Site icon Vistara News

ಕನ್ನಡ ಅಭಿವೃದ್ಧಿ ವಿಧೇಯಕ ಜಾರಿಯಲ್ಲಿ ಕಸಾಪ ಅಧ್ಯಕ್ಷರನ್ನು ಕೈಬಿಟ್ಟಿರುವುದು ಸರಿಯಲ್ಲ: ಮಹೇಶ ಜೋಶಿ

ಮಹೇಶ ಜೋಶಿ

ಬೆಂಗಳೂರು: “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨”ರ ಜಾರಿಯಲ್ಲಿ ಪ್ರಾಧಿಕಾರದ, ರಾಜ್ಯಮಟ್ಟದ ಹಾಗೂ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯ ಹಾಗೂ ಜಿಲ್ಲಾ ಘಟಕಗಳ ಅಧ್ಯಕ್ಷರನ್ನು ಕೈಬಿಟ್ಟಿರುವುದು ಸರಿಯಲ್ಲ. ಈ ವಿಧೇಯಕದಲ್ಲಿ ಈ ಎಲ್ಲರನ್ನು ಮತ್ತೆ ಸೇರ್ಪಡೆಗೊಳಿಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಒತ್ತಾಯಿಸಿದ್ದಾರೆ.

ಈ ಬಗ್ಗೆ ಪತ್ರ ಬರೆದಿರುವ ಅವರು, ನ್ಯಾಯಮೂರ್ತಿ ಎಸ್.ಆರ್. ಬನ್ನೂರಮಠ ಅವರ ನೇತೃತ್ವದ ಕರ್ನಾಟಕ ಕಾನೂನು ಆಯೋಗವು ತನ್ನ ೫೭ನೇ ವರದಿಯಲ್ಲಿ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨” ಅನ್ನು ಸರ್ಕಾರಕ್ಕೆ ಸಲ್ಲಿಸಿ, ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗಾಗಿ ಮತ್ತು ಕನ್ನಡಿಗರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಉತ್ತಮ ಅವಕಾಶಗಳನ್ನು ಒದಗಿಸುವುದಕ್ಕಾಗಿ ಉಪಬಂಧ ಕಲ್ಪಿಸುವ ಒಂದು ವಿಧೇಯಕ ಎಂದು ಸ್ಪಷ್ಟವಾಗಿ ನಮೂದಿಸಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | JDS ಪಕ್ಷದ ಕೆಲಸವನ್ನು ನಿರ್ಲಕ್ಷ್ಯ ಮಾಡುವ ಪದಾಧಿಕಾರಿಗಳಿಗೆ ಕುಮಾರಸ್ವಾಮಿ ಎಚ್ಚರಿಕೆ

ಕರ್ನಾಟಕ ಕಾನೂನು ಆಯೋಗವು ಸರ್ಕಾರಕ್ಕೆ ಸಲ್ಲಿಸಿದ್ದ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨”ರ ಕಲಂ-೭ರಲ್ಲಿ ‘ಅಧಿಕೃತ ಭಾಷೆಯ ಅನುಷ್ಠಾನಕ್ಕಾಗಿ ಕಾರ್ಯವ್ಯವಸ್ಥೆ’ ಶೀರ್ಷಿಕೆಯಡಿಯಲ್ಲಿ ಒಂದು ರಾಜ್ಯಮಟ್ಟದ ಸಮಿತಿ ಇರತಕ್ಕದ್ದು ಎಂದು ಉಲ್ಲೇಖಿಸಿ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರನ್ನು ರಾಜ್ಯಮಟ್ಟದ ಸಮಿತಿಯ ಸದಸ್ಯರನ್ನಾಗಿಯೂ ಹಾಗೂ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರನ್ನು ‘ಜಿಲ್ಲಾ ಮಟ್ಟದ ಸದಸ್ಯರಾಗಿ ಸೇರ್ಪಡಿಸಿ, ವಿಧೇಯಕ ಜಾರಿಗೆ ತರಲು ಮುಂದಿನ ಕ್ರಮಕ್ಕಾಗಿ ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ ಸೆ.೨೨ರಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಅವರು ಅಧಿವೇಶನದಲ್ಲಿ ಮಂಡಿಸಿದಾಗ, ರಾಜ್ಯಮಟ್ಟದ ಸಮಿತಿಯಲ್ಲಿ ಅಧ್ಯಕ್ಷರನ್ನು ಹಾಗೂ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರನ್ನು ಜಾರಿ ಪ್ರಾಧಿಕಾರದಿಂದ ಕೈಬಿಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಸರ್ಕಾರದ ಈ ಕ್ರಮ ಸಮಗ್ರ ಕನ್ನಡಿಗರ ಏಕೈಕ ಪ್ರಾತಿನಿಧಿಕ ಹಾಗೂ ಎಲ್ಲ ಕನ್ನಡ ಸಂಘ-ಸಂಸ್ಥೆಗಳ ಮಾತೃ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸಮಸ್ತ ಕನ್ನಡಿಗರಿಗೆ ಮಾಡಿರುವ ಘೋರ ಅನ್ಯಾಯ ಮತ್ತು ಅಕ್ಷಮ್ಯ ಅಪರಾಧವಾಗಿದೆ. ಇದು ಕನ್ನಡ ವಿರೋಧಿಗಳ ಕುತಂತ್ರ ಹಾಗೂ ಕನ್ನಡಿಗರನ್ನು ಪ್ರತಿನಿಧಿಸುವ ಕನ್ನಡ ಸಾಹಿತ್ಯ ಪರಿಷತ್‌ಗೆ ಮಾತ್ರವಲ್ಲ, ಎಲ್ಲ ಕನ್ನಡಿಗರಿಗೆ ತೋರುತ್ತಿರುವ ಅಸಡ್ಡೆ, ಅಸಹನೆ, ತಾತ್ಸಾರ ಹಾಗೂ ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್‌ ಅನ್ನು ಈ ವಿಧೇಯಕದಿಂದ ಕೈಬಿಡುವ ಮೂಲಕ ಸರ್ಕಾರವು ಕನ್ನಡ ವಿರೋಧಿ ಧೋರಣೆ ತೋರುತ್ತಿದೆ ಎಂದು ಸಮಗ್ರ ಕನ್ನಡಿಗರು ಅದರಲ್ಲೂ, ಸಾಹಿತಿಗಳು, ಸಂಘಟಕರು, ಕನ್ನಡಪರ ಹೋರಾಟಗಾರರು ಖಂಡಿಸುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ತವರು ಜಿಲ್ಲೆ ಹಾವೇರಿಯಲ್ಲಿ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗುತ್ತಿದ್ದು, ಸಮ್ಮೇಳನದ ಸಂದರ್ಭದಲ್ಲಿ ಈ ವಿಚಾರವನ್ನೇ ಮುಂದಿಟ್ಟುಕೊಂಡು ಪ್ರತಿಭಟನೆ, ಘೋಷಣೆ ಮುಂತಾದ ಅಹಿತಕರ ಘಟನೆಗಳು ನಡೆಯುವ ಎಲ್ಲ ಸಾಧ್ಯತೆಗಳು ಹೆಚ್ಚಾಗುವಂತೆ ಕಾಣುತ್ತಿವೆ. ಹೀಗಾಗಿ ವಿಧೇಯಕ ಜಾರಿಯಲಿ ಕೈಬಿಟ್ಟಿರುವ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳನ್ನು ಮತ್ತೆ ಸೇರ್ಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ | ಅರ್ಕಾವತಿ ಡಿನೋಟಿಫಿಕೇಷನ್‌ ಪ್ರಕರಣದಲ್ಲಿ ಸಿದ್ದರಾಮಯ್ಯ ಜೈಲು ಸೇರಲಿದ್ದಾರೆ: ನಳಿನ್‌ ಕುಮಾರ್ ಕಟೀಲ್‌

His Masters Voice (HMV) ಅಂದರೆ, ಸರ್ಕಾರದ ಧ್ವನಿಯಾಗುವುದೇ ಹೊರತು, ಕನ್ನಡದ ಧ್ವನಿಯಾಗುವುದಿಲ್ಲ. ಜತೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ಸಮಿತಿಯ ಉಪಾಧ್ಯಕ್ಷರನ್ನಾಗಿಸಿ, ಸಚಿವ ಸ್ಥಾನಮಾನ ಹೊಂದಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ಸಮಿತಿಗೆ ಕೇವಲ ಸದಸ್ಯರನ್ನಾಗಿಸಿರುವುದು ಕನ್ನಡಿಗರಿಗೆ ಮಾಡಿದ ಅವಮಾನವಾಗಿದೆ ಹಾಗೂ ಅಧಿಕಾರಶಾಹಿ ಧೋರಣೆಯಿಂದ ಸರ್ಕಾರವನ್ನು ಶರಣಾಗತಿ ಮಾಡುವಂತೆ ಕಂಡುಬರುತ್ತಿರುವುದು, ಕನ್ನಡವನ್ನು ವ್ಯವಸ್ಥಿತವಾಗಿ ಹತ್ತಿಕ್ಕಲು ಅಧಿಕಾರಿಗಳು ಸರ್ಕಾರವನ್ನು ತಪ್ಪು ದಾರಿಗೆ ಎಳೆದು ತರುವ ಕುತಂತ್ರವಾಗಿದೆ. ವಿಧೇಯಕದಿಂದ ಕನ್ನಡದ ಅಸ್ಮಿತೆಯ ಪ್ರತೀಕವಾಗಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಹೊರಗಿಟ್ಟಿರುವುದು ಚಳವಳಿಯ ರೂಪದಲ್ಲೂ ಸಹ ಹೊರಹೊಮ್ಮುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಪರಿಸ್ಥಿತಿ ಕೈ ಮೀರಿ ಹೋಗುವುದಕ್ಕಿಂತ ಮುಂಚೆ ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಕ್ರಮಕೈಗೊಳ್ಳಬೇಕು. ಕನ್ನಡ ಭಾಷೆಯ ಅಭಿವೃದ್ಧಿ ಕುರಿತು ಆಳವಾಗಿ ಅಧ್ಯಯನ ನಡೆಸಿ, ಚರ್ಚಿಸಿ, ಸಿದ್ಧಪಡಿಸಲಾದ ಈ ವಿಧೇಯಕವನ್ನು ಜಾರಿ ಮಾಡಲೇಬೇಕಾದ ಅನಿವಾರ್ಯತೆ ಸರ್ಕಾರಕ್ಕೆ ಇದೆ. ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ಜರುಗಲಿರುವ ಅಧಿವೇಶನದಲ್ಲಿ ವಿಧೇಯಕವನ್ನು ಸರ್ಕಾರ ಜಾರಿಗೊಳಿಸಬೇಕು ಎಂದು ಸಮಸ್ತ ಕನ್ನಡಿಗರ ಪರವಾಗಿ ಕನ್ನಡ ಸಾಹಿತ್ಯ ಪರಿಷತ್ತು ಆಗ್ರಹಪೂರ್ವಕವಾಗಿ ಒತ್ತಾಯಿಸುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಅ.೧೨ ರಂದು ಚಿಂತನಾ ಗೋಷ್ಠಿ
ಅ.೧೨ ರಂದು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ ಕುರಿತಂತೆ “ಚಿಂತನಾ ಗೋಷ್ಠಿ”ಯನ್ನು ಪರಿಷತ್ತು ಏರ್ಪಡಿಸಿದ್ದು, ಸಾಹಿತ್ಯ, ಶಿಕ್ಷಣ, ಉದ್ಯೋಗ, ಕೈಗಾರಿಕಾ, ನ್ಯಾಯಾಂಗ ಸೇರಿದಂತೆ ಪ್ರಮುಖ ಕ್ಷೇತ್ರಗಳ ಪರಿಣತರನ್ನು ಈ ಗೋಷ್ಠಿಗೆ ಆಹ್ವಾನ ಮಾಡಿದ್ದೇವೆ. ಅಂದು ಸಭೆಯಲ್ಲಿ ಚರ್ಚೆಯಾದ ನಂತರ, ಕೈಗೊಂಡ ಮಹತ್ವದ ನಿರ್ಣಯಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಮಹೇಶ ಜೋಶಿ ತಿಳಿಸಿದ್ದಾರೆ.

ಇದನ್ನೂ ಓದಿ | ರಾಜಕೀಯದ ಆಟ ಬಿಟ್ಟು ನಂಜನಗೂಡಿನಲ್ಲಿ ಮಕ್ಕಳ ಜತೆ ವಾಲಿಬಾಲ್‌ ಆಡಿದ ಡಿಕೆಶಿ

Exit mobile version