ತುಮಕೂರು: ಟಿಪ್ಪು ಸುಲ್ತಾನ್‌ನನ್ನು (Tipu Sultan) ಕೊಂದಿರುವ ವಿಚಾರವಾಗಿ ಶುರುವಾಗಿರುವ ಚರ್ಚೆ ರಾಜಕೀಯ ಬಣ್ಣ ಪಡೆದುಕೊಂಡಿದೆ. ಮೂರೂ ರಾಜಕೀಯ ಪಕ್ಷಗಳು ವಾದ-ಪ್ರತಿವಾದದಲ್ಲಿ ತೊಡಗಿವೆ. ಈಗ ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ನನ್ನನ್ನು ನಂಜೇಗೌಡರಿಗೆ ಹೋಲಿಕೆ ಮಾಡಿರುವುದು ಹೆಮ್ಮೆಯ ವಿಚಾರ. ದೊಡ್ಡ ನಂಜೇಗೌಡರು ಮೈಸೂರು ಸಂಸ್ಥಾನಕ್ಕೆ ನಿಷ್ಠರಾಗಿದ್ದವರು. ಆದಿಚುಂಚನಗಿರಿ ಶ್ರೀ ನಿರ್ಮಲನಾನಂದ ಸ್ವಾಮೀಜಿ ಅವರಿಗೆ ಅಗೌರವವಾಗಿ ನಡೆದುಕೊಂಡವರು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ. ಅವರು ಶ್ರೀಗಳ ಕ್ಷಮೆಯಾಚನೆ ಮಾಡಬೇಕು ಎಂದು ಹೇಳಿದ್ದಾರೆ.
ತುರುವೇಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉರಿಗೌಡ, ನಂಜೇಗೌಡರ ಕುರಿತ ದಾಖಲೆಗಳನ್ನು ಸಂಗ್ರಹಿಸುವ ಕೆಲಸವನ್ನು ಮಾಡುತ್ತಿದ್ದೇವೆ. ನಿರ್ಮಲಾನಂದ ಸ್ವಾಮೀಜಿಯವರಿಗೆ ವಾಸ್ತವ ಅಂಶವನ್ನು ಮನವರಿಕೆ ಮಾಡಲಾಗುವುದು. ಈ ಬಗ್ಗೆ ಸಿನಿಮಾ ಮಾಡುವ ವಿಚಾರ ನಮಗೆ ಸಂಬಂಧಪಟ್ಟಿದ್ದಲ, ನಾನು ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದರು.
ಉರಿಗೌಡ, ನಂಜೇಗೌಡ ಪಾತ್ರ ಕಾಲ್ಪನಿಕ ಎಂದವರು ಕ್ಷಮೆಯಾಚನೆ ಮಾಡಬೇಕು. ಈಗ ಟಿಪ್ಪುವನ್ನು ಕೊಂದಿದ್ದಕ್ಕೆ ದಾಖಲೆ ಇದೆಯಾ ಎಂಬ ಹೊಸ ವರಸೆ ಶುರು ಮಾಡಿದ್ದಾರೆ. ಸ್ವಾಮೀಜಿಯವರು ನನ್ನ ಜತೆ ಮಾತಾಡಿದ್ದಾರೆ. ಸ್ವಾಮೀಜಿಗಳಿಗೆ ಗೌರವ ಕೊಡಬೇಕು. ಉರಿಗೌಡ, ದೊಡ್ಡ ನಂಜೇಗೌಡ ಮೈಸೂರು ಸಂಸ್ಥಾನಕ್ಕೆ ನಿಷ್ಠರಾಗಿದ್ದರು. ಅಕ್ಬರ್ ದಿ ಗ್ರೇಟ್ ಎಂದು ನಮ್ಮ ಮಕ್ಕಳಿಗೆ ಹೇಳಿಕೊಡಲಾಗಿದೆ. ನಮ್ಮ ಮಕ್ಕಳಿಗೆ ರಾಣಾಪ್ರತಾಪ್ ಗ್ರೇಟ್ ಎಂದು ಹೇಳಿ ಕೊಡಲೇ ಇಲ್ಲ. ಟಿಪ್ಪು ಕುರಿತಂತೆ ಹಲವು ವಿಚಾರಗಳು ಚರ್ಚೆ ಆಗಬೇಕು. ನಾವು ಆ ಚರ್ಚೆಯನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್ ಗುಂಡೂರಾವ್? ಸೀರೆ ನೀಡಿ ಮಹಿಳೆಯರ ಕಿಡಿ
ಶೋಧನೆಯಿಂದ ಸತ್ಯ ಹೊರಬರಲಿದೆ: ಬೊಮ್ಮಾಯಿ
ಹುಬ್ಬಳ್ಳಿ: ʻʻಉರಿಗೌಡ, ನಂಜೇಗೌಡ ಪ್ರಕರಣದಲ್ಲಿ ಬಿಜೆಪಿಗೆ ಹಿನ್ನಡೆಯಾಗುವ ಪ್ರಶ್ನೆಯೇ ಇಲ್ಲ. ಸತ್ಯ ಸಂಶೋಧನೆಯಾಗಿ ಸತ್ಯ ಹೊರಗೆ ಬಂದಾಗ ಜಯ ದೊರೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಲವಾರು ಐತಿಹಾಸಿಕ ಸತ್ಯಗಳನ್ನು ಮರೆಮಾಚಲಾಗಿದೆ. ಇತಿಹಾಸವನ್ನು ಭಾರತ ಹಾಗೂ ಕರ್ನಾಟಕದಲ್ಲಿ ತಿರುಚುವ ಕೆಲಸವಾಗಿದೆ. ಆ ಸಂದರ್ಭದಲ್ಲಿ ಯಾರು ಪ್ರಮುಖ ಪಾತ್ರ ವಹಿಸಿದ್ದರು ಎನ್ನುವುದು ಜಗಜ್ಜಾಹೀರಾಗಿದೆ. ಸತ್ಯವನ್ನು ಹೇಳಿದರೆ ಇವರಿಗೆ ತಡೆಯಲು ಆಗುವುದಿಲ್ಲ ಎಂದು ಹೇಳಿದರು.
ಮಂಡ್ಯದ ಮಳವಳ್ಳಿಯ ಅವಳಿ ವೀರರಾದ ಉರಿಗೌಡ ಮತ್ತು ನಂಜೇಗೌಡರೇ ಟಿಪ್ಪು ಸುಲ್ತಾನ್‌ನನ್ನು ಕೊಂದವರು ಎಂಬ ವಾದವನ್ನು ಬಿಜೆಪಿ ಮುಂದಿಟ್ಟಿತ್ತು. ಅದಕ್ಕೆ ಸಂಬಂಧಿಸಿ ಕೆಲವೊಂದು ದಾಖಲೆಗಳನ್ನು ಹುಡುಕಲು ಶುರು ಮಾಡಿತ್ತು. ಈ ನಡುವೆ, ಇದು ಒಕ್ಕಲಿಗರನ್ನು ಬಿಜೆಪಿ ಕಡೆಗೆ ಸೆಳೆಯುವ ರಾಜಕಾರಣ ಎಂಬ ಆಪಾದನೆಗಳು ಕೇಳಿಬಂದವು. ಅದರ ನಡುವೆ, ಸಚಿವ ಮುನಿರತ್ನ ಅವರು ಉರಿಗೌಡ, ನಂಜೇಗೌಡ ಎಂಬ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು.
ಇದನ್ನೂ ಓದಿ: V Somanna: ಚಾಮರಾಜನಗರ ಚುನಾವಣೆ ಉಸ್ತುವಾರಿಗೆ ಸೋಮಣ್ಣ ಬೇಡ, ವಿಜಯೇಂದ್ರ ಓಕೆ: ಬಿಜೆಪಿಯಲ್ಲಿ ಆಕ್ರೋಶ
ಇದೆಲ್ಲದರ ನಡುವೆ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ನಿರ್ಮಲಾನಂದ ನಾಥ ಶ್ರೀಗಳು, ಇಂಥ ಗೊಂದಲಕಾರಿ ಮಾಹಿತಿಗಳನ್ನು ಯಾರೂ ನೀಡಬಾರದು ಎಂದು ಕಟ್ಟಾಜ್ಞೆ ಮಾಡಿದ್ದರು. ಅವರ ಈ ಮಾತಿನ ಬಳಿಕ ಎಲ್ಲ ನಾಯಕರು ಮೌನಕ್ಕೆ ಜಾರಿದ್ದಾರೆ. ಈ ಪ್ರಕರಣ ಒಟ್ಟಾರೆಯಾಗಿ ಬಿಜೆಪಿಗೆ ಹಿನ್ನಡೆ ಎಂದು ವ್ಯಾಖ್ಯಾನಿಸಲಾಗಿತ್ತು. ಇದಕ್ಕೆ ಈಗ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.