Site icon Vistara News

JDS Pancharatna yatre : ನಾಳೆ ಮೈಸೂರಿನಲ್ಲಿ ಪಂಚರತ್ನ ರಥಯಾತ್ರೆ ಸಮಾರೋಪ, 10 ಲಕ್ಷ ಜನ ಸೇರುವ ನಿರೀಕ್ಷೆ, ದೇವೇಗೌಡ್ರ ರೋಡ್‌ ಶೋ

Pancharatna rathayatre samaropa

#image_title

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮಹತ್ವಾಕಾಂಕ್ಷಿಯ ಪಂಚರತ್ನ ರಥಯಾತ್ರೆಯ (JDS Pancharatna yatre) ಬೃಹತ್ ಸಮಾರೋಪ ಸಮಾವೇಶ ಮಾರ್ಚ್‌ 26ರಂದು (ಭಾನುವಾರ) ಸಂಜೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯಲಿದೆ. ನಗರದ ಉತ್ತನಹಳ್ಳಿ ರಿಂಗ್ ರಸ್ತೆಯ ನೂರು ಎಕರೆ ಪ್ರದೇಶದ ವಿಶಾಲ ಮೈದಾನದಲ್ಲಿ ಸಂಜೆ 4 ಗಂಟೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಎಚ್‌.ಡಿ ಕುಮಾರಸ್ವಾಮಿ ತಿಳಿಸಿದರು.

ರಾಜ್ಯದ ಉದ್ದಗಲಕ್ಕೂ ಕಳೆದ ವರ್ಷದ ನವೆಂಬರ್ 18ರಿಂದ ಮಾರ್ಚ್ 24ರವರೆಗೆ ಪಂಚರತ್ನ ರಥಯಾತ್ರೆ ನಡೆಸಿದ್ದೇನೆ. ಎಲ್ಲೆಡೆ ರಥಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಈ ಸಮಾರೋಪ ಸಮಾವೇಶ ಅಷ್ಟೇ ಯಶಸ್ಸು ಕಾಣುತ್ತದೆ ಎಂಬ ವಿಶ್ವಾಸ ನನ್ನದು ಎಂದು ಅವರು ಹೇಳಿದರು.

ರಿಂಗ್ ರಸ್ತೆಯಿಂದ ರೋಡ್ ಶೋ

ಸಮಾರಂಭಕ್ಕೂ ಮೊದಲು ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಬಳಿಯ ರಿಂಗ್ ರಸ್ತೆಯಿಂದ ಬೃಹತ್ ರೋಡ್ ಶೋ ನಡೆಯಲಿದೆ. ಈ ರೋಡ್ ಶೋನಲ್ಲಿ ಮಾಜಿ ಪ್ರಧಾನಿ ಎಚ್‌‌.ಡಿ. ದೇವೇಗೌಡರು, ಜೆಡಿಎಸ್ ರಾಜ್ಯಾಧ್ಯಕ್ಷರಾದ ಸಿ.ಎಂ. ಇಬ್ರಾಹಿಂ ಅವರು ಸೇರಿದಂತೆ ಪಕ್ಷದ ಎಲ್ಲ ಶಾಸಕರು, ಎಲ್ಲ ಅಭ್ಯರ್ಥಿಗಳು ಭಾಗಿಯಾಗಲಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.

ರಾಜ್ಯ ರಾಜಕಾರಣದಲ್ಲಿ ಐತಿಹಾಸಿಕ ಸಮಾವೇಶ ಆಗಿರುವ ಈ ಜೆಡಿಎಸ್ ಹಬ್ಬದಲ್ಲಿ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಸಮಾವೇಶಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ವಿಶಾಲ ಮೈದಾನದಲ್ಲಿ ಕೂರಲು ಆಸನದ ವ್ಯವಸ್ಥೆ, ಊಟ ಹಾಗೂ ಕುಡಿಯುವ ನೀರಿನ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.

ಬೃಹತ್‌ ವಿಶೇಷ ವೇದಿಕೆ ನಿರ್ಮಾಣ

ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಝಗಮಗಿಸುವ ವಿದ್ಯುತ್ ಬೆಳಕಿನ ಅಲಂಕಾರ ಮಾಡಲಾಗಿದ್ದು, 100×50 ಅಡಿಯ ವಿಶಾಲ ವೇದಿಕೆಯನ್ನು ನಿರ್ಮಾಣ ಮಾಡಲಾಗಿದೆ. ವೇದಿಕೆಗೆ ಅಚ್ಚುಕಟ್ಟಾದ ವಿದ್ಯುತ್ ದೀಪದ ಮೆರಗು ನೀಡಲಾಗಿದ್ದು, ಮೈದಾನದ ಯಾವುದೇ ಭಾಗದಿಂದಲೂ ವೇದಿಕೆ ಕಾರ್ಯಕ್ರಮ ನೋಡಲು ಸಾಧ್ಯ ಆಗುವಂತೆ ಬೃಹತ್ ಎಲ್ಇಡಿ ಪರದೆಗಳನ್ನು ಅಳವಡಿಸಲಾಗಿದೆ.

ಮೈಸೂರಿನಲ್ಲಿ ತಾಯಿ ಚಾಮುಂಡೇಶ್ವರಿ ನೆಲೆಸಿರುವ ಚಾಮುಂಡಿ ಬೆಟ್ಟದ ತಪ್ಪಲಲ್ಲಿ ನಡೆಯುತ್ತಿರುವ ಪಂಚರತ್ನ ಸಮಾರೋಪ ಸಮಾವೇಶಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಜನರು, ಕಾರ್ಯಕರ್ತರು ಬರುತ್ತಿದ್ದಾರೆ. ಮೈಸೂರಿನಲ್ಲಿ ನಡೆಯುತ್ತಿರುವ ಈ ಜೆಡಿಎಸ್ ಹಬ್ಬಕ್ಕೆ ಭರ್ಜರಿ ಜನ ಸ್ಪಂದನೆ ಸಿಗುತ್ತಿದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಪಂಚರತ್ನ ರಥಯಾತ್ರೆ ಸಮಾರೋಪಕ್ಕೆ ಭರ್ಜರಿ ಸಿದ್ಧತೆ

ಸಮಾವೇಶಕ್ಕೆ ಹೈಟೆಕ್ ಸ್ಪರ್ಶ

ಸಮಾವೇಶ ನಡೆಯುವ ವಿಶಾಲ ವೇದಿಕೆಗೆ ಡಿಜಿಟಲ್ ಸ್ಕ್ರೀನ್ ಬ್ಯಾನರ್ ಅಳವಡಿಸಲಾಗಿದ್ದು, ಅದರಲ್ಲಿ ಪಂಚರತ್ನ ಕಾರ್ಯಕ್ರಮಗಳು ನಿರಂತರವಾಗಿ ಮೂಡಿಬರುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಮೈದಾನದ ತುಂಬೆಲ್ಲಾ ಕಟೌಟ್ ಹಾಗೂ ಬ್ಯಾನರ್‌ಗಳು ರಾರಾಜಿಸುತ್ತಿವೆ. ಯಾವುದೇ ಲೋಪ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಶನಿವಾರ ಸಂಜೆ ಮೈಸೂರಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಅವರು ಅಂತಿಮ ಹಂತದ ಸಿದ್ಧತೆಗಳನ್ನು ಪರಿಶೀಲಿಸಿದರು.

ಇದನ್ನೂ ಓದಿ Reservation : ಮುಸ್ಲಿಂ ಸಮಾಜದ ಮೀಸಲಾತಿ ರದ್ದು ಅವೈಜ್ಞಾನಿಕ, ಸಮಾಜ ಒಡೆಯುವ ಕೆಲಸ ಎಂದ ಕುಮಾರಸ್ವಾಮಿ

Exit mobile version