ಮಂಡ್ಯ: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ನಾಗಮಂಗಲದಲ್ಲಿ ಜೆಡಿಎಸ್ ಬೃಹತ್ ಸಮಾವೇಶ ಆಯೋಜಿಸಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಕುಮಾರಸ್ವಾಮಿ, ಗಣ್ಯರ ಆಗಮನ ವಿಳಂಬ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ಭರ್ಜರಿ ಬಾಡೂಟ ವ್ಯವಸ್ಥೆ ಮಾಡಲಾಗಿದೆ. ಭಾನುವಾರ ಮಧ್ಯಾಹ್ನ ಊಟದ ನಂತರ ಸಮಾವೇಶ ಆರಂಭವಾಗಲಿದೆ.
ನಾಗಮಂಗಲದ ಸೋಮನಹಳ್ಳಿ ಅಮ್ಮನ ದೇವಾಲಯ ಆವರಣದಲ್ಲಿ ಸಮಾವೇಶ ಏರ್ಪಡಿಸಲಾಗಿದೆ. ಬೃಹತ್ ವೇದಿಕೆ ನಿರ್ಮಾಣ, 20 ಸಾವಿರ ಕಾರ್ಯಕರ್ತರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಭರ್ಜರಿ ಬಾಡೂಟ ವ್ಯವಸ್ಥೆ ಇದೆ. 6.5 ಟನ್ ಮಟನ್, 2.5 ಟನ್ ಚಿಕನ್, ಬೋಟಿ, ಮಟನ್ ಕುರ್ಮ, ಚಿಕನ್ ಫ್ರೈ, ಮುದ್ದೆ, ಅನ್ನ ಸಾಂಬಾರ್ ತಯಾರಿಸಲಾಗಿದೆ. ಚನ್ನರಾಯಪಟ್ಟಣ ಮೂಲದ ಬಾಣಸಿಗ ಸುನೀಲ್ ನೇತೃತ್ವದಲ್ಲಿ ಅಡುಗೆ ಸಿದ್ಧಪಡಿಸಲಾಗಿದೆ.
ಇದನ್ನೂ ಓದಿ | ಬರೆದಿಟ್ಟುಕೊಳ್ಳಿ, ಕಾಂಗ್ರೆಸ್ ಪಕ್ಷ 70 ಸೀಟು ದಾಟಲ್ಲ: HD ಕುಮಾರಸ್ವಾಮಿ ಚಾಲೆಂಜ್
ಪಕ್ಷ ಸಂಘಟನೆಗೆ ಒತ್ತು
ಸತತ ಸೋಲುಗಳ ಬಳಿಕ ಎಚ್ಚೆತ್ತಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು, ಮುಂದಿನ ಸಾರ್ವತ್ರಿಕ ಚುನಾವಣೆ ದೃಷ್ಟಿಯಿಂದ ಈ ಸಮಾವೇಶ ಆಯೋಜಿಸಿದ್ದಾರೆ. ಸಮಾವೇಶದ ಹಿಂದೆ ಮಾಜಿ ಸಚಿವ ಚಲುವರಾಯಸ್ವಾಮಿ ಅವರನ್ನು ಹಣಿಯುವ ಮಾಸ್ಟರ್ ಪ್ಲಾನ್ ಇದೆ ಎನ್ನಲಾಗಿದೆ.
ಚಲುವರಾಯಸ್ವಾಮಿ ಬಲಗೈ ಬಂಟ ಯದುರಾಜ್ ಸೇರಿ ಹಲವು ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಜೆಡಿಎಸ್ ನಿಂದ ಉಚ್ಚಾಟನೆಗೊಂಡು ಪಕ್ಷೇತರರಾಗಿ ಸ್ಪರ್ಧಿಸಲು ತೀರ್ಮಾನಿಸಿರುವ ಎಲ್.ಆರ್.ಶಿವರಾಮೇಗೌಡರಿಗೂ ಈ ಸಮಾವೇಶದ ಮೂಲಕ ತಿರುಗೇಟು ನೀಡಲು ಜೆಡಿಎಸ್ ಮುಂದಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಮಾಜಿ ಸಚಿವರಾದ ಎಚ್.ಡಿ.ರೇವಣ್ಣ, ಬಂಡೆಪ್ಪ ಕಾಶಂಫೂರ್, ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ ಸೇರಿ ಹಲವು ನಾಯಕರು ಭಾಗಿಯಾಗಲಿದ್ದಾರೆ.
ಸಮಾವೇಶಕ್ಕೆ ಬರುವ ಕಾರ್ಯಕರ್ತರಿಗೆ ನಾಗಮಂಗಲ ಶಾಸಕ ಸುರೇಶ ಗೌಡ ಬಾಡೂಟದ ವ್ಯವಸ್ಥೆ ಮಾಡಿದ್ದಾರೆ.
ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ನಾಗಮಂಗಲದ ಟಿ ಬಿ ವೃತ್ತದಿಂದ ಸೋಮನಹಳ್ಳಿ ದೇವಾಲಯದವರೆಗೆ ಕಾರ್ಯಕರ್ತರು ಬೈಕ್ ಮೆರವಣಿಗೆ ನಡೆಸಿ ಮಾಜಿ ಸಿಎಂ ಕುಮಾರಸ್ವಾಮಿಗೆ ಭರ್ಜರಿ ಸ್ವಾಗತ ನೀಡಲಿದ್ದಾರೆ.
ಮುಂದಿನ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧಿಸಲ್ಲ :ಕುಮಾರಸ್ವಾಮಿ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ರಾಜ್ಯದ ಯಾವುದೇ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ನಿಖಿಲ್ ಅವರು ಸದ್ಯ ಪಕ್ಷ ಸಂಘಟನೆಗೆ ರಾಜ್ಯಾದ್ಯಂತ ಪ್ರವಾಸ ಮಾಡಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.
ಇದನ್ನೂ ಓದಿ | ಜಿ.ಟಿ. ದೇವೇಗೌಡ ಜೆಡಿಎಸ್‌ನಲ್ಲೇ ಉಳಿಯುವಂತೆ ಮನವೊಲಿಸಿದ ಎಚ್.ಡಿ. ಕುಮಾರಸ್ವಾಮಿ