Site icon Vistara News

Jain Muni Murder: ಜೈನ ಮುನಿ ಹತ್ಯೆ ಹಿಂದಿರುವ ಶಕ್ತಿಗಳಿಗೆ ಕಠಿಣ ಶಿಕ್ಷೆಯಾಗಲಿ: ಕಟೀಲ್

Nalin Kumar Kateel

ಬೆಂಗಳೂರು: ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಹಿರೇಕೋಡಿ ನಂದಿ ಪರ್ವತ ಆಶ್ರಮದ ಪರಮಪೂಜ್ಯ ಆಚಾರ್ಯ 108 ಶ್ರೀ ಕಾಮಕುಮಾರನಂದಿ ಮಹಾರಾಜರ (Jain Muni Murder) ಭೀಕರ ಹತ್ಯೆಯ ಹಿಂದಿರುವ ಶಕ್ತಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.

ಇತ್ತೀಚೆಗೆ ಹತ್ಯೆಯಾದ ಶ್ರೀ ಕಾಮಕುಮಾರನಂದಿ ಮಹಾರಾಜರ ಆಶ್ರಮಕ್ಕೆ ಮಂಗಳವಾರ ನಳಿನ್‍ಕುಮಾರ್ ಕಟೀಲ್ ಅವರ ನೇತೃತ್ವದ ಸತ್ಯಶೋಧನಾ ಸಮಿತಿ ಭೇಟಿ ನೀಡಿ ಜೈನ ಮುನಿಗಳ ಹತ್ಯೆ ಬಗ್ಗೆ ಮಾಹಿತಿ ಪಡೆಯಿತು. ಬಳಿಕ ಚಿಕ್ಕೋಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಳಿನ್‍ ಕುಮಾರ್ ಕಟೀಲ್ ಅವರು, ದೇಹವನ್ನು 30 ಕಿಮೀ ಒಯ್ದು ಚಿಂದಿಚಿಂದಿ ಮಾಡಿದ್ದಾರೆ. ಕೊಳವೆಬಾವಿಯೊಳಗೆ ಹಾಕಿದ್ದು, 2 ದಿನಗಳ ಬಳಿಕ ವಿಷಯ ಹೊರಬಂದಿದೆ. ಇದರ ಹಿಂದೆ ಯಾವುದಾದರೂ ಶಕ್ತಿಗಳಿವೆಯೇ ಎಂಬ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ಆಗ್ರಹಿಸುವುದಾಗಿ ತಿಳಿಸಿದರು. ಇದರ ಹಿಂದಿರುವ ಶಕ್ತಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ನೀಡಬೇಕೆಂದು ಬಿಜೆಪಿ ಒತ್ತಾಯಿಸುವುದಾಗಿ ಹೇಳಿದರು.

ಒಬ್ಬ ಸಂತರ ಹತ್ಯೆ ಆದಾಗ ಎಲ್ಲ ಪಕ್ಷಗಳಿಗೆ ಜವಾಬ್ದಾರಿ ಇದೆ. ಸಂತರು, ಮಠಾಧೀಶರು ಈ ಭೀಕರ ಹತ್ಯೆಯಿಂದ ಆತಂಕಕ್ಕೆ ಒಳಗಾಗಿದ್ದಾರೆ. ಸಮಾಜದಲ್ಲಿ ಎಲ್ಲರಿಗೂ ವಿಶ್ವಾಸ ಮೂಡಿಸಲು ಸ್ಪಷ್ಟ, ಪಾರದರ್ಶಕ ತನಿಖೆ ಮಾಡಬೇಕು ಎಂದ ಅವರು, ಒಂದು ಹೆಸರನ್ನು ವಿಳಂಬವಾಗಿ ಎಫ್‍ಐಆರ್‌ನಲ್ಲಿ ಸೇರಿಸಿದ್ದರ ಕುರಿತು ಆಕ್ಷೇಪ ವ್ಯಕ್ತಪಡಿಸಿದರು.
ಪಾರದರ್ಶಕವಾಗಿ ತನಿಖೆ ಮಾಡಿ ಸಂಶಯ ನಿವಾರಿಸಿ ಎಂದು ಅವರು ಒತ್ತಾಯಿಸಿದರು. ‌

ಇದನ್ನೂ ಓದಿ | Jain Muni Murder: ಸ್ವಾಮೀಜಿ ಎಂದ ತಕ್ಷಣ ಪ್ರಕರಣ ಬದಲಾಗಲ್ಲ; ಕೊಲೆ ಕೊಲೆ ಅಷ್ಟೆ: ಸಿಬಿಐಗೆ ಕೊಡಲ್ಲ ಎಂದ ಸರ್ಕಾರ

ಪೊಲೀಸರ ಮೇಲೆ ವಿಶ್ವಾಸ ಇಲ್ಲದ ಕಾರಣ, ಈ ಹಿಂದೆ ಹರ್ಷ ಮತ್ತು ಪ್ರವೀಣ್ ನೆಟ್ಟಾರು ಅವರ ಕೊಲೆಯ ತನಿಖೆಗಳನ್ನು ಎನ್‍ಐಎಗೆ ನೀಡಿರಲಿಲ್ಲ. ಅಂತರ ಜಿಲ್ಲೆ ಆರೋಪಿಗಳಿರುವ ಸಾಧ್ಯತೆ ಗಮನಿಸಿ ಮತ್ತು ಕೃತ್ಯದ ಹಿಂದಿನ ಎಲ್ಲ ಶಕ್ತಿಗಳನ್ನು ಪತ್ತೆ ಹಚ್ಚುವ ದೃಷ್ಟಿಯಿಂದ ತನಿಖೆಯನ್ನು ಹಸ್ತಾಂತರ ಮಾಡಿದ್ದೆವು. ಜೈನ ಮುನಿಗಳು ಶ್ರೇಷ್ಠ ಸಂತ, ವಿದ್ವಾಂಸರು. ಹೀಗಾಗಿ ಘಟನೆಯ ಆಗುಹೋಗು, ಒಳ- ಹೊರ ವಿಚಾರಗಳು ಹೊರಬರಬೇಕಿದೆ. ಇಲ್ಲಿ ಸಂಶಯ ನಿವಾರಣೆಗೆ ಪಾರದರ್ಶಕ ತನಿಖೆಗೆ ಆಗ್ರಹಿಸಿದ್ದೇವೆ ಎಂದು ಪ್ರಶ್ನೆಗೆ ಉತ್ತರಿಸಿದರು. ನಾವು ಸಿಬಿಐ ತನಿಖೆಗೆ ಆಗ್ರಹಿಸಿದ್ದೇವೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಪ್ರಕರಣವನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಳ್ಳಬಾರದು. ಹಣಕಾಸಿನ ವ್ಯವಹಾರದ ಕುರಿತಂತೆ ಕೂಲಂಕಷ ತನಿಖೆ ಆಗಬೇಕಿದೆ. ಇಬ್ಬರೇ ವ್ಯಕ್ತಿಗಳಿಂದ ಕೊಲೆ ಆಗಿದೆಯೇ? ಇಂಥ ಕೃತ್ಯ ಮಾಡಲು ಇಬ್ಬರಿಂದ ಮಾತ್ರ ಸಾಧ್ಯವೇ ಎಂಬ ಕುರಿತು ಪರಿಪೂರ್ಣ ತನಿಖೆ ನಡೆಸಲು ಆಗ್ರಹಿಸಿದ ಅವರು, ಜನರ ಮನಸ್ಸಿನ ಸಂಶಯವೂ ನಿವಾರಣೆ ಆಗಬೇಕು ಎಂದು ತಿಳಿಸಿದರು.

ಇದು ದೇಶದ ಗಮನ ಸೆಳೆದ ಹತ್ಯೆ. ಎಲ್ಲ ಸಂತರು, ಸ್ವಾಮೀಜಿಗಳಿಗೆ ಭಯ ಶುರುವಾಗಿದೆ. ಎಲ್ಲ ಮಠಾಧಿಪತಿಗಳಿಗೆ, ಮುನಿಗಳಿಗೆ ಆತಂಕದ ಸ್ಥಿತಿ ಬಂದಿದೆ. ಸಂತರು ಭಯದಿಂದ ಇರುವಂತೆ ಆಗಬಾರದು ಎಂದ ಅವರು,
ಪೊಲೀಸರು ಸೇರಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದೇವೆ. ಬಳಿಕ ಸತ್ಯಶೋಧನಾ ಸಮಿತಿ ತನ್ನ ವರದಿ ನೀಡಲಿದೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ನಮ್ಮ ವರದಿಯನ್ನು ಮಾಧ್ಯಮಗಳ ಮೂಲಕ ಸಮಾಜದ ಮುಂದಿಡುವುದಾಗಿ ಹೇಳಿದರು.

ಇದನ್ನೂ ಓದಿ | Murder Case: ವೇಣುಗೋಪಾಲ್‌ ಕೊಲೆ ಆಕಸ್ಮಿಕ ಎಂದ ಸಿಎಂ ಸಿದ್ದರಾಮಯ್ಯ: ಸರ್ಕಾರದ ಸಮರ್ಥನೆಗೆ ಬಿಜೆಪಿ ಆಕ್ರೋಶ

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಮಹೇಶ್ ಟೆಂಗಿನಕಾಯಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದೆ ಮಂಗಳಾ ಸುರೇಶ್ ಅಂಗಡಿ, ವಿಧಾನಪರಿಷತ್ ಮಾಜಿ ಸದಸ್ಯ ಮಹಾಂತೇಶ್ ಕವಟಗಿಮಠ, ಜಿಲ್ಲಾಧ್ಯಕ್ಷರಾದ ಅನಿಲ್ ಬೆನಕೆ, ಡಾ. ರಾಜೇಶ್ ನೇರ್ಲಿ, ಸಂಜಯ್ ಪಾಟೀಲ್ ಮತ್ತು ರಾಜ್ಯ ವಕ್ತಾರ ಎಂ.ಬಿ. ಜಿರಲಿ ಉಪಸ್ಥಿತರಿದ್ದರು.

Exit mobile version