Site icon Vistara News

ಇಸ್ರೋ ವಿಜ್ಞಾನಿಗೆ ಫ್ರಾನ್ಸ್‌ನ ನಾಗರಿಕ ಪ್ರಶಸ್ತಿ ಪ್ರದಾನ! ಈ ಅವಾರ್ಡ್ ಆರಂಭಿಸಿದ್ದು ಯಾರು?

ISRO Scientist conferred french civilian award

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO)ಯ ಮಾನವ ಬಾಹ್ಯಾಕಾಶ ಯಾನ ಕಾರ್ಯಕ್ರಮದ (Human Spaceflight Programme) ನಿರ್ದೇಶನಾಲಯದ ನಿರ್ದೇಶಕಿ ಡಾ. ವಿ ಆರ್ ಲಲಿತಾಂಬಿಕಾ (ISRO Scientist Dr VR Lalithambika) ಅವರು ಫ್ರಾನ್ಸ್‌ನ ಅತ್ಯುತ್ತ ನಾಗರಿಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ(French civilian award). ಫ್ರಾನ್ಸ್ ಮತ್ತು ಭಾರತದ ನಡುವಿನ ಬಾಹ್ಯಾಕಾಶ ಸಹಕಾರದಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಫ್ರಾನ್ಸ್ ಸರ್ಕಾರ ಉನ್ನತ ನಾಗರಿಕ ಪ್ರಶಸ್ತಿಯಾದ ಲೀಜನ್ ಆಫ್ ಆನರ್ (Legion of Honour) ಗೌರವವನ್ನು ಲಲಿತಾಂಬಿಕಾ ಅವರಿಗೆ ನೀಡಲಾಗಿದೆ. ಭಾರತದಲ್ಲಿರುವ ಫ್ರಾನ್ಸ್ ರಾಯಭಾರಿ ಥಿಯೆರಿ ಮ್ಯಾಥೌ (Thierry Mathou) ಅವರು ಮಂಗಳವಾರ ಪ್ರಶಸ್ತಿ ಪ್ರದಾನ ಮಾಡಿದರು.

1802ರಲ್ಲಿ ನೆಪೋಲಿಯನ್ ಬೊನಪಾರ್ಟೆ ಸ್ಥಾಪಿಸಿದ ಪ್ರಶಸ್ತಿಯನ್ನು, ಫ್ರಾನ್ಸ್‌ಗೆ ಅತ್ಯುತ್ತಮ ಸೇವೆ ನೀಡುವ ಜನರಿಗೆ, ಅವರ ರಾಷ್ಟ್ರೀಯತೆಯನ್ನು ಲೆಕ್ಕಿಸದೇ ನೀಡಲಾಗುತ್ತದೆ. ಇದು ಫ್ರೆಂಚ್ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ಸುಧಾರಿತ ಉಡಾವಣಾ ವಾಹನ ತಂತ್ರಜ್ಞಾನದಲ್ಲಿ ಪರಿಣಿತರಾದ ಇಸ್ರೋದ ಖ್ಯಾತ ವಿಜ್ಞಾನಿ ಲಲಿತಾಂಬಿಕಾ ಅವರು ವಿವಿಧ ಇಸ್ರೋ ರಾಕೆಟ್‌ಗಳಲ್ಲಿ ವಿಶೇಷವಾಗಿ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಮೇಲೆ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ ಎಂದು ಭಾರತದಲ್ಲಿನ ಫ್ರಾನ್ಸ್ ಸರ್ಕಾರವು ತಿಳಿಸಿದೆ.

2018 ರಲ್ಲಿ ಮಾನವ ಬಾಹ್ಯಾಕಾಶ ಯಾನ ಕಾರ್ಯಕ್ರಮದ ನಿರ್ದೇಶಕಿಯಾಗಿ ಅವರು ಭಾರತದ ಗಗನಯಾನ ಯೋಜನೆಗಾಗಿ ಫ್ರೆಂಚ್ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ (ಸೆಂಟರ್ ನ್ಯಾಶನಲ್ ಡಿ’ಟ್ಯೂಡ್ಸ್ ಸ್ಪಾಟಿಯಲ್ )ಯೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದಾರೆ.

ಮಾನವ ಬಾಹ್ಯಾಕಾಶಯಾನಕ್ಕೆ ಸಂಬಂಧಿಸಿದಂತೆ ಫ್ರಾನ್ಸ್ ಬಾಹ್ಯಾಕಾಶ ಸಂಸ್ಥೆ ಮತ್ತು ಇಸ್ರೋ ನಡುವಿನ ಸಹಕಾರಕ್ಕಾಗಿ ಮೊದಲ ಜಂಟಿ ಒಪ್ಪಂದಕ್ಕೆ ಸಹಿ ಹಾಕುವಲ್ಲಿ ಲಲಿತಾಂಬಿಕಾ ಪ್ರಮುಖ ಪಾತ್ರ ವಹಿಸಿದರು. ಅದರ ಅಡಿಯಲ್ಲಿ ಉಭಯ ರಾಷ್ಟ್ರಗಳು ಬಾಹ್ಯಾಕಾಶ ಔಷಧದಲ್ಲಿ ಕೆಲಸ ಮಾಡಲು ತಜ್ಞರನ್ನು ವಿನಿಮಯ ಮಾಡಿಕೊಳ್ಳಲು ಸಾಧ್ಯವಾಯಿತು.

2021ರಲ್ಲಿ ಮಾಜಿ ಫ್ರೆಂಚ್ ವಿದೇಶಾಂಗ ವ್ಯವಹಾರಗಳ ಸಚಿವರ ಬೆಂಗಳೂರಿನ ಇಸ್ರೋ ಭೇಟಿ ಸಂದರ್ಭದಲ್ಲಿ ಭಾರತೀಯ ಗಗನಯಾತ್ರಿ ಕಾರ್ಯಕ್ರಮದ ಕುರಿತು ಫ್ರಾನ್ಸ್ ಮತ್ತು ಭಾರತದ ನಡುವೆ ಎರಡನೇ ಒಪ್ಪಂದಕ್ಕೆ ಸಹಿ ಹಾಕಲು ಲಲಿತಾಂಬಿಕಾ ಅವರು ಪ್ರಮುಖ ಪಾತ್ರ ನಿರ್ವಹಿಸಿದರು.

ಈ ಒಪ್ಪಂದದ ಅನ್ವಯ ಫ್ರೆಂಚ್ ಬಾಹ್ಯಾಕಾಶ ಸಂಸ್ಥೆಯು ಟೌಲೌಸ್‌ನಲ್ಲಿರುವ ಸಿಎನ್ಇಎಸ್ ಮತ್ತು ಜರ್ಮನಿಯ ಕಲೋನ್‌ನಲ್ಲಿರುವ ಯುರೋಪಿಯನ್ ಆಸ್ಟ್ರೋನಾಟ್ ಸೆಂಟರ್‌ನಲ್ಲಿ ಮೈಕ್ರೋಗ್ರಾವಿಟಿ ಅಪ್ಲಿಕೇಶನ್‌ಗಳು ಮತ್ತು ಬಾಹ್ಯಾಕಾಶ ಕಾರ್ಯಾಚರಣೆಗಳ ಅಭಿವೃದ್ಧಿಗಾಗಿ ಸಿಎಡಿಎಂಒಎಸ್ ಕೇಂದ್ರದಲ್ಲಿ ಫ್ರಾನ್ಸ್‌ನಲ್ಲಿರುವ ಭಾರತದ ವಿಮಾನ ವೈದ್ಯರು ಮತ್ತು ಸಿಎಪಿಸಿಒಎಂ ಮಿಷನ್ ನಿಯಂತ್ರಣ ತಂಡಗಳಿಗೆ ತರಬೇತಿ ನೀಡಲಾಗುತ್ತದೆ.

ಡಾ. ವಿಆರ್ ಲಲಿತಾಂಬಿಕಾ ಅವರಿಗೆ ಲೀಜನ್ ಆಫ್ ಆನರ್ ಪ್ರಶಸ್ತಿ ಪ್ರದಾನ ಮಾಡುವುದಕ್ಕೆ ನನಗೆ ಅತೀವ ಸಂತೋಷವಾಗುತ್ತಿದೆ. ಅವರ ಪರಿಣತಿ, ಸಾಧನೆಗಳು ಮತ್ತು ದಣಿವರಿಯದ ಪ್ರಯತ್ನಗಳು ಹೊಸದನ್ನು ಬರೆದಿವೆ. ಇಂಡೋ-ಫ್ರೆಂಚ್ ಬಾಹ್ಯಾಕಾಶ ಪಾಲುದಾರಿಕೆಯ ಸುದೀರ್ಘ ಇತಿಹಾಸದಲ್ಲಿ ಮಹತ್ವಾಕಾಂಕ್ಷೆಯ ಅಧ್ಯಾಯವಾಗಿ ಉಳಿದಿದೆ ಎಂದು ಪ್ರಶಸ್ತಿ ಪ್ರದಾನ ಮಾಡಿದ ಫ್ರೆಂಚ್ ರಾಯಭಾರಿ ಮ್ಯಾಥೌ ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Robotics Challenge: ಇಸ್ರೋದಿಂದ ವಿದ್ಯಾರ್ಥಿಗಳಿಗೆ ರೊಬೋಟಿಕ್ಸ್ ಚಾಲೆಂಜ್; ಗೆದ್ದವರಿಗೆ 5 ಲಕ್ಷ ರೂ.

Exit mobile version