Site icon Vistara News

ರಾಜ್ಯಸಭೆಯಲ್ಲಿ ಅಡ್ಡಮತದಾನ ಮಾಡಿದ ಇಬ್ಬರು JDS ಶಾಸಕರ ಉಚ್ಚಾಟನೆ

JDS MLA Srinivas and srinivas gowda

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ ಕೋಲಾರ ಶಾಸಕ ಕೆ. ಶ್ರೀನಿವಾಸ ಗೌಡ ಹಾಗೂ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಅವರನ್ನು ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಲಾಗಿದೆ.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಬುಧವಾರ ನಡೆದ ಕೋರ್ ಕಮಿಟಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೋರ್ ಕಮಿಟಿ ಅಧ್ಯಕ್ಷ ಬಂಡೆಪ್ಪ ಖಾಷೆಂಪೂರ್ ತಿಳಿಸಿದ್ದಾರೆ.

ಪಕ್ಷದಿಂದ ಉಚ್ಚಾಟಿಸುವ ಜತೆಗೆ, ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಇಬ್ಬರೂ ಶಾಸಕರನ್ನು ವಿಧಾನಸಭೆ ಸದಸ್ಯತ್ವದಿಂದ ಅನರ್ಹಗೊಳಿಸಲು ತಕ್ಷಣವೇ ವಿಧಾನಸಭಾಧ್ಯಕ್ಷರಿಗೆ ದೂರು ನೀಡಲು ಕೂಡ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಒಂದೆರಡು ದಿನದಲ್ಲಿ ಸ್ಪೀಕರ್ ಅವರಿಗೆ ದೂರು ನೀಡಲಾಗುವುದು ಎಂದು ಬಂಡೆಪ್ಪ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | JDSಗೆ ಕೈಕೊಟ್ಟ ʼಶ್ರೀನಿವಾಸʼರು: H.D. ಕುಮಾರಸ್ವಾಮಿ ಆರೋಗ್ಯದಲ್ಲಿ ಏರುಪೇರು

ರಾಜ್ಯಸಭೆ ಚುನಾವಣೆಯಲ್ಲಿ ಕೋಲಾರ ಶಾಸಕ ಶ್ರೀನಿವಾಸ್‌ ಕಾಂಗ್ರೆಸ್‌ ಪರ ಮತ ಚಲಾಯಿಸಿದ್ದರು. ಆದರೆ ಗುಬ್ಬಿ ಶಾಸಕ ಅಚ್ಚರಿಯೆಂಬಂತೆ ಬಿಜೆಪಿ ಅಭ್ಯರ್ಥಿ ಲೆಹರ್‌ಸಿಂಗ್‌ ಅವರಿಗೆ ಮತ ಚಲಾಯಿಸಿದ್ದರು. ಲೆಹರ್‌ ಸಿಂಗ್‌ ಹೆಸರು ಮತದಾನ ಪತ್ರದಲ್ಲಿ ಕೊನೆಯಲ್ಲಿತ್ತು. ತಮಗೆ ಮತದಾನದ ಪತ್ರ ತೋರಿಸುವಾಗ ಹೆಬ್ಬೆರಳಿನಿಂದ ಮುಚ್ಚಿಹಿಡಿದು, ಯಾರಿಗೂ ಮತ ಚಲಾಯಿಸಿಲ್ಲ ಎನ್ನುವಂತೆ ಹೇಳಿದ್ದರು ಎಂದು ಜೆಡಿಎಸ್‌ ಏಜೆಂಟ್‌ ಎಚ್‌.ಡಿ. ರೇವಣ್ಣ ತಿಳಿಸಿದ್ದರು. ಆದರೆ, ಮತ ಎಣಿಕೆ ನಂತರವಷ್ಟೆ, ಲೆಹರ್‌ಸಿಂಗ್‌ಗೆ ಈ ಮತ ಚಲಾವಣೆ ಆಗಿರುವುದು ತಿಳಿದುಬಂದಿತ್ತು. ಆನಂತರವೂ ಗುಬ್ಬಿ ಶಾಸಕ ಮತ್ತು ಜೆಡಿಎಸ್‌ ಕಾರ್ಯಕರ್ತರ ನಡುವೆ ಹಗ್ಗಜಗ್ಗಾಟ ಮುಂದುವರಿದೇ ಇದೆ. ಕುಮಾರಸ್ವಾಮಿ ವಿರುದ್ಧವೂ ಶ್ರೀನಿವಾಸ್‌ ವಾಗ್ದಾಳಿ ನಡೆಸಿದ್ದರು.

ಸುದೀರ್ಘ ಸಭೆ

ರಾಜ್ಯಸಭೆ ಚುನಾವಣೆಯಲ್ಲಿ ನಡೆದ ಬೆಳೆವಣಿಗೆಗಳ ಬಗ್ಗೆ ಕೊಟ್ ಕಮಿಟಿ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಯಿತು. ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಮಾಜಿ ಸಚಿವ ಎಚ್.ಡಿ. ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ಜಪ್ರುಲ್ಲಾ ಖಾನ್, ಎಂ.ಕೃಷ್ಣಾರೆಡ್ಡಿ, ರಾಜಾ ವೆಂಕಟಪ್ಪ ನಾಯಕ, ಕೆ.ಎಂ. ತಿಮ್ಮರಾಯಪ್ಪ, ಟಿ.ಎ.ಶರವಣ, ಶಾರದಾ ಪೂರ್ಯನಾಯಕ್, ರೂತ್ ಮನೋರಮಾ, ವಿ.ನಾರಾಯಣಸ್ವಾಮಿ, ಸಮೃದ್ಧಿ ಮಂಜುನಾಥ್, ವಿಲ್ಸನ್ ರೆಡ್ಡಿ, ಸುಧಾಕರ ಲಾಲ್, ಹೆಚ್.ಎಂ.ರಮೇಶ್ ಗೌಡ, ಆರ್.ಪ್ರಕಾಶ್, ಸಯ್ಯದ್ ಶಫಿ ಉಲ್ಲಾ, ನಾಸಿರ್ ಉಸ್ತಾದ್ ಹಾಗೂ ಕೋರ್ ಕಮಿಟಿ ಸಂಚಾಲಕರಾದ ಕೆ.ಎನ್. ತಿಪ್ಪೇಸ್ವಾಮಿ ಅವರು ಭಾಗವಹಿಸಿದ್ದರು.

ಇದನ್ನೂ ಓದಿ | ಗುಬ್ಬಿ ಶಾಸಕ ಎಸ್. ಆರ್. ಶ್ರೀನಿವಾಸ್ ಆಪ್ತ JDSನಿಂದ ಉಚ್ಚಾಟನೆ

Exit mobile version