ಕೊಪ್ಪಳ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (janardhan reddy) ಹೊಸ ಪಕ್ಷ ಕೆಆರ್‌ಪಿಪಿ ಸ್ಥಾಪನೆ ಮಾಡಿದ ಬಳಿಕ ಪ್ರಚಾರವನ್ನೂ ಚುರುಕುಗೊಳಿಸಿದ್ದು, ಭಾನುವಾರ (ಮಾ. 19) ಗಂಗಾವತಿಯಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಈ ವೇಳೆ ಇಬ್ಬರು ಅನಾಥ ಮಕ್ಕಳನ್ನು ಸಹ ದತ್ತು ಪಡೆದು ಮಾನವೀಯತೆ ಮರೆದಿದ್ದಾರೆ. ಅಲ್ಲದೆ, ರಾಜಕೀಯವಾಗಿ ಮಾತನಾಡಿದ ಅವರು, ಚುನಾವಣೆ (Karnataka Election 2023) ಬಳಿಕ ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ವಿರುಪಾಪುರ ತಾಂಡದ ಜ್ಯೋತಿ ಸ್ವರೂಪ್, ವೇಣು ಎಂಬ ಇಬ್ಬರು ಅನಾಥ ಮಕ್ಕಳನ್ನು ರೆಡ್ಡಿ ದತ್ತುಪಡೆದುಕೊಂಡಿದ್ದು, ಮಕ್ಕಳ ಶಿಕ್ಷಣ ಸೇರಿ ಸಂಪೂರ್ಣ ಜವಾಬ್ದಾರಿಯನ್ನು ತಾವು ವಹಿಸಿಕೊಳ್ಳುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: Narendra Modi: ಒಂದು ದಿನದಲ್ಲಿ ಮೂರು ಜಿಲ್ಲೆಗಳ ಪ್ರವಾಸ; ನಾಲ್ಕು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿರುವ ಪ್ರಧಾನಿ ನರೇಂದ್ರ ಮೋದಿ
ಲಂಬಾಣಿ ಉಡುಪಿನಲ್ಲಿಯೇ ಕಾರ್ಯಕ್ರಮ ನಡೆಸಿದ ಜನಾರ್ದನ ರೆಡ್ಡಿ ಹಾಗೂ ಪತ್ನಿ ಅರುಣಾ ಲಕ್ಷ್ಮಿ, ಕೆಆರ್‌ಪಿಪಿಯನ್ನು ಬೆಂಬಲಿಸುವಂತೆ ಮತದಾರರಲ್ಲಿ ಕೋರಿದರು. ಈ ವೇಳೆ ಲಂಬಾಣಿ ಸಮುದಾಯದವರು ರೆಡ್ಡಿಗೆ ಬೆಳ್ಳಿ ಕಿರೀಟ ತೊಡಿಸಿ ಸನ್ಮಾನಿಸಿದರು.
ನಾನು ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ
ನಾನು ಯಾವುದೇ ಕಾರಣಕ್ಕೂ ಬಿಜೆಪಿಗೆ ಕಾಲಿಡುವ ಪ್ರಶ್ನೆಯೇ ಇಲ್ಲ. ಇದರ ಬಗ್ಗೆ ನಾನು ತುಂಬಾ ಕ್ಲಿಯರ್ ಆಗಿದ್ದೇನೆ. ಕೆಆರ್‌ಪಿಪಿಯನ್ನು ಸ್ಥಾಪನೆ ಮಾಡಿರುವುದೇ ಸ್ವತಂತ್ರವಾಗಿ ಸ್ಪರ್ಧೆ ನಡೆಸಲು. ನಾನು ನನ್ನ ಪಕ್ಷದ ಮೂಲಕವೇ ಚುನಾವಣೆಯನ್ನು ಎದುರಿಸುತ್ತೇನೆ ಎಂದು ಘೋಷಿಸಿದರು.
ಕೆಆರ್‌ಪಿಪಿ ವತಿಯಿಂದ 12 ಕಡೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಇದೇ ಮಾರ್ಚ್ 30ರ ಒಳಗಾಗಿ ಉಳಿದ ಕಡೆ ಪ್ರಕಟಿಸಲಾಗುವುದು. ಗಂಗಾವತಿಯಲ್ಲಿ ನಮ್ಮ ಪರವಾದ ಅಲೆ ಇದೆ. ಇದೇ ಕಾರಣಕ್ಕಾಗಿ ಬಿಜೆಪಿಯವರು ಈಗ ಇಲ್ಲಿಗೆ ಬರುತ್ತಿದ್ದಾರೆ. ಐದು ವರ್ಷದ ನಂತರ ಅವರಿಗೆ ಕ್ಷೇತ್ರ ನೆನಪಾಗುತ್ತಿರುವುದಕ್ಕೆ ನನಗೆ ಖುಷಿಯಾಗಿದೆ ಎಂದು ರೆಡ್ಡಿ ಹೇಳಿದರು.
ಇದನ್ನೂ ಓದಿ: Karnataka Election 2023: ಸ್ಪರ್ಧೆ ಖಚಿತ ಎಂದ ಆರ್. ಶಂಕರ್; ಮತದಾರರಿಗೆ ಭರ್ಜರಿ ಬಾಡೂಟ
ಕೆಆರ್‌ಪಿಪಿ ಪಕ್ಷದ ಚಿನ್ಹೆ ಬಗ್ಗೆ ಇರುವ ಗೊಂದಲವು ಈ ಯುಗಾದಿ ಒಳಗೆ ಪರಿಹಾರ ಆಗಲಿದೆ. ಆ ಬಗ್ಗೆ ಯಾವುದೇ ಚಿಂತೆ ಇಲ್ಲ. ನಾನು ಪಕ್ಷ ಸಂಘಟನೆಯತ್ತ ಹೆಚ್ಚಿನ ಒತ್ತು ನೀಡುತ್ತಿದ್ದೇನೆ. ನಮ್ಮ ಪಕ್ಷದ ಪರವಾಗಿ ಜನಾಭಿಪ್ರಾಯ ವ್ಯಕ್ತವಾಗಿದೆ ಎಂದು ಹೇಳಿದರು.