Site icon Vistara News

ಮೈಸೂರಿನಲ್ಲಿ ಅ.19, 20ರಂದು ಜೆಡಿಎಸ್ ಸಮಾಲೋಚನಾ ಸಭೆ; ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡ ಉಪಸ್ಥಿತಿ

Bagepalli News

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವುದು, ನವೆಂಬರ್ 1ರಿಂದ ಆರಂಭವಾಗಲಿರುವ ಪಂಚರತ್ನ ರಥಯಾತ್ರೆ, ಪಕ್ಷ ಸಂಘಟನೆ ಸೇರಿ ಪ್ರಮುಖ ಅಂಶಗಳ ಅಜೆಂಡಾ(ಕಾರ್ಯಸೂಚಿ) ಇಟ್ಟುಕೊಂಡು ಜೆಡಿಎಸ್‌ನಿಂದ ಮೈಸೂರಿನಲ್ಲಿ ಅ.೧೯ ಮತ್ತು ೨೦ ರಂದು ಸಮಾಲೋಚನಾ ಸಭೆ ಹಮ್ಮಿಕೊಳ್ಳಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಎರಡು ದಿನಗಳ ಈ ಕಾರ್ಯಾಗಾರ ಪಕ್ಷದ ಸಂಘಟನೆ ದೃಷ್ಟಿಯಿಂದ ಅತ್ಯಂತ ಮಹತ್ವದ್ದು. ನಮ್ಮ ಪಕ್ಷದ ನಾಯಕರಿಗೆ ಮುಂದಿನ ಕಾರ್ಯತಂತ್ರದ ಬಗ್ಗೆ ಸ್ಪಷ್ಟ ದಿಕ್ಸೂಚಿ ನೀಡಲಾಗುವುದು. ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು, ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಕೋರ್ ಕಮಿಟಿ ಅಧ್ಯಕ್ಷ ಬಂಡೆಪ್ಪ ಕಾಶೆಂಪೂರ್, ಸಂಸದೀಯ ಮಂಡಳಿ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಸೇರಿದಂತೆ ಪಕ್ಷದ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | ಕಾಂಗ್ರೆಸ್ ಭ್ರಷ್ಟಾಚಾರದ ಸಮಗ್ರ ದಾಖಲೆ ರಾಹುಲ್ ಗಾಂಧಿಗೆ ರವಾನೆ: ಸಿಎಂ ಬಸವರಾಜ ಬೊಮ್ಮಾಯಿ

ಪಂಚರತ್ನ ರಥಯಾತ್ರೆ
ನವೆಂಬರ್ 1ರಿಂದ ಪಂಚರತ್ನ ರಥಯಾತ್ರೆ ಅರಂಭವಾಗುತ್ತಿದ್ದು, ಯಾತ್ರೆಯ ಅಂತಿಮ ಹಂತದ ಸಿದ್ಧತೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಅಲ್ಲದೆ, ರಥಯಾತ್ರೆ ಹೇಗಿರುತ್ತದೆ? ಅದರ ಸ್ವರೂಪವೇನು? ಯಾವ ಮಾರ್ಗದಲ್ಲಿ ಸಾಗುತ್ತದೆ? ಗ್ರಾಮ ವಾಸ್ತವ್ಯ, ಜನ ಸಂಪರ್ಕ ಸಭೆ, ಸಮಾವೇಶ ಇತ್ಯಾದಿ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುವುದು. ಈ ಪೈಕಿ ಪಂಚರತ್ನ ಕಾರ್ಯಕ್ರಮಗಳಾದ ಶಿಕ್ಷಣ, ಆರೋಗ್ಯ, ಯುವ ಮತ್ತು ಮಹಿಳಾ ಸಬಲೀಕರಣ, ಕೃಷಿ – ನೀರಾವರಿ, ಉದ್ಯೋಗ, ವಸತಿ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮನದಟ್ಟು ಮಾಡಿಕೊಡುವ ಬಗ್ಗೆ ಸಭೆಯಲ್ಲಿ ಸೂಕ್ತ ಮಾರ್ಗದರ್ಶನ ನೀಡಲಾಗುವುದು ಎಂದು ಹೇಳಿದ್ದಾರೆ.

ಅಭ್ಯರ್ಥಿಗಳಿಗೆ ಚುನಾವಣೆ ಪಾಠ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅನುಸರಿಸಬಹುದಾದ ಕಾರ್ಯತಂತ್ರದ ಬಗ್ಗೆ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾಗಲಿದೆ ಎಂದಿರುವ ಮಾಜಿ ಮುಖ್ಯಮಂತ್ರಿ, ಪ್ರತಿ ಕ್ಷೇತ್ರವೂ ನಮಗೆ ಮುಖ್ಯವಾಗಿದೆ. ಬಿಡದಿಯಲ್ಲಿ ನಡೆದ ಸಭೆಯಲ್ಲಿ ಅಭ್ಯರ್ಥಿಗಳಿಗೆ ಕೆಲ ಟಾಸ್ಕ್‌ಗಳನ್ನು ಕೊಡಲಾಗಿತ್ತು. ಕೆಲವರು ಆ ಕಾರ್ಯಗಳನ್ನು ಅತ್ಯುತ್ತಮವಾಗಿ ಪೂರ್ಣಗೊಳಿಸಿದ್ದಾರೆ. ಕೆಲವರು ಪ್ರಾಮಾಣಿಕವಾಗಿ ಪೂರ್ಣಗೊಳಿಸಲು ಯತ್ನಿಸಿದ್ದಾರೆ. ಈ ಬಗ್ಗೆ ಸಭೆಯಲ್ಲಿ ಕೂಲಂಕಷವಾಗಿ ಗಮನಿಸಿ ಸೂಕ್ತ ಮಾರ್ಗದರ್ಶನ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಮನೆ ಮನೆಯ ಮೇಲೆಯೂ ಕನ್ನಡ ಬಾವುಟ
ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ನಿಮಿತ್ತ ಮನೆ ಮನೆಯ ಮೇಲೆ ಕನ್ನಡ ಬಾವುಟ ಹಾರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಪಕ್ಷವು ರಾಜ್ಯದ ಜನತೆಯ ಜತೆಗೂಡಿ ಮಾಡುವ ಉದ್ದೇಶ ಹೊಂದಿದೆ. ಈ ಕಾರ್ಯಕ್ರಮದ ಸ್ವರೂಪ, ಪಕ್ಷದ ಪಾಲ್ಗೊಳ್ಳುವಿಕೆ ಮುಂತಾದ ಅಂಶಗಳ ಬಗ್ಗೆ ಸಭೆಯಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಪಕ್ಷವು ಬೇರೆಯದೇ ದಿಕ್ಕಿನಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಹೊರತಾದ ಜನಪರ ದಾರಿಯಲ್ಲಿ ಪ್ರಯಾಣ ಮಾಡುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಆಡಳಿತದಿಂದ ರೋಸಿ ಹೋಗಿರುವ ಜನರಿಗೆ ಜನಪರ ಸರಕಾರ ನೀಡಬೇಕು ಉದ್ದೇಶದಿಂದಲೇ ಪಕ್ಷವು ಕೆಲಸ ಮಾಡುತ್ತಿದೆ. ಆ ನಿಟ್ಟಿನಲ್ಲಿ ಮೈಸೂರಿನ ಸಭೆ ನಿರ್ಣಾಯಕ ಎಂದು ಎಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಇದನ್ನು ಓದಿ | Bharat Jodo | ಗಡಿನಾಡಿನಲ್ಲಿ ಮೂರು ದಿನ ವಾಸ್ತವ್ಯ ಹೂಡಿದ ರಾಹುಲ್ ಗಾಂಧಿ, ಬಲಗೊಂಡಿತೇ ಬಳ್ಳಾರಿ ಕೈಪಡೆ?

Exit mobile version