ಚಿಕ್ಕೋಡಿ: ಹತ್ಯೆಯಾಗಿರುವ ಹಿರೇಕೋಡಿ ಗ್ರಾಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜ್ (Jain muni Murder) ಅವರ ಅಂತಿಮ ವಿಧಿವಿಧಾನವು ಜೈನ ಪರಂಪರೆಯಂತೆ ಶಾಸ್ತ್ರೋಕ್ತವಾಗಿ ನೆರವೇರಿತು. ಈ ಮೂಲಕ ಅವರು ಪಂಚಭೂತಗಳಲ್ಲಿ ಲೀನವಾದರು. ಜೈನಮುನಿಯ ಅವರ ಪೂರ್ವಾಶ್ರಮದ ಅಣ್ಣನ ಮಗ, ಆಶ್ರಮದ ಟ್ರಸ್ಟ್ ಅಧ್ಯಕ್ಷರೂ ಆಗಿರುವ ಭೀಮಗೊಂಡ ಉಗಾರೆ ಅವರು ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.
ಹಿರೇಕೋಡಿಯ ನಂದಿಪರ್ವತ ಆಶ್ರಮದ ಪಕ್ಕದ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿದೆ. ಹುಬ್ಬಳ್ಳಿಯ ವರೂರು ಮಠದ ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ನೆರವೇರಿದೆ. ನಾಂದಣಿ ಮಠದ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿ ಸೇರಿದಂತೆ ಜೈನ ಮಠಗಳ ಮಹಾಸ್ವಾಮಿಗಳು ಭಾಗಿಯಾಗಿದ್ದರು. ಈ ವೇಳೆ ಭಕ್ತರು ನಮೋಕಾರ ಮಂತ್ರವನ್ನು ಪಠಿಸಿದರು.
30 ಸೆಕೆಂಡ್‌ಗೆ ಮಳೆ!
ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಚಿತೆಗೆ ಅಗ್ನಿ ಸ್ಪರ್ಶವಾದ ಕೇವಲ 30 ಸೆಕೆಂಡ್‌ಗೆ ಮಳೆ ಪ್ರಾರಂಭವಾಯಿತು. ಸ್ವಲ್ಪ ಕಾಲ ಮಳೆ ಸುರಿದು ಬಳಿಕ ಬಿಡುವು ನೀಡಿತು. ಇದೊಂದು ಶುಭ ಸಂದೇಶ ಎಂದು ಭಕ್ತರು ಭಾವಿಸಿದರು.
ಇದನ್ನೂ ಓದಿ: Pen Drive Issue: ಕಸ ಗುಡಿಸೋಣ ನಡೀರಿ : HDK ಪೆನ್‌ಡ್ರೈವ್ ಕುರಿತು ಪ್ರಶ್ನೆಗೆ ಡಿಸಿಎಂ ಡಿ.ಕೆ. ಶಿವಕುಮಾರ್
ನಮೋಕಾರ ಮಂತ್ರ ಪಠಣ
ಮರಣೋತ್ತರ ಪರೀಕ್ಷೆ ಬಳಿಕ ಬೆಳಗಾವಿ ಜಿಲ್ಲಾಸ್ಪತ್ರೆಯಿಂದ ಕಾಮಕುಮಾರ ಮುನಿಶ್ರೀ ಅವರ ಪಾರ್ಥಿವ ಶರೀರವನ್ನು ನಂದಿ ಪರ್ವ ಆಶ್ರಮಕ್ಕೆ ತರಲಾಯಿತು. ಈ ವೇಳೆ ಆಗಮನಕ್ಕೆ ಮುನ್ನವೇ ಭಕ್ತರಿಂದ ಸಾಮೂಹಿಕವಾಗಿ ನಮೋಕಾರ ಮಂತ್ರ ಪಠಣ ನಡೆಯುತ್ತಲಿತ್ತು. ಶ್ರೀಗಳ ಆತ್ಮಕ್ಕೆ ಚಿರಶಾಂತಿ ಕೋರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಸ್ಥಳೀಯ ಶಾಸಕ ಗಣೇಶ ಹುಕ್ಕೇರಿ ಸೇರಿದಂತೆ ಹಲವು ರಾಜಕೀಯ ನಾಯಕರು, ಗಣ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಜೈನಮುನಿ ದೇಹ 9 ಪೀಸ್
ಜೈನಮುನಿಯನ್ನು ಕರೆಂಟ್ ಶಾಕ್ ನೀಡಿ ಕೊಂದಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೆ, ಅವರ ದೇಹವನ್ನು 9 ತುಂಡುಗಳನ್ನಾಗಿ ಮಾಡಿ ಖಟಕಬಾವಿ ಗ್ರಾಮದ ಗದ್ದೆಯಲ್ಲಿರುವ 400 ಅಡಿ ಆಳದ ಕೊಳವೆ ಬಾವಿಗೆ ಹಾಕಲಾಗಿತ್ತು. ಜೆಸಿಬಿ ಮೂಲಕ ಕೊಳವೆಬಾವಿಯನ್ನು ಅಗೆಯುತ್ತಾ ಹೋದಾಗ 30 ಅಡಿ ಆಳದಲ್ಲಿ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ದೇಹದ 9 ಭಾಗಗಳು ಪತ್ತೆಯಾಗಿದ್ದವು. ಎರಡು ಕೈ, ಎರಡು ಕಾಲು, ಎರಡು ಭಾಗ ತೊಡೆ, ತಲೆಯ ಎರಡು ಭಾಗ, ಹೊಟ್ಟೆಯನ್ನು ಈ ಕ್ರೂರಿಗಳು ಪ್ರತ್ಯೇಕವಾಗಿ ಕತ್ತರಿಸಿ ಹಾಕಿದ್ದರು.
ಏನಿದು ಪ್ರಕರಣ?
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ಎರಡು ದಿನಗಳಿಂದ ನಾಪತ್ತೆಯಾಗಿದ್ದರು. ಜುಲೈ 6ರಿಂದ ನಂದಿಪರ್ವತ ಆಶ್ರಮದಿಂದ ನಾಪತ್ತೆಯಾಗಿದ್ದ ಜೈನಮುನಿಗಾಗಿ ಜುಲೈ 6ರಂದು ಇಡೀ ದಿನ ಆಶ್ರಮದ ಸುತ್ತಮುತ್ತ ಭಕ್ತರು ಶೋಧ ನಡೆಸಿದ್ದರು. ಇನ್ನು ಜೈನಮುನಿಗಳು ಎಲ್ಲೇ ಹೋಗಬೇಕಿದ್ದರೂ ಪಿಂಚಿ, ಕಮಂಡಲ ತಗೆದುಕೊಂಡು ಹೋಗುವ ಪ್ರತೀತಿ ಇದೆ. ಆದರೆ ಪಿಂಚಿ, ಕಮಂಡಲ ಹಾಗೂ ಮೊಬೈಲ್ ಎಲ್ಲವೂ ಕೋಣೆಯಲ್ಲಿಯೇ ಇತ್ತು. ಹೀಗಾಗಿ ಭಕ್ತರಲ್ಲಿ ಆತಂಕ ಹೆಚ್ಚಿತ್ತು. ಜೈನ ಬಸದಿಗೆ ಸಂಬಂಧಿಸಿದ ಕೆಲವು ದಾಖಲೆ ಪತ್ರ ಕೂಡ ನಾಪತ್ತೆಯಾಗಿದೆ ಎಂದು ಹೇಳಲಾಗಿತ್ತು. ಇದು ಸಹ ಆತಂಕವನ್ನು ಸೃಷ್ಟಿಸಿತ್ತು. ಬಳಿಕ ಶುಕ್ರವಾರ ಚಿಕ್ಕೋಡಿ ಪೊಲೀಸ್ ಠಾಣೆಗೆ ಜೈನಮುನಿಗಳು ನಾಪತ್ತೆಯಾದ ಬಗ್ಗೆ ದೂರು ನೀಡಿದ್ದರು.
ಕಳೆದ 15 ವರ್ಷಗಳಿಂದ ನಂದಿಪರ್ವತ ಆಶ್ರಮದಲ್ಲಿ ಮುನಿ ವಾಸವಿದ್ದರು. ಅವರು ನಾಪತ್ತೆಯಾದ ಬಗ್ಗೆ ಆಚಾರ್ಯ ಕಾಮಕುಮಾರನಂದಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಭೀಮಪ್ಪ ಉಗಾರೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ನಾಲ್ಕೇ ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ಚಿಕ್ಕೋಡಿ ಪೊಲೀಸರು ವಶಕ್ಕೆ ಪಡೆದಿದ್ದರು. ತನಿಖೆ ವೇಳೆ ಜೈನಮುನಿಯ ಹತ್ಯೆಯಾಗಿರುವುದು ಬಯಲಾಗಿತ್ತು.
ಆಪ್ತನಿಂದಲೇ ಕೊಲೆ ಆರೋಪ
ಈ ಕೊಲೆಯ ಹಿಂದೆ ಇರುವ ಪ್ರಮುಖ ಆರೋಪಿ ನಾರಾಯಣ ಮಾಳೆ ಜೈನಮುನಿ ಕಾಮಕುಮಾರ ನಂದಿ ಮಹಾರಾಜರಿಗೆ ಬಹಳ ಆಪ್ತನಾಗಿದ್ದ. ಈತ ಆಗಾಗ ಮಠಕ್ಕೆ ಬಂದು ಸ್ವಾಮೀಜಿಯವರ ವಿಶ್ವಾಸವನ್ನು ಗಳಿಸಿದ್ದ. ಅಲ್ಲದೆ, ತನ್ನ ಕಷ್ಟಗಳನ್ನು ಹೇಳಿಕೊಂಡು ಹಣವನ್ನು ಪಡೆದಿದ್ದ ಎನ್ನಲಾಗಿದೆ. ಕೊನೆಗೆ ಸ್ವಾಮೀಜಿ ಹಣವನ್ನು ವಾಪಸ್ ಕೇಳಿದಾಗ ಈ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈತನ ಆಪ್ತ ಹುಸೇನ್ ಡಲಾಯತ್ ಪ್ರಕರಣದ ಎರಡನೇ ಆರೋಪಿಯಾಗಿದ್ದಾನೆ.
ರಾತ್ರಿ ಇಡೀ ಪೊಲೀಸರಿಗೆ ತಪ್ಪು ಮಾಹಿತಿ
ತನಿಖೆ ಸಂದರ್ಭದಲ್ಲಿ ಶುಕ್ರವಾರ (ಜುಲೈ 7) ರಾತ್ರಿಯಿಡೀ ಇಬ್ಬರು ಆರೋಪಿಗಳು ಪೊಲೀಸರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಹತ್ಯೆ ಮಾಡಿ ಶವವನ್ನು ಎಲ್ಲಿ ಬಿಸಾಡಲಾಗಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡದೇ ಸತಾಯಿಸಿದ್ದರು. ಒಂದು ಬಾರಿ, ಕೊಲೆ ಮಾಡಿ ಮೃತದೇಹವನ್ನು ಕತ್ತರಿಸಿ ಕಟಕಬಾವಿ ಗ್ರಾಮದಲ್ಲಿ ತೆರೆದ ಕೊಳವೆಬಾವಿಯಲ್ಲಿ ಎಸೆದಿದ್ದೇವೆ ಎಂದಿದ್ದರು. ಮತ್ತೊಂದು ಬಾರಿ ಮೃತದೇಹ ಬಟ್ಟೆಯಲ್ಲಿ ಸುತ್ತಿ ನದಿಗೆ ಎಸೆದಿದ್ದೇವೆ ಎಂದಿದ್ದರು. ಕಟಕಬಾವಿ ಗ್ರಾಮದಲ್ಲಿ ರಾತ್ರಿಯಿಡೀ ಪರಿಶೀಲನೆ ನಡೆಸಿದ ಪೊಲೀಸರಿಗೆ ಶವ ದೊರೆತಿಲ್ಲ. ಹೀಗಾಗಿ ಶನಿವಾರ ಬೆಳಗ್ಗೆ 6.30ರಿಂದ ಮುನಿಗಳ ಮೃತದೇಹದ ಶೋಧಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಕೊನೆಗೂ ಶುಕ್ರವಾರ ಸಂಜೆಯೇ ಮೃತದೇಹ ಪತ್ತೆಯಾಯಿತು.
ಇದನ್ನೂ ಓದಿ: Mahisha Dasara : ಮೈಸೂರಲ್ಲಿ ಮತ್ತೆ ಮಹಿಷ ದಸರಾ ಎಂದ ಸಚಿವ ಮಹದೇವಪ್ಪ! ಹೊತ್ತಲಿದೆಯೇ ಕಿಡಿ?
ಹಣದ ವಿಚಾರ ಕಾರಣವೇ?
ಸದ್ಯಕ್ಕೆ ಹಣದ ವಿಚಾರದ ಬಗ್ಗೆ ಈ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಪ್ರಮುಖ ಆರೋಪಿಯು ಜೈನಮುನಿಯಿಂದ ಹಣವನ್ನು ಪಡೆದುಕೊಂಡಿದ್ದು, ಅದನ್ನು ವಾಪಸ್ ಕೇಳಿದ್ದಕ್ಕೆ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಆರೋಪಿಗಳು ಬಾಯಿಬಿಟ್ಟಿದ್ದಾರೆಂಬ ಮಾಹಿತಿ ಇದೆ. ಆದರೆ, ತನಿಖೆ ಮುಂದುವರಿದಿದೆ.