Site icon Vistara News

JDS Pancharatna | ಪಂಚರತ್ನ ಯೋಜನೆ ಜಾರಿ ಮಾಡದಿದ್ದರೆ ಜೆಡಿಎಸ್‌ ವಿಸರ್ಜನೆ: ಎಚ್‌.ಡಿ.ಕುಮಾರಸ್ವಾಮಿ

JDS Pancharatna

ಮಂಡ್ಯ: ಪಂಚರತ್ನ ಯೋಜನೆ ಮೂಲಕ ಜನರ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಈ ಯೋಜನೆಗಳನ್ನು ಜಾರಿಗೆ ಬಂದರೆ ಎಷ್ಟೋ ಕುಟುಂಬಗಳು ನೆಮ್ಮದಿಯಿಂದ ಇರುತ್ತಾರೆ. ಇದರಿಂದ ಕರ್ನಾಟಕ ನಿಜವಾದ ರಾಮರಾಜ್ಯವಾಗುತ್ತದೆ. ಒಂದು ವೇಳೆ ಪಂಚರತ್ನ ಯೋಜನೆಯನ್ನು ಸಂಪೂರ್ಣವಾಗಿ ಜಾರಿ ಮಾಡದಿದ್ದರೆ ಜೆಡಿಎಸ್‌ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಜಿಲ್ಲೆಯ ಮಳವಳ್ಳಿ ತಾಲೂಕಿನ ಬೆಳಕವಾಡಿಯಲ್ಲಿ ಮಂಗಳವಾರ ನಡೆದ ಜೆಡಿಎಸ್‌ ಪಂಚರತ್ನ ಯಾತ್ರೆಯಲ್ಲಿ ಮಾತನಾಡಿ, ಜೆಡಿಎಸ್‌ ಸರ್ಕಾರ ಬಂದರೆ ಎಲ್ಲರಿಗೂ ಉಚಿತ ಶಿಕ್ಷಣದ ಸೌಲಭ್ಯ, ವಸತಿ, ಪ್ರತಿ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆ, ರೈತರಿಗೆ ೧ ಎಕರೆಗೆ 10 ಸಾವಿರ ರೂಪಾಯಿ ಕೊಡಲಾಗುತ್ತದೆ. ಯುವಕ ಯುವತಿಯರಿಗೆ ಉದ್ಯೋಗ ಸೃಷ್ಟಿಸುವ ಕೆಲಸವಾಗುತ್ತದೆ. ಈ ಯೋಜನೆಗಳನ್ನು ಜಾರಿ ಮಾಡದಿದ್ದರೆ ಜೆಡಿಎಸ್ ವಿಸರ್ಜನೆ ಮಾಡುತ್ತೇನೆ. ಹೀಗಾಗಿ ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದು ಮನವಿ ಮಾಡಿದರು.

ಇದನ್ನೂ ಓದಿ | ದಕ್ಷಿಣ ಭಾರತದ ಕಬ್ಬು ಬೆಳೆಗಾರರಿಗೆ ಸಹಾಯ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ

ಮಂಡ್ಯ ಜಿಲ್ಲೆಯ ಜನತೆ ಮೊದಲಿನಿಂದಲೂ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಈ ಬಾರಿಯೂ ಜಿಲ್ಲೆಯಲ್ಲಿ 7 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ. ಮಂಡ್ಯ ಮಣ್ಣಿನ ಮಕ್ಕಳು ನಮ್ಮ ಸರ್ಕಾರವನ್ನು ತರಲು ನಿರ್ಧಾರ ಮಾಡಿದ್ದಾರೆ ಎಂದರು. ಅಭ್ಯರ್ಥಿಗಳ ಪಟ್ಟಿ ಬದಲಾವಣೆ ವಿಚಾರ ಪ್ರತಿಕ್ರಿಯಿಸಿ, ಯಾವುದೇ ಅಭ್ಯರ್ಥಿಗಳು ಬದಲಾವಣೆ ಆಗಲ್ಲ. ಏಳೆಂಟು ಕ್ಷೇತ್ರದಲ್ಲಿ ಮಾತ್ರ ಬದಲಾವಣೆಯಾಗುತ್ತದೆ ಅಷ್ಟೇ ಎಂದು ಹೇಳಿದರು.

ಒಕ್ಕಲಿಗ ಸಮುದಾಯದ ಸಭೆಗೆ ಗೈರು ವಿಚಾರ ಸ್ಪಂದಿಸಿ, ನಾನು ಸ್ವಾಮೀಜಿಗಳೊಂದಿಗೆ ದೂರವಾಣಿಯಲ್ಲಿ ಮಾತಾನಾಡಿದ್ದೇನೆ. ಮೀಸಲಾತಿ ಬಗ್ಗೆಯೂ ಚರ್ಚಿಸಿದ್ದೇನೆ. ಕಾಂಗ್ರೆಸ್‌ನವರಿಗೆ ಅಭಿವೃದ್ಧಿ ವಿಚಾರವನ್ನು ಮಾತನಾಡಲು ಆಗಲ್ಲ. ಮುಂದೆ ಅಧಿಕಾರ ಕೊಟ್ಟರೆ ಏನು ಮಾಡುತ್ತೇವೆ ಎಂಬುವುದು ಅವರಿಗೆ ಗೊತ್ತಿಲ್ಲ. ಕಾಂಗ್ರೆಸ್ ಜಾತಿ ಕಾರ್ಡ್ ಮತ್ತು ಬಿಜೆಪಿ ಧರ್ಮದ ಕಾರ್ಡ್ ಬಳಕೆ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಡಿಕೆಶಿ ಮೇಲೆ ಸಿಬಿಐ ದಾಳಿ ಹಿನ್ನೆಲೆ ಒಕ್ಕಲಿಗ ನಾಯಕರು ಅವರ ಜತೆಗೆ ನಿಲ್ಲಬೇಕೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಡಿಕೆಶಿ ಅವರು ಪಾರದರ್ಶಕತೆಯಿಂದ ಇದ್ದರೆ ಸಮಾಜ ಅವರ ಪರ ನಿಲ್ಲುವ ಅವಶ್ಯಕತೆ ಇಲ್ಲ. ಅವರ ಉದ್ಯಮ, ವ್ಯವಹಾರದ ಎಲ್ಲಾ ದಾಖಲಾತಿಗಳನ್ನು ತನಿಖಾ ಅಧಿಕಾರಿಗಳಿಗೆ ನೀಡಿದರೆ ಸಾಕು. ಸಮುದಾಯವನ್ನು ಆ ವಿಚಾರದಲ್ಲಿ ಎಳೆಯುವುದು ತಪ್ಪು. ಅದರಿಂದ ಸಮುದಾಯಕ್ಕೆ ಆಗುವ ಪ್ರಯೋಜನವೇನು? ವ್ಯವಹಾರಗಳಲ್ಲಿ ಲೋಪ ಇದ್ದಾಗ ತನಿಖೆ ಮಾಡುತ್ತಾರೆ. ಬಿಜೆಪಿಯವರು ಚುನಾವಣೆ ಸಮಯದಲ್ಲಿ ತೊಂದರೆ ಕೊಡಲು ಮಾಡಿದ್ದರೋ ಇಲ್ಲವೋ ಎಂಬುವುದು ಬೇರೆ ವಿಷಯ ಎಂದು ಹೇಳಿದರು.

ಬೆಳಗಾವಿ ಅಧಿವೇಶನದಲ್ಲಿ ಹಲವು ಶಾಸಕರ ಗೈರಿನ ಬಗ್ಗೆ ಸ್ಪಂದಿಸಿ, ಎಲ್ಲರ ಗಮನ ಈಗ ಚುನಾವಣೆಯ ಕಡೆ ಇದೆ. ಇನ್ನು 3 ತಿಂಗಳು ಅಷ್ಟೇ ಇರುವುದು. ಮೂರೂವರೆ ವರ್ಷದಿಂದ ಚರ್ಚೆಯಾದ ವಿಷಯಗಳನ್ನು ಸರ್ಕಾರ ಅನುಷ್ಠಾನ ಮಾಡಿದೆ. ಈ ಮೂರು ತಿಂಗಳು ಇವರು ಏನು ಮಾಡಲು ಸಾಧ್ಯ ಎಂದು ಶಾಸಕರಲ್ಲಿ ಇರಬಹುದು ಎಂದರು. ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೋ ವಿಚಾರಕ್ಕೆ ಉತ್ತರಿಸಿ, ಬಿಜೆಪಿಯವರು ಆ ವಿಚಾರವನ್ನು ಇಟ್ಟುಕೊಂಡು ಬರಬೇಕು ಅಷ್ಟೇ. ನಾನು ಸಾವರ್ಕರ್ ಫೋಟೋಗೆ ಪ್ರಾಮುಖ್ಯತೆ ಕೊಡಲ್ಲ. ದೇಶದ ಪ್ರಜೆಗಳ ಬದುಕನ್ನು ಸರಿಪಡಿಸುವ ಚಿಂತನೆ ನನ್ನದು. ಫೋಟೋ ಹಾಕಬೇಕು ಹಾಕಬಾರದು ಎಂಬ ವಿಚಾರ ನನಗೆ ಬೇಡ ಎಂದರು.

ಮಳವಳ್ಳಿಯಲ್ಲಿ ಶಿವಮಾಧು ಎಂಬ ಅಭಿಮಾನಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಹಸು, ಕರು ದಾನ ಮಾಡಿದ್ದಾರೆ.

ಹಸು, ಕರು ದಾನ ಮಾಡಿದ ಅಭಿಮಾನಿ
ಕುಮಾರಸ್ವಾಮಿಗೆ ಹಲಗೂರು ಗ್ರಾಮದಲ್ಲಿ ಭಾರಿ ಗಾತ್ರದ ಹಾರ ಹಾಕಿ ಪುಷ್ಪಾರ್ಚನೆ ಮಾಡಿ ಕಾರ್ಯಕರ್ತರು ಅಭಿಮಾನ ಮೆರೆದರು. ಈ ವೇಳೆ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಸಿದ್ದರಾಜಮ್ಮ ಎಂಬುವವರು ಚಿಕಿತ್ಸೆಗೆ ಹಣ ಇಲ್ಲ ಎಂದು ಅಳಲು ತೋಡಿಕೊಂಡರು. ಇದಕ್ಕೆ ಮಾಜಿ ಸಿಎಂ ಸ್ಪಂದಿಸಿ, ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರಿಗೆ ಕರೆ ಮಾಡಿ ಹೇಳುತ್ತೇನೆ, ನಾಳೆ ಬೆಳಗ್ಗೆ ಆಸ್ಪತ್ರೆಗೆ ಹೋಗಿ ಎಂದು ಸಮಾಧಾನಪಡಿಸಿದರು. ಇನ್ನು ಮಳವಳ್ಳಿಯಲ್ಲಿ ಶಿವಮಾಧು ಎಂಬ ಅಭಿಮಾನಿ, ಎಚ್‌ಡಿಕೆಗೆ ಹಸು ಹಾಗೂ ಕರು ದಾನ ಮಾಡಿ, 2023ಕ್ಕೆ ಸಿಎಂ ಆಗಿ ವಿಧಾನಸೌಧಕ್ಕೆ ಹಸು, ಕರುವನ್ನು ಕರೆದುಕೊಂಡು ಹೋಗಬೇಕು ಎಂದು ಕೋರಿದರು.

ಮಾಧ್ಯಮದ ಮೇಲೆ ಹೆಚ್ಡಿಕೆ ಸಿಡಿಮಿಡಿ
ಚನ್ನಪಟ್ಟಣದಲ್ಲಿ ನಡೆದ ಪಂಚರತ್ನಯಾತ್ರೆ ಸಮಾವೇಶದಲ್ಲಿ ಮಾಧ್ಯಮದರ ಮೇಲೆ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಗರಂ ಆಗಿದ್ದು ಕಂಡುಬಂತು. ನಾನು ಸಾಲಮನ್ನಾ ಮಾಡಿದಾಗ ಒಕ್ಕಲಿಗ ಸಮಾಜಕ್ಕೋಸ್ಕರ ಮಾಡಿದ್ದಾರೆ ಎಂದು ಅಪಪ್ರಚಾರ ಮಾಡಿದರು. ಕುಮಾರಸ್ವಾಮಿ ಮುಖ ಕಪ್ಪು ಇದೆ ಎಂದು ಮಾಧ್ಯಮದಲ್ಲಿ ತೋರಿಸಿರು. ಅವನ್ಯಾರೋ ಒಬ್ಬ ಟಿವಿಯವನು ಸರ್ಕಾರ ತೆಗೆಯೋವರೆಗೂ ಗಡ್ಡ ತೆಗೆಯಲ್ಲ ಎಂದಿದ್ದ. ನನಗೂ ಸ್ವಾಭಿಮಾನ ಇದೆ, ನಾನು ನೋಡುತ್ತೇನೆ ಎಂದ ಅವರು, ಮಾಧ್ಯಮದವರಿಗೆ ಕೈ ಮುಗಿದು ಹೇಳುತ್ತೇನೆ ಪಂಚರತ್ನ ಯೋಜನೆಗಳ ಬಗ್ಗೆ ಮಾಧ್ಯಮಗಳಲ್ಲಿ ತೋರಿಸಿ ಎಂದು ಮನವಿ ಮಾಡಿದರು.

ಒಂದು ಪಂಚಾಯಿತಿ ಗೆದ್ದು ಬಾ ನೋಡೋಣ
ಕ್ಷೇತ್ರತ್ಯಾಗ, ಕಣ್ಣೀರು ಸುರಿಸಿದರೆ ಚುನಾವಣೆ ಬಂದಿದೆ ಎಂದರ್ಥ ಎಂಬ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿಕೆಗೆ ಪ್ರತಿಕ್ರಿಯಿಸಿ, ಒಂದು ಜುಬ್ಬಾ ಒಂದು ಬ್ಯಾಗ್ ಹಾಕಿಕೊಂಡು ಬರುತ್ತಿದ್ದವನು ನಮ್ಮ ಕುಟುಂಬದ ಬಗ್ಗೆ ಮಾತನಾಡುತ್ತಾನೆ. ಆನ್ ಲೈನ್ ಬೆಟ್ಟಿಂಗ್, ಪಾಪದ ಹಣ ತಗೊಂಡು ಬಂದು ಆಪರೇಷನ್‌ ಕಮಲ ನಡೆಸುತ್ತಾರೆ. ನಾನು ಕಣ್ಣೀರು ಹಾಕುತ್ತೀನಂತೆ, ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಸೌಲಭ್ಯ ನೀಡದೆ ಬಡವರನ್ನು ಬಲಿ ತೆಗೆದುಕೊಂಡರು. ಇವರು ನನ್ನ ಪಂಚರತ್ನ ಯಾತ್ರೆ ಬಗ್ಗೆ ಮಾತಾಡುತ್ತಾರೆ? ನಮ್ಮ ಯೋಜನೆ, ನಮ್ಮ ಕುಟುಂಬದ ಬಗ್ಗೆ ಮಾತಾಡುವ ಯೋಗ್ಯತೆ ಇದ್ಯಾ?, ಒಂದು ಪಂಚಾಯಿತಿ ಗೆದ್ದು ಬಾ ಆಮೇಲೆ ನಮ್ಮ ಪಕ್ಷದ ಬಗ್ಗೆ ಮಾತನಾಡು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವಿರುದ್ಧ ವಾಗ್ದಾಳಿ ನಡೆಸಿದರು.

ಚನ್ನಪಟ್ಟಣ ಕ್ಷೇತ್ರದಲ್ಲಿ ಮುಂದಿನ ಚುನಾವಣೆಗೆ ಪ್ರಚಾರಕ್ಕೆ ಬರಲ್ಲ
ನಾನು 12೩ ಕ್ಷೇತ್ರ ಗೆಲುವು ಸಾಧಿಸಿ, ಸ್ವತಂತ್ರ ಸರ್ಕಾರ ಕಟ್ಟಲು ಹೊರಟಿದ್ದೀನಿ. ಸಿಎಂ ಇಬ್ರಾಹಿಂ, ನಾನು ರಾಜ್ಯ ಸುತ್ತಲಿದ್ದೇವೆ. ನಿಮ್ಮ ಮನೆ ಮಗನನ್ನು ಉಳಿಸಿಕೊಳ್ಳುವುದು ನಿಮಗೆ ಬಿಟ್ಟದ್ದು. ಚನ್ನಪಟ್ಟಣ ಕ್ಷೇತ್ರದಲ್ಲಿ ಮುಂದಿನ ಚುನಾವಣೆಗೆ ಪ್ರಚಾರಕ್ಕೆ ಬರಲ್ಲ, ನೀವೇ ಗೆಲ್ಲಿಸಬೇಕು ಎಂದು ಕ್ಷೇತ್ರದ ಜನತೆಗೆ ಮಾಜಿ ಸಿಎಂ ಮನವಿ ಮಾಡಿದರು.

ಇದನ್ನೂ ಓದಿ | CBI raids | ಡಿ.ಕೆ. ಶಿವಕುಮಾರ್ ಮೇಲೆ ಸಿಬಿಐ ದಾಳಿ: ಇದು ದ್ವೇಷದ ರಾಜಕಾರಣವೆಂದು ಕಾಂಗ್ರೆಸ್ ಆಕ್ರೋಶ

Exit mobile version