Site icon Vistara News

Karnataka Election: ಶೆಟ್ಟರ್‌ ಬಿಜೆಪಿ ತೊರೆದ ಬೆನ್ನಲ್ಲೇ ಹುಬ್ಬಳ್ಳಿಗೆ ಆಗಮಿಸಿದ ಜೆ.ಪಿ. ನಡ್ಡಾ; ಡ್ಯಾಮೇಜ್‌ ಕಂಟ್ರೋಲ್‌ಗೆ ರಾಜ್ಯ ಪ್ರವಾಸ

#image_title

ಹುಬ್ಬಳ್ಳಿ: ಟಿಕೆಟ್‌ ಕೈತಪ್ಪಿದ ಹಿನ್ನೆಲೆಯಲ್ಲಿ ಜಗದೀಶ್‌ ಶೆಟ್ಟರ್‌ ಸೇರಿ ಕೆಲ ಹಿರಿಯ ನಾಯಕರು ಪಕ್ಷ ತೊರೆದಿರುವುದು ವಿಧಾನಸಭಾ ಚುನಾವಣೆ (Karnataka Election) ಹೊಸ್ತಿಲಿನಲ್ಲಿ ಬಿಜೆಪಿಗೆ ತಲೆನೋವಾಗಿದೆ. ಹೀಗಾಗಿ ಹೈಕಮಾಂಡ್‌ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾಗಿದೆ. ಈ ನಡುವೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಎರಡು ದಿನ (ಏ.18 ಮತ್ತು 19) ರಾಜ್ಯ ಪ್ರವಾಸ ಕೈಗೊಂಡಿದ್ದು, ಮಂಗಳವಾರ ಹುಬ್ಬಳ್ಳಿಗೆ ಆಗಮಿಸಿದ್ದಾರೆ.

ವಿಶೇಷ ವಿಮಾನದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಜೆ.ಪಿ.ನಡ್ಡಾ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್,‌ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಸ್ವಾಗತಿಸಿದರು.

ಮಂಗಳವಾರ ಸಂಜೆ ಹುಬ್ಬಳ್ಳಿಯ ಬಿಯುಬಿ ಕಾಲೇಜಿನಲ್ಲಿ ನಡೆಯುವ ಪ್ರಬುದ್ಧರ ಸಭೆಯಲ್ಲಿ ನಡ್ಡಾ ಅವರು ಭಾಗವಹಿಸಲಿದ್ದಾರೆ. 800 ಪ್ರಮುಖರಿಗೆ ಆಹ್ವಾನ ನೀಡಲಾಗಿದೆ. ನಂತರ ಹುಬ್ಬಳ್ಳಿಯಲ್ಲಿ ಧಾರವಾಡ ವಿಭಾಗದ ಬಿಜೆಪಿ ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರ, ಜಿಲ್ಲಾ ಮಂಡಲ ಪದಾಧಿಕಾರಿಗಳ ಸಭೆ ಇದೆ.

ಬುಧವಾರದಂದು ನಡ್ಡಾ ಅವರು ಮೂರು ಸಾವಿರ ಮಠ, ಸಿದ್ದಾರೂಢರ ಮಠಕ್ಕೆ ಭೇಟಿ ನೀಡುವ ಕಾರ್ಯಕ್ರಮವಿದ್ದು, ಇದು ಲಿಂಗಾಯತ ಮತಗಳು ಕೈತಪ್ಪಿ ಹೋಗದಂತೆ ಮಾಡುವ ಪ್ರಯತ್ನದ ಭಾಗ ಎನ್ನಲಾಗಿದೆ. ಜಗದೀಶ್‌ ಶೆಟ್ಟರ್‌ ಅವರು ಪ್ರತಿನಿಧಿಸುತ್ತಿರುವ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ನಡೆಯುವ ಎರಡು ಕಾರ್ಯಕ್ರಮಗಳಲ್ಲಿ ನಡ್ಡಾ ಭಾಗಿಯಾಗಿ ಪ್ರಚಾರವನ್ನೂ ನಡೆಸಲಿದ್ದಾರೆ.

ಇದನ್ನೂ ಓದಿ | BJP Karnataka: ಬಿ.ಎಲ್‌. ಸಂತೋಷ್‌ ವಿರುದ್ಧ ಮಾತನಾಡಿದ್ದು ಶೆಟ್ಟರ್‌ಗೆ ಶೋಭೆಯಲ್ಲ: ಬಿ.ಎಸ್‌. ಯಡಿಯೂರಪ್ಪ

ಶೆಟ್ಟರ್‌ ಜತೆ ಕೈಜೋಡಿಸದಂತೆ ಮನವಿ

ಜಗದೀಶ್‌ ಶೆಟ್ಟರ್‌ ಅವರಿಗೆ ಬೆಂಬಲವಾಗಿ ಹಲವು ಪಾಲಿಕೆ ಸದಸ್ಯರು ಮತ್ತು ಪಕ್ಷದ ಕಾರ್ಯಕರ್ತರು ರಾಜೀನಾಮೆ ನೀಡಿದ್ದಾರೆ. ಅವರಲ್ಲಿ ಕೆಲವರನ್ನು ಆಗಲೇ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ಮನವೊಲಿಸಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ, ಶೆಟ್ಟರ್‌ ಜತೆ ಯಾರೂ ಕೈ ಜೋಡಿಸಬಾರದೆಂದು ಎಚ್ಚರಿಕೆ ಕೊಡಲು ಪಕ್ಷದ ಪದಾಧಿಕಾರಿಗಳ ಸಭೆಯನ್ನು ಕರೆಯಲಾಗಿದೆ. ಅಲ್ಲದೆ ಕಾರ್ಯಕರ್ತರ ಜತೆಗೆ ನಡ್ಡಾ ಅವರೂ ಸಂವಾದ ನಡೆಸಲಿದ್ದಾರೆ.

ಮಾಜಿ ಮುಖ್ಯಮಂತ್ರಿ, 40 ವರ್ಷಗಳ ಕಾಲ ಬಿಜೆಪಿಯಲ್ಲಿ ನಾಯಕರಾಗಿದ್ದ ಜಗದೀಶ್‌ ಶೆಟ್ಟರ್‌ ಅವರು ಕಾಂಗ್ರೆಸ್‌ ಸೇರಿರುವುದರಿಂದ ಬಿಜೆಪಿ ಕಕ್ಕಾಬಿಕ್ಕಿಯಾಗಿದೆ. ಇದರಿಂದ ಜಗದೀಶ್‌ ಶೆಟ್ಟರ್‌ ಅವರು ಪ್ರತಿನಿಧಿಸುತ್ತಿರುವ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಮಾತ್ರವಲ್ಲ, ಉತ್ತರ ಕರ್ನಾಟಕದ ಹಲವು ಕ್ಷೇತ್ರಗಳ ಮೇಲೆ ಪರಿಣಾಮ ಉಂಟಾಗಬಹುದು ಎಂಬ ಆತಂಕ ಅದಕ್ಕೆ ಕಾಡಿದೆ. ಹೀಗಾಗಿ ಈ ಭಾಗದಲ್ಲಿ ಸೃಷ್ಟಿಯಾಗಿರುವ ನೇತ್ಯಾತ್ಮಕ ಪರಿಣಾಮಗಳನ್ನು ಹೋಗಲಾಡಿಸಿ ಪಕ್ಷದಲ್ಲಿ ಧೈರ್ಯ ತುಂಬುವುದಕ್ಕಾಗಿ, ಎಲ್ಲ ಮುನಿಸುಗಳನ್ನು ಶಮನ ಮಾಡುವುದಕ್ಕಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹುಬ್ಬಳ್ಳಿಗೆ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ | Karnataka Election 2023: ನಾನು, ಡಿಕೆಶಿ ಸಿಎಂ ಆಕಾಂಕ್ಷಿಗಳು; ಪೈಪೋಟಿಯ ಗುಟ್ಟು ಬಿಚ್ಚಿಟ್ಟ ಸಿದ್ದರಾಮಯ್ಯ

ಜಗದೀಶ್ ಶೆಟ್ಟರ್ ಕಾಂಗ್ರೆಸ್‌ಗೆ ಸೇರ್ಪಡೆ ಆಗಿರುವುದರಿಂದ ಆಗಬಹುದಾದ ಸಂಭಾವ್ಯ ಹೊಡೆತಗಳ ಬಗ್ಗೆ ಹೈಕಮಾಂಡ್‌ಗೆ ವಿವರಣೆ ನೀಡಿರುವ ಸ್ಥಳೀಯ ಕಮಲ ನಾಯಕರು, ಇದನ್ನು ಆದಷ್ಟು ಬೇಗ ಹೋಗಲಾಡಿಸಬೇಕು ಎಂದು ಒತ್ತಾಯಿಸಿದ್ದರು. ಅದರಲ್ಲೂ ಮುಖ್ಯವಾಗಿ ಪಕ್ಷ ಲಿಂಗಾಯತ ನಾಯಕರ ಮೇಲೆ ಪ್ರಹಾರ ಮಾಡುತ್ತಿದೆ ಎಂಬ ಕಾಂಗ್ರೆಸ್‌ ವ್ಯಾಖ್ಯಾನಕ್ಕೆ ಜನರು ಮಾರುಹೋಗುವ ಅಪಾಯವಿರುವುದರಿಂದ ತುರ್ತಾರಿ ಉಪಶಮನ ಕಾರ್ಯಗಳು ಆಗಬೇಕಾಗಿವೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. ಅದರಂತೆ ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೇ ಆಗಮಿಸಿದ್ದಾರೆ.

ಈಗಾಗಲೇ ಧಾರವಾಡ ಸೆಂಟ್ರಲ್‌ಗೆ ಪ್ರಭಾವಿ ನಾಯಕ ಮಹೇಶ್‌ ಟೆಂಗಿನಕಾಯಿ ಅವರಿಗೆ ಟಿಕೆಟ್‌ ನೀಡಿದ್ದು, ಜಗದೀಶ್‌ ಶೆಟ್ಟರ್‌ ಅವರು ಪಕ್ಷ ಬಿಟ್ಟು ಹೋಗಿರುವ ಪರಿಣಾಮ ಎಲ್ಲೂ ಕಾಣಿಸದಂತೆ ಮಾಡಲು ಬಿಜೆಪಿ ಪ್ರಯತ್ನ ಪಡುತ್ತಿದೆ.

Exit mobile version