ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುರಿತು ಮಧುಗಿರಿ ಮಾಜಿ ಶಾಸಕ ಕೆ.ಎನ್. ರಾಜಣ್ಣ ಆಡಿರುವ ಮಾತಿನ ವಿರುದ್ಧ ಜೆಡಿಎಸ್ ನಾಯಕರು ತಿರುಗಿಬಿದ್ದಿದ್ದಾರೆ. ಕಾನೂನು ಸಚಿವ ಮಾಧುಸ್ವಾಮಿ ಸಹ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹಾಸನದಲ್ಲಿ ಪ್ರತಿಕ್ರಿಯೆ ನೀಡಿರುವ ಎಚ್.ಡಿ. ದೇವೇಗೌಡರ ಮೊಮ್ಮಗ ಹಾಗೂ ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಇವರು ಜನಪ್ರತಿನಿಧಿಯಾಗಲು ಲಾಯಕ್ಕಿಲ್ಲ ಎಂದು ಮಧುಗಿರಿ ಜನರು ಮನೆಗೆ ಕಳಿಸಿದ್ದಾರೆ. ಲೆಕ್ಕಿಕ್ಕಿಲ್ಲದವರ ಬಗ್ಗೆ ನಾನು ಏಕೆ ಪ್ರತಿಕ್ರಿಯೆ ಕೊಡಬೇಕು? ದೊಡ್ಡ ದಂಧೆಕೋರ ಅವನು. ದೇವೇಗೌಡರ ಕಾಲಿನ ಧೂಳಿಗೂ ಸಮಾನ ಅಲ್ಲ ಅವನು. ನೀಚಬಾಯಲ್ಲಿ ನೀಚಪದ ಬಂದಿದೆ, ದೇವರು ಉತ್ತರ ಕೊಡುತ್ತಾರೆ. ಅವನು ಜನಪ್ರತಿನಿಧಿಯಲ್ಲ, ಸೋತು ಮನೆಗೆ ಕೂತುಕೊಂಡಿದ್ದಾನೆ. ಹೀಗೆಯೇ ಮಾತನಾಡುತ್ತಿದ್ದರೆ ಹುಚ್ಚು ಸಂತೆಯಲ್ಲಿ ನಾಯಿಗೆ ಹೊಡೆದ ರೀತಿ ಹೊಡೆಯುತ್ತಾರೆ ಎಂದು ಕಿಡಿಕಾರಿದ್ದಾರೆ.
ಕೀಳು ಅಭಿರುಚಿ: ಮಧುಗಿರಿ ಶಾಸಕ ವೀರಭದ್ರಯ್ಯ
ಕೆ.ಎನ್.ರಾಜಣ್ಣ ಕೀಳು ಅಭಿರುಚಿಯ ಹೇಳಿಕೆ ನೀಡಿದ್ದಾರೆ ಎಂದು ಮಧುಗಿರಿ ಶಾಸಕ ವೀರಭದ್ರಯ್ಯ ತುಮಕೂರಿನಲ್ಲಿ ಹೇಳಿದ್ದಾರೆ. ರಾಷ್ಟ್ರ ನಾಯಕರ ದೇವೇಗೌಡರ ಬಗ್ಗೆ ಕೀಳಾಗಿ ಮಾತನಾಡಿರುವುದು ವಿಷಾದನೀಯ. ರಾಜಣ್ಣ ಹೇಳಿಕೆಯನ್ನು ವಿರೋಧಿಸಿ ಶನಿವಾರ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. ಜೆಡಿಎಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಗೆಲ್ಲುವುದಕ್ಕೆ ಏನೇನೋ ಹೇಳಬಾರದು: ರವೀಂದ್ರ ಶ್ರೀಕಂಠಯ್ಯ
ಮಂಡ್ಯದಲ್ಲಿ ಪ್ರತಿಕ್ರಿಯೆ ನೀಡಿರುವ ಶ್ರೀರಂಗಪಟ್ಟಣದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ, ರಾಜಕಾರಣದಲ್ಲಿ ಗೆಲ್ಲಬೇಕು ಎಂದು ಏನೇನೋ ಹೇಳಬಾರದು. ರಾಜಣ್ಣ ನೀವು ಒಕ್ಕಲಿಗ ಮುಖಂಡರಿದ್ದೀರಿ, ನೀವು ಎಂಎಲ್ಎ ಆಗಿ, ನಮಗೆ ಅಭ್ಯಂತರವಿಲ್ಲ. ಆದರೆ ಒಕ್ಕಲಿಗ ಮುಖಂಡ ದೇವೇಗೌಡರನ್ನು ನಾಲ್ಕು ಜನ ಹೊತ್ತುಕೊಂಡು ಹೋಗುತ್ತಾರೆ ಎನ್ನುತ್ತೀರಲ್ಲ, ಇದು ಸರಿಯಲ್ಲ.
ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡುವುದು ನ್ಯಾಯವೇ? ನಿಮ್ಮ ರಾಜಕೀಯ ಜೀವನದಲ್ಲಿ ಈ ಹೇಳಿಕೆ ಕಳಂಕ. ನೀವು ಅವರ ಬಗ್ಗೆ ಆಡಿರುವ ಹಗುರ ಮಾತುಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಿಮ್ಮ ತಂದೆಯೂ ಸತ್ತಿದ್ದಾರೆ, ನಿಮಗೂ ಸಾವು ಬರುತ್ತದೆ, ನನಗೂ ಸಾವು ಬರುತ್ತದೆ. ಜನರ ಸೇವೆಗೆ ತಮ್ಮ ಇಡೀ ಜೀವನವನ್ನೇ ಮುಡಿಪಾಡಗಿದ್ದ ನಮ್ಮ ನಾಯಕನ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಬೇಡಿ ಎಂದಿದ್ದಾರೆ.
ಸಾಕ್ಷಿಪ್ರಜ್ಞೆ ದೇವೇಗೌಡರು: ಟಿ.ಎ. ಶರವಣ
ದೇಶದ ಸಾಕ್ಷಿ ಪ್ರಜ್ಞೆ, ಕನ್ನಡ ನಾಡಿನ ದಿಗ್ಗಜ ಚೇತನ ಮಾಜಿ ಪ್ರಧಾನಿ ದೇವೇಗೌಡರ ಆಯುಷ್ಯದ ಬಗ್ಗೆ ಕಾಂಗ್ರೆಸ್ ನಾಯಕ ರಾಜಣ್ಣ ಅವರು ಆಡಿರುವ ಹೀನಾಯ ಮಾತುಗಳು, ರಾಜಣ್ಣ ಅವರ ನೀಚ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ ಎಂದು ಜೆಡಿಎಸ್ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಟಿ. ಎ. ಶರವಣ ಹೇಳಿದ್ದಾರೆ.
ಹುಟ್ಟು ಸಾವು ಪ್ರಕೃತಿಯ ನಿಯಮ. ಅದನ್ನು ಮೀರಿದವರು ಯಾರೂ ಇಲ್ಲ. ಇದು ವಾಸ್ತವದ ಸತ್ಯ. ಇಂಥ ಜಗದ ನಿಯಮವನ್ನು ದೇವೇಗೌಡರಿಗೆ ಸಮೀಕರಿಸಿ ಮಾತನಾಡಿರುವ ರಾಜಣ್ಣ, ತಾವು ಶಾಶ್ವತವಾಗಿ ಈ ಭೂಮಿಯ ಮೇಲೆ ಉಳಿಯುತ್ತೇನೆ ಎಂಬ ಹುಚ್ಚುತನ, ಹುಸಿ ನಂಬಿಕೆಯಿಂದ ದುರಹಂಕಾರದ ಮಾತುಗಳನ್ನು ಆಡಿರುವುದು ಖಂಡನಾರ್ಹ.
ಈ ನೆಲದ ಮಗ, ಈ ಮಣ್ಣಿನ ಮಗ ದೇವೇಗೌಡರಿಗೆ ನಾಡಿನ ಜನಮಾನಸದ ಪ್ರೀತಿಯೇ ಆಯಸ್ಸು. ಜನರ ಬೆಂಬಲವೇ ಶ್ರೀರಕ್ಷೆ. ಜನರಿಗಾಗಿ ಅವರು ನಡೆಸುತ್ತಿರುವ ಪ್ರತಿ ಹೋರಾಟವೂ ಅವರ ಆಯಸ್ಸನ್ನು ಹೆಚ್ಚಿಸುತ್ತಲೇ ಇದೆ. ನಮ್ಮೆಲ್ಲರ ಪ್ರೀತಿ, ಹಾರೈಕೆ ಅವರ ಜತೆಗಿದೆ.
ದೇವೇಗೌಡರ ಬದುಕೇ ಒಂದು ಯುಗ. ಅವರ ಜೀವನ ಪ್ರೀತಿಗೆ ಸರಿ ಸಾಟಿಯೇ ಇಲ್ಲ. ಈ ಇಳಿ ವಯಸ್ಸಿನಲ್ಲೂ ಯೋಗ, ಓದು, ಸಭೆ, ಸಮಾರಂಭದಲ್ಲಿ ಪಾದರಸದಂತೆ ಪಾಲ್ಗೊಳ್ಳುವ ಅವರ ಚೈತನ್ಯಕ್ಕೆ ಕೊನೆಯೇ ಇಲ್ಲ. ಯುವಕರನ್ನೂ ನಾಚಿಸುವ ಅವರ ಸಾಮರ್ಥ್ಯವೇ ಅವರನ್ನು ದೇಶದ ಉನ್ನತ ನಾಯಕರಲ್ಲಿ ಒಬ್ಬರನ್ನಾಗಿಸಿದೆ.
ರಾಜಕೀಯವಾಗಿ ಕುಸಿದು ಹೋದ ವ್ಯಕ್ತಿಯ ಇಂತಹ ಹೇಳಿಕೆ ಕೋಟ್ಯಂತರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಆದರೆ ಜನಮಾನಸದ ಪ್ರೀತಿಯ ಮಹಾಪೂರದಿಂದ ಶತಾಯುಷಿ ನಾಯಕರಾಗಲಿ ಎನ್ನುವುದೇ ಹಾರೈಕೆ ಎಂದಿದ್ದಾರೆ.
ಹೀಗೆ ಮಾತನಾಡಬಾರದು: ಮಾಧುಸ್ವಾಮಿ
ರಾಜ್ಯ ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ರಾಜಣ್ಣ ಹೇಳಿಕೆ ಸರಿಯಲ್ಲ. ರಾಜಕಾರಣ ಬೇರೆ, ಆದರೆ ಆ ರೀತಿಯಲ್ಲಿ ಮಾತಾಡಬಾರದು. ರಾಜಣ್ಣ ನನ್ನ ಸ್ನೇಹಿತ. ಆದರೂ ಹಿರಿಯರ ಬಗ್ಗೆ ಈ ರೀತಿ ಮಾತಾಡುವುದು ಸರಿಯಲ್ಲ ಎಂದಿದ್ದಾರೆ.