Site icon Vistara News

DJ Halli case : ಮತ್ತೆ ಬೆಂಕಿ ಕಾರಿದ ಕೆಜಿ-ಡಿಜೆ ಹಳ್ಳಿ ಕೇಸ್!‌ ಪ್ರಕರಣ ವಾಪಸ್‌ಗೆ ಮುಂದಾಯಿತೇ ಸರ್ಕಾರ?

Dr G Parameshwar CM Siddaramaiah and MLA Tanveer sait

ಬೆಂಗಳೂರು: 2020ರ ಆಗಸ್ಟ್‌ನಲ್ಲಿ ನಡೆದಿದ್ದ ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಗಲಭೆ ಪ್ರಕರಣವನ್ನು DJ Halli case) ರಾಜ್ಯ ಸರ್ಕಾರ ಕೈಬಿಡುವ ಪ್ರಯತ್ನ ಮಾಡುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಇದೀಗ ರಾಜಕೀಯ ತಿರುವನ್ನು ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಲಾಗಿದೆ. ಹೀಗಾಗಿ ಮರುಪರಿಶೀಲನೆ ಮಾಡಿ ಕೇಸ್‌ ಕೈಬಿಡುವಂತೆ ಮನವಿ ಮಾಡಿದ್ದರು. ಅವರ ಮನವಿ ಆಧರಿಸಿ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ (Home minister Dr G Parameshwar) ಅವರು, “ಈ ಮೊಕದ್ದಮೆಗಳನ್ನು ನಿಯಮಾನುಸಾರ ಪರಿಶೀಲನೆ ನಡೆಸಿ, ನಿಯಮಾನುಸಾರ ಪ್ರಕರಣವನ್ನು ಹಿಂಪಡೆಯುವ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳಿ” ಎಂದು ಒಳಾಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ಇದು ಈಗ ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ಜಟಾಪಟಿಗೆ ಕಾರಣವಾಗಿದೆ. ಇನ್ನು ಪರಮೇಶ್ವರ್‌ ಸಹ ಮತ್ತೊಮ್ಮೆ ಸ್ಪಷ್ಟೀಕರಣ ನೀಡಿ, ಪತ್ರ ಬರೆದ ಕೂಡಲೇ ಪ್ರಕರಣವನ್ನು ಕೈಬಿಡಲು ಸಾಧ್ಯವಿಲ್ಲ. ಅದಕ್ಕೆ ಹಲವಾರು ವಿಧಾನಗಳಿವೆ ಎಂದು ಉತ್ತರಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “ಈ ಪ್ರಕರಣವನ್ನು ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡುತ್ತೇವೆ” ಎಂದು ಹೇಳಿದ್ದಾರೆ.

ಏನಿದು ಕೇಸ್?‌

ನವೀನ್‌ ಎಂಬಾತನ ಫೇಸ್‌ಬುಕ್‌ ಸಂದೇಶದಿಂದ 2020ರ ಆಗಸ್ಟ್‌ 11ರಂದು ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ಗಲಭೆ (KJ Halli DJ Halli riot case) ಆರಂಭವಾಗಿತ್ತು. ಎಸ್‌ಡಿಪಿಐ (ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ – Social Democratic Party of India – SDPI) ಸದಸ್ಯರ ಸಂಚಿನಿಂದ ಗಲಭೆ ನಡೆದಿತ್ತು. ಗಲಭೆಯಿಂದ ಸಾರ್ವಜನಿಕರ ಆಸ್ತಿ ಪಾಸ್ತಿ ನಷ್ಟವಾಗಿತ್ತು. ಅಷ್ಟೇ ಅಲ್ಲದೆ, ಡಿಜೆ ಹಳ್ಳಿ ನಿವಾಸಿಗಳಾದ ಯಾಸಿನ್‌ ಪಾಷಾ (21), ವಾಜೀದ್‌ ಖಾನ್‌ (21), ಕೆ.ಜಿ. ಹಳ್ಳಿ ನಿವಾಸಿ ಶೇಕ್‌ ಸಿದ್ದಿಕ್‌ (25) ಮೃತಪಟ್ಟಿದ್ದರು. ಕೆಜಿ ಹಳ್ಳಿ ಪೊಲೀಸ್‌ ಸ್ಟೇಷನ್‌ ಹಾಗೂ ಆಗಿನ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಚ್ಚಲಾಗಿತ್ತು. ಈ ಗಲಭೆಯಲ್ಲಿ 230ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ. 11 ಆರೋಪಿಗಳು ಇನ್ನೂ ಜೈಲಿನಲ್ಲಿಯೇ ಇದ್ದಾರೆ. ನಾಲ್ಕು ಆರೋಪಿಗಳು ಮೃತಪಟ್ಟಿದ್ದಾರೆ. ಉಳಿದ ಆರೋಪಿಗಳು ಜಾಮೀನು ಪಡೆದು ಹೊರ ಬಂದಿದ್ದಾರೆ.

ಇದನ್ನೂ ಓದಿ: Lok Sabha Election 2024 : ಬಿಜೆಪಿಯಿಂದ ಹೊರಗೆ ಕಾಲಿಟ್ಟರೇ ಸುಮಲತಾ?

NIA ಸುಪರ್ದಿಯಲ್ಲಿ ಕೇಸ್

ಸದ್ಯ ಎನ್ಐಎ ಬಳಿ ಈ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ ಇದೆ. ಗಲಭೆ ಸಂಬಂಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ. ಎನ್ಐಎ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿ ಈ ಪ್ರಕರಣ ಇದೆ. ಗಲಭೆ ಸಂಬಂಧ ಡಿಜೆ ಹಳ್ಳಿ ಠಾಣೆಯಲ್ಲಿ ಒಟ್ಟು 57 ಪ್ರಕರಣ ಸೇರಿದಂತೆ ಬೇರೆ ಬೇರೆ ಠಾಣೆಗಳಲ್ಲೂ ಪ್ರಕರಣ ದಾಖಲಾಗಿವೆ. ಎನ್ಐಎ ಪ್ರಕರಣ ಸಂಬಂಧ ನ್ಯಾಯಾಲಯದ ವಿಚಾರಣೆಗೆ ಹಲವು ಆರೋಪಿಗಳು ಗೈರಾಗುತ್ತಿದ್ದಾರೆ. ವಿಚಾರಣೆಗೆ ಗೈರಾದ ಆರೋಪಿಗಳನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರು ಪಡಿಸಲು ಸಮನ್ಸ್ ನೀಡಲಾಗಿದೆ. ಸುಮಾರು 80ಕ್ಕೂ ಹೆಚ್ಚು ಆರೋಪಿಗಳ ಹೆಸರಲ್ಲಿ ಸಮನ್ಸ್ ನೀಡಲಾಗಿದೆ. ವಿಚಾರಣೆಗೆ ಗೈರಾದ ಆರೋಪಿಗಳ ಬಗ್ಗೆ ಡಿಜೆ ಹಳ್ಳಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಬೃಹತ್‌ ಬೆಂಗಳೂರಿನ ಮಾಜಿ ಕಾರ್ಪೋರೇಟರ್ ಜಾಕೀರ್ ಹುಸೇನ್, ಕಾರ್ಪೋರೇಟರ್‌ವೊಬ್ಬರ ಪತಿ ಕಲಿಂ ಪಾಷಾ ಹಾಗೂ ಮಾಜಿ ಮೇಯರ್ ಸಂಪತ್ ರಾಜ್ ಅವರು ಈ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ. ಈಗ ಈ ಪ್ರಕರಣಗಳನ್ನು ಮರುಪರಿಶೀಲನೆ ಮಾಡಿ, ಅಮಾಯಕರನ್ನು ಬಿಡುಗಡೆ ಮಾಡಬೇಕು ಎಂದು ಶಾಸಕ ತನ್ವೀರ್‌ ಸೇಠ್‌ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದರು. ಆ ಮನವಿ ಪತ್ರವನ್ನು ಆಧಾರವಾಗಿಟ್ಟುಕೊಂಡು ಪ್ರಕರಣವನ್ನು ವಾಪಸ್‌ ಪಡೆಯುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರು ಒಳಾಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.

ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡುತ್ತೇವೆ: ಸಿಎಂ ಸಿದ್ದರಾಮಯ್ಯ

ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣವನ್ನು ವಾಪಸ್ ಪಡೆಯುವ ವಿಚಾರವಾಗಿ ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡುತ್ತೇವೆ. ಬಿಜೆಪಿಯವರ ಟ್ವೀಟ್‌ಗೆಲ್ಲ ಉತ್ತರ ಕೊಡಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: PM Narendra Modi : ನೀರವ್‌, ಲಲಿತ್‌ ಮೋದಿಗೆ ನಿಮ್ಮನ್ನು ಹೋಲಿಸಲೇ: ಮೋದಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ

ರಾಜಕೀಯ ಲಾಭಕ್ಕೆ ಮುಂದಾಯಿತಾ ಕಾಂಗ್ರೆಸ್ ಸರ್ಕಾರ?

ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣ ಸಂಬಂಧ ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಪುಲಕೇಶಿ ನಗರದಲ್ಲಿನ ಕೇಸ್ ವಾಪಸ್‌ ತೆಗೆದರೆ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಲಾಭವಾಗುವ ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ. ಮಾಜಿ ಶಾಸಕ ಅಖಂಡ ಶ್ರೀನಿವಾಸ ಮನೆಗೆ ಬೆಂಕಿ ಹಚ್ಚಿ ಕಾನೂನು ಕೈಗೆತ್ತಿಕೊಂಡ ಆರೋಪಿಗಳನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ.

ಈ ಸಂಬಂಧ ಶಾಸಕ ತನ್ವೀರ್ ಸೇಠ್ ಪತ್ರ ಬರೆದಿದ್ದು, ಪ್ರಕರಣದಲ್ಲಿ ಬಂಧಿತರಾದವರು ಅಮಾಯಕರು, ಅವರನ್ನು ಬಿಟ್ಟುಬಿಡಿ ಎಂದಿದ್ದರೆ. ಆ ಪತ್ರವನ್ನು ಇಟ್ಟುಕೊಂಡು ಗೃಹ ಮತ್ತು ಒಳಾಡಳಿತಕ್ಕೆ ಸೂಕ್ತ ಕ್ರಮ ವಹಿಸುವಂತೆ ಪರಮೇಶ್ವರ್ ಸೂಚನೆ ನೀಡಿದ್ದಾರೆ.

ಇದರ ಜತೆಗೆ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿ ಸಬ್ ಕಮಿಟಿ ರಚನೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಸಬ್ ಕಮಿಟಿ ರಚಿಸಿ ಆ ಸಮಿತಿಯು ನೀಡುವ ವರದಿಯನ್ವಯ ಕೇಸ್‌ ಕೈಬಿಡುವ ಚಿಂತನೆಯಲ್ಲಿ ರಾಜ್ಯ ಸರ್ಕಾರ ಇದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಎನ್ಐಎ ತನಿಖೆ ಮಾಡುತ್ತಿರುವ ಪ್ರಕರಣಕ್ಕೆ ಎಳ್ಳು ನೀರು ಬೀಡಲು ಮುಂದಾಯಿತಾ ರಾಜ್ಯ ಸರ್ಕಾರ ಎಂಬ ಪ್ರಶ್ನೆ ಮೂಡಿದೆ.

ಕೇಸ್‌ ವಾಪಸ್‌ ಸುಲಭವೇ?

ರಾಜ್ಯ ಸರ್ಕಾರ ಕೇಸ್ ವಾಪಸ್‌ ತೆಗೆದುಕೊಳ್ಳಲು ಸುಲಭವೇ ಎಂಬ ಪ್ರಶ್ನೆಯೂ ಮೂಡಿದೆ. ರೈತರು, ಪ್ರತಿಭಟನೆಯಲ್ಲಿ ನಿರತರಾದವರ ವಿರುದ್ಧ ಕೇಸ್ ದಾಖಲು ಮಾಡಿದ್ದರೆ ವಾಪಸ್‌ ಪಡೆಯಬಹುದು. ಅದು ಜಾಮೀನು ಸಹಿತ ಆರೋಪಗಳಾಗಿದ್ದರಿಂದ ಈ ಕ್ರಮ ಸಲುಭ. ಆದರೆ, ಕೆಜಿ ಹಳ್ಳಿ, ಡಿಜೆ ಹಳ್ಳಿ ಪ್ರಕರಣದಲ್ಲಿ ಗೋಲಿಬಾರ್ ಆಗಿದೆ. ಮೂವರು ಮೃತಪಟ್ಟಿದ್ದಾರೆ. ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ನಷ್ಟವಾಗಿದೆ. ಹೀಗಾಗಿ ಪ್ರಕರಣ ವಾಪಸ್‌ ಅಷ್ಟು ಸುಲಭವಲ್ಲ ಎಂದು ಹೇಳಲಾಗಿದೆ. ಆದರೆ, ಈ ಪ್ರಕರಣವನ್ನು ವಾಪಸ್‌ ಪಡೆಯುವ ಮೂಲಕ ಅಲ್ಪಸಂಖ್ಯಾತರ ಪರ ನಾವಿದ್ದೇವೆ ಎಂಬ ಸಂದೇಶವನ್ನು ರವಾನೆ ಮಾಡಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.

ಬಿಜೆಪಿಗಿದು ರಾಜಕೀಯ ಅಸ್ತ್ರ

ಕಾಂಗ್ರೆಸ್ ಸರ್ಕಾರ ಕೇಸ್ ವಾಪಸ್‌ ಪಡೆದುಕೊಂಡರೆ ಇದು ಬಿಜೆಪಿಗೆ ರಾಜಕೀಯ ಅಸ್ತ್ರವಾಗಿ ಸಿಗಲಿದೆ. ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಕೇಸ್ ವಾಪಸ್‌ ಪಡೆದರೆ, ಬಿಜೆಪಿಯು ರಾಜ್ಯಾದ್ಯಂತ ಹೋರಾಟದ ಅಸ್ತ್ರ ಮಾಡಿಕೊಳ್ಳಲಿದೆ. ಆಗ ಈ ಪ್ರಕರಣವನ್ನು ಕೇವಲ ರಾಜ್ಯಕ್ಕಷ್ಟೇ ಸೀಮಿತ ಮಾಡದೆ ದೇಶಕ್ಕೇ ಪ್ರಚಾರ ಮಾಡುವ ತಂತ್ರಗಾರಿಕೆಯನ್ನು ಹೆಣೆದಿದೆ ಎನ್ನಲಾಗಿದೆ. ಹೀಗಾಗಿ ಓಲೈಕೆ ಮತ್ತು ಪ್ರತಿಭಟನೆ ಪಾಲಿಟಿಕ್ಸ್‌ಗೆ ಕರ್ನಾಟಕ ಮತ್ತೊಮ್ಮೆ ಸಾಕ್ಷಿಯಾಗಲಿದೆ.

ಅಮಾಯಕರು, ವಿದ್ಯಾರ್ಥಿಗಳ ಮೇಲೆ ಕೇಸ್:‌ ಶಾಸಕ ತನ್ವಿರ್ ಸೇಠ್

ಜವಾಬ್ದಾರಿ ಸ್ಥಾನದಲ್ಲಿ ನಾವು ಆಯ್ಕೆಯಾದ ಮೇಲೆ ಉತ್ತಮ ಸಮಾಜ ನಿರ್ಮಾಣ ನಮ್ಮ ಕರ್ತವ್ಯವಾಗಿದೆ. ರಾಜ್ಯದ ಬೇರೆ ಬೇರೆ ಕಡೆ ನಡೆದ ಘಟನೆಗಳನ್ನು ಕಂಟ್ರೋಲ್ ಮಾಡಲು ಪೊಲೀಸರು ಪ್ರಕರಣವನ್ನು ದಾಖಲಿಸುವುದು ಸಹಜ. ಕೆಜಿ ಹಳ್ಳಿ, ಡಿಜೆ ಹಳ್ಳಿ, ಶಿವಮೊಗ್ಗ, ಹುಬ್ಬಳ್ಳಿಯಲ್ಲಿ ಕೆಲ ಘಟನೆಗಳು ನಡೆದಿವೆ. ಇದರಲ್ಲಿ ಅಮಾಯಕರು, ವಿದ್ಯಾರ್ಥಿಗಳ ಮೇಲೆ ಕೇಸ್‌ ಹಾಕಲಾಗಿದೆ. ಏನೋ ತರಕಾರಿ ತರಲು ಹೋಗಿದ್ದಾಗ ಸೆಕ್ಷನ್ 144 ಉಲ್ಲಂಘನೆ ಮಾಡಿದ್ದಾರೆ ಎಂದು ದಸ್ತಗಿರಿ ಮಾಡಿದ್ದಾರೆ. ಇದನ್ನು ಮರು ಪರಿಶೀಲನೆ ಮಾಡಿ ಎಂದು ಗೃಹ ಸಚಿವರು ಬರೆದಿದ್ದೇನೆ ಎಂದು ಶಾಸಕ ತನ್ವೀರ್ ಸೇಠ್ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: Udupi Toilet Video : ಟಾಯ್ಲೆಟ್ಟಲ್ಲಿ ಹೆಣ್ಮಕ್ಕಳ ವಿಡಿಯೊ ಮಾಡಿದ ಮೂವರು ಮುಸ್ಲಿಂ ವಿದ್ಯಾರ್ಥಿನಿಯರ ಮೇಲೆ FIR

ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣದ ಆರೋಪಿಗಳನ್ನು ಬಿಡಿ ಎಂದು ನಾನು ಎಲ್ಲಿಯೂ ಹೇಳಿಲ್ಲ. ಪ್ರಕರಣ ದಾಖಲಾಗಿದೆ. ನ್ಯಾಯಾಲಯದಲ್ಲಿದೆ. ಇಲ್ಲಿ ಯಾರು ಯಾರನ್ನೂ ರಕ್ಷಣೆ ಮಾಡಲು ಆಗಲ್ಲ. ಹಿಂದೆಯೂ ಮೈಸೂರು, ಹಾಸನ ಪ್ರಕರಣಗಳಲ್ಲಿ ಗಲಭೆ ಆಗಿದೆ. ಅಖಂಡ ಶ್ರೀನಿವಾಸ್ ಮೂರ್ತಿ, ಅವರ ಕುಟುಂಬದ ನವೀನ್ ಮೇಲೆ ಮಾಡಿದ ಕ್ರಮ ಏನು? ಅವನ ಮೇಲೆ ಏನು ಕ್ರಮ ತೆಗೆದುಕೊಂಡಿರಿ ಎಂದೆಲ್ಲ ನಾವು ಮತ್ತೆ ತೆಗೆಯಲು ಹೋದರೆ? ನ್ಯಾಯ ಬೇಕು ಎಂಬುದು ಒಂದೆಡೆಯಾದರೆ, ಮತ್ತೊಂದೆಡೆ ಅಮಾಯಕರ ಮೇಲಿನ ಹಾಕಿರುವ ಧಾವೆಗಳನ್ನು ಮರುಪರಿಶೀಲನೆ ಮಾಡಿ ಎಂದು ಹೇಳಿದ್ದೇನೆ. ನನ್ನ ಮಾತಿನ ಮೇಲೆ‌ ನಾನು ಸ್ಪಷ್ಟವಾಗಿ ನಿಲ್ಲುತ್ತೇನೆ. ನಾನು ಹಿಂದಿನ ಸರ್ಕಾರಕ್ಕೂ ಪತ್ರ ಬರೆದಿದ್ದೆ. ಈಗ ನಮ್ಮ ಸರ್ಕಾರ ಬಂದಿದೆ, ಮತ್ತೆ ಪತ್ರ ಬರೆದಿದ್ದೇನೆ ಎಂದು ತನ್ವೀರ್‌ ಸೇಠ್‌ ಹೇಳಿದ್ದಾರೆ.

ಮೊದಲು ಪತ್ರ ಬರೆದಿದ್ದು ದಿ ಹೆಲ್ಪಿಂಗ್ ಸಿಟಿಜನ್ ಆ್ಯಂಡ್ ಪೀಪಲ್ಸ್ ಕೋರ್ಟ್!

ಡಿಜೆ ಹಳ್ಳಿ, ಕೆಜಿ ಹಳ್ಳಿ, ಶಿವಮೊಗ್ಗ, ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆಯುವ ವಿಚಾರವಾಗಿ ಈ ಮೊದಲು ಪತ್ರ ಬರೆದಿದ್ದು, ದಿ ಹೆಲ್ಪಿಂಗ್ ಸಿಟಿಜನ್ ಆ್ಯಂಡ್ ಪೀಪಲ್ಸ್ ಕೋರ್ಟ್ ಎಂಬ ಸಂಘಟನೆಯಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿ ಎಲ್ಲ ಮುಸ್ಲಿಂ ಸಚಿವರಿಗೆ, ಶಾಸಕರಿಗೆ ಪತ್ರ ಈ ಸಂಘಟನೆಯ ಸಂಸ್ಥಾಪಕ ಆಲಂ ಪಾಷ ಎಂಬುವವರು ಪತ್ರ ಬರೆದಿದ್ದರು. ಈ ಪತ್ರವನ್ನು ಆಧಾರವಾಗಿಟ್ಟುಕೊಂಡ ಶಾಸಕ ತನ್ವೀರ್‌ ಸೇಠ್‌ ಗೃಹ ಮಂತ್ರಿಗೆ ಪತ್ರ ಬರೆದು ಮತ್ತೊಂದು ವಿವಾದಕ್ಕೆ ಈಗ ನಾಂದಿ ಹಾಡಿದ್ದಾರೆ.

ಕ್ಯಾಬಿನೆಟ್‌ ಸಬ್‌ ಕಮಿಟಿ ತೀರ್ಮಾನ ಮಾಡಲಿದೆ: ಗೃಹ ಸಚಿವ ಪರಮೇಶ್ವರ್

ಗಲಭೆಯಲ್ಲಿ ಭಾಗಿಯಾದವರ ಕೇಸ್ ವಾಪಸ್ ಪಡೆಯುವ ವಿಚಾರವಾಗಿ ತನ್ವೀರ್‌ ಸೇಠ್‌ ಪತ್ರ ಬರೆದಿದ್ದಾರೆ. ಬೇರೆ ಬೇರೆ ಶಾಸಕರು ಬೇರೆ ಬೇರೆ ಪ್ರಕರಣದಲ್ಲಿ ಹಾಕಿರುವ ಕೇಸ್‌ನಲ್ಲಿ ‌ಸತ್ಯಾಂಶ ಇಲ್ಲದಿದ್ರೆ ವಾಪಸ್ ಪಡೆಯಿರಿ ಅಂತ ಪತ್ರದಲ್ಲಿ ಬರೆದಿದ್ದಾರೆ. ನಾವು ತಕ್ಷಣ ವಾಪಸ್ ತೆಗೆದುಕೊಳ್ಳಲು ಆಗುವುದಿಲ್ಲ. ಇದನ್ನು ಕ್ಯಾಬಿನೆಟ್ ಸಬ್ ಕಮಿಟಿ ಮುಂದೆ ಮಂಡನೆ ಮಾಡಬೇಕು. ಇದನ್ನು ಸಬ್ ಕಮಿಟಿ ತೀರ್ಮಾನ ಮಾಡುತ್ತದೆ. ಆ ಪ್ರಕ್ರಿಯೆಯನ್ನು ಮಾಡಿದ್ದೇವಷ್ಟೇ. ಆಮೇಲೆ ಕ್ಯಾಬಿನೆಟ್ ಮುಂದೆ ಬರುತ್ತದೆ. ಕ್ಯಾಬಿನೆಟ್‌ನಲ್ಲಿ ಅದು ಅಪ್ರೂವಲ್ ಆಗುತ್ತದೆ ಅಂತ ಅಲ್ಲ. ಕಾನೂನಾತ್ಮಕವಾಗಿದೆಯೇ ಎಂಬುದನ್ನು ನೋಡಿ ತೀರ್ಮಾನ ಮಾಡುತ್ತೇವೆ. ಸತ್ಯಾಂಶವನ್ನು ನೋಡಿ ಕಾನೂನಾತ್ಮಕ ಅವಕಾಶ ಇದ್ದರೆ ವಾಪಸ್ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.

ಇಂಡಿಯನ್ ಮುಜಾಹಿದ್ದೀನ್‌ಗಿಂತ I.N.D.I.A ಹೇಗೆ ಭಿನ್ನವಾಗಿದೆ?: ತೇಜಸ್ವಿ ಸೂರ್ಯ

ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಪ್ರಕರಣದಲ್ಲಿ ಇಂಡಿಯನ್ ಮುಜಾಹಿದ್ದೀನ್‌ಗಿಂತ I.N.D.I.A ಹೇಗೆ ಭಿನ್ನವಾಗಿದೆ? ಎಂದು ಸಂಸದ ತೇಜಸ್ವಿ ಸೂರ್ಯ ಟ್ವೀಟ್‌ ಮೂಲಕ ಪ್ರಶ್ನೆ ಮಾಡಿದ್ದಾರೆ.

“ಬೆಂಗಳೂರು ನಗರದಲ್ಲಿ ಐವರು ಶಂಕಿತ ಭಯೋತ್ಪಾದಕರನ್ನು ಬೆಂಗಳೂರು ಪೊಲೀಸರು ಬಂಧಿಸಿದ ಒಂದು ವಾರದೊಳಗೆ, ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪ್ರಕರಣದಲ್ಲಿ ಪೊಲೀಸ್ ಠಾಣೆ ಮತ್ತು ಕಾಂಗ್ರೆಸ್ ದಲಿತ ಶಾಸಕರ ಮನೆಗೆ ಬೆಂಕಿ ಹಚ್ಚಿದ ಭಯೋತ್ಪಾದಕರ ವಿರುದ್ಧದ ಪ್ರಕರಣಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಕೈಬಿಡುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೊದಲ ಆವೃತ್ತಿಯಲ್ಲಿ, ಪಿಎಫ್ಐ ಮತ್ತು ಕೆಎಫ್‌ಡಿ ಕಾರ್ಯಕರ್ತರ 1700ಕ್ಕೂ ಹೆಚ್ಚು ಪ್ರಕರಣಗಳನ್ನು ಕೈಬಿಡಲಾಯಿತು. ಇದು ರಾಜ್ಯದಲ್ಲಿ ಕೊಲೆಗಳು ಮತ್ತು ಸ್ಲೀಪರ್ ಸೆಲ್‌ಗಳ ಅಣಬೆಗಳಿಗೆ ಕಾರಣವಾಯಿತು. ಇಂಡಿಯನ್ ಮುಜಾಹಿದ್ದೀನ್‌ಗಿಂತ ಐ.ಎನ್.ಡಿ.ಐ.ಎ (I.N.D.I.A) ಹೇಗೆ ಭಿನ್ನವಾಗಿದೆ?” ಎಂದು ಸಂಸದ ತೇಜಸ್ವಿ ಸೂರ್ಯ ಟ್ವೀಟ್‌ ಮಾಡಿ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: Grama Panchayat Election : ಮತ್ತೆ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ ಪುತ್ತಿಲ ಪರಿವಾರ!

ಕೇಸ್‌ ವಾಪಸ್ ಸರಿಯಲ್ಲ: ಬೊಮ್ಮಾಯಿ‌ ಖಂಡನೆ

ಡಿಜೆ ಹಳ್ಳಿ, ಕೆಜಿ ಹಳ್ಳಿ ಕೇಸ್ ಬಹಳ ಗಂಭೀರದ್ದಾಗಿದೆ. ಪೊಲೀಸ್ ಠಾಣೆ ಹಾಗೂ ಶಾಸಕರೊಬ್ಬರ ಮನೆಯನ್ನು ಸುಟ್ಟಿದ್ದಾರೆ. ಇಂಥ ಕೇಸ್‌ಗಳನ್ನು ವಾಪಸ್ ಪಡೆಯಲು ಮುಂದಾಗಿರುವುದು ಸರಿಯಲ್ಲ. ಇವರೆಲ್ಲ ರಾಜ್ಯದ ವಿರುದ್ಧ ದಂಗೆ ಎದ್ದವರು. ಇಂಥ ದುಷ್ಟ ಶಕ್ತಿಗಳಿಗೆ ಸರ್ಕಾರ ಕುಮ್ಮಕ್ಕು ಕೊಡಬಾರದು. ಸರ್ಕಾರ ಯಾವುದೇ ಕಾರಣಕ್ಕೂ ಒತ್ತಡಕ್ಕೆ ಮಣಿಯಬಾರದು. ಹೊರದೇಶಗಳ ಶಕ್ತಿಗಳ ಕುಮ್ಮಕ್ಕಿನಿಂದ ಇಂತಹ ಕೃತ್ಯಗಳು ನಡೀತಿವೆ. ಸಿಎಂಗೂ ಈ ಥರದ ಕೇಸ್‌ಗಳ ವಾಪಸಾತಿಗೆ ಮನವಿ ಕೊಟ್ಟಿದ್ದಾರೆ ಎಂದು ಕೇಳಿಬಂದಿದೆ. ಸಿಎಂ ಇದರ ಬಗ್ಗೆ ಸ್ಪಷ್ಟನೆ ಕೊಡಬೇಕು. ವಿದ್ರೋಹಿ ಶಕ್ತಿಗಳ ಪರ ಸರ್ಕಾರ ನಿಲ್ಲಬಾರದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Exit mobile version