ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ನಾಳೆಯೇ (ಜೂ.೧೬) ಪ್ರಕಟವಾಗಲಿದೆ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದೆ. ಆದರೆ ಪಿಯುಸಿ ಫಲಿತಾಂಶ ನಾಳೆ ಪ್ರಕಟವಾಗುವುದಿಲ್ಲ. ವಿದ್ಯಾರ್ಥಿಗಳು ಊಹಾಪೋಹಕ್ಕೆ ಒಳಗಾಗಬಾರದು. ಯಾರೋ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಫೋನ್ ಕರೆ ಮೂಲಕ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ | ಪರೀಕ್ಷೆಗಿಂತ ಹಿಜಾಬ್ ಮುಖ್ಯವೆಂದ ವಿದ್ಯಾರ್ಥಿನಿಯರು: ದ್ವಿತೀಯ ಪಿಯು ಪರೀಕ್ಷೆಗೆ ಗೈರು
ʼʼಜೂನ್ ಕೊನೆಯ ವಾರದಲ್ಲಿ ಫಲಿತಾಂಶ ಪ್ರಕಟವಾಗಲಿದ್ದು, ಮುಂಚಿತವಾಗಿಯೇ ವಿದ್ಯಾರ್ಥಿಗಳಿಗೆ ನಾನೇ ಮಾಹಿತಿ ನೀಡುತ್ತೇನೆ. ವಿದ್ಯಾರ್ಥಿಗಳಿಗೆ ಅವರು ನೋಂದಾಯಿಸಿರುವ ಮೊಬೈಲ್ ನಂಬರ್ ಗೆ ಫಲಿತಾಂಶ ಸಿಗಲಿದೆʼʼ ಎಂದು ಸಚಿವರು ಹೇಳಿದರು.
ʼʼರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಏಪ್ರಿಲ್ 22ರಿಂದ ಶುರುವಾಗಿ ಮೇ 18ರವರೆಗೂ ನಡೆದಿತ್ತು. 2021-22ನೇ ಸಾಲಿನಲ್ಲಿ ಒಟ್ಟು 6,84,255 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದರು. ಇದರಲ್ಲಿ ಬಾಲಕರು 3,46,936, ಬಾಲಕಿಯರು 3,37,319 ಇದ್ದರೆ, ರೆಗ್ಯುಲರ್ ವಿದ್ಯಾರ್ಥಿಗಳು 600519, ಪುನರಾವರ್ತಿತ ವಿದ್ಯಾರ್ಥಿಗಳು 61808, ಖಾಸಗಿ ವಿದ್ಯಾರ್ಥಿಗಳು 21928 ಮಂದಿ ಪರೀಕ್ಷೆ ಬರೆದಿದ್ದರು.
ರಾಜ್ಯಾದ್ಯಂತ ಒಟ್ಟು 1076 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದ್ದ ಪರೀಕ್ಷೆಯ ಮೌಲ್ಯಮಾಪನ ಕಾರ್ಯವೂ ಮೇ ಕೊನೆಯ ವಾರ ಆರಂಭವಾಗಿ ಸದ್ಯ ಮೌಲ್ಯಮಾಪನ ಕಾರ್ಯವೆಲ್ಲ ಮುಗಿದಿದೆ. ಸದ್ಯ ಪಿಯು ಬೋರ್ಡ್ ಅಂತಿಮ ಹಂತದ ತಯಾರಿ ನಡೆಸುತ್ತಿದ್ದು, ಜೂನ್ ನಾಲ್ಕನೇ ವಾರದಲ್ಲಿ ಫಲಿತಾಂಶ ಪ್ರಕಟಿಸುವ ಗುರಿ ಹೊಂದಿದೆ.
ದ್ವಿತೀಯ ಪಿಯುಸಿ ಫಲಿತಾಂಶ ವಿಳಂಬಕ್ಕೆ ಏನು ಕಾರಣ?
ಮೇ ಕೊನೆಯ ವಾರದಲ್ಲಿ ಶುರುವಾದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ 2 ವಾರಗಳು ಕಳೆದರೂ ಮುಗಿದಿಲ್ಲ. ಹಾಗಾಗಿ ಫಲಿತಾಂಶ ಪ್ರಕಟ ತಡವಾಗುತ್ತಿದೆ. ಸಾಲುಸಾಲು ರಜೆಗಳು ಮತ್ತು ಸರಿಯಾದ ಸಮಯಕ್ಕೆ ಮೌಲ್ಯಮಾಪಕರು ಬಾರದೇ ಇರುವುದೇ ಫಲಿತಾಂಶ ಪ್ರಕಟಕ್ಕೆ ವಿಳಂಬ ಎಂಬ ಮಾತುಗಳು ಕೇಳಿ ಬಂದಿದೆ.
ಇದನ್ನೂ ಓದಿ | 2nd PU Exam: ಪಿಯುಸಿ ಪರೀಕ್ಷೆಗೂ ಹಿಜಾಬ್ ಧರಿಸುವಂತಿಲ್ಲ: ಶಿಕ್ಷಣ ಸಚಿವರ ಸ್ಪಷ್ಟನೆ