ಮೈಸೂರು: ʻʻನಮಗೆ ಈ ಬಾರಿ 50 ಸ್ಥಾನ ಕೊಟ್ಟರೆ ಸಾಕಾಗುವುದಿಲ್ಲ. 50 ಸ್ಥಾನ ನನಗೆ ಬೇಕಿಲ್ಲ. 123 ಸೀಟೇ ಬೇಕು. ಅದನ್ನು ನೀವು ಕೊಡಬೇಕುʼʼ- ಹೀಗೆಂದು ಕೇಳಿಕೊಂಡಿದ್ದಾರೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ. 110 ದಿನಗಳ ಕಾಲ ನಡೆದ ಜೆಡಿಎಸ್ ಪಂಚರತ್ನ ರಥಯಾತ್ರೆ (JDS Pancharatna yatre) ಅದ್ಧೂರಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಜೆಡಿಎಸ್‌ಗೆ ಬೆಂಬಲ ನೀಡುವ ತೀರ್ಮಾನ ಮಾಡಿ, ನಿಮ್ಮ ಮಕ್ಕಳ ಭವಿಷ್ಯವನ್ನು ನಾನು ಕಟ್ಟಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಮೈಸೂರಿನ ಉತ್ತನಹಳ್ಳಿ ರಿಂಗ್ ರಸ್ತೆಯ ನೂರು ಎಕರೆ ಪ್ರದೇಶದ ವಿಶಾಲ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ನೆರೆದ ಲಕ್ಷಾಂತರ ಜನರು, ಮಾಜಿ ಪ್ರಧಾನಿ ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್ ಏನು ಮಾಡಿದೆ, ಏನು ಮಾಡುತ್ತದೆ ಮತ್ತು ಯಾಕೆ ಅಧಿಕಾರಕ್ಕೆ ತರಬೇಕು ಎಂದು ಕುಮಾರಸ್ವಾಮಿ ವಿವರಿಸಿದರು.
ಪ್ರತಿ ದಿನವೂ ವಿಶೇಷ ಅನುಭವ
ʻʻಪಂಚರತ್ನ ಯಾತ್ರೆಯಲ್ಲಿ ಸುತ್ತಾಡಿದ ವೇಳೆ ಪ್ರತಿ ದಿನವೂ ಹೊಸ ಹೊಸ ಅನುಭವ ಆಗಿದೆ. ಕೆ.ಆರ್.ಪೇಟೆಯಲ್ಲಿ ಲಿವರ್ ಕಾಯಿಲೆಯಿಂದ 60 ಲಕ್ಷ ರೂ. ಖರ್ಚು ಮಾಡಿದ್ದು ಗೊತ್ತಾಯಿತು. ಅದನ್ನು ನೋಡಿದ ಮೇಲೆಯೇ ಗ್ರಾಮ ಪಂಚಾಯಿತಿಗೊಂದು ಹೈಟೆಕ್ ಆಸ್ಪತ್ರೆ ಮಾಡುತ್ತೇನೆ ಎನ್ನುವ ಭರವಸೆ ಕೊಟ್ಟೆ. ಆರೋಗ್ಯಕ್ಕೆ 30-40 ಲಕ್ಷ ರೂ. ವೆಚ್ಚವಾದರೂ ಸರ್ಕಾರದಿಂದಲೇ ಕೊಡುವಂತೆ ಆಗಬೇಕು. ಡಯಾಲಿಸೀಸ್ ಸೇರಿದಂತೆ ಎಲ್ಲ ಚಿಕಿತ್ಸೆ ಗ್ರಾಮ ಪಂಚಾಯಿತಿ ಹಂತದಲ್ಲೇ ಸಿಗಬೇಕು ಎನ್ನುವುದು ನನ್ನ ನಿಲುವು. ಸ್ತ್ರೀಶಕ್ತಿ ಸಂಘಗಳಿಂದ ಸಾಲ ಪಡೆದು ವಿದ್ಯಾಭ್ಯಾಸಕ್ಕೆ ಶುಲ್ಕ ಕಟ್ಟಿದ್ದೇನೆ ಅಂತ ವಿದ್ಯಾರ್ಥಿನಿ ಹೇಳಿದಳು. ಎಲ್‌ಕೆಜಿಯಿಂದ ಪಿಜಿವರೆಗೆ ಉಚಿತವಾಗಿ ಶಿಕ್ಷಣ ಸಿಗುವ ಹಾಗೆ ನಾನು ಮಾಡುತ್ತೇನೆʼʼ ಎಂದು ಕುಮಾರಸ್ವಾಮಿ ಹೇಳಿದರು.
ʻʻಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಭಾಗ್ಯ ಕಾರ್ಯಕ್ರಮ ಮುಂದುವರಿಸಲು ಷರತ್ತು ಹಾಕಲಾಗಿತ್ತು. ಅದನ್ನೂ ಮಾಡಿದೆ. ಸಾಲ ಮನ್ನಾ ಮಾಡುತ್ತೇನೆ ಅಂತ ಹೇಳಿ ಅಧಿಕಾರಕ್ಕೆ ಬಂದವನು 14 ತಿಂಗಳಲ್ಲಿ 25 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದೇನೆʼʼ ಎಂದು ಕುಮಾರಸ್ವಾಮಿ ನೆನಪಿಸಿದರು.
ನಿಮ್ಮ ರೋಡ್ ಶೋನೇ ಬೇರೆ ನಮ್ಮ ಪಂಚರತ್ನವೇ ಬೇರೆ
ʻʻದಾವಣಗೆರೆಯಲ್ಲಿ ಪ್ರದಾನಿ ನರೇಂದ್ರ ಮೋದಿ ಅವರು ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಆದರೆ, ಆವತ್ತು ಉತ್ತರ ಕರ್ನಾಟಕದ ಜನ ಪ್ರವಾಹದಿಂದ ಸತ್ತಾಗ ಅವರು ಬಂದು ನೋಡಲಿಲ್ಲ. ರಾಜ್ಯಕ್ಕೆ ಸಂಕಷ್ಟ ಬಂದಾಗ ಅವರು ಯಾವತ್ತೂ ತಿರುಗಿ ನೋಡಲಿಲ್ಲʼʼ ಎಂದು ಹೇಳಿದ ಕುಮಾರಸ್ವಾಮಿ, ʻʻನಿಮ್ಮ ರೋಡ್ ಶೋಗೂ ಪಂಚ ರತ್ನ ಯಾತ್ರೆಗೂ ವ್ಯತ್ಯಾಸ ಇದೆ. ನೀವು ಸರ್ಕಾರದ ದುಡ್ಡಲ್ಲಿ ಜನ ಸೇರಿಸಿ ಶಂಕುಸ್ಥಾಪನೆ ಮಾಡುತ್ತೀದ್ದೀರಿ. ನಮ್ಮ ಯಾತ್ರೆಗೆ ಜನರೇ ಬರುತ್ತಿದ್ದಾರೆʼʼ ಎಂದರು.
ಮೋದಿಯವರೇ ಎಲ್ಲಿದೆ ಸ್ವಚ್ಛ ಭಾರತ?
ʻʻʻನರೇಂದ್ರ ಮೋದಿ, ಬಸವರಾಜ ಬೊಮ್ಮಾಯಿ, ಯಡಿಯೂರಪ್ಪನವರು ಉತ್ತರ ಕರ್ನಾಟಕಕ್ಕೆ ಬಂದು ನೋಡಬೇಕು. ಅವರ ಸ್ವಚ್ಛ ಭಾರತ ಎಲ್ಲಿದೆ ಎಂದು ಗೊತ್ತಾಗುತ್ತದೆ. ಸೂರ್ಯ ಹುಟ್ಟುವುದಕ್ಕೂ ಮುಂಚೆ, ಸೂರ್ಯ ಮುಳುಗಿದ ಮೇಲೆ ಬಹಿರ್ದೆಸೆಗೆ ಹೋಗಬೇಕು. ಅಂಥಾ ಪರಿಸ್ಥಿತಿ ಇದೆ. ಜಲ ಮಿಷನ್ ಅಂತ ಪೈಪ್ ತುರುಕಿ ಇಟ್ಟಿದ್ದಾರೆ.
ಒಮ್ಮೆಯೂ ಅದರಲ್ಲಿ ನೀರು ಬಂದಿಲ್ಲ ಅಂತ ಮಹಿಳೆಯರು ಹೇಳಿದ್ದಾರೆ. ಜಲ ಜೀವನ್ ಮಿಷನ್ ಹೆಸರಲ್ಲಿ ಸಾವಿರಾರು ಕೋಟಿ ರೂ. ಲೂಟಿ ಆಗಿದೆʼʼ ಎಂದು ಆಪಾದಿಸಿದರು ಕುಮಾರಸ್ವಾಮಿ.
ʻʻʻಕೊಡಗಿನಲ್ಲಿ ಮನೆ ಬಿದ್ದು ಹೋದಾಗ ನಾವು ಹೊಸ ಮನೆ ನಿರ್ಮಿಸಿ ಕೊಟ್ಟೆವು. ಉತ್ತರ ಕರ್ನಾಟಕದಲ್ಲಿ ಬಿದ್ದು ಹೋದ ಮನೆಗಳನ್ನು ಬಿಜೆಪಿಯವರೂ ಈಗಲೂ ಕಟ್ಟಿಸಿಕೊಟ್ಟಿಲ್ಲʼʼ ಎಂದು ಹೇಳಿದರು ಕುಮಾರಸ್ವಾಮಿ.
ʻʻನಿರುದ್ಯೋಗಿಗಳಿಗೆ ಎರಡು ವರ್ಷ 2000 ರೂ. ನೀಡುತ್ತೇವೆ, ಮನೆಯ ಮಹಿಳೆಗೆ 2000 ರೂ. ನೀಡುತ್ತೇವೆ ಅಂತ ಕಾಂಗ್ರೆಸ್‌ನವರು ಹೇಳಿದ್ದಾರೆ. ಅದಕ್ಕೆಲ್ಲ ಹಣ ಎಲ್ಲಿದೆ? ರಾಜ್ಯದ ಮೇಲೆ 5.66 ಸಾವಿರ ಕೋಟಿ ರೂ. ಸಾಲ ಇದೆ. ಪಂಚ ರತ್ನ ಯೋಜನೆಗೆ 2.50 ಸಾವಿರ ಕೋಟಿ ರೂ. ಬಂಡವಾಳ ವೆಚ್ಚವಾಗಿ ಕೊಡುತ್ತೇವೆʼʼ ಎಂದರು.
ʻʻಜಾತಿಯ ವ್ಯಾಮೋಹ, ಹಣಕ್ಕೆ ಮರುಳಾಗಬೇಡಿ. ನಿಮ್ಮ ಬದುಕಿಗೆ ಜೆಡಿಎಸ್‌ಗೆ ಬೆಂಬಲ ನೀಡುವ ತೀರ್ಮಾನ ಮಾಡಿ. ನಿಮ್ಮ ಮಕ್ಕಳ ಭವಿಷ್ಯ ಕಟ್ಟಿಕೊಡುತ್ತೇನೆʼʼ ಎಂದು ಕುಮಾರಸ್ವಾಮಿ ಭಾವುಕರಾಗಿ ಹೇಳಿದರು.
ಫಲಿತಾಂಶ ಪುನರಾವರ್ತನೆ ಆಗಲಿ
ʻʻಬಿಜೆಪಿಯವರು ಜೆಡಿಎಸ್‌ನ ಭದ್ರಕೋಟೆಯನ್ನು ಛಿದ್ರ ಮಾಡುತ್ತೇವೆ ಎಂದು ಹೇಳಿದ್ದಾರೆ. ಆದರೆ, ನೀವು ಹಾಸನ, ಮಂಡ್ಯದಲ್ಲಿ ಫಲಿತಾಂಶ ಪುನರಾವರ್ತನೆ ಆಗಬೇಕು. ತುಮಕೂರಿನಲ್ಲಿ 11ಕ್ಕೆ 11, ಕೋಲಾರದಲ್ಲಿ 6ಕ್ಕೆ 6 ಸ್ಥಾನ ಗೆಲ್ಲುವ ವಾತಾವರಣ ಇದೆʼʼ ಎಂದರು ಕುಮಾರಸ್ವಾಮಿ.
ʻʻನೀವು ಕೊಟ್ಟ ಬೇಡಿಕೆಗಳ ಆಧಾರದಲ್ಲಿ ಪಂಚರತ್ನ ಯೋಜನೆ ರೂಪಿಸಿದ್ದೇನೆ.
ಒಂದು ಬಾರಿ ನನ್ನನ್ನು ಪರೀಕ್ಷೆ ಮಾಡಿ. ಯಾವುದೇ ಗ್ಯಾರಂಟಿ ಕಾರ್ಡ್ ನಂಬಬೇಡಿ. ಅವೆಲ್ಲ ಡೂಪ್ಲಿಕೇಟ್ ಕಾರ್ಡ್ʼʼ ಎಂದು ಹೇಳಿದ ಕುಮಾರಸ್ವಾಮಿ, ʻʻನಿನ್ನೆಯ ಮೋದಿ ಕಾರ್ಯಕ್ರಮಕ್ಕೆ ಎಷ್ಟು ಜನ ಬಂದರು ಅಂತ ಗೊತ್ತು.
ಇವತ್ತಿನ ಕಾರ್ಯಕರ್ತದಲ್ಲಿ ಸೇರಿದಷ್ಟು ಜನ ಸೇರಿಸಲು ಮೋದಿ 10 ಬಾರಿ ಬರಬೇಕುʼʼ ಎಂದರು.
ನಿಮ್ಮ ಪ್ರೀತಿಯೇ ದೇವೇಗೌಡರಿಗೆ ಚಿಕಿತ್ಸೆ
ʻʻನನ್ನ ತಂದೆ ಒಂದು ಬಾರಿಯೂ ಆಸ್ಪತ್ರೆಗೆ ಹೋದವರಲ್ಲ. ಆದರೆ ಇತ್ತೀಚೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು.
ನಮ್ಮ ಕಣ್ಮಂದೆ ನೀವು ಬದುಕಬೇಕು ಅಂತ ಕೈಹಿಡಿದು ಕೇಳಿಕೊಂಡೆ. ನಿಮ್ಮ ಮಕ್ಕಳಾಗಿ ನಾವು ನಿಮ್ಮನ್ನು ಕಳುಹಿಸುವುದಿಲ್ಲ. ಈಶ್ವರ ನಿಮ್ಮನ್ನು ಬದುಕಿಸುತ್ತಾನೆ ಅಂತ ಹೇಳಿದ್ದೆ. ನಿಮ್ಮ ಕನಸುಗಳನ್ನು ಈಡೇರಿಸುವ ಸರ್ಕಾರ ಬರುತ್ತೆ ಅಂತ ಹೇಳಿದ್ದೇನೆ. ಮಂಡ್ಯ, ಹಾಸನದಿಂದ ಪೈಪೋಟಿಯಲ್ಲಿ ಜನ ಬಂದಿದ್ದೀರಿ. ನಿಮ್ಮ ಪ್ರೀತಿಯ ಚಿಕಿತ್ಸೆ ದೇವೇಗೌಡರಿಗೆ ವೈದ್ಯರ ಚಿಕಿತ್ಸೆಗಿಂತಲೂ ದೊಡ್ಡದುʼʼ ಎಂದು ಕುಮಾರಸ್ವಾಮಿ ಭಾವುಕರಾದರು.
ಇದನ್ನೂ ಓದಿ Pancharatna: ನಮ್ಮ ದುಡಿಮೆಯನ್ನು ನಂಬಿ ಸೇವೆಗೆ ಅವಕಾಶ ನೀಡಿ: ಪಂಚರತ್ನ ಸಮಾರೋಪದಲ್ಲಿ ದೇವೇಗೌಡರ ಭಾವನಾತ್ಮಕ ನುಡಿ