Site icon Vistara News

Jain Muni Murder : ಜೈನಮುನಿಯ ಕೊಂದು 9 ತುಂಡಾಗಿ ಕತ್ತರಿಸಿ ಎಸೆದ ಕಿರಾತಕರು ಇವರೇ ನೋಡಿ

Jain Muni murder case

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಹಿರೇಕೋಡಿ ಜೈನ ಮಠದ (Hirekodi jain mutt) ಜೈನಮುನಿಗಳಾದ (Jain Muni Murder) ಶ್ರೀ ಕಾಮಕುಮಾರ ನಂದಿ ಮಹಾರಾಜರ (sree Kamakumara Nandi Maharaj) ಭೀಕರ ಹತ್ಯೆಗೆ ಸಂಬಂಧಿಸಿ ಪೊಲೀಸರು ಇಬ್ಬರು ಕಿರಾತಕರನ್ನು ಬಂಧಿಸಿದ್ದಾರೆ (Murderers Arrest). ಸ್ವಾಮೀಜಿಯವರ ಆತ್ಮೀಯತೆ ಹೊಂದಿದ್ದು ಅವರ ವಿಶ್ವಾಸವನ್ನು ಸಂಪಾದಿಸಿದ್ದ ನಾರಾಯಣ ಮಾಳಿ ಎಂಬಾತನೇ ಈ ಕೊಲೆಯನ್ನು ಮಾಡಿದ ದುಷ್ಟ ಎಂದು ತಿಳಿದುಬಂದಿದೆ. ಅವನಿಗೆ ಸಹಕಾರ ನೀಡಿದವನು ಅವನಿಗೆ ಆಪ್ತನಾಗಿರುವ ಹುಸೇನ್‌ ಡಾಲಾಯತ್‌.

ನಾರಾಯಣ ಮಾಳಿ ಆಗಾಗ ಮಠಕ್ಕೆ ಬಂದು ಸ್ವಾಮೀಜಿಯವರ ವಿಶ್ವಾಸವನ್ನು ಗಳಿಸಿದ್ದ. ಅಲ್ಲದೆ, ತನ್ನ ಕಷ್ಟಗಳನ್ನು ಹೇಳಿಕೊಂಡು ಹಣವನ್ನು ಪಡೆದಿದ್ದ ಎನ್ನಲಾಗಿದೆ. ಕೊನೆಗೆ ಸ್ವಾಮೀಜಿ ಹಣವನ್ನು ವಾಪಸ್‌ ಕೇಳಿದಾಗ ಈ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಹುಸೇನ್‌ ಡಾಲಾಯತ್‌ ಈ ಕೊಲೆಯನ್ನು ಸಹಾಯ ಮಾಡಿದ ಕಿರಾತಕನಾಗಿದ್ದಾನೆ.

ಯಾರಿವರು ಈ ಹಂತಕರು?

ನಾರಾಯಣ ಮಾಳಿ ಹಿರೇಕೋಡಿ ನಿವಾಸಿಯಾದರೆ, ಹುಸೇನ್ ಢಾಲಾಯತ್ ಚಿಕ್ಕೋಡಿ ನಿವಾಸಿ.

ನಾರಾಣಯಣ ಮಾಳಿ ಮೂಲತಃ ರಾಯಬಾಗ ತಾಲೂಕಿನ ಖಟಕಬಾವಿ ನಿವಾಸಿ. ಆತ ಜೈನಮುನಿಗಳ ಆಶ್ರಮದ ಕೂಗಳತೆ ದೂರದಲ್ಲಿ ಜಮೀನು ಲೀಸ್ ಪಡೆದು ಬೇಸಾಯ ಮಾಡುತ್ತಿದ್ದ. ಹೀಗಾಗಿ ಕಳೆದ ಹಲವು ವರ್ಷಗಳಿಂದ ಅಲ್ಲೇ ವಾಸವಾಗಿದ್ದ.

ಇದೇ ವೇಳೆ ಜೈನಮುನಿ ಕಾಮಕುಮಾರ ನಂದಿ ಮಹಾರಾಜರಿಗೆ ಆಪ್ತನಾಗಿದ್ದ ನಾರಾಯಣ ಮಾಳಿ. ಜೊತೆಗೆ ಆಶ್ರಮದಲ್ಲಿ ಸಣ್ಣಪುಟ್ಟ ಕೆಲಸ ಮಾಡಿ ಜೈನಮುನಿಗಳ ವಿಶ್ವಾಸ ಗಳಿಸಿದ್ದ. ವೈಯಕ್ತಿಕ ಕಾರಣಕ್ಕೆ ಜೈನಮುನಿಗಳ ಬಳಿ 6 ಲಕ್ಷ ಹಣ ಪಡೆದಿದ್ದ ನಾರಾಯಣ ಹಣ ವಾಪಸ್ ಕೇಳಿದ್ದಕ್ಕೆ ಕೊಲೆಯನ್ನೇ ಮಾಡಿದ್ದಾನೆ.

ಜುಲೈ 5ರ ರಾತ್ರಿ ನಂದಿಪರ್ವತ ಆಶ್ರಮದ ಕೋಣೆಯಲ್ಲಿಯೇ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಮಾಡಲಾಗಿದೆ. ವಿದ್ಯುತ್ ಶಾಕ್ ನೀಡಿದ ಕತ್ತು ಹಿಸುಕಿ ಹತ್ಯೆ ಮಾಡಿದ ಬಗ್ಗೆ ಮಾಹಿತಿ ಇದೆ. ಬಳಿಕ ತನ್ನ ಸ್ನೇಹಿತನಾಗಿರುವ ಹುಸೇನ್‌ಗೆ ಕರೆ ಮಾಡಿ ಕರೆಸಿಕೊಂಡಿದ್ದ ಆರೋಪಿ ಮೃತದೇಹವನ್ನು ಖಟಕಬಾವಿ ಗ್ರಾಮದ ಹೊರವಲಯದಲ್ಲಿ ಒಯ್ದು ಒಂಬತ್ತು ತುಂಡುಗಳಾಗಿ ಕತ್ತರಿಸಿ ಬಟ್ಟೆ ಸುತ್ತಿ ಕೊಳವೆಬಾವಿಗೆ ಎಸೆದಿದ್ದ ಎನ್ನಲಾಗಿದೆ.

ಯಾರಿವರು ಸ್ವಾಮೀಜಿ, ಹಂತಕರು ಪತ್ತೆಯಾಗಿದ್ದು ಹೇಗೆ?

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದಲ್ಲಿ ಕಳೆದ 15 ವರ್ಷಗಳಿಂದ ವಾಸವಾಗಿರುವ ಜೈನಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ಎರಡು ದಿನಗಳಿಂದ ನಾಪತ್ತೆಯಾಗಿದ್ದರು.

ಜುಲೈ 6ರಿಂದ ನಂದಿಪರ್ವತ ಆಶ್ರಮದಿಂದ ನಾಪತ್ತೆಯಾಗಿದ್ದ ಜೈನಮುನಿಗಾಗಿ ಜುಲೈ 6ರಂದು ಇಡೀ ದಿನ ಆಶ್ರಮದ ಸುತ್ತಮುತ್ತ ಭಕ್ತರು ಶೋಧ ನಡೆಸಿದ್ದರು. ಇನ್ನು ಜೈನಮುನಿಗಳು ಎಲ್ಲೇ ಹೋಗಬೇಕಿದ್ದರೂ ಪಿಂಚಿ, ಕಮಂಡಲ ತಗೆದುಕೊಂಡು ಹೋಗುವ ಪ್ರತೀತಿ ಇದೆ. ಆದರೆ ಪಿಂಚಿ, ಕಮಂಡಲ ಹಾಗೂ ಮೊಬೈಲ್ ಎಲ್ಲವೂ ಕೋಣೆಯಲ್ಲಿಯೇ ಇತ್ತು. ಹೀಗಾಗಿ ಭಕ್ತರಲ್ಲಿ ಆತಂಕ ಹೆಚ್ಚಿತ್ತು. ಜೈನ ಬಸದಿಗೆ ಸಂಬಂಧಿಸಿದ ಕೆಲವು ದಾಖಲೆ ಪತ್ರ ಕೂಡ ನಾಪತ್ತೆಯಾಗಿದೆ ಎಂದು ಹೇಳಲಾಗಿತ್ತು. ಇದು ಸಹ ಆತಂಕವನ್ನು ಸೃಷ್ಟಿಸಿತ್ತು. ಬಳಿಕ ಶುಕ್ರವಾರ ಚಿಕ್ಕೋಡಿ ಪೊಲೀಸ್ ಠಾಣೆಗೆ ಜೈನಮುನಿಗಳು ನಾಪತ್ತೆಯಾದ ಬಗ್ಗೆ ದೂರು ನೀಡಿದ್ದರು.

ಕೊಳವೆ ಬಾವಿಯಲ್ಲಿ ಸಿಕ್ಕಿತು ಸ್ವಾಮೀಜಿಯ ದೇಹದ ಒಂಬತ್ತು ಪೀಸ್‌

ಈ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಆರಂಭದಲ್ಲೇ ನಾರಾಯಣ ಮಾಳಿ ಮೇಲೆ ಸಂಶಯ ಬಂದಿತ್ತು. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಆತ ಮತ್ತು ಹುಸೇನ್‌ ಡಾಲಾಯತ್‌ ಸೇರಿ ಸ್ವಾಮೀಜಿಯನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದರು. ಆದರೆ, ಕೊಲೆ ಮಾಡಿ ಎಲ್ಲಿ ಎಸೆದಿದ್ದೇವೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡದೆ ಸತಾಯಿಸಿದ್ದರು.

ಆದರೆ, ಅಂತಿಮವಾಗಿ ಮೃತದೇಹವನ್ನು ಕತ್ತರಿಸಿ ಕಟಕ ಬಾವಿ ಗ್ರಾಮದಲ್ಲಿ ತೆರೆದ ಕೊಳವೆ ಬಾವಿಯಲ್ಲಿ ಎಸೆದಿದ್ದೇವೆ ಎಂದು ಒಪ್ಪಿಕೊಂಡರು. ಅದಕ್ಕಿಂತ ಮೊದಲು ಬಟ್ಟೆಯಲ್ಲಿ ಸುತ್ತಿ ನದಿಗೆ ಎಸೆದಿದ್ದೇವೆ ಎಂದು ದಾರಿ ತಪ್ಪಿಸಿದ್ದರು. ರಾತ್ರಿ ಇಡೀ ಹುಡುಕಿದರೂ ಸಿಕ್ಕಿರಲಿಲ್ಲ. ಹೀಗಾಗಿ ಬೋರ್‌ವೆಲ್‌ನಲ್ಲೇ ಶವ ಇರಬಹುದು ಎಂಬ ಸಂಶಯವಿತ್ತು.

ಹೀಗಾಗಿ ಶನಿವಾರ ಬೆಳಗ್ಗೆ ಆರು ಗಂಟೆಯಿಂದಲೇ ತೆರೆದ ಕೊಳವೆ ಬಾವಿಯನ್ನು ಜೆಸಿಬಿ ಮೂಲಕ ಬಿಡಿಸುವ ಕಾರ್ಯಾಚರಣೆ ಆರಂಭವಾಯಿತು. ಸುಮಾರು 25 ಅಡಿ ಆಳಕ್ಕೆ ಅಗೆದಾಗ ರಕ್ತಸಿಕ್ತ ಬಟ್ಟೆ ಸಿಕ್ಕಿತ್ತು. 30 ಅಡಿ ಆಳಕ್ಕೆ ಹೋದಾಘ ದೇಹವನ್ನು ಒಂಬತ್ತು ತುಂಡು ಮಾಡಿ ಸೀರೆಯಲ್ಲಿ ಕಟ್ಟಿ ಎಸೆದದ್ದು ಕಂಡುಬಂತು.

ಇದನ್ನೂ ಓದಿ: Jain muni Murder‌ : ಜೈನಮುನಿ ಕಾಮಕುಮಾರ ನಂದಿ ಹತ್ಯೆ; ಅನ್ನಾಹಾರ ಬಿಟ್ಟ ಜೈನಮುನಿ ಗುಣಧರನಂದಿ ಮಹಾರಾಜ್

ನಾರಾಯಣ ಮಾಳೆ ಮತ್ತು ಹಸನ್‌ ಡಾಲಾಯತ್‌ ಜೈನ ಮುನಿಗಳಿಗೆ ಕರೆಂಟ್‌ ಶಾಕ್‌ ಕೊಡಿಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಕೊಲೆ ಮಾಡಿದ ಬಳಿಕ ದುರುಳರು ದೇಹವನ್ನು 9 ಭಾಗವನ್ನಾಗಿ ಕತ್ತರಿಸಿದ್ದಾರೆ. ಎರಡು ಕೈ, ಎರಡು ಕಾಲು, ಎರಡು ಭಾಗ ತೊಡೆ, ತಲೆಯ ಎರಡು ಭಾಗ, ಹೊಟ್ಟೆಯನ್ನು ಈ ಕ್ರೂರಿಗಳು ಪ್ರತ್ಯೇಕವಾಗಿ ಕತ್ತರಿಸಿ ಹಾಕಿದ್ದಾರೆ.

ನಾರಾಯಣ ಮಾಳೆ ಈ ಕೊಲೆಯ ಸೂತ್ರಧಾರನಾಗಿದ್ದು, ಹಸನ್‌ ಅದಕ್ಕೆ ಸಹಾಯ ಮಾಡಿದವನು. ದೇಹವನ್ನು ಒಂಬತ್ತು ಪೀಸ್‌ ಮಾಡಿದ್ದರಲ್ಲಿ ಹಸನ್‌ ಡಾಲಾಯತ್‌ ಕೈವಾಡವಿದೆ ಎನ್ನಲಾಗುತ್ತಿದೆ. ಇದು ಹಣದ ವಿಷಯದಲ್ಲಿ ನಡೆದ ಕೊಲೆ ಎನ್ನುವುದು ಮೇಲ್ನೋಟಕ್ಕೆ ತಿಳಿದುಬಂದಿರುವ ಸಂಗತಿ. ಆದರೆ, ನಿಜಕ್ಕೂ ಹಣವೇ ಕಾರಣವೇ ಬೇರೇನಾದರೂ ಸಂಗತಿಗಳಿವೆಯೇ ಎನ್ನುವುದು ತನಿಖೆಯಿಂದ ಬಯಲಾಗಬೇಕಾಗಿದೆ.

Exit mobile version