Site icon Vistara News

Karnataka Election: ಜಗದೀಶ್‌ ಶೆಟ್ಟರ್‌ಗೂ ಬಿಜೆಪಿ ಟಿಕೆಟ್‌ ಮಿಸ್‌?; ನಿವಾಸದತ್ತ ದೌಡಾಯಿಸಿದ ಅಭಿಮಾನಿಗಳು

Jagadish Shettar calls meeting of bjp supporters on April 16

Jagadish Shettar calls meeting of bjp supporters on April 16

ಹುಬ್ಬಳ್ಳಿ: ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಬಿಜೆಪಿಯ ಕೆಲ ಹಾಲಿ ಶಾಸಕರಿಗೆ ಟಿಕೆಟ್‌ ಸಿಗುವುದಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ. ಈ ನಡುವೆ ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೂ ಟಿಕೆಟ್ ಕೈತಪ್ಪಲಿದೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿರುವುದರಿಂದ ನಗರದ ಜಗದೀಶ್ ಶೆಟ್ಟರ್ ನಿವಾಸದತ್ತ ಅಭಿಮಾನಿಗಳು ದೌಡಾಯಿಸಿದ್ದಾರೆ. ಈ ನಡುವೆ ಜಗದೀಶ್‌ ಶೆಟ್ಟರ್‌ ಅವರು ತಮಗೆ ನಿವೃತ್ತಿ ಘೋಷಿಸಲು ಕರೆ ಬಂದಿರುವುದನ್ನು ಹೈಕಮಾಂಡ್‌ನಿಂದ ಕರೆ ಬಂದಿದೆ. ಆದರೆ, ಸ್ಪರ್ಧೆಗೆ ಅವಕಾಶ ನೀಡಬೇಕು ಎಂದು ಕೇಳಿದ್ದೇನೆ. ಅದನ್ನು ಪರಿಶೀಲಿಸುವ ಭರವಸೆ ನೀಡಿದ್ದಾರೆ ಎಂದಿದ್ದಾರೆ.

ಶೆಟ್ಟರ್ ನಿವಾಸದ ಬಳಿ ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ ಮಾತನಾಡಿ, ನಾನೂ ಜಗದೀಶ್ ಶೆಟ್ಟರ್ ಬೆಂಬಲಿಗ. ಅವರಿಗಾಗಿ ಜೀವ ಕೊಡಲು ಸಿದ್ಧವಾಗಿದ್ದೇನೆ. ಹೈಕಮಾಂಡ್‌ ಶೆಟ್ಟರ್‌ಗೆ ಟಿಕೆಟ್ ತಪ್ಪಿಸಲ್ಲ ಎನ್ನುವ ಭರವಸೆ ಇದೆ. ಮಾಜಿ ಸಿಎಂ ಜತೆ ನಾನು ಮಾತನಾಡಿದ್ದೇನೆ. ಟಿಕೆಟ್ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರು ಈ ಬಾರಿ ಬಿಜೆಪಿಯಿಂದ ಸ್ಪರ್ಧೆ ಮಾಡಿ 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ. ಅವರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಒಂದು ವೇಳೆ ಟಿಕೆಟ್ ಕೈತಪ್ಪಿದ್ದರೆ ಶೆಟ್ಟರ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಕೋರ್ ಕಮಿಟಿ ಸದಸ್ಯ ಮಲ್ಲಿಕಾರ್ಜುನ್ ಸಾಹುಕಾರ ಮಾತನಾಡಿ, ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಮಿಸ್ ಆಗಿದೆ ಎಂಬ ವಿಷಯ ಟಿವಿಯಲ್ಲಿ ನೋಡಿದೆ. ಅವರ ಬಳಿ ಕೇಳಿದಾಗ ಮಾಹಿತಿ ಬಂದಿಲ್ಲ ಎಂದಿದ್ದಾರೆ. ಅವರಿಗೆ ವಯಸ್ಸಾಗಿಲ್ಲ, ಗಟ್ಟಿಮುಟ್ಟಾಗಿದ್ದಾರೆ. ಅವರಿಗೆ ಯಾವುದೇ ಕಳಂಕವಿಲ್ಲ, ಭ್ರಷ್ಟಾಚಾರದ ಆರೋಪವಿಲ್ಲ. ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆಯಿಲ್ಲ. ಹೈಕಮಾಂಡ್ ಅವರನ್ನು ಕೈಬಿಡಬಾರದು. ಶೆಟ್ಟರ್‌ಗೆ ಟಿಕೆಟ್ ಮಿಸ್ ಆದರೆ ಲಿಂಗಾಯತ ಮತದಾರರ ಮೇಲೆ ಪ್ರಭಾವ ಬೀರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪಕ್ಷದ ಏಳಿಗೆಗೆ ಶೆಟ್ಟರ್ ದುಡಿದಿದ್ದಾರೆ. ಅವರು ಲಿಂಗಾಯತ ಸಮಾಜದ ಪ್ರಭಾವಿ ನಾಯಕರು. ಅವರನ್ನು ಕೈಬಿಟ್ಟರೆ ಯಾವ ಮುಖ ಇಟ್ಟುಕೊಂಡು ಜನರ ಬಳಿ ಮತ ಕೇಳಬೇಕು ಎಂಬುವುದು ತಿಳಿಯುತ್ತಿಲ್ಲ. ಕೆಲವು ಕುತಂತ್ರಿಗಳು ಈ ಕೆಲಸ ಮಾಡುತ್ತಿದ್ದಾರೆ. ಶೆಟ್ಟರ್‌ಗೆ ಟಿಕೆಟ್ ತಪ್ಪಿಸಲು ಹುಬ್ಬಳ್ಳಿಯವರು, ಹೊರಗಿನವರು ಎಲ್ಲರ ಕುತಂತ್ರವಿದೆ ಎಂದು ಕಿಡಿಕಾರಿದರು.

ಟಿಕೆಟ್‌ ಸಿಗುವ ವಿಶ್ವಾಸ ಇದೆ ಎಂದ‌ ಜಗದೀಶ್ ಶೆಟ್ಟರ್

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಮ್ ಜಗದೀಶ್ ಶೆಟ್ಟರ್, ಬೆಳಗ್ಗೆ ವರಿಷ್ಠರಿಂದ ಫೋನ್ ಬಂದಿತ್ತು. ನೀವು ಸೀನಿಯರ್, ಬೇರೆಯವರಿಗೆ ಅವಕಾಶ ಕೊಡಿ ಎಂದಿದ್ದಾರೆ. ನಾನು 30 ವರ್ಷಗಳಿಂದ ಪಕ್ಷ ಕಟ್ಟಿ ಬೆಳೆಸಿದ್ದೇನೆ. ಮತ್ತೊಮ್ಮೆ ನನಗೆ ಅವಕಾಶ ಕೊಡಿ ಎಂದು ಕೇಳಿದ್ದೇನೆ. ಹೀಗಾಗಿ ನನಗೆ ಟಿಕೆಟ್‌ ಸಿಗುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

ರಾಜಕೀಯದಿಂದ ಕೆ.ಎಸ್‌. ಈಶ್ವರಪ್ಪ ನಿವೃತ್ತಿ: ಜೆ.ಪಿ. ನಡ್ಡಾಗೆ ಪತ್ರ ಬರೆದ ಹಿರಿಯ ನಾಯಕ

ಬೆಂಗಳೂರು: ರಾಜ್ಯ ಬಿಜೆಪಿಯ ಆರಂಭದಿಂದಲೂ ಜತೆಯಲ್ಲೇ ಇರುವ ಹಾಗೂ ಬಹುತೇಕ ಎಲ್ಲ ಬಿಜೆಪಿ ಸರ್ಕಾರಗಳಲ್ಲೂ ಸಚಿವರಾಗಿದ್ದ ಕೆ.ಎಸ್‌. ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.

ʼನಾನು ಸ್ವಯಿಚ್ಛೆಯಿಂದ ಚುನಾವಣಾ ರಾಜಕಾರಣದಿಂದ ನಿವೃತ್ತನಾಗಲು ಬಯಸಿದ್ದೇನೆ. ಹಾಗಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನನ್ನ ಹೆಸರನ್ನು ಯಾವುದೇ ಕ್ಷೇತ್ರಕ್ಕೆ ಪರಿಗಣಿಸಬಾರದಾಗಿ ವಿನಂತಿ” ಎಂದು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಬರೆದಿದ್ದಾರೆ.

“ಕಳೆದ 40 ವರ್ಷದ ರಾಜಕೀಯ ಜೀವನದಲ್ಲಿ ಬೂತ್‌ ಮಟ್ಟದಿಂದ ರಾಜ್ಯದ ಉಪಮುಖ್ಯಮಂತ್ರಿಯವರೆಗೆ ಗೌರವದ ಸ್ಥಾನಮಾನಗಳನ್ನು ನೀಡಿದ ಪಕ್ಷದ ಹಿರಿಯರಿಗೆ ನನ್ನ ಅನಂತ ಧನ್ಯವಾದಗಳು” ಎಂದು ಈ ಪತ್ರದಲ್ಲಿ ತಿಳಿಸಲಾಗಿದೆ.

ಶಿವಮೊಗ್ಗ ನಗರದಿಂದ ಸತತ ಶಾಸಕರಾಗುತ್ತಿರುವ ಈಶ್ವರಪ್ಪ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಎಂಬಾತ ಈಶ್ವರಪ್ಪ ಅವರ ಹೆಸರು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನಂತರ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪೊಲೀಸ್‌ ತನಿಖೆಯಲ್ಲಿಒ ಈಶ್ವರಪ್ಪ ಅವರಿಗೆ ಕ್ಲೀನ್‌ ಚಿಟ್‌ ಸಿಕ್ಕಿತ್ತು.

ನಂತರವಾದರೂ ತಮ್ಮನ್ನು ಸಚಿವರಾಗಿ ತೆಗೆದುಕೊಳ್ಳಬೇಕು ಎಂದು ಈಶ್ವರಪ್ಪ ಸತತ ಪ್ರಯತ್ನ ಮಾಡಿದರು. ಆದರೆ ಸಂಪುಟ ಪುನಾರಚನೆ ಹಾಗೂ ವಿಸ್ತರಣೆಗೆ ಕೇಂದ್ರದ ವರಿಷ್ಠರು ಒಪ್ಪಿಗೆ ನೀಡದ ಪರಿಣಾಮ ಈಶ್ವರಪ್ಪ ಸಚಿವರಾಗಲು ಸಾಧ್ಯವಾಗಲೇ ಇಲ್ಲ. ಇದೀಗ ಶಿವಮೊಗ್ಗ ಕ್ಷೇತ್ರದಿಂದ ಈಶ್ವರಪ್ಪ ಬದಲಿಗೆ ತಮಗೆ ಟಿಕೆಟ್‌ ನೀಡಬೇಕು ಎಂದು ಆಯನೂರು ಮಂಜುನಾಥ್‌ ಪ್ರಯತ್ನಿಸುತ್ತಿದ್ದಾರೆ. ಈಗಾಗಲೆ ವಿಧಾನ ಪರಿಷತ್‌ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದಾರೆ.

ಈಶ್ವರಪ್ಪ ಅವರು ತಮ್ಮ ಪುತ್ರ ಕೆ.ಈ. ಕಾಂತೇಶ್‌ ಅವರಿಗೆ ಟಿಕೆಟ್‌ ಕೇಳುತ್ತಿದ್ದಾರೆ ಎನ್ನಲಾಗಿದೆ. ಈ ಕುರಿತು ಶಿವಮೊಗ್ಗದ ಮನೆಯಲ್ಲಿ ಮಾಧ್ಯಮಗಳೊಂದಿಗೆ ಈಶ್ವರಪ್ಪ ಮಾತನಾಡಿದ್ದಾರೆ.

ನಾನು ಬಿಜೆಪಿ ನಾಯಕರಿಗೆ ಕಳಿಸಿರುವ ಪತ್ರವನ್ನು ಕರ್ನಾಟಕದಲ ಎಲ್ಲ ಕಾರ್ಯಕರ್ತರೂ ಮೆಚ್ಚಿದ್ದಾರೆ. ಕರ್ನಾಟಕದಲ್ಲಿ ಪೂರ್ಣ ಬಹುಮತದ ಸರ್ಕಾರವನ್ನು ತರಬೇಕು ಎನ್ನುವುದು ಮುಖ್ಯ. ಇದಕ್ಕಾಗಿ ಪಕ್ಷ ನೀಡುವ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ. ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಕೇಂದ್ರ ಚುನಾವಣಾ ಸಮಿತಿ ತೀರ್ಮಾನ ಮAಡುವವರು ಸ್ಪರ್ಧೆ ಮಾಡುತ್ತಾರೆ. ಎಲ್ಲರನ್ನೂ ಗೆಲ್ಲಿಸಲು ಶ್ರಮಿಸುತ್ತೇನೆ ಎಂದರು. ಕಾಂತೇಶ್‌ ಅವರಿಗೆ ಟಿಕೆಟ್‌ ಸಿಗುತ್ತದೆಯೇ ಎಂಬ ಪ್ರಶ್ನೆಗೆ, ಕೇಂದ್ರ ಚುನಾವಣಾ ಸಮಿತಿ ಆ ನಿರ್ಧಾರ ಮಾಡಲಿದೆ ಎಂದಷ್ಟೆ ತಿಳಿಸಿದ್ದಾರೆ.

Exit mobile version