ಮೈಸೂರು: ಮೀಸಲಾತಿ ವಿಷಯದಲ್ಲಿ ಕ್ರೆಡಿಟ್ ತೆಗೆದುಕೊಳ್ಳಲು ಹೊರಟಿರುವ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು (JDS workshop) ಗುಡುಗಿದ್ದಾರೆ. ನೀವು ಕರೆದ ವೇದಿಕೆಗೆ ಬರಲು ನಾನು ಸಿದ್ದನಿದ್ದೇನೆ, ಚರ್ಚೆ ಮಾಡೋಣ ಬನ್ನಿ ಎಂದು ಪಂಥಾಹ್ವಾನ ಕೊಟ್ಟಿದ್ದಾರೆ.
ಅನಾರೋಗ್ಯದಿಂದ ಕೆಲಕಾಲ ವಿಶ್ರಾಂತಿ ಪಡೆಯುತ್ತಿದ್ದ ದೊಡ್ಡ ಗೌಡರು ಮತ್ತೆ ಪಕ್ಷ ಸಂಘಟನೆಗಾಗಿ ತಾವೇ ಅಖಾಡಕ್ಕೆ ಇಳಿದಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಎರಡು ದಿನಗಳ ಕಾರ್ಯಾಗಾರದಲ್ಲಿ ಪಾಲ್ಗೊಂಡು ಶಾಸಕರು ಹಾಗೂ ಸಂಭಾವ್ಯ ಅಭ್ಯರ್ಥಿಗಳಿಗೆ ಚುನಾವಣೆ ಗೆಲ್ಲುವ ಟಿಪ್ಸ್ ನೀಡಿದರು. ಈ ವೇಳೆ ಮೀಸಲಾತಿ ವಿಷಯದ ಬಗ್ಗೆ ಭಾಷಣದಲ್ಲೇ ಪ್ರಸ್ತಾಪಿಸಿದ ಗೌಡರು, ಕರ್ನಾಟಕದಲ್ಲಿ ಮೀಸಲಾತಿ ಕಲ್ಪಿಸಿದವರು ಯಾರು ಎಂಬ ಬಗ್ಗೆ ಬಹಿರಂಗ ಚರ್ಚೆ ನಡೆಯಬೇಕಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಹೇಳಿಕೆಗಳನ್ನ ಗಮನಿಸುತ್ತಿದ್ದೇನೆ. ಈ ಬಗ್ಗೆ ನಾನು ಚರ್ಚೆಗೆ ಸಿದ್ಧನಿದ್ದೇನೆ. ವೇದಿಕೆ ಸಿದ್ಧಪಡಿಸಿ ಎಂದು ಸವಾಲು ಹಾಕಿದರು.
ʻʻದೇಶದಲ್ಲಿ ಮೊದಲು ಮೀಸಲಾತಿ ಜಾರಿ ಆಗಿದ್ದು ಕರ್ನಾಟಕದಲ್ಲಿ. ಮುಸ್ಲಿಮರಿಗೆ ಮೀಸಲಾತಿ ಕೊಟ್ಟವರು ಯಾರು? ನನಗೆ ವಯಸ್ಸಾಗಿರಬಹುದು. ಆದರೆ ದೇವರ ದಯೆಯಿಂದ ಜ್ಞಾಪಕ ಶಕ್ತಿ ಕಡಿಮೆ ಆಗಿಲ್ಲ. ಮೀಸಲಾತಿ ಬಗ್ಗೆ ನೀವು ಮಾಡುತ್ತಿರುವ ಟೀಕೆಗಳನ್ನು ನಾನು ಗಮನಿಸುತ್ತಿದ್ದೇನೆ. ಜೆಡಿಎಸ್ ಪಕ್ಷ ಮುಗಿದೇ ಹೋಯಿತು ಎಂದೆಲ್ಲಾ ಕೆಲವರು ಮಾತಾಡುತ್ತಿದ್ದಾರೆ. ಸಂದರ್ಭ ಬರಲಿ ಅದೆಲ್ಲದಕ್ಕೂ ಉತ್ತರ ಕೊಡತ್ತೇನೆʼʼ ಎಂದು ಗುಡುಗಿದರು.
ʻʻಕುಮಾರಸ್ವಾಮಿ ಅವರ ಮಿಷನ್ 123 ಗುರಿ ಸಾಧನೆಗೆ ನೀವೆಲ್ಲರೂ ಐಕ್ಯತೆಯಿಂದ ಹೋರಾಡಿ, ನಿಮ್ಮೊಂದಿಗೆ ನಾನು ಇರುತ್ತೇನೆʼʼ ಎಂದು ಉತ್ಸಾಹ ತುಂಬಿದರು.
ಇದಕ್ಕೂ ಮುನ್ನ ಸಂಭಾವ್ಯ ಅಭ್ಯರ್ಥಿಗಳು ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಚಾಮುಂಡಿ ಬೆಟ್ಟಕ್ಕೆ ತೆರಳಿ ಸಾಮೂಹಿಕವಾಗಿ ಪೂಜೆ ಸಲ್ಲಿಸಿದರು. ಮೈಸೂರಿನಲ್ಲಿ ಆಯೋಜಿಸಿದ್ದ ಎರಡು ದಿನಗಳ ಸಂಘಟನಾ ಕಾರ್ಯಾಗಾರ ಮುಕ್ತಾಯಗೊಂಡಿದ್ದು, ನವೆಂಬರ್ 1ರಿಂದ ಪಂಚರತ್ನ ರಥಯಾತ್ರೆಯೊಂದಿಗೆ ಜೆಡಿಎಸ್ ಪ್ರಚಾರ ಕಾರ್ಯ ಆರಂಭವಾಗಲಿದೆ.
ಇದನ್ನೂ ಓದಿ| ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಆರೋಗ್ಯ ವಿಚಾರಿಸಿದ ಸಿಎಂ ಬೊಮ್ಮಾಯಿ