Site icon Vistara News

JDS Politics : ಭವಾನಿ ರೇವಣ್ಣಗೆ ಕೊಡೋದಾದ್ರೆ ನಂಗೂ ಬೇಕು; ಅನಿತಾ ಕುಮಾರಸ್ವಾಮಿ ಹಠ, ಶುಕ್ರವಾರ ಫೈನಲ್‌ ಮ್ಯಾಚ್!‌

Anita kumaraswamy Bhavani Revanna

#image_title

ಬೆಂಗಳೂರು: ಹಾಸನ ಜೆಡಿಎಸ್‌ ಟಿಕೆಟನ್ನು (JDS Politics) ನೆಪವಾಗಿಟ್ಟುಕೊಂಡು ದೇವೇಗೌಡರ ಮನೆಯಲ್ಲಿ ನಡೆಯುತ್ತಿರುವ ರಾಜಕೀಯ ಚದುರಂಗದಾಟ ಹೊಸ ಹೊಸ ತಿರುವುಗಳನ್ನು ಪಡೆಯುತ್ತಿದೆ. ಏಟಿಗೆ ತಿರುಗೇಟು, ತಂತ್ರಕ್ಕೆ ಪ್ರತಿತಂತ್ರ ಹೊಸೆಯಲಾಗುತ್ತಿದ್ದು, ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಎನ್ನುವುದು ಯಕ್ಷ ಪ್ರಶ್ನೆ. ಅದರ ನಡುವೆಯೇ ಮುಂದಿನ ಶುಕ್ರವಾರ ಫೈನಲ್‌ ಮಾತುಕತೆ ನಡೆಯಲಿದೆ ಎಂಬ ಸಂದೇಶವನ್ನು ಎಚ್‌.ಡಿ. ದೇವೇಗೌಡರು ರವಾನಿಸಿದ್ದಾರೆ.

ಹಾಸನ ಜೆಡಿಎಸ್‌ ಟಿಕೆಟನ್ನು ತನಗೆ ನೀಡಬೇಕು ಎಂದು ಭವಾನಿ ರೇವಣ್ಣ ಅವರು ಹಠ ಹಿಡಿಯಲು ಆರಂಭಿಸಿ ತಿಂಗಳುಗಳೇ ಕಳೆದಿವೆ. ಆದರೆ, ಇದರ ಪೂರ್ವ ಸೂಚನೆಯನ್ನು ಅರಿತ ಅನಿತಾ ಕುಮಾರಸ್ವಾಮಿ ಅವರು ತಾನು ಸ್ಪರ್ಧಿಸುತ್ತಿದ್ದ ರಾಮನಗರ ಕ್ಷೇತ್ರವನ್ನು ಮಗ ನಿಖಿಲ್‌ ಕುಮಾರಸ್ವಾಮಿ ಅವರಿಗೆ ಬಿಟ್ಟು ಕೊಟ್ಟು ತ್ಯಾಗದ ಸಂದೇಶ ರವಾನಿಸಿದರು. ಜತೆಗೆ ತಾನು ಸ್ಪರ್ಧಿಸುತ್ತೇನೆ ಎಂಬ ಕಾರಣ ಇಟ್ಟುಕೊಂಡು ಭವಾನಿ ರೇವಣ್ಣ ಅವರು ಟಿಕೆಟ್‌ ಕೇಳುವುದು ಬೇಡ ಎನ್ನುವ ಯೋಜನೆಯೂ ಇತ್ತು.

ಆದರೆ, ಭವಾನಿ ರೇವಣ್ಣ ಮಾತ್ರ ಯಾವುದಕ್ಕೂ ಸೊಪ್ಪು ಹಾಕದೆ ಬೇಕು ಅಂದರೆ ಬೇಕು ಎನ್ನುವ ಮಾದರಿಯಲ್ಲಿ ಪಟ್ಟು ಹಿಡಿದಿದ್ದರು. ಹಾಸನದಲ್ಲಿ ಜೆಡಿಎಸ್‌ ಮತ್ತೆ ಗೆಲ್ಲಬೇಕು, ಬಿಜೆಪಿಯಿಂದ ಶಾಸಕರಾಗಿರುವ ಪ್ರೀತಂ ಗೌಡ ಅವರಿಗೆ ಪ್ರತಿಯೇಟು ನೀಡಬೇಕು ಎಂದರೆ ದೊಡ್ಡ ಮಟ್ಟದ ಹೋರಾಟವೇ ನಡೆಯಬೇಕು. ಅದು ನನ್ನಿಂದಷ್ಟೇ ಸಾಧ್ಯ ಎನ್ನುವ ವಾದವನ್ನು ಭವಾನಿ ಮುಂದಿಟ್ಟಿದ್ದರು.

ಆದರೆ, ಎಚ್‌.ಡಿ ಕುಮಾರಸ್ವಾಮಿ ಅವರಿಗೆ ಇದು ಇಷ್ಟವಿಲ್ಲದೆ ಅವರು ಸಾಮಾನ್ಯ ಕಾರ್ಯಕರ್ತನ ಮಂತ್ರ ಜಪಿಸಿದ್ದರು. ಅವರ ಪ್ರಕಾರ ಸಾಮಾನ್ಯ ಕಾರ್ಯಕರ್ತ ಎಂದರೆ ಎಚ್‌.ಪಿ. ಸ್ವರೂಪ್‌. ಹಾಸನದಲ್ಲಿ ದೇವೇಗೌಡರ ಕುಟುಂಬದವರು ನಿಂತು ಗೆಲ್ಲಬೇಕು ಎನ್ನುವ ಅವಶ್ಯಕತೆ ಇಲ್ಲ ಎನ್ನುವುದು ಅವರ ನಿಲುವಾಗಿತ್ತು.

ಆದರೆ, ಇದ್ಯಾವುದಕ್ಕೂ ಭವಾನಿ ರೇವಣ್ಣ ಸೊಪ್ಪಿ ಹಾಕದೆ ಇದ್ದಾಗ ಭಾನುವಾರ ದೇವೇಗೌಡರ ಮನೆಯಲ್ಲಿ ಸಂಧಾನ ಸಭೆ ನಡೆಯಿತು. ಅಲ್ಲಿ ಮತ್ತೆ ದೇವೇಗೌಡ, ಕುಮಾರಸ್ವಾಮಿ ಅವರಿಬ್ಬರೂ ಸೇರಿಕೊಂಡು ಸಾಮಾನ್ಯ ಕಾರ್ಯಕರ್ತನ ಕಥೆ ಹೇಳಿದಾಗ ಭವಾನಿ ಅವರು ಸಿಟ್ಟಿಗೆದ್ದು ಸಭೆಯಿಂದ ಹೊರನಡೆದಿದ್ದರು. ಅವರೊಂದಿಗೆ ಹೊರತೆರಳಿದ ರೇವಣ್ಣ ಅವರು ಮರಳಿ ಬಂದು ಭವಾನಿ ಅವರು ಪಕ್ಷೇತರರಾಗಿಯಾದರೂ ಕಣಕ್ಕೆ ಇಳಿಯೋದು ಗ್ಯಾರಂಟಿ ಎಂಬ ಸಂದೇಶ ರವಾನಿಸಿದ್ದರು.

ಸಂಧಾನ ಸಭೆ ವಿಫಲವಾದ ಬೆನ್ನಲ್ಲೇ ಆಕ್ಟೀವ್ ಆದ ಭವಾನಿ ರೇವಣ್ಣ, ಟಿಕೆಟ್‌ ಸಿಕ್ಕರೂ, ಸಿಗದಿದ್ದರೂ ಸ್ಪರ್ಧೆ ಖಚಿತ ಎಂಬ ಸಂದೇಶ ರವಾನಿಸಿದರು. ಸೋಮವಾರ ಮಧ್ಯಾಹ್ನದ ಹೊತ್ತಿಗೆ ಜೆಡಿಎಸ್‌ ಎರಡನೇ ಪಟ್ಟಿ ಬಿಡುಗಡೆ ಆಗತ್ತದೆ ಎಂದು ಹೇಳಲಾಗಿತ್ತಾದರೂ ಹಾಸನ ಟಿಕೆಟ್‌ ಗೊಂದಲದಿಂದಾಗಿ ಪಟ್ಟಿ ಬಿಡುಗಡೆ ಮುಂದಕ್ಕೆ ಹೋಗಿದೆ. ಇದೀಗ ದಿಲ್ಲಿಯಲ್ಲಿರುವ ದೇವೇಗೌಡರು ಮರಳಿ ಬಂದ ಮೇಲೆಯೇ ಮುಂದಿನ ಪಟ್ಟಿ ಎನ್ನಲಾಗುತ್ತಿದೆ.

ತನಗೂ ಟಿಕೆಟ್‌ ಬೇಕು ಎಂದ ಅನಿತಾ ಕುಮಾರಸ್ವಾಮಿ

ಇತ್ತ ಭವಾನಿ ರೇವಣ್ಣ ಅವರು ಟಿಕೆಟ್‌ಗಾಗಿ ಹಟ ಹಿಡಿಯುವುದು ಜಾಸ್ತಿಯಾಗುತ್ತಿದ್ದಂತೆಯೇ ಒಂದೊಮ್ಮೆ ಭವಾನಿ ರೇವಣ್ಣ ಅವರಿಗೆ ಟಿಕೆಟ್‌ ನೀಡಿದರೆ ತಾನೂ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆನ್ನಲಾಗಿದೆ. ಗೌಡರ ಕುಟುಂಬದ ಹೆಣ್ಮಕ್ಕಳ ಸ್ಪರ್ಧೆ ಈ ಬಾರಿ ಬೇಡ ಎಂದರೆ ನಾನೂ ಬೇಡ, ಭವಾನಿಯೂ ಬೇಡ ಅಂತ ನಿಲುವಾಗಿತ್ತು. ಈಗ ಭವಾನಿ ರೇವಣ್ಣ ಅವರಿಗೆ ಕೊಡುವುದಾದರೆ ನನಗೂ ಕೊಡಿ ಎನ್ನುವುದು ಅನಿತಾ ಆಗ್ರಹ. ರಾಮನಗರ ಕ್ಷೇತ್ರವನ್ನು ತ್ಯಾಗ ಮಾಡಿದ್ದಕ್ಕೆ ಬೆಲೆ ಬೇಡವೇ ಎನ್ನುವುದು ಅವರ ಪ್ರಶ್ನೆ.

ಎಲ್ಲದಕ್ಕೂ ಶುಕ್ರವಾರ ಅಂತಿಮ ತೀರ್ಪು

ಗೌಡರ ಕುಟುಂಬದಲ್ಲಿ ನಡೆಯುತ್ತಿರುವ ಈ ವಿದ್ಯಮಾನಗಳನ್ನು ದೇವೇಗೌಡರೇ ಬಗೆಹರಿಸಬೇಕಾಗಿದೆ. ಆದರೆ ಅವರು ದಿಲ್ಲಿಯಲ್ಲಿದ್ದಾರೆ. ಕಾಲು ನೋವಿದ್ದರೂ ಸಂಸತ್‌ ಅಧಿವೇಶನದಲ್ಲಿ ಭಾಗಿಯಾಗಲು ತೆರಳಿರುವ ಅವರು ಬೆಂಗಳೂರಿಗೆ ಮರಳುವುದು ಗುರುವಾರ. ಶುಕ್ರವಾರ ಅವರು ಮತ್ತೊಂದು ಸುತ್ತಿನ ಸಭೆಯನ್ನು ನಡೆಸಲಿದ್ದಾರೆ. ಆಗ ಏನು ಫೈನಲೈಜ್‌ ಆಗುತ್ತದೆ ಎನ್ನುವುದರ ಆಧಾರದ ಮೇಲೆ ಟಿಕೆಟ್‌ ಮಾತ್ರವಲ್ಲ, ಗೌಡರ ಕುಟುಂಬದ ಭವಿಷ್ಯವೂ ನಿಂತಿದೆ.

ಇದನ್ನೂ ಓದಿ : Karnataka Election 2023: ಹಾಸನ ಟಿಕೆಟ್‌ ಗೊಂದಲ, ಜೆಡಿಎಸ್‌ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮುಂದೂಡಿಕೆ

Exit mobile version