Site icon Vistara News

H.D. ಕುಮಾರಸ್ವಾಮಿ ಕನಸಿನ ಯೋಜನೆಗೆ ಆರಂಭದಲ್ಲೇ ಅಡ್ಡಿ: ಪಂಚರತ್ನ ರಥಯಾತ್ರೆ ಮುಂದೂಡಿಕೆ

pancharathna

ಕೋಲಾರ: ಮುಂಬರುವ ವಿಧಾನಸದಭೆ ಚುನಾವಣೆಯಲ್ಲಿ 123 ಸ್ಥಾನಗಳಲ್ಲಿ ಜಯಿಸಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಏರುವ ಎಚ್‌.ಡಿ. ಕುಮಾರಸ್ವಾಮಿ ಅವರ ʼಅಶ್ವಮೇಧ ಯಾಗʼಕ್ಕೆ ಪ್ರಾರಂಭದಲ್ಲೇ ಮಳೆ ಅಡ್ಡಿಯಾಗಿದೆ.

ವಿವಿಧ ಹಂತಗಳಲ್ಲಿ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಸಾಗುವ ಪಂಚರತ್ನ ರಥಯಾತ್ರೆಯನ್ನು, ವಿಪರೀತ ಮಳೆಯ ಕಾರಣಕ್ಕೆ ನಾಲ್ಕು ದಿನ ಮುಂದೂಡಲಾಗಿದೆ.

ರಥಯಾತ್ರೆಗೆ ಚಾಲನೆ ನೀಡುವ ಮುನ್ನ ಪ್ರಸಿದ್ಧ ತೀರ್ಥ ಕ್ಷೇತ್ರವಾದ ಕುರುಡುಮಲೆ ಗಣಪತಿ ದೇವಸ್ಥಾನದಲ್ಲಿ ಹೋಮ ಆಯೋಜಿಸಲಾಗಿತ್ತು. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರೂ ಸೇರಿ ಜೆಡಿಎಸ್‌ನ ಅನೇಕ ನಾಯಕರು ಭಾಗವಹಿಸಿದ್ದರು. ಹೋಮ ಯಶಸ್ವಿಯಾಗಿ ಪೂರ್ಣವಾಯಿತು.

ಆದರೆ ರಥಯಾತ್ರೆಗೆ ಚಾಲನೆ ನೀಡುವ ಸ್ವಲ್ಪ ಹೊತ್ತು ಮುನ್ನ ಭಾರೀ ಮಳೆ ಆರಂಭವಾಯಿತು. ತಿರುಪತಿ ಬೈಪಾಸ್ ರಸ್ತೆಯಲ್ಲಿ ನಿರ್ಮಿಸಿದ ಬೃಹತ್‌ವೇದಿಕೆ ಸಂಪೂರ್ಣ ಜಲಾವೃತವಾಯಿತು. ಹಳೇ ಮೈಸೂರು ಭಾಗ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ 300ಕ್ಕೂ ಹೆಚ್ಚು ಬಸ್‌ಗಳಲ್ಲಿ ಸಮಾವೇಶಕ್ಕೆ ಬಂದಿದ್ದ ಕಾರ್ಯಕರ್ತರು ಹಾಗೆಯೇ ಕುಳಿತಿದ್ದರು.

ಮಳೆ ನಿಲ್ಲಬಹುದೆಂದು ಕಾದರೂ ಪ್ರಯೋಜನವಾಗಲಿಲ್ಲ. ನಂತರ ಈ ಕುರಿತು ಮಾತನಾಡಿದ ಕುಮಾರಸ್ವಾಮಿ, ವರುಣನಿಂದ ಎಲ್ಲರಿಗೂ ಸ್ವಲ್ಪ ಕಷ್ಟವಾಗಿದೆ. ಕುರುಡುಮಲೆ ದೇವಸ್ಥಾನದಲ್ಲಿ ಉತ್ತಮವಾಗಿ ಪೂಜೆ ಆಗಿದೆ. ಕೋಲಾರದಲ್ಲಿ ಪಂಚರತ್ನ ರಥಯಾತ್ರೆಗೆ ಚಾಲನೆ ನೀಡಬೇಕು ಎಂದು ಈ ಭಾಗದ ಜನರ ಆಶಯವಾಗಿತ್ತು. ಆದರೆ ಮಳೆಯಿಂದ ಕಾರ್ಯಕರ್ತರಿಗೆ ಸ್ವಲ್ಪ ಕಷ್ಟವಾಗಿದೆ. ತಾತ್ಕಾಲಿಕವಾಗಿ ಮೂರು‌ ನಾಲ್ಕು ದಿನಗಳ ಕಾಲ ಸಮಾವೇಶ ಮುಂದೂಡಲು ನಿರ್ಧರಿಸಿದ್ದೇವೆ ಎಂದರು.

ಮುಳುಬಾಗಿಲಿನಿಂದಲೇ ನಾಲ್ಕು ದಿನಗಳು ಬಿಟ್ಟು ಸಮಾವೇಶ ನಡೆಸಬೇಕೆಂದು ಅಂದುಕೊಂಡಿದ್ದೇವೆ ಎಂದ ಕುಮಾರಸ್ವಾಮಿ, ಇನ್ನೆರೆಡು ದಿನ ಬಿಟ್ಟು ಹವಮಾನ ವರದಿ ನೋಡಿಕೊಂಡು ಮುಂದಿನ ಸಮಾವೇಶದ ದಿನಾಂಕ ಘೋಷಣೆ ಮಾಡಲಿದ್ದೇವೆ. ಬಿಜೆಪಿಯವರು ಕೆಲ ಆಮಿಷಗಳನ್ನು ಒಡ್ಡಿರೋದು ನೋಡಿದ್ದೇವೆ. ಯಾವುದೇ ಆಮಿಷಗಳಿಗೆ ಒಳಗಾಗದೆ ಪಕ್ಷದ‌ ನಿಷ್ಟಾವಂತ ಕಾರ್ಯಕರ್ತರಾಗಿರುತ್ತೇವೆ ಎಂದು ಅಭ್ಯರ್ಥಿಗಳಿಂದ ಪ್ರಮಾಣವಚನ ಮಾಡಿಸಬೇಕೆಂದುಕೊಂಡಿದ್ದೆ ಹಾಗಾಗಿ ಎಲ್ಲವೂ ಸೂಸುತ್ರವಾಗಿ ಆಗಬೇಕೆಂದು ಸಮಾವೇಶ ಮುಂದೂಡಿದ್ದೇವೆ. ಮುಂದೆ ಸಮಾವೇಶದಲ್ಲಿ ನಮ್ಮ ಅಭ್ಯರ್ಥಿಗಳು ವೇದಿಕೆ ಮೇಲೆ ಪ್ರಮಾಣ ಮಾಡುತ್ತಾರೆ ಎಂದರು.

ನನಗೆ ಯಾವುದೇ ಕಾರಣಕ್ಕೂ ಬಿಜೆಪಿ ವೈಫಲ್ಯ ಮುಖ್ಯ ಅಲ್ಲ, ಕಾಂಗ್ರೆಸ್ ಕಾರ್ಯಕ್ರಮಗಳು ಕೂಡ ಬೇಕಾಗಿಲ್ಲ. ನಮ್ಮ ಯೋಜನೆ ಬಗ್ಗೆ ಮಾತ್ರ ನಾವು ಗಮನಹರಿಸುತ್ತಿದ್ದೇವೆ. ನಮ್ಮ ಯೋಜನೆ ಜಾರಿಗೆ ಒಂದು ಅವಕಾಶ ಕೊಡಿ ಎಂಬುದಷ್ಟೇ ನಮ್ಮ ಆಶಯ. ಕಾಂಗ್ರೆಸ್, ಬಿಜೆಪಿಯವರ ರ‍್ಯಾಲಿ ಏನಾಗಿದೆ ಎಂಬುದನ್ನು ನಾವು ನೋಡಿದ್ದೇವೆ ಎಂದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ತೆಲಂಗಾಣ ಶಾಸಕ ರಾಜೇಂದ್ರ ರೆಡ್ಡಿ ಮಾತನಾಡಿ, ತೆಲಂಗಾಣದ ಸಿಎಂ ಪರವಾಗಿ ನಾನು ಇಂದು ಬಂದಿದ್ದೇನೆ. ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು. ಕುಮಾರಸ್ವಾಮಿ ಅವರ ನೇತೃತ್ವದ ಪಂಚರತ್ನ ಕಾರ್ಯಕ್ರಮ ಶುರುವಾಗಬೇಕಿತ್ತು. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇರಲಿದೆ. ಮುಂಬರುವ ಚುನಾವಣೆಯಲ್ಲೂ ಗಡಿ ಜಿಲ್ಲೆಗಳಲ್ಲಿ ನಾವು ಕೂಡ ಸಹಕಾರ ನೀಡುತ್ತೇವೆ. ಕರ್ನಾಟಕದಲ್ಲಿ ರೈತರಿಗೆ ಏನಾದರೂ ಸಹಾಯ ಆಗಿದ್ದರೆ ಅದು ದೇವೇಗೌಡರು ಮಾಡಿರುವುದು ಮಾತ್ರ. ನಮ್ಮ ಶಾಸಕರು ಕೂಡ ಮುಂದೆ ಕುಮಾರಸ್ವಾಮಿಯವರ ಜತೆ ಪ್ರಚಾರದಲ್ಲಿ ಭಾಗಿಯಾಗುತ್ತೇವೆ ಎಂದರು.

ಇದನ್ನೂ ಓದಿ | ಜೆಡಿಎಸ್‌ನ ಪಂಚರತ್ನ ಯಾತ್ರೆ ಇಂದು ಕೋಲಾರದಿಂದ ಆರಂಭ

Exit mobile version