Site icon Vistara News

ಕೊಡಗಿನಲ್ಲಿ ಕೈ-ಕಮಲ ಸಂಘರ್ಷದ ಲಾಭ ಎತ್ತಲು ಪಿಎಫ್‌ಐ ಸಂಘಟನೆ ಯತ್ನ? ಡಿಸಿ ಸೆಕ್ಷನ್‌ ಹಾಕಿದ್ದು ಅದಕ್ಕೇನಾ?

kodagu pretest

ಮಡಿಕೇರಿ: ರಾಜ್ಯದ ಪುಟ್ಟ ಜಿಲ್ಲೆ ಕೊಡಗು ಈಗ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳ ಸಂಘರ್ಷದ ತಾಣವಾಗಿ ಮಾರ್ಪಟ್ಟಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರತ್ತ ಮೊಟ್ಟೆ ಎಸೆದ ಘಟನೆಯನ್ನು ಕಾಂಗ್ರೆಸ್‌ ಸವಾಲಾಗಿ ಸ್ವೀಕರಿಸಿದೆ. ಹೀಗಾಗಿ ಆಗಸ್ಟ್‌ ೨೬ರಂದು ಕೊಡಗಿನಲ್ಲಿ ದೊಡ್ಡ ಪ್ರತಿಭಟನಾ ರ‍್ಯಾಲಿ ಆಯೋಜಿಸಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡಾ ಜನಜಾಗೃತಿ ಕಾರ್ಯಕ್ರಮವನ್ನು ಅದೇ ದಿನ ಆಯೋಜಿಸಿದೆ. ಸಿದ್ದರಾಮಯ್ಯ ಅವರ ನಿಲುವುಗಳು, ಸಾವರ್ಕರ್‌ ಅವರನ್ನು ವಿರೋಧಿಸುವ ಕಾಂಗ್ರೆಸ್‌ ನಡೆ, ಟಿಪ್ಪು ಜಯಂತಿಯ ನೋವುಗಳು ಮತ್ತು ಅದಕ್ಕಿಂತಲೂ ಹೆಚ್ಚಾಗಿ ಈಗ ಸಿದ್ದರಾಮಯ್ಯ ಅವರು ಮಾಂಸ ತಿಂದು ದೇಗುಲಕ್ಕೆ ಹೋಗಿದ್ದಾರೆ ಎಂಬ ಪ್ರಚಾರಗಳನ್ನು ಬಿಜೆಪಿ ಕೈಗೆತ್ತಿಕೊಳ್ಳಲಿದೆ. ಒಟ್ಟಾರೆಯಾಗಿ ಅಂದು ಎರಡೂ ಪಕ್ಷಗಳ ನಡುವೆ ದೊಡ್ಡ ಮಟ್ಟದ ಜಿದ್ದಾಜಿದ್ದಿಗೆ ವೇದಿಕೆ ಸಿದ್ಧವಾಗುತ್ತಿದೆ.

ಈ ನಡುವೆ ಜಿಲ್ಲಾಡಳಿತ ಕೊಡಗಿನಲ್ಲಿ ಆಗಸ್ಟ್‌ ೨೪ರಿಂದಲೇ ನಿಷೇಧಾಜ್ಞೆ ಜಾರಿಗೊಳಿಸಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ಒಂದೇ ದಿನ ಲಕ್ಷಾಂತರ ಜನರನ್ನು ಸೇರಿಸಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಆಯೋಜಿಸುತ್ತಿರುವುದರಿಂದ ಸಂಘರ್ಷವಾಗಬಹುದು ಎನ್ನುವುದು ನಿಷೇಧಾಜ್ಞೆಗೆ ಒಂದು ಕಾರಣವಾದರೆ, ಅದಕ್ಕಿಂತಲೂ ಮೀರಿದ ಇನ್ನೊಂದು ಕಾರಣವಿದೆ ಎನ್ನಲಾಗಿದೆ.

ಎರಡು ಪಕ್ಷಗಳ ನಡುವಿನ ಈ ಸಂಘರ್ಷವನ್ನು ಕೆಲವು ಸಮಾಜ ಬಾಹಿರ ಶಕ್ತಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳಬಹುದು ಎನ್ನುವುದು ಸರಕಾರದ ಅದರಲ್ಲೂ ಪೊಲೀಸ್‌ ಇಲಾಖೆಯ ಆತಂಕ. ಈ ಕಾರಣಕ್ಕಾಗಿಯೇ ಅದು ನಿಷೇಧಾಜ್ಞೆ ವಿಧಿಸುವುದರ ಜತೆಗೆ ದಯವಿಟ್ಟು ಆಗಸ್ಟ್‌ ೨೬ರ ಪ್ರತಿಭಟನೆ, ಜನ ಜಾಗೃತಿ ರ‍್ಯಾಲಿಗಳನ್ನು ಕೈಬಿಡಿ ಎಂದು ಎರಡೂ ಪಕ್ಷಗಳಿಗೆ ಮನವಿ ಮಾಡಿದೆ.

ನಿಜವೆಂದರೆ, ನಿಷೇಧಾಜ್ಞೆ ವಿಧಿಸುವ ಹಿಂದಿನ ಜಿಲ್ಲಾಡಳಿತದ ಉದ್ದೇಶ ಕಾಂಗ್ರೆಸಿನ ಮಡಿಕೇರಿ ಚಲೋ, ಬಿಜೆಪಿಯ ಜನಜಾಗೃತಿ ನಿಲ್ಲಿಸುವುದು ಅಲ್ಲವೇ ಅಲ್ಲ. ಕೇಂದ್ರ ಗುಪ್ತಚರ ಇಲಾಖೆ ನೀಡಿದ ಒಂದು ಮಾಹಿತಿಯನ್ನು ಆಧರಿಸಿ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

ಎರಡೂ ಪಕ್ಷಗಳು ತಲಾ ಎರಡು ಲಕ್ಷ ಜನರನ್ನು ಸೇರಿಸುವ ಉದ್ದೇಶವನ್ನು ಹೊಂದಿವೆ. ಈ ಪಕ್ಷಗಳ ಕಾರ್ಯಕರ್ತರ ನಡುವೆ ಸಂಘರ್ಷ ನಡೆಯುವ ಸಾಧ್ಯತೆಯೂ ಸಣ್ಣ ಮಟ್ಟಿಗೆ ಇದೆ. ಆದರೆ, ಜಿಲ್ಲಾಡಳಿತಕ್ಕೆ ಆತಂಕ ಇರುವುದು ಅದಲ್ಲ. ಸಮಾಜ ವಿರೋಧಿ ಶಕ್ತಿಗಳು ಸೇರಿಕೊಂಡು ಹಿಂಸಾಚಾರವನ್ನು ಸೃಷ್ಟಿಸಬಹುದು ಎನ್ನುವುದು ಅದರ ಆತಂಕ.

ಜಿಲ್ಲಾಡಳಿತಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಪಕ್ಕದ ಕೇರಳದಿಂದ ಕೆಲವು ಪಿಎಫ್‌ಐ ಕಾರ್ಯಕರ್ತರು ಜಿಲ್ಲೆಗೆ ನುಗ್ಗಿದ್ದಾರೆ. ಅವರು ಈಗಾಗಲೇ ಕೊಡಗಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಕಿತ್ತಾಟವನ್ನು ದುರುಪಯೋಗ ಪಡಿಸಿಕೊಳ್ಳುವ ಬಗ್ಗೆ ಮಾಹಿತಿ ಜಿಲ್ಲಾಡಳಿತಕ್ಕೆ ದೊರಕಿದೆ ಎನ್ನಲಾಗಿದೆ. ನಿಜವೆಂದರೆ ಹಿಂಸಾಚಾರವೆಂದರೆ ನೇರವಾಗಿ ಹಿಂಸಾಚಾರ ನಡೆಸುತ್ತಾರೆ ಎಂದೇ ಅಲ್ಲ. ಬದಲಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಸಂಘರ್ಷ ಸೃಷ್ಟಿಯಾಗುವ ರೀತಿಯಲ್ಲಿ ಸಣ್ಣ ಕಿಡಿ ಹಚ್ಚಿದರೂ ಸಾಕಾಗುತ್ತದೆ. ಹೀಗಾಗಿ ಕೊಡಗು ಜಿಲ್ಲೆಯಲ್ಲಿ ಎರಡು ಪಕ್ಷಗಳ ಕಾರ್ಯಕ್ರಮ ರದ್ದು ಮಾಡುವಂತೆ ಸಲಹೆ ನೀಡಿದೆ. ಮಂಗಳವಾರ ಎರಡು ಪಕ್ಷಗಳ ಮುಖಂಡರ ಸಭೆ ಕರೆದು ಚರ್ಚಿಸುವ ಸಾಧ್ಯತೆ ಇದೆ. ಐಜಿಪಿ ನೇತೃತ್ವದಲ್ಲಿ ಎರಡು ಪಕ್ಷಗಳ ಮುಖಂಡರ ಸಭೆ ನಡೆಯಲಿದೆ.

ಇದನ್ನೂ ಓದಿ | ಬಿಜೆಪಿಯ ಗೋಬ್ಯಾಕ್‌ ‌ವಿರುದ್ಧ ಸಿದ್ದರಾಮಯ್ಯ ಗರಂ, ಆ. 26ರಂದು ಕೊಡಗಿನಲ್ಲಿ ಕಾಂಗ್ರೆಸ್‌ ಪ್ರತಿಭಟನೆ

Exit mobile version