ಹುಬ್ಬಳ್ಳಿ: ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ತೊರೆದಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಕಾಂಗ್ರೆಸ್‌ಗೆ ಸೇರಲಿದ್ದಾರೆ ಎಂಬ ಚರ್ಚೆ ದಟ್ಟವಾಗಿದೆ. ಈ ಮಧ್ಯೆ ಶೆಟ್ಟರ್ ಸ್ವಾಗತಕ್ಕೆ ಕಾಂಗ್ರೆಸ್ ವೇದಿಕೆಯನ್ನು ಸಿದ್ಧಪಡಿಸಿಕೊಂಡಿದೆ ಎಂದೇ ಹೇಳಲಾಗುತ್ತಿದ್ದು, ಅವರನ್ನು ಬೆಂಗಳೂರಿಗೆ ಕರೆತರಲು ಹುಬ್ಬಳ್ಳಿಯಿಂದ ಎರಡು ಹೆಲಿಕಾಪ್ಟರ್ ವ್ಯವಸ್ಥೆಯನ್ನು ಕಾಂಗ್ರೆಸ್ ಮಾಡಿರುವುದು ಇದಕ್ಕೆ ಪುಷ್ಟಿ ನೀಡುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಪ್ತ ಯು.ಬಿ. ಶೆಟ್ಟಿ ಅವರ ಹೆಸರಿನಲ್ಲಿ ಹೆಲಿಕಾಪ್ಟರ್ ಅನ್ನು ಬುಕ್ ಮಾಡಲಾಗಿದೆ. ಶೆಟ್ಟರ್ ಮಧ್ಯಾಹ್ನದ ನಂತರ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ತೆರಳಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬಳಿ ಶಾಸಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಬಳಿಕ ಅಲ್ಲಿಂದ ವಾಪಸಾಗಿ ಮಧ್ಯಾಹ್ನದ ಹೊತ್ತಿಗೆ ಹುಬ್ಬಳ್ಳಿ ತಲುಪಲಿದ್ದಾರೆ. ಹುಬ್ಬಳ್ಳಿಯಿಂದ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಶೆಟ್ಟರ್ ತೆರಳಿದ್ದಾರೆ ಎಂದೇ ಹೇಳಲಾಗುತ್ತಿದೆ. ಅಲ್ಲಿ ಕಾಂಗ್ರೆಸ್ ರಾಜ್ಯ ನಾಯಕರೊಂದಿಗೆ ರಾಹುಲ್ ಗಾಂಧಿಯವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.
ಶೆಟ್ಟರ್ ಜತೆಗೆ ಕೆಲವು ಮಾಜಿ ಶಾಸಕರು, ನಿಗಮ ಮಂಡಳಿಗಳ ಮಾಜಿ ಅಧ್ಯಕ್ಷರು ಸಹ ಬೆಂಗಳೂರಿಗೆ ತೆರಳುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೆ, ಭಾನುವಾರ (ಏ.16) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾರ್ಯಕ್ರಮವೂ ಇದ್ದು, ಅವರ ಸಮ್ಮುಖದಲ್ಲಿಯೇ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಗುಸು ಗುಸು ಪ್ರಾರಂಭವಾಗಿದೆ.
ಇದನ್ನೂ ಓದಿ: Karnataka Elections : ಸಾಗರದಲ್ಲಿ ಹಾಲಪ್ಪ ಅಭ್ಯರ್ಥಿತನಕ್ಕೆ ಹಿರಿಯ ಬಿಜೆಪಿ ಮುಖಂಡರಿಂದಲೇ ವಿರೋಧ; ಸೋಲಿಸುವ ಪಣ
ವಿಫಲವಾಗಿದ್ದ ಸಂಧಾನ ಸಭೆ
ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್‌ಗಾಗಿ ಪಟ್ಟುಹಿಡಿದಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಜತೆ ಬಿಜೆಪಿ ನಾಯಕರು ಶನಿವಾರ ರಾತ್ರಿ ನಡೆಸಿದ ಸಂಧಾನ ಸಭೆ ವಿಫಲವಾಗಿದೆ. ಹೀಗಾಗಿ ಅವರು ಭಾನುವಾರ ಶಿರಸಿಗೆ ತೆರಳಿ ಬಿಜೆಪಿಗೆ ರಾಜೀನಾಮೆ ನೀಡುವ ತೀರ್ಮಾನವನ್ನು ಪ್ರಕಟಿಸಿದ್ದರು.
ಹುಬ್ಬಳ್ಳಿಯ ನಿವಾಸದಲ್ಲಿ ಶನಿವಾರ ರಾತ್ರಿ ಜಗದೀಶ್ ಶೆಟ್ಟರ್ ಜತೆಗೆ ಸಿಎಂ ಬಸವರಾಜ ಬೊಮ್ಮಾಯಿ ಬೊಮ್ಮಾಯಿ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಪ್ರಲ್ಹಾದ್ ಜೋಶಿ ಅವರು ನಡೆಸಿದ ಮಾತುಕತೆ ವಿಫಲವಾಗಿತ್ತು. ಸಭೆ ಬಳಿಕ ಜಗದೀಶ್ ಶೆಟ್ಟರ್ ಮಾತನಾಡಿ, ನಾನು ಯಾವತ್ತೂ ಹಠ ಮಾಡಿದವನಲ್ಲ. ನನಗೆ ಬೇಜಾರು ಆಗಿರುವ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ ಶಿರಸಿಗೆ ಹೋಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ರಾಜೀನಾಮೆ ಪತ್ರ ನೀಡುತ್ತೇನೆ ಎಂದು ತಿಳಿಸಿದ್ದರು.
ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳು ನನ್ನ ಕೆಟ್ಟ ದಿನಗಳಾಗಿವೆ. ಪಕ್ಷವನ್ನು ಕೆಳಮಟ್ಟದಿಂದ ಕಟ್ಟುವ ಕೆಲಸ ಮಾಡಿದ್ದೇನೆ. ಅಭ್ಯರ್ಥಿ ಸಿಗಲಾರದ ಸಂದರ್ಭದಲ್ಲಿ ಹುಡುಕಾಡಿ ಅಭ್ಯರ್ಥಿ ಮಾಡಿದ್ದೇನೆ. ತಾವು ಜನಸಂಘ, ಆರ್‌ಎಸ್‌ಎಸ್ ಮೂಲದವರಾಗಿದ್ದು, ಎಂದೂ ಪೂರ್ಣಾವಧಿ ಅಧಿಕಾರ ಸಿಕ್ಕಿಲ್ಲ. ಅಂತಹುದರಲ್ಲಿ ಉತ್ತಮ ಆಡಳಿತ ಕೊಡುವ ಕೆಲಸ ಮಾಡಿದ್ದೇನೆ. ಶಿಸ್ತುಬದ್ಧವಾಗಿ ನನ್ನ ರಾಜಕೀಯ ಜೀವನ ಮಾಡಿದ್ದೇನೆ ಎಂದು ತಿಳಿಸಿದ್ದರು.
7ನೇ ಬಾರಿ ನಾನು ನಿಲ್ಲುತ್ತೇನೆ ಅಂದಾಗ ಹೈಕಮಾಂಡ್ ಮಾಡಿದ ಸಮೀಕ್ಷೆಯಲ್ಲಿ ನನ್ನ ಹೆಸರು ಮುಂಚೂಣಿಯಲ್ಲಿತ್ತು. ಮೊದಲ ಪಟ್ಟಿಯಲ್ಲಿ ನನ್ನ ಹೆಸರು ಬಾರದಿದ್ದಾಗ ತೀವ್ರ ಆಘಾತವಾಗಿತ್ತು. ನನಗೆ ಕ್ರಿಮಿನಲ್ ಹಿನ್ನೆಲೆ ಇದೆಯಾ, ಕರಪ್ಷನ್ ಚಾರ್ಜ್ ಇದೆಯಾ, ಸೆಕ್ಸ್ ಸ್ಕ್ಯಾಂಡಲ್ ಇದೆಯಾ ಅಂತ ನಾಯಕರನ್ನು ಕೇಳಿದ್ದೆ. ಯಾವುದಕ್ಕೂ ಸಮರ್ಪಕವಾಗಿ ಉತ್ತರ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಪಟ್ಟುಬಿಡದ ಶೆಟ್ಟರ್
ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡುವಂತೆ ಜಗದೀಶ್ ಶೆಟ್ಟರ್ ಪಟ್ಟು ಹಿಡಿದಿದ್ದರು. ಟಿಕೆಟ್ ಬಗ್ಗೆ ಸ್ಪಷ್ಟನೆ ನೀಡದಿದ್ದರೆ ರಾಜೀನಾಮೆ ಘೋಷಣೆ ಮಾಡುವುದಾಗಿ ಮಾಜಿ ಸಿಎಂ ಎಚ್ಚರಿಕೆ ನೀಡಿದ್ದರು. ಟಿಕೆಟ್ ಬಗ್ಗೆ ನಿರ್ಧಾರ ತಿಳಿಸುವಂತೆ ಜಗದೀಶ್ ಶೆಟ್ಟರ್, ಬಿಜೆಪಿ ಹೈಕಮಾಂಡ್‌ಗೆ ಶನಿವಾರ ರಾತ್ರಿ 8.30ಕ್ಕೆ ಡೆಡ್‌ಲೈಲ್ ನೀಡಿದ್ದರು. ಆದರೆ ಬಿಜೆಪಿ ನಾಯಕರು ನಡೆಸಿದ ಸಂಧಾನ ಸಭೆ ವಿಫಲವಾದ ಕಾರಣ ಅವರು ರಾಜೀನಾಮೆ ನೀಡುವುದಾಗಿ ತಿಳಿಸಿದ್ದರು.
ಇದನ್ನೂ ಓದಿ: Karnataka Elections : ಹತ್ತನೇ ವಿಧಾನಸಭಾ ಚುನಾವಣೆ ಎದುರಿಸಲು ಗೃಹ ಸಚಿವ ಆರಗ ಜ್ಞಾನೇಂದ್ರ ರೆಡಿ, ಏ. 18ರಂದು ನಾಮಪತ್ರ
ಧಾರವಾಡ ಸೆಂಟ್ರಲ್ ಶಾಸಕರಾಗಿರುವ ಜಗದೀಶ್ ಶೆಟ್ಟರ್ ಅವರಿಗೆ ಈ ಬಾರಿ ಟಿಕೆಟ್ ನಿರಾಕರಿಸಲಾಗಿತ್ತು. ಅವರನ್ನು ಸ್ವಯಂ ನಿವೃತ್ತಿ ಘೋಷಿಸುವಂತೆ ಹೈಕಮಾಂಡ್ ಸೂಚಿಸಿತ್ತು. ಆದರೆ, ನಿವೃತ್ತಿ ಸ್ವೀಕರಿಸಲು ಒಪ್ಪದ ಜಗದೀಶ್ ಶೆಟ್ಟರ್ ಅವರು ಹೈಕಮಾಂಡ್‌ಗೆ ಸೆಡ್ಡು ಹೊಡೆದಿದ್ದರು. ಶನಿವಾರ ರಾತ್ರಿಯೊಳಗೆ ತಮಗೆ ಟಿಕೆಟ್ ನೀಡುವ ಬಗ್ಗೆ ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ ರಾಜೀನಾಮೆ ಘೋಷಣೆ ಮಾಡುವುದಾಗಿ ತಿಳಿಸಿದ್ದರು.