ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (karnataka election) ಜೆಡಿಎಸ್ ಅಭ್ಯರ್ಥಿಗಳ ಆಯ್ಕೆ ಗೊಂದಲದ ಗೂಡಾಗಿದ್ದು , ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ (JDS ticket) ಇಂದು ಬಿಡುಗಡೆಯಾಗುವ ಸಾಧ್ಯತೆಯಿದೆ. ಮಧ್ಯಾಹ್ನ 1 ಗಂಟೆಗೆ ಜೆಡಿಎಸ್ ಮುಖಂಡ ಎಚ್.ಡಿ. ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಜೆಪಿ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದು, ಪಟ್ಟಿ ಬಿಡುಗಡೆ ಮಾಡಲಿದ್ದಾರೆ.
ಹಾಸನ ಟಿಕೆಟ್ ಕೂಡ ಇಂದೇ ಘೋಷಣೆಯಾಗುವ ಸಾಧ್ಯತೆಯಿದೆ. ನಿನ್ನೆ ತಡರಾತ್ರಿಯವರೆಗೂ ಈ ಕುರಿತು ದೇವೇಗೌಡರ ನಿವಾಸದಲ್ಲಿ ಸಂಧಾನ ನಡೆದಿತ್ತು. ಆದರೆ ಅಲ್ಲೂ ಒಮ್ಮತದ ಅಭಿಪ್ರಾಯ ಹೊರಹೊಮ್ಮಿರಲಿಲ್ಲ.
ಅಳೆದು ತೂಗಿ ಅಭ್ಯರ್ಥಿ ಆಯ್ಕೆ ಕಸರತ್ತು ಮುಗಿಸಲಾಗಿದೆ. ಎರಡನೇ ಪಟ್ಟಿ ಬಿಡುಗಡೆಗೆ ಮುನ್ನ ಜೆಡಿಎಸ್ ವಲಯದಲ್ಲಿ ಸಾಕಷ್ಟು ಲೆಕ್ಕಾಚಾರ ನಡೆದಿದ್ದು, ಎರಡನೇ ಪಟ್ಟಿಯಲ್ಲಿ ಕೂಡ ಪ್ರಬಲ ಅಭ್ಯರ್ಥಿಗಳ ಘೋಷಣೆಗೆ ಜೆಡಿಎಸ್ ಪ್ರಯತ್ನಿಸಿದೆ. ಮೊದಲ ಪಟ್ಟಿಯಲ್ಲಿ 93 ಕ್ಷೇತ್ರಗಳ ಪಟ್ಟಿ ಬಿಡುಗಡೆ ಮಾಡಲಾಗಿತ್ತು. ಎರಡನೇ ಪಟ್ಟಿಯಲ್ಲಿ 30-50 ಕ್ಷೇತ್ರಗಳಲ್ಲಿ ಟಿಕೆಟ್ ಘೋಷಣೆ ಸಾಧ್ಯತೆ ಇದೆ.
ಅಭ್ಯರ್ಥಿ ಖಚಿತವಾಗಿರುವ ಕ್ಷೇತ್ರಗಳಲ್ಲಿ ಟಿಕೆಟ್ ಘೋಷಣೆ ಮಾಡಲಾಗುತ್ತಿದ್ದು, ಕಳೆದ ಚುನಾವಣೆಯಲ್ಲಿ ದ್ವಿತೀಯ, ತೃತೀಯ ಸ್ಥಾನ ಪಡೆದ ಕ್ಷೇತ್ರಗಳಲ್ಲಿ ಅಭ್ಯರ್ಥಿ ಖಚಿತಗೊಳಿಸಲಾಗಿದೆ. ಸಮುದಾಯವಾರು, ಪ್ರಾಂತ್ಯವಾರು ಅಭ್ಯರ್ಥಿಗಳನ್ನು ಹೆಚ್‌ಡಿಕೆ ಫೈನಲ್ ಮಾಡಿದ್ದಾರೆ. ಜಿಲ್ಲಾಧ್ಯಕ್ಷರು, ಸ್ಥಳೀಯ ಮುಖಂಡರ ಜೊತೆ ಅಭಿಪ್ರಾಯ ಸಂಗ್ರಹಿಸಿ ಪಟ್ಟಿ ಅಂತಿಮಗೊಳಿಸಲಾಗಿದೆ.
ಗೊಂದಲದ ಗೂಡಾಗಿರುವ ಹಾಸನ ಟಿಕೆಟ್ ಕೂಡ ಇಂದೇ ಘೋಷಣೆಯಾಗಲಿದೆ. ದೇವೇಗೌಡರ ನಿರ್ಧಾರದಂತೆ ಹಾಸನ ಟಿಕೆಟ್ ನೀಡಲಾಗುತ್ತಿದ್ದು, ಗೊಂದಲಕ್ಕೆ ತೆರೆ ಏಳೆಯುವ ಸಾಧ್ಯತೆ ಇದೆ. ಇದನ್ನು ಹೀಗೇ ಮುಂದುವರಿಸಿದರೆ ಕಾರ್ಯಕರ್ತರಿಗೆ ತಪ್ಪು ಸಂದೇಶ ಹೋಗುವ ಸಾಧ್ಯತೆ ಹಾಗೂ ಪ್ರಚಾರ ವಿಳಂಬ ಆಗುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.
ಜೆಡಿಎಸ್ 2ನೇ ಪಟ್ಟಿಯಲ್ಲಿರುವ ಸಂಭಾವ್ಯ ಅಭ್ಯರ್ಥಿಗಳು:
ಹಾಸನ- ಭವಾನಿ ರೇವಣ್ಣ/ ಸ್ವರೂಪ್ ಪ್ರಕಾಶ್
ಶಿರಾ- ಸಿ.ಆರ್.ಉಗ್ರೇಶ್
ಹೆಚ್.ಡಿ.ಕೋಟೆ – ಚಿಕ್ಕಣ್ಣ/ ಕೃಷ್ಣನಾಯಕ್
ನರಸಿಂಹರಾಜ ನಗರ- ಸಿ.ಎಂ.ಇಬ್ರಾಹಿಂ / ಅಬ್ದುಲ್ಲಾ
ಚಾಮರಾಜ ನಗರ – ಕೆ.ವಿ.ಶ್ರೀಧರ್
ಬಸವಕಲ್ಯಾಣ – ಮಲ್ಲಿಕಾರ್ಜುನ ಖೂಬ
ಕಂಪ್ಲಿ – ರಾಜು ನಾಯ್ಕ
ಹಳಿಯಾಳ – ಗೋಟ್ನೇಕರ್
ರಾಜರಾಜೇಶ್ವರಿ – ಕೃಷ್ಣಮೂರ್ತಿ
ತಿಪಟೂರು – ಶಾಂತಕುಮಾರ್
ಅರಕಲಗೂಡು – ಎ.ಮಂಜು
ಅರಸೀಕೆರೆ – ಬಾಣಾವರ ಅಶೋಕ್
ಕಡೂರು – ಧನಂಜಯ