೈರತಿ ಸುರೇಶ್ ಸಿದ್ದರಾಮಯ್ಯ ಅವರ ಜತೆಯಲ್ಲೆ ಗುರುತಿಸಿಕೊಂಡವರು. ಬಸವರಾಜ ರಾಯರಡ್ಡಿ ಹಾಗೂ ಎಂ.ಬಿ. ಪಾಟೀಲ ಅವರಂತೂ 2018ರ ವಿಧಾನಸಭೆ ಚುನಾವಣೆ ಸಮಯದಲ್ಲಿ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ವಿಚಾರದಲ್ಲಿ ಮುಂಚೂಣಿಯಲ್ಲಿದ್ದ ನಾಲ್ವರು ಸಚಿವರಲ್ಲೊಬ್ಬರು. ವಿ.ಆರ್. ಸುದರ್ಶನ್ ಹಾಗೂ ಬಿ.ಎಲ್. ಶಂಕರ್ ನೇರವಾಗಿ ಅಲ್ಲದಿದ್ದರೂ ಸೈದ್ಧಾಂತಿಕವಾಗಿ ಸಿದ್ದರಾಮಯ್ಯ ಜತೆಯಲ್ಲೇ ಇರುವವರು. ಇನ್ನು ಉಳಿದೆಲ್ಲರೂ ʻಕಟ್ಟಾ ಸಿದ್ದರಾಮಯ್ಯ ಬೆಂಬಲಿಗರುʼ ಎಂದೇ ಗುರುತಿಸಿಕೊಂಡವರು.
ಸಿದ್ದರಾಮಯ್ಯ ತಮ್ಮ ಆಪ್ತರನ್ನು ಒಗ್ಗೂಡಿಸುವ ಹಾಗೂ ಕಾಂಗ್ರೆಸ್‌ನಲ್ಲಿ ತನ್ನ ಶಕ್ತಿ ಪ್ರದರ್ಶನ ಮಾಡುವ ಸ್ಪಷ್ಟ ಉದ್ದೇಶ ಸಿದ್ದರಾಮೋತ್ಸವಕ್ಕಿದೆ. ಜತೆಗೆ, ಯಾರು ತಮ್ಮ ಜತೆಗೆ ಇಲ್ಲ ಎನ್ನುವುದನ್ನೂ ಖಾತ್ರಿಪಡಿಸಿಕೊಳ್ಳುವ ಉಪಾಯವೂ ಇದೆ. ಇದೇ ಕಾರಣಕ್ಕೆ ಒಂದು ತಿಂಗಳು ಮೊದಲೇ ಕಾರ್ಯಕ್ರಮ ಘೋಷಣೆ ಮಾಡಿ ತಯಾರಿ ನಡೆಸಲಾಗುತ್ತಿದೆ. ಇನ್ನೊಂದು ತಿಂಗಳು ಸಿದ್ದರಾಮೋತ್ಸವದ ಅಶ್ವಮೇಧದ ಕುದುರೆ ಎಲ್ಲೆಡೆ ಓಡುತ್ತಿರುತ್ತದೆ ಎಂದು ಭವಿಷ್ಯದ ಬೆಳವಣಿಗೆಗಳ ಕುರಿತು ಕಾಂಗ್ರೆಸ್ ನಾಯಕರೊಬ್ಬರು ಕುರುಹು ನೀಡಿದ್ದಾರೆ.
srlopcm75ನಲ್ಲಿ ಇದೆ ಎಲ್ಲದಕ್ಕೂ ಉತ್ತರ
ಸಿದ್ದರಾಮೋತ್ಸವವನ್ನು ತಮ್ಮ ಹಿತೈಷಿಗಳು ಮಾಡುತ್ತಿದ್ದಾರೆ ಅಷ್ಟೆ, ನನ್ನ ಶಕ್ತಿ ಪ್ರದರ್ಶನ ಅಲ್ಲ ಎಂದು ಸಿದ್ದರಾಮಯ್ಯ ಈಗಾಗಲೆ ತಿಳಿಸಿದ್ದಾರೆ. ನಾನು ಯಾರ ಮೇಲೆ ಶಕ್ತಿ ಪ್ರದರ್ಶನ ಮಾಡಬೇಕು ಎಂದೂ ಕೇಳಿದ್ದಾರೆ. ಆದರೆ ಇದೀಗ ಸಿದ್ದರಾಮೋತ್ಸವಕ್ಕೆ ಪ್ರತ್ಯೇಕವಾಗಿ ಕಾಲ್‌ಸೆಂಟರ್ ತೆರೆಯಲಾಗಿರುವುದು ಈ ಮಾತುಗಳ ಸತ್ಯತೆಯನ್ನು ಪ್ರಶ್ನಿಸುವಂತಿದೆ.
ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮುಂದಿನ ದಿನಗಳಲ್ಲಿ ಸಮಿತಿಗಳನ್ನು ರಚಿಸಲಾಗುತ್ತದೆ. ಕೆಲವು ಜಿಲ್ಲೆಗಳಲ್ಲಿ ತಾಲೂಕುಮಟ್ಟದಲ್ಲೂ ಸಮಿತಿ ರಚನೆ ಮಾಡಲಾಗುತ್ತದೆ. ಈ ಮೂಲಕ, ಕಾಂಗ್ರೆಸ್ ಸಮಿತಿಗಳಲ್ಲದೆ ಪ್ರತಿ ಜಿಲ್ಲೆಯಲ್ಲೂ ಸಿದ್ದರಾಮೋತ್ಸವ ಸಮಿತಿಗಳು ರಚನೆ ಮಾಡಬೇಕಿದೆ ಎಂದು ಭಾನುವಾರ ನಡೆದ ಸಭೆಯೊಂದರಲ್ಲಿ ನಿರ್ಧಾರ ಮಾಡಲಾಗಿದೆ.
ಇದೆಲ್ಲಕ್ಕಿಂತಲೂ ಮುಖ್ಯವಾಗಿ, ಕಾರ್ಯಕ್ರಮ ಆಯೋಜನೆ ಸಂಬಂಧ ಇಮೇಲ್ ಐಡಿಯೊಂದನ್ನು ರಚನೆ ಮಾಡಲಾಗಿದೆ. srlopcm75@gmail.com ಎನ್ನುವುದೇ ಇಮೇಲ್ ವಿಳಾಸ. ಈ ವಿಳಾಸವೇ ಸಾಕಷ್ಟು ಕತೆಗಳನ್ನು ಹೇಳುತ್ತಿವೆ ಎಂದು ಕಾಂಗ್ರೆಸ್ ನಾಯಕರು ತಿಳಿಸುತ್ತಾರೆ. ಇದರಲ್ಲಿ ʻsrʼ ಎಂದರೆ ಸಿದ್ದರಾಮಯ್ಯ. ʻlopʼ ಎಂದರೆ ಲೀಡರ್ ಆಫ್ ಆಪೋಸಿಷನ್ (ಪ್ರತಿಪಕ್ಷ ನಾಯಕ) ಎಂದರ್ಥ. ʻ75ʼ ಎಂದರೆ ಸಿದ್ದರಾಮಯ್ಯ ಅವರಿಗೆ 75 ವರ್ಷ ತುಂಬುತ್ತಿದೆ ಎಂದರ್ಥ. ಆದರೆ ನಡುವೆ ಇರುವುದೇ ʼcmʼ ಎಂಬ ಎರಡಕ್ಷರ. ಅಂದರೆ, ಇದೀಗ ಪ್ರತಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡುವುದೇ ಈ ಕಾರ್ಯಕ್ರಮದ ಉದ್ದೇಶ ಎಂಬುದರ ಸುಳಿವು ಇದರಲ್ಲಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ವಿಶ್ಲೇಷಣೆ ಮಾಡಿದ್ದಾರೆ.
ಅಂದರೆ, ಸಿದ್ದರಾಮೋತ್ಸವ ಎನ್ನುವುದು ಸಿದ್ದರಾಮಯ್ಯ ಅವರನ್ನು ಮುಂಬರುವ ವಿಧಾನಸಭೆ ಚುನಾವಣೆ ನಂತರ ಮುಖ್ಯಮಂತ್ರಿ ಎಂದು ಬಿಂಬಿಸುವುದೇ ಆಗಿದೆ ಎನ್ನುವುದು ಬಹುತೇಕ ಸ್ಪಷ್ಟವಾಗಿದೆ. ಇದೇ ಕಾರಣಕ್ಕಾಗಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಈ ಕಾರ್ಯಕ್ರಮದಿಂದ ಅಂತರ ಕಾಯ್ದುಕೊಂಡಿದ್ದಾರೆ. ಪಕ್ಷದಲ್ಲಿ ವ್ಯಕ್ತಿಪೂಜೆ ಇಲ್ಲ ಎಂದು ಭಾನುವಾರವಷ್ಟೆ ಪುನರುಚ್ಚರಿಸಿದ್ದಾರೆ.
ಇದನ್ನೂ ಓದಿ | ಸಿದ್ದರಾಮಯ್ಯ ಸೋತರೂ ನಾಯಕರನ್ನಾಗಿಸಿದ್ದೇವೆ: ಡಿ.ಕೆ. ಶಿವಕುಮಾರ್ ಮಾತಿನ ಅರ್ಥವೇನು?