ತುಮಕೂರು: ರಾಜ್ಯ ವಿಧಾನಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆಯ ಅವಧಿ ಮುಗಿದು, ಆಯಾ ಕ್ಷೇತ್ರಗಳ ಅಭ್ಯರ್ಥಿಗಳು ಚುನಾವಣೆ ಪ್ರಚಾರ ಆರಂಭಿಸಿರುವ ಬೆನ್ನಲ್ಲೇ ತುಮಕೂರಿನಲ್ಲಿ ಗೂಂಡಾ ರಾಜಕೀಯ ಆರಂಭವಾಗಿದೆ. ಜೆಡಿಎಸ್ ತೊರೆದು ಬಿಜೆಪಿ ಸೇರಿದ ಇಬ್ಬರು ಮುಸ್ಲಿಂ ಮುಖಂಡರ ಮೇಲೆ ಜೆಡಿಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ತುಮಕೂರು ಗ್ರಾಮಾಂತರ ಕ್ಷೇತ್ರದ ಮುಬಾರಕ್ ಪಾಷಾ ಕುಟುಂಬಸ್ಥರು ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾಗಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದರು. ಇದೇ ಕಾರಣಕ್ಕಾಗಿ ಜೆಡಿಎಸ್ ಕಾರ್ಯಕರ್ತರಾದ ಮುನ್ನಾ, ಸೌಕತ್ ಹಾಗೂ ರಿಯಾಜ್ ಸೇರಿ ಹಲವರು ಮುಬಾರಕ್ ಪಾಷಾ ಹಾಗೂ ನಜೀರ್ ಎಂಬುವರ ಮೇಲೆ ತುಮಕೂರಿನ ಹೆಗ್ಗೆರೆಯಲ್ಲಿ ದಾಳಿ ನಡೆಸಿದ್ದಾರೆ. ಬಾಟಲಿ ಒಡೆದು, ಚಾಕು ಇರಿದು ಹಲ್ಲೆ ನಡೆಸಿದ್ದು, ಇದೇ ವೇಳೆ ಜೆಡಿಎಸ್‌ನ ಒಬ್ಬ ಕಾರ್ಯಕರ್ತನಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಮುಬಾರಕ್ ಪಾಷಾ ತಾಯಿ ಹಸಿನಾ ಹೆಗ್ಗೆರೆ ಗ್ರಾಮ ಪಂಚಾಯತಿ ಜೆಡಿಎಸ್ ಬೆಂಬಲಿತ ಸದಸ್ಯೆಯಾಗಿದ್ದಾರೆ. ಆದರೆ, ಇವರನ್ನು ಜೆಡಿಎಸ್ ಶಾಸಕರು ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನಾಗಿ ಮಾಡದ ಕಾರಣ ಬಿಜೆಪಿ ಸೇರ್ಪಡೆಯಾಗಿದ್ದರು. ಇದೇ ಕಾರಣಕ್ಕಾಗಿ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.