ಮೈಸೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮಹತ್ವಾಕಾಂಕ್ಷಿಯ ಪಂಚರತ್ನ ರಥಯಾತ್ರೆಯ (JDS Pancharatna yatre) ಬೃಹತ್ ಸಮಾರೋಪ ಸಮಾವೇಶ ಮಾರ್ಚ್ 26ರಂದು (ಭಾನುವಾರ) ಸಂಜೆ 4 ಗಂಟೆಗೆ ಮೈಸೂರಿನಲ್ಲಿ ನಡೆಯಲಿದ್ದು, ಚಾಮುಂಡೇಶ್ವರಿ ಶಾಸಕ ಜಿ.ಟಿ. ದೇವೇಗೌಡರ ನೇತೃತ್ವದಲ್ಲಿ ಸಕಲ ಸಿದ್ಧತೆಗಳು ನಡೆದಿವೆ. ಚಾಮುಂಡಿ ಬೆಟ್ಟದ ತಪ್ಪಲಲ್ಲಿ ನಡೆಯುತ್ತಿರುವ ಪಂಚರತ್ನ ಸಮಾರೋಪ ಸಮಾವೇಶಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಜನರು, ಕಾರ್ಯಕರ್ತರು ಬರುತ್ತಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ದೀರ್ಘಕಾಲದ ಬಳಿಕ ಇಷ್ಟೊಂದು ದೊಡ್ಡ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.
ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕುಮಾರ ಪರ್ವ ಸಮಾವೇಶವನ್ನು ಜೆಡಿಎಸ್ ಆಯೋಜಿಸಿತ್ತು. ಆಗ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗುವ ಅವಕಾಶ ಕುಮಾರಸ್ವಾಮಿಗೆ ಒಲಿದು ಬಂದಿತ್ತು. ಇದೀಗ ಮತ್ತೆ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಪಂಚರತ್ನ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ. ಈ ಬಾರಿಯೂ ಅದೃಷ್ಟ ಒಲಿಯುವ ನಿರೀಕ್ಷೆ ಜೆಡಿಎಸ್‌ನಲ್ಲಿದೆ.
ನಗರದ ಉತ್ತನಹಳ್ಳಿ ರಿಂಗ್ ರಸ್ತೆಯ ನೂರು ಎಕರೆ ಪ್ರದೇಶದ ವಿಶಾಲ ಮೈದಾನದಲ್ಲಿ ಸಂಜೆ 4 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ಉದ್ದಗಲಕ್ಕೂ ಕಳೆದ ವರ್ಷದ ನವೆಂಬರ್ 18ರಿಂದ ಮಾರ್ಚ್ 24ರವರೆಗೆ ಪಂಚರತ್ನ ರಥಯಾತ್ರೆ ನಡೆದಿತ್ತು.
ರಿಂಗ್ ರಸ್ತೆಯಿಂದ ರೋಡ್ ಶೋ
ಸಮಾರಂಭಕ್ಕೂ ಮೊದಲು ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಬಳಿಯ ರಿಂಗ್ ರಸ್ತೆಯಿಂದ ಬೃಹತ್ ರೋಡ್ ಶೋ ನಡೆಯಲಿದೆ. ಈ ರೋಡ್ ಶೋನಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಜೆಡಿಎಸ್ ರಾಜ್ಯಾಧ್ಯಕ್ಷರಾದ ಸಿ.ಎಂ. ಇಬ್ರಾಹಿಂ ಅವರು ಸೇರಿದಂತೆ ಪಕ್ಷದ ಎಲ್ಲ ಶಾಸಕರು, ಎಲ್ಲ ಅಭ್ಯರ್ಥಿಗಳು ಭಾಗಿಯಾಗಲಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಐತಿಹಾಸಿಕ ಸಮಾವೇಶ ಆಗಿರುವ ಈ ಜೆಡಿಎಸ್ ಹಬ್ಬದಲ್ಲಿ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಸಮಾವೇಶಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ವಿಶಾಲ ಮೈದಾನದಲ್ಲಿ ಕೂರಲು ಆಸನದ ವ್ಯವಸ್ಥೆ, ಊಟ ಹಾಗೂ ಕುಡಿಯುವ ನೀರಿನ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ.
ಬೃಹತ್ ವಿಶೇಷ ವೇದಿಕೆ ನಿರ್ಮಾಣ
ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಝಗಮಗಿಸುವ ವಿದ್ಯುತ್ ಬೆಳಕಿನ ಅಲಂಕಾರ ಮಾಡಲಾಗಿದ್ದು, 100×50 ಅಡಿಯ ವಿಶಾಲ ವೇದಿಕೆಯನ್ನು ನಿರ್ಮಾಣ ಮಾಡಲಾಗಿದೆ. ವೇದಿಕೆಗೆ ಅಚ್ಚುಕಟ್ಟಾದ ವಿದ್ಯುತ್ ದೀಪದ ಮೆರಗು ನೀಡಲಾಗಿದ್ದು, ಮೈದಾನದ ಯಾವುದೇ ಭಾಗದಿಂದಲೂ ವೇದಿಕೆ ಕಾರ್ಯಕ್ರಮ ನೋಡಲು ಸಾಧ್ಯ ಆಗುವಂತೆ ಬೃಹತ್ ಎಲ್ಇಡಿ ಪರದೆಗಳನ್ನು ಅಳವಡಿಸಲಾಗಿದೆ.
ಸಮಾವೇಶಕ್ಕೆ ಹೈಟೆಕ್ ಸ್ಪರ್ಶ
ಸಮಾವೇಶ ನಡೆಯುವ ವಿಶಾಲ ವೇದಿಕೆಗೆ ಡಿಜಿಟಲ್ ಸ್ಕ್ರೀನ್ ಬ್ಯಾನರ್ ಅಳವಡಿಸಲಾಗಿದ್ದು, ಅದರಲ್ಲಿ ಪಂಚರತ್ನ ಕಾರ್ಯಕ್ರಮಗಳು ನಿರಂತರವಾಗಿ ಮೂಡಿಬರುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಮೈದಾನದ ತುಂಬೆಲ್ಲಾ ಕಟೌಟ್ ಹಾಗೂ ಬ್ಯಾನರ್‌ಗಳು ರಾರಾಜಿಸುತ್ತಿವೆ. ಯಾವುದೇ ಲೋಪ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಶನಿವಾರ ಸಂಜೆ ಮೈಸೂರಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಅವರು ಅಂತಿಮ ಹಂತದ ಸಿದ್ಧತೆಗಳನ್ನು ಪರಿಶೀಲಿಸಿದರು.
ದೇವೇಗೌಡರಿಗೆ ದಕ್ಷಿಣಾಪಥೇಶ್ವರ ಇಮ್ಮಡಿ ಪುಲಿಕೇಶಿ ಕಿರೀಟ
ಪಂಚರತ್ನ ರಥಯಾತ್ರೆಯ ಸಮಾರೋಪದಲ್ಲಿ ಪಾಲ್ಗೊಳ್ಳುತ್ತಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಸಮರ್ಪಿಸಲು ದಕ್ಷಿಣಪಥೇಶ್ವರ ಇಮ್ಮಡಿ ಪುಲಕೇಶಿಯ ಕಿರೀಟ ಮಾದರಿಯನ್ನು ತಯಾರಿಸಲಾಗಿದೆ. ಅಖಂಡ ಭಾರತವನ್ನು ಆಳ್ವಿಕೆ ಮಾಡಿದ ಕರ್ನಾಟಕದ ಮಣ್ಣಿನ ಮಕ್ಕಳೆಂದರೆ ಅದು ಇಮ್ಮಡಿ ಪುಲಕೇಶಿ ಹಾಗೂ ಎಚ್.ಡಿ. ದೇವೇಗೌಡರವರು. ಇವರಿಬ್ಬರಿಗೂ ಸಾಮ್ಯತೆ ಇರುವುದರಿಂದ ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ವ್ ಅಧ್ಯಕ್ಷ ಬೀಡನಹಳ್ಳಿ ಸತೀಶ್‌ಗೌಡ ಅವರ ಪರಿಕಲ್ಪನೆಯೊಂದಿಗೆ ಕಲಾವಿದ ನಂದನ್ ಅವರ ಕಸೂತಿಯಲ್ಲಿ ಈ ಕಿರೀಟ ಸಿದ್ಧಗೊಂಡಿದೆ ಎಂದು ಸಂಸ್ಥೆ ತಿಳಿಸಿದೆ. ರೈತರ ಮೂಲ ನೇಗಿಲ ಪ್ರತಿಮೆಯನ್ನು ರೈತ ನಾಯಕ ಎನಿಸಿರುವ ದೇವೇಗೌಡರಿಗೆ ಸಮರ್ಪಿಸಲಾಗುತ್ತಿದೆ.
ಏನೆಲ್ಲಾ ಕಾರ್ಯಕ್ರಮ? ಎಷ್ಟು ಹೊತ್ತಿಗೆ ನಡೆಯಲಿದೆ?
ಬೆಳಗ್ಗೆ 11 ಗಂಟೆಗೆ ಕುಮಾರಸ್ವಾಮಿ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ.
ಅಕ್ಕ- ತಂಗಿಯರಾದ ಶ್ರೀ ಚಾಮುಂಡೇಶ್ವರಿ, ಉತ್ತನಹಳ್ಳಿ ಮಾರಮ್ಮನಿಗೆ ಪೂಜೆ.
ಶ್ರೀ ತ್ರಿಪುರ ಸುಂದರಿ ಜ್ವಾಲಾಮುಖಿ ಅಮ್ಮನವರ ದೇವಾಲಯದಲ್ಲಿ ಪೂಜೆ ಸಲ್ಲಿಕೆ.
ಮಧ್ಯಾಹ್ನ 3 ಗಂಟೆಯಿಂದ ರೋಡ್ ಶೋ
ಮಧ್ಯಾಹ್ನ 3 ಗಂಟೆಗೆ ಕೊಲಂಬಿಯಾ ಏಷಿಯಾ ವೃತ್ತದಿಂದ ಕೆ.ಆರ್.ಎಸ್., ಹಿನಕಲ್, ಬೋಗಾದಿ, ಶ್ರೀರಾಂಪುರ ಮಾರ್ಗವಾಗಿ ರಿಂಗ್ ರಸ್ತೆಯಲ್ಲಿ ರೋಡ್ ಶೋ. ಸಂಜೆ 4 ಗಂಟೆಗೆ ಸಮಾವೇಶ ನಿಗದಿ.
ಚಾಮುಂಡೇಶ್ವರಿ ಕ್ಷೇತ್ರದ ಉತ್ತನಹಳ್ಳಿಯಲ್ಲಿ ಸಮಾರೋಪ ಸಮಾರಂಭ.
114 ಎಕರೆ ಜಾಗದಲ್ಲಿ ವೇದಿಕೆ, ಶಾಮಿಯಾನ ಅಳವಡಿಕೆ.
ಇದನ್ನೂ ಓದಿ : Reservation : ಮೀಸಲಾತಿ ಪರಿಷ್ಕರಣೆ ಮೂಲಕ ಧರ್ಮದ ಹೆಸರಿನಲ್ಲಿ ರಾಜ್ಯ ವಿಭಜನೆಗೆ ಬಿಜೆಪಿ ಯತ್ನ ಎಂದ ಜೆಡಿಎಸ್