Site icon Vistara News

Iqbal Hussain: ಯುವತಿ ಜತೆ ಶಾಸಕ ಇಕ್ಬಾಲ್ ಹುಸೇನ್ ವಿಡಿಯೊ ಕಾಲ್ ವೈರಲ್; ಎಫ್‌ಐಆರ್‌ ದಾಖಲು

Ikbal hussain

ರಾಮನಗರ: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಪ್ರಕರಣದ ಬೆನ್ನಲ್ಲೇ ರಾಮನಗರ ಕಾಂಗ್ರೆಸ್‌ ಶಾಸಕ ಇಕ್ಬಾಲ್ ಹುಸೇನ್ (Iqbal Hussain) ಅವರು ವಾಟ್ಸ್‌ಆ್ಯಪ್‌ನಲ್ಲಿ ಯುವತಿಯೊಂದಿಗೆ ಮಾತನಾಡಿರುವ ವಿಡಿಯೊ ವೈರಲ್ ಆದ ಹಿನ್ನೆಲೆಯಲ್ಲಿ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಕಾಂಗ್ರೆಸ್ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಯುವತಿಯೊಬ್ಬರೊಂದಿಗೆ ವಾಟ್ಸ್‌ಆ್ಯಪ್‌ ವಿಡಿಯೊ ಕಾಲ್‌ನಲ್ಲಿ ಮಾತನಾಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ರಾಮನಗರದಲ್ಲಿ ಸಂಚಲನ ಮೂಡಿಸಿದೆ. ಇಕ್ಬಾಲ್ ಹುಸೇನ್ ಅವರು ಕಾಂಗ್ರೆಸ್ ಪದಾಧಿಕಾರಿ ಎನ್ನಲಾದ ಯುವತಿ ಜತೆಗಿನ 2 ನಿಮಿಷ 27 ಸೆಕೆಂಡ್‌ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಯುವತಿಯಿಂದ ದೂರು ದಾಖಲು

ಇಕ್ಬಾಲ್‌ ಹುಸೇನ್‌ ಅವರ ವಿಡಿಯೊ ವೈರಲ್ ಸಂಬಂಧ ರಾಮನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಶಾಸಕ ಯುವತಿಯೊಂದಿಗೆ ಅಶ್ಲೀಲವಾಗಿ ಚರ್ಚೆ ಮಾಡಿದ್ದಾರೆಂದು ಆರೋಪಗಳು ಕೇಳಿಬಂದಿದ್ದವು. ಆದರೆ, ವಿಡಿಯೊವನ್ನು ಎಡಿಟ್‌ ಮಾಡಿ ವೈರಲ್‌ ಮಾಡಲಾಗಿದೆ. ನನ್ನ ಹಾಗೂ ಇಕ್ಬಾಲ್ ಹುಸೇನ್ ಅವರದ್ದು ತಂದೆ-ಮಗಳ ಸಂಬಂಧ. ವಿಡಿಯೊ ಕಾಲ್ ಅನ್ನ ದುರುಪಯೋಗ ಮಾಡಲಾಗಿದೆ ಎಂದು ಸಂತ್ರಸ್ತ ಯುವತಿ ದೂರು ನೀಡಿದ್ದಾಳೆ.

ಒಳ ಉಡುಪಿನಲ್ಲಿ ಇರುವ ಹಾಗೆ ವಿಡಿಯೊ ಸೃಷ್ಟಿಸಲಾಗಿದೆ ಎಂದು ಆರೋಪಿಸಿರುವ ಸಂತ್ರಸ್ತ ಯುವತಿ, ತಮ್ಮಣ್ಣಗೌಡ ಗುಂಡ್ಕಲ್ ಎಂಬುವರ ಫೇಸ್ ಬುಕ್ ಖಾತೆಯಲ್ಲಿ ವಿಡಿಯೊ ಹರಿಬಿಡಲಾಗಿದೆ. ವಿಡಿಯೊದಲ್ಲಿ ನಾನು ಮಾತನಾಡಿರುವುದನ್ನು ತಿರುಚಲಾಗಿದೆ. ಈ ಬಗ್ಗೆ ಕ್ರಮವಹಿಸಬೇಕು ಎಂದು ಯುವತಿ ಮನವಿ ಮಾಡಿದ್ದಾಳೆ.

ಇದನ್ನೂ ಓದಿ | Prajwal Revanna Case: ಸಿಂಗಾಪುರ ಮಾಧ್ಯಮಗಳಲ್ಲೂ ಪ್ರಜ್ವಲ್‌ ರೇವಣ್ಣ ಕೇಸ್‌ ಸದ್ದು!

ವಿಡಿಯೊ ನನ್ನದೇ ಎಂದು ಒಪ್ಪಿಕೊಂಡ ಶಾಸಕ ಇಕ್ಬಾಲ್!

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊ ನನ್ನದೇ ಎಂದು ಒಪ್ಪಿಕೊಂಡಿರುವ ಶಾಸಕ ಇಕ್ಬಾಲ್‌ ಹುಸೇನ್ ಅವರು, ಯಾರದೊ ಕೋಪವನ್ನು ತೀರಿಸಿಕೊಳ್ಳಲು ನನ್ನನ್ನು ಸಿಲುಕಿಸುವ ಪ್ರಯತ್ನ ಮಾಡಲಾಗಿದೆ. ಸಮಸ್ಯೆಗಳನ್ನು ಹೇಳಿಕೊಳ್ಳಲು ಹಲವಾರು ಮಂದಿ ಕರೆ ಮಾಡುತ್ತಾರೆ. ವಿಡಿಯೊ ಕಾಲ್ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. ಈ ಕರೆ ಸುಮಾರು ಒಂದೂವರೆ ವರ್ಷ ಹಿಂದಿನದು ಎಂದಿರುವ ಶಾಸಕ, ಹೀಗೆ ಕಾಲ್ ರೆಕಾರ್ಡ್ ಮಾಡಿಕೊಂಡು ಈಗ ನನ್ನ ತೇಜೋವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

Exit mobile version