Site icon Vistara News

Karnataka Election 2023: ಬಿಜೆಪಿ ಟಿಕೆಟ್‌ ಕೈತಪ್ಪುವ ಆತಂಕ; ಶನಿವಾರ ಬೆಂಬಲಿಗರ ಸಭೆ ಕರೆದ ಜಗದೀಶ್‌ ಶೆಟ್ಟರ್

Jagadish Shettar calls meeting of bjp supporters on April 16

Jagadish Shettar calls meeting of bjp supporters on April 16

ಹುಬ್ಬಳ್ಳಿ: ಬಿಜೆಪಿ ಟಿಕೆಟ್‌ ಕೈತಪ್ಪುವ ಆತಂಕ ಉಂಟಾಗಿರುವ ಹಿನ್ನೆಲೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್‌ ಅವರು ಏ.15ರಂದು ಬೆಂಬಲಿಗರ ಸಭೆ ಕರೆದಿದ್ದಾರೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದ ಕಣದಿಂದ (Karnataka Election 2023) ಈ ಬಾರಿ ಹಿಂದೆ ಸರಿಯುವಂತೆ ಮಾಜಿ ಸಿಎಂಗೆ ಬಿಜೆಪಿ ಹೈಕಮಾಂಡ್‌ ಸೂಚಿಸಿತ್ತು. ಆದರೆ, ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಅವರು, ಈ ಬಾರಿ ತಮಗೆ ಸ್ಪರ್ಧಿಸಲು ಅವಕಾಶ ನೀಡಬೇಕು, ಇಲ್ಲದಿದ್ದರೆ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಖಡಕ್ ಸಂದೇಶ ರವಾನಿಸಿದ್ದರು.

ಟಿಕೆಟ್‌ ನಿರಾಕರಣೆ ಹಿನ್ನೆಲೆಯಲ್ಲಿ ಜಗದೀಶ್‌ ಶೆಟ್ಟರ್‌ ಅವರು ಬುಧವಾರ ನವ ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ, ಈ ಬಾರಿ ಟಿಕೆಟ್‌ ನೀಡಬೇಕು ಎಂದು ಮನವಿ ಮಾಡಿದ್ದರು. ಆದರೆ, ಎರಡು ದಿನಗಳಾದರೂ ಹೈಕಮಾಂಡ್‌ನಿಂದ ಯಾವುದೇ ಸಂದೇಶ ಬಾರದ ಹಿನ್ನೆಲೆಯಲ್ಲಿ ಅವರು ಶನಿವಾರ ಏ.15ರಂದು ಬೆಂಬಲಿಗರ ಸಭೆ ಕರೆದಿದ್ದಾರೆ.

ಇದನ್ನೂ ಓದಿ | BJP Karnataka: ಬಿ.ಎಲ್‌. ಸಂತೋಷ್‌ ಬಗ್ಗೆ ಗೌರವವಿದೆ ಎಂದ ಲಕ್ಷ್ಮಣ ಸವದಿ: ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದಿಂದ 6 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಜಗದೀಶ್‌ ಶೆಟ್ಟರ್‌ ಅವರು ಟಿಕೆಟ್‌ ಬಗ್ಗೆ ಸ್ಪಷ್ಟನೆ ನೀಡಲು ಪಕ್ಷದ ವರಿಷ್ಠರಿಗೆ ಶನಿವಾರ ಬೆಳಗ್ಗೆ 12 ಗಂಟೆವರೆಗೆ ಗಡುವು ನೀಡಿದ್ದು, ಇಲ್ಲದಿದ್ದರೆ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಈಗಾಗಲೇ ಬೆಂಬಲಿಗರಿಂದ ರಾಜೀನಾಮೆ ಕೊಡಿಸಿರುವ ಅವರು, ಇನ್ನೂ ಎಷ್ಟು ದಿನ ಕಾಯಬೇಕು ಎಂದು ಅಸಮಾಧಾನ ಹೊರಹಾಕಿದ್ದಾರೆ.

ಎರಡು ದಿನವಾದರೂ ಯಾರೂ ಫೋನ್ ಮಾಡಿಲ್ಲ

ಹುಬ್ಬಳ್ಳಿಯಲ್ಲಿ ಮಾತನಾಡಿರುವ ಜಗದೀಶ್ ಶೆಟ್ಟರ್, ಟಿಕೆಟ್‌ ನೀಡದ ಹಿನ್ನೆಲೆಯಲ್ಲಿ ನನಗಷ್ಟೇ ಅಲ್ಲ, ಕ್ಷೇತ್ರದ ಜನರಿಗೂ ಸಂಕಟವಾಗುತ್ತಿದೆ. ಶನಿವಾರ ಬೆಳಗ್ಗೆ ಮುಂದಿನ ನಡೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇನೆ. ವರಿಷ್ಠರು ಎರಡು ದಿನ ಸಮಯ ಕೇಳಿದ್ದರು. ಎರಡು ದಿನವಾದರೂ ಯಾರೂ ಫೋನ್ ಮಾಡಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Karnataka Election: ಪಕ್ಷ ಬಿಟ್ಟಿದ್ದು ದುಃಖವಾಗಿದೆ ಎಂದ ಸಿಎಂ ಬೊಮ್ಮಾಯಿ; ನಾನೇನು ಕಣ್ಣೀರು ಒರೆಸಲೇ ಎಂದ ಲಕ್ಷ್ಮಣ ಸವದಿ

ನನಗೆ ಟಿಕೆಟ್‌ ಸಿಗುವ ಆಶಾವಿದೆ

ನವ ದೆಹಲಿಯಲ್ಲಿ ಬುಧವಾರ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ್ದ ಜಗದೀಶ್‌ ಶೆಟ್ಟರ್‌ ಅವರು, ನನಗೆ ಟಿಕೆಟ್‌ ಸಿಗುವ ಆಶಾವಿದೆ. ಒಂದೊಮ್ಮೆ ಬಿಜೆಪಿ ಟಿಕೆಟ್‌ ಕೊಡದೇ ಹೋದರೂ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಹೇಳುವ ಮೂಲಕ ಪಕ್ಷೇತರನಾಗಿಯಾದರೂ ಕಣಕ್ಕಿಳಿಯುವ ಸಂದೇಶ ನೀಡಿದ್ದರು.

ನಾನು ಆಶಾವಾದಿಯಾಗಿದ್ದೇನೆ. ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕು ಎಂಬ ನನ್ನ ಇಚ್ಛೆಯ ಬಗ್ಗೆ ನಾನು ಜೆ.ಪಿ. ನಡ್ಡಾ ಅವರಿಗೆ ತಿಳಿಸುವ ಮತ್ತು ಅರ್ಥ ಮಾಡಿಸುವ ಕೆಲಸವನ್ನು ನನ್ನ ಕೈಲಾದ ಮಟ್ಟಿಗೆ ಮಾಡಿದ್ದೇನೆ. ಅವರು ಪರಿಶೀಲಿಸುವ ಮತ್ತು ನಾಯಕತ್ವದ ಜತೆ ಮಾತನಾಡುವ ಭರವಸೆಯನ್ನು ನೀಡಿದ್ದಾರೆ. ನಾನು ನನ್ನ ಕ್ಷೇತ್ರದ ಜನರ ಜತೆ ಮಾತನಾಡಿದ್ದೇನೆ. ಅವರು ನಾನು ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕು ಎಂದು ಬಯಸುತ್ತಿದ್ದಾರೆ. ಹಾಗಾಗಿ ನಾನು ಸ್ಪರ್ಧೆ ಮಾಡುವುದು ಖಚಿತ ಎಂದು ತಿಳಿಸಿದ್ದರು.

Exit mobile version