Site icon Vistara News

Karnataka Election: 11 ದಿನಗಳಲ್ಲಿ ನಗದು ಸೇರಿ 99.18 ಕೋಟಿ ರೂಪಾಯಿ ಮೌಲ್ಯದ ವಸ್ತುಗಳ ಜಪ್ತಿ

97 crore people registered to vote in Lok Sabha Election

ಬೆಂಗಳೂರು: ವಿಧಾನಸಭಾ ಚುನಾವಣೆ (Karnataka Election) ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ವಿವಿಧ ರೀತಿಯ ಕಸರತ್ತು ನಡೆಸುತ್ತಿವೆ. ಮತದಾರರ ಓಲೈಕೆಗಾಗಿ ಹಣ, ಮದ್ಯ, ಕುಕ್ಕರ್‌, ಬಟ್ಟೆ ಸೇರಿ ವಿವಿಧ ರೀತಿಯ ಉಡುಗೊರೆಗಳ ಮೂಲಕ ಆಮಿಷ ಒಡ್ಡಲಾಗುತ್ತಿದೆ. ಈ ನಡುವೆ ರಾಜ್ಯದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾದಾಗಿನಿಂದ 11 ದಿನಗಳಲ್ಲಿ ನಗದು ಸೇರಿ ಬರೋಬ್ಬರಿ 99.18 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಪೊಲೀಸರು, ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಚುನಾವಣಾ ಆಯೋಗ ಮಾಹಿತಿ ನೀಡಿದೆ. ಮಾರ್ಚ್‌ 29ರಂದು ರಾಜ್ಯದಲ್ಲಿ ಮಾದರಿ ನೀತಿ ಸಂಹಿತಿ ಜಾರಿಯಾಗಿತ್ತು. ಅಂದಿನಿಂದ ಒಟ್ಟು 11 ದಿನಗಳಲ್ಲಿ 36.8 ಕೋಟಿ ರೂಪಾಯಿ ನಗದು, 15.46 ಕೋಟಿ ರೂ. ಮೌಲ್ಯದ ಉಡುಗೊರೆಗಳು, 30 ಕೋಟಿ ರೂಪಾಯಿ ಮೌಲ್ಯದ 5.2 ಲಕ್ಷ ಲೀಟರ್‌ ಮದ್ಯ, 15 ಕೋಟಿ ರೂ. ಮೌಲ್ಯದ ಚಿನ್ನ ಹಾಗೂ 2.5 ಕೋಟಿ ರೂಪಾಯಿ ಮೌಲ್ಯದ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಇದನ್ನೂ ಓದಿ | Modi in Karnataka: ಜನಮನ ಗೆದ್ದ ಪ್ರಧಾನಿ ನಡೆ: ನಡವಳಿಕೆಯಿಂದಲೇ ಸ್ವಚ್ಛ ಭಾರತದ ಸಂದೇಶ ನೀಡಿದ ನರೇಂದ್ರ ಮೋದಿ

ಇನ್ನು ರಾಜ್ಯದಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿವೆ. ಚುನಾವಣಾ ಆಯೋಗ ಈವರೆಗೂ 730 ಎಫ್‌ಐಆರ್‌ ದಾಖಲಿಸಿದೆ.

ಗದಗದಲ್ಲಿ 33,724 ರೂಪಾಯಿ ಮೌಲ್ಯದ ಮದ್ಯ ವಶ

ಗದಗ: ತಾಲೂಕಿನ ಕಣವಿ ಕ್ರಾಸ್ ಬಳಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು 33,724 ರೂಪಾಯಿ ಮೌಲ್ಯದ 86.4 ಲೀಟರ್ ಮದ್ಯ ಹಾಗೂ 5 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ಜಪ್ತಿ ಮಾಡಿದ್ದಾರೆ. ಅಬಕಾರಿ ಡಿಸಿ ಭರತೇಶ್ ಮಾರ್ಗದರ್ಶನದಲ್ಲಿ ಅಬಕಾರಿ ಇನ್ಸ್‌ಪೆಕ್ಟರ್ ಶೈನಜ್ ಬೇಗಂ ಮತ್ತು ಸಿಬ್ಬಂದಿ ದಾಳಿ ನಡೆಸಿ ಮಹದೇವಪ್ಪ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ | ವಿಸ್ತಾರ TOP 10 NEWS: ಹುಲಿ ಸಂರಕ್ಷಣೆಯಲ್ಲಿ ದಾಪುಗಾಲಿನಿಂದ, ನಂದಿನಿ-ಅಮುಲ್‌ ಹಗ್ಗಜಗ್ಗಾಟವರೆಗಿನ ಪ್ರಮುಖ ಸುದ್ದಿಗಳಿವು

ಅದೇ ರೀತಿ ಜಿಲ್ಲೆಯ ಬಿಂಕದಕಟ್ಟಿ ಚೆಕ್‌ಪೋಸ್ಟ್‌ನಲ್ಲಿ 75,000 ರೂಪಾಯಿ ಮೌಲ್ಯದ ಹೊಸ ಪ್ಯಾಂಟ್‌ ಹಾಗೂ ಶರ್ಟ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗದಗ ಎಸ್‌ಪಿ ಬಿ.ಎಸ್.ನೇಮಗೌಡ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ, 123ಕ್ಕೂ‌ ಅಧಿಕ ಪ್ಯಾಂಟ್‌ ಹಾಗೂ ಶರ್ಟ್‌ಗಳನ್ನು ಗದಗ ಸಂಚಾರಿ ಪೊಲೀಸರು ಜಪ್ತಿ ಮಾಡಿದ್ದಾರೆ.

Exit mobile version