Site icon Vistara News

JDS Pancharatna Yatre | ಜೆಡಿಎಸ್‌ ಪಂಚರತ್ನ ರಥಯಾತ್ರೆಗೆ ಚಾಲನೆ; ಶಿಕ್ಷಣ, ಆರೋಗ್ಯ, ರೈತ, ಮಹಿಳೆ, ವಸತಿ ಮಂತ್ರ

pancharatna rathayatre inaugaration

ಬೆಂಗಳೂರು: ಸರ್ವರಿಗೂ ಶಿಕ್ಷಣ, ಆರೋಗ್ಯ, ರೈತ ಚೈತನ್ಯ, ಯುವ ಮತ್ತು ಮಹಿಳಾ ಸಬಲೀಕರಣ ಹಾಗೂ ವಸತಿಗೆ ಸಂಬಂಧಿಸಿದ ಪಂಚ ಯೋಜನೆಗಳ ಕನಸನ್ನು ಜನರಿಗೆ ಮುಟ್ಟಿಸುವ ಸಲುವಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಪಂಚರತ್ನ ರಥಯಾತ್ರೆಗೆ (JDS Pancharatna Yatre) ಇಲ್ಲಿನ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ವಿದ್ಯುಕ್ತ ಚಾಲನೆ ದೊರಕಿದೆ.

ಬಳಿಕ ಮಾತನಾಡಿದ ಕುಮಾರಸ್ವಾಮಿ, ಇದು ನನ್ನ ಕನಸಿನ ಕಾರ್ಯಕ್ರಮವಾಗಿದೆ. ಪಂಚರತ್ನ ಕಾರ್ಯಕ್ರಮ ನಾಡಿನ ಜನತೆಗೆ ಪೂರಕವಾಗಿದೆ. ನಾಡಿನ ಅಭಿವೃದ್ಧಿ ಮಾಡುವುದು ಹೇಗೆ ಎಂದು ತೋರಿಸಿಕೊಡುವ ಕಾರ್ಯಕ್ರಮ ಇದಾಗಿದೆ. ಈ ಹಿನ್ನೆಲೆಯಲ್ಲಿ ೧. “ಶಿಕ್ಷಣವೇ ಆಧುನಿಕ ಶಕ್ತಿ”, 2. “ಆರೋಗ್ಯವೇ ಸಂಪತ್ತು”, 3. “ರೈತ ಚೈತನ್ಯ”, 4. “ಯುವನವ ಮಾರ್ಗ ಮತ್ತು ಮಹಿಳಾ ಸಬಲೀಕರಣ”, 5. “ವಸತಿಯ ಆಸರೆ” ಎಂಬ ಐದು ಕನಸಿನ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಇದನ್ನು ಜನರಿಗೆ ತಿಳಿಸುವ ಕೆಲಸವನ್ನು ಮಾಡುತ್ತೇನೆ ಎಂದು ತಿಳಿಸಿದರು.

ಸರ್ವರಿಗೂ ಅತ್ಯಾಧುನಿಕ ಶಿಕ್ಷಣ
ಬಡವ, ಶ್ರೀಮಂತ ಎಂಬ ಭೇದಭಾವ ಇಲ್ಲದೆ ಎಲ್ಲರಿಗೂ ಅತ್ಯಾಧುನಿಕ ಶಿಕ್ಷಣ ಲಭಿಸಬೇಕು. ಗ್ರಾಮ ಪಂಚಾಯಿತಿ ಸೇರಿ ಪ್ರತಿ ವಾರ್ಡ್‌ನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಂತೆ ಸರ್ಕಾರವೂ ಶಿಕ್ಷಣ ಕೊಡುವಂತೆ ಮಾಡಬೇಕು. ಇಂಗ್ಲಿಷ್‌ ಕಲಿಕೆಗೂ ಪ್ರಾಮುಖ್ಯತೆ ನೀಡುವಂತಾಗಬೇಕು. ಕೊರೊನಾ ಸಮಯದಲ್ಲಿ ಶಾಲೆ ನಡೆಯದೇ ಇದ್ದರೂ ಖಾಸಗಿ ಶಿಕ್ಷಣ ಸಂಸ್ಥೆಯವರು ಶುಲ್ಕವನ್ನು ಬಲವಂತವಾಗಿ ಕಟ್ಟಿಸಿಕೊಂಡರು. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಇಂಥ ಒಂದು ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಎಚ್‌ಡಿಕೆ ಹೇಳಿದರು.

ಇದನ್ನೂ ಓದಿ | Audio Viral | ಎಂ.ಪಿ. ಕುಮಾರಸ್ವಾಮಿ ನಿಂದಿಸಿದರಾ ವೀರಣ್ಣ ಚರಂತಿಮಠ? ವೈರಲ್ ಆಯ್ತು ಆಡಿಯೊ!

ಎಲ್ಲರಿಗೂ ಉಚಿತ ಆರೋಗ್ಯ ಚಿಕಿತ್ಸೆ
ಆರೋಗ್ಯ ವಿಚಾರವಾಗಿ ಎಲ್ಲರಿಗೂ ಉಚಿತ ಚಿಕಿತ್ಸೆ ಸಿಗಬೇಕು. ಕ್ಯಾನ್ಸರ್, ಡಯಾಲಿಸಿಸ್‌ಗೆ ಲಕ್ಷಾಂತರ ಹಣ ಕಟ್ಟಬೇಕು. ಕೊರೊನಾ ಸಮಯದಲ್ಲಿ ಎಷ್ಟು ಸಾವು-ನೋವು ಆಗಿದೆ ಎಂಬುದನ್ನು ನಾವು ಕಂಡಿದ್ದೇವೆ. 6000 ಗ್ರಾಮ ಪಂಚಾಯಿತಿಯಲ್ಲಿ ದೊಡ್ಡ ಆಸ್ಪತ್ರೆ ಕಟ್ಟಬೇಕು. ಪ್ರತಿ ಆಸ್ಪತ್ರೆಯಲ್ಲಿ ವೈದ್ಯರು, ಲ್ಯಾಬ್ ಹೀಗೆ ಎಲ್ಲ ವ್ಯವಸ್ಥೆಯೂ ಇರಬೇಕು. ಖಾಸಗಿ ಆಸ್ಪತ್ರೆಯಲ್ಲಿ ಹೊರಗಡೆ ಹೋಗಿ ಎಕ್ಸ್‌ರೇ ತೆಗೆಸಿ ಎಂದು ಹೇಳುತ್ತಾರೆ. ಆದರೆ, ಇದು ಬಡವರಿಗೆ ಸಾಧ್ಯವಿಲ್ಲ. ಆರೋಗ್ಯದ ವಿಮೆ ಸರ್ಕಾರವೇ ಮಾಡಬೇಕು. ಗ್ರಾಮ ಮಟ್ಟದಲ್ಲಿ ಹೆರಿಗೆಗೆ ತಕ್ಷಣಕ್ಕೆ ಬೇಕಾದ ಸೌಲಭ್ಯ ಸಿಗಬೇಕು. ಈ ಎಲ್ಲವನ್ನೂ ನಾನು ಗಮನದಲ್ಲಿಟ್ಟುಕೊಂಡಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.

ಮೈಸೂರಿನಲ್ಲಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಚಾಲನೆ ನೀಡುವ ತೀರ್ಮಾನವನ್ನು ತೆಗೆದುಕೊಳ್ಳಲಾಗಿತ್ತು. ಆದರೆ, ಕಳೆದ ಗುರುವಾರವೇ ನಮ್ಮ ಪಕ್ಷದ 126 ಸಂಭವನೀಯ ಅಭ್ಯರ್ಥಿಗಳ ಜತೆಗೆ ನಾಡದೇವತೆ ಚಾಮುಂಡಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ್ದೇವೆ. ನಾನು ನಂಬುವ ದೇವತೆ ನಾಡದೇವೆತೆ ಚಾಮುಂಡೇಶ್ವರಿಯಾಗಿದ್ದಾಳೆ. ಇನ್ನು ನಮ್ಮ ತಂದೆ ಎಚ್‌.ಡಿ. ದೇವೇಗೌಡ ಅವರು ಶಿವನನ್ನ ಪೂಜಿಸುತ್ತಾರೆ. 1994ರಲ್ಲಿ ದೇವೆಗೌಡರ ನೇತೃತ್ವದಲ್ಲಿ ಚುನಾವಣೆಗೆ ಮೊದಲು ಇಲ್ಲೇ ಪೂಜೆ ನೆರವೇರಿಸಲಾಗಿತ್ತು. ಹಾಗಾಗಿ ಇಂದು ಇಲ್ಲಿಯೇ ಪೂಜೆ ಮಾಡಿ ಚಾಲನೆ ನೀಡಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಎಚ್‌ಡಿಕೆ ಉತ್ತರಿಸಿದರು.

ನವೆಂಬರ್‌ ೧ರಂದು ಕೋಲಾರದಲ್ಲಿ ಕಾರ್ಯಕ್ರಮ
ನವೆಂಬರ್ 1 ರಿಂದ ಪಂಚರತ್ನ ರಥಯಾತ್ರೆ ಆರಂಭ ಮಾಡಲು ಚಿಂತನೆ ನಡೆಸಿದ್ದೆವು. ಆದರೆ, ಬುಧವಾರ (ಅ.೨೭) ಪ್ರಶಸ್ತವಾದ ದಿನವಾದ್ದರಿಂದ ಚಾಲನೆ ನೀಡಲಾಗಿದೆ. ಗುರುವಾರ (ಅ.೨೮) ಅಣ್ಣಮ್ಮ ದೇವಸ್ಥಾನದಲ್ಲಿ ಪೂಜೆ ಮಾಡಿ ಎರಡನೇ ದಿನದ ಕಾರ್ಯಕ್ರಮವನ್ನು ಮಾಡಲಿದ್ದೇವೆ. ನವೆಂಬರ್ ೧ರಂದು ಕೋಲಾರದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಮಾಡಲಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದರು.

ಕಾಂಗ್ರೆಸ್- ಬಿಜೆಪಿಯ ಪಾಪದ ಕೊಡ ತುಂಬಿದೆ
ಕಾಂಗ್ರೆಸ್-ಬಿಜೆಪಿಯವರ ಪಾಪದ ಕೊಡ ತುಂಬಿದೆ. ಕಾಂಗ್ರೆಸ್‌ನವರು ಯಾವ ಜೋಡೋ ಆದರೂ ಮಾಡಿಕೊಳ್ಳಲಿ. ಬಿಜೆಪಿಯವರು ಯಾವ ಸಂಕಲ್ಪ ಯಾತ್ರೆಯನ್ನಾದರೂ ಮಾಡಿಕೊಳ್ಳಲಿ. 2023ಕ್ಕೆ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುವುದು ನಿಶ್ಚಿತ. ಜನರಿಂದ ಲೂಟಿ ಮಾಡಿದ ಹಣವನ್ನು ಹಂಚಲು ಬರುತ್ತಾರೆ. ಒಂದು ಮತಕ್ಕೆ 2000 ರೂಪಾಯಿ ಮತ್ತು ಕುಕ್ಕರ್ ಕೊಡುತ್ತೇನೆ ಎಂದು ಬರುತ್ತಾರೆ. ಆದರೆ, ಈ ಹಣವು ರಾಜ್ಯದ ಜನರಿಂದ ಲೂಟಿ ಮಾಡಿರುವುದೇ ಆಗಿದೆ. ಭಾರತ್ ಜೋಡೋದಿಂದ ಜನರ ಸಮಸ್ಯೆಗಳ ನಿವಾರಣೆ ಆಗುವುದಿಲ್ಲ. ಇಂದು ಏನೋ ಕಾಂಗ್ರೆಸ್ ನಾಯಕರು ಪಟ್ಟಿ ಮಾಡುತ್ತಾರಂತೆ. ಆದರೆ, ಅದರಿಂದ ಜನರ ಸಮಸ್ಯೆ ನಿವಾರಣೆ ಆಗದು ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಪರಿಷತ್ ಸದಸ್ಯ ಟಿ.ಎ. ಶರವಣ, ಬೆಂಗಳೂರು ಜೆಡಿಎಸ್ ಅಧ್ಯಕ್ಷ ಆರ್. ಪ್ರಕಾಶ್ ಸೇರಿ ಇತರರು ಭಾಗಿಯಾಗಿದ್ದರು.

ಇದನ್ನೂ ಓದಿ | Election 2023 | ಎಚ್‌.ಡಿ. ಕುಮಾರಸ್ವಾಮಿ ಮುಂದಿನ ಸಿಎಂ ಆಗಲಿ; ಎಚ್‌ಡಿಕೆ ಫೋಟೊ ಇಟ್ಟು ಲಕ್ಷ್ಮೀ ಪೂಜೆ ಮಾಡಿದ ಅಭಿಮಾನಿ!

Exit mobile version