ಬೆಂಗಳೂರು: 2022ರ ಜೆಇಇ ಅಡ್ವಾನ್ಸ್ (JEE Advanced Result) ಫಲಿತಾಂಶ ಭಾನುವಾರ ಪ್ರಕಟಗೊಂಡಿದೆ. ರಾಷ್ಟ್ರೋತ್ಥಾನ ತಪಸ್‌ನ 12 ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಐಐಟಿಗೆ ಪ್ರವೇಶವನ್ನು ಪಡೆದಿದ್ದಾರೆ.
ಈ ಬಾರಿ 39 ವಿದ್ಯಾರ್ಥಿಗಳು ಜೆಇ ಅಡ್ವಾನ್ಸ್ ಪರೀಕ್ಷೆಗೆ ಕುಳಿತುಕೊಂಡಿದ್ದು, ಅವರಲ್ಲಿ 12 ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಐಐಟಿಗಳಲ್ಲಿ (ಭಾರತೀಯ ತಂತ್ರಜ್ಞಾನ ಸಂಸ್ಥೆ) ಪ್ರವೇಶದ ಅರ್ಹತೆಯನ್ನು ಪಡೆದಿದ್ದಾರೆ. ಉಳಿದ 27 ವಿದ್ಯಾರ್ಥಿಗಳು ಎನ್‌ಐಟಿ ಮೊದಲಾದ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವಷ್ಟು ಅರ್ಹತಾ ಅಂಕಗಳನ್ನು ಪಡೆದಿದ್ದಾರೆ.
ಉಡುಪಿಯ ಸ್ಕಂದ ಐತಾಳ್ 1751ನೇ ರ‍್ಯಾಂಕ್ ಹಾಗೂ ವರ್ಗವಾರು 188ನೇ ರ‍್ಯಾಂಕ್ ಪಡದಿದ್ದು, ತಪಸ್-ನ 9 ಬ್ಯಾಚ್‌ಗಳ ಅಷ್ಟೂ ವಿದ್ಯಾರ್ಥಿಗಳ ಪೈಕಿ ಮೊದಲಿಗರಾಗಿದ್ದಾರೆ. ಉಳಿದಂತೆ ಬೆಂಗಳೂರಿನ ಲಿಕಿತ್ 4833 (932) ರ‍್ಯಾಂಕ್ ಮಂಡ್ಯದ ಪ್ರಕಾಶ್ ಗೌಡ 7262 (1514) ರ‍್ಯಾಂಕ್, ಮಂಡ್ಯದ ಚಂದ್ರು 9005 (1157) ರ‍್ಯಾಂಕ್, ಉಡುಪಿಯ ಕಾರ್ತಿಕ್ ಸತೀಶ್ 11799 (2722) ರ‍್ಯಾಂಕ್, ಬೆಳಗಾವಿಯ ಸಾಗರ ಶಿವಲಿಂಗಪ್ಪ ಅಥಣಿ 16540 (4071) ರ‍್ಯಾಂಕ್, ಶಿವಮೊಗ್ಗದ ಸುಮುಖ ಸುಬ್ರಹ್ಮಣ ಶೆಟ್ಟಿ, 17954 (4487) ರ‍್ಯಾಂಕ್, ಚಿಕ್ಕಮಗಳೂರಿನ ಸಾಯಿಚಿರಂತನ್ ಎಚ್.ಎಂ. 25254 (6602) ರ‍್ಯಾಂಕ್, ಬೆಳಗಾವಿಯ ಆವಿಷ್ಕಾರ ಧವಳೆ 25277 (3747) ರ‍್ಯಾಂಕ್, ಬಾಗಲಕೋಟೆಯ ಚನ್ನಪ್ಪ ಎನ್. ಕಲಹಲ್ (4789) ರ‍್ಯಾಂಕ್, ಬೆಳಗಾವಿಯ ಗಿರೀಶ್ ಭಜಂತ್ರಿ (1204) ರ‍್ಯಾಂಕ್ ಹಾಗೂ ಬಳ್ಳಾರಿಯ ರಘುನಾಯಕ್ (3567) ರ‍್ಯಾಂಕ್ ಪಡೆದಿದ್ದಾರೆ.
ಗ್ರಾಮೀಣ ಸಾಧಕರು
ಈ ಎಲ್ಲ ವಿದ್ಯಾರ್ಥಿಗಳೂ ಗ್ರಾಮೀಣ ಹಿನ್ನೆಲೆಯ ಆರ್ಥಿಕವಾಗಿ ದುರ್ಬಲ ವರ್ಗದಿಂದ ಬಂದವರಾಗಿದ್ದು, ಕನ್ನಡ ಮಾಧ್ಯಮ ಶಿಕ್ಷಣದ ಹಿನ್ನೆಲೆಯನ್ನು ಹೊಂದಿದ್ದರೆಂಬುದು ವಿಶೇಷ. ರಾಷ್ಟ್ರೋತ್ಥಾನವು ತಪಸ್ ಯೋಜನೆಯನ್ನು 2012ರಲ್ಲಿ ಪ್ರಾರಂಭಿಸಿತು. ಅಲ್ಲಿಂದ 2022ರ ವರೆಗೆ ಒಟ್ಟು 9 ಬ್ಯಾಚ್‌ಗಳನ್ನು ಯಶಸ್ವಿಯಾಗಿ ಪೂರೈಸಿವೆ. ವರ್ಷಕ್ಕೆ 40ರಂತೆ ಆಯ್ಕೆಯಾದ ಒಟ್ಟು 392 ವಿದ್ಯಾರ್ಥಿಗಳಲ್ಲಿ ಇಲ್ಲಿಯವರೆಗೆ 26 ವಿದ್ಯಾರ್ಥಿಗಳು ಐಐಟಿಗೆ ಪ್ರವೇಶ ಪಡೆದಿದ್ದರೆ, 65 ವಿದ್ಯಾರ್ಥಿಗಳು ಎಸ್‌ಐಟಿಗೆ ಪಡೆದಿರುತ್ತಾರೆ.
ಕರ್ನಾಟಕದ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳ ಪ್ರತಿಭಾನ್ವಿತ ಮತ್ತು ಅರ್ಹ ಬಡ ಗಂಡು ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಯೋಜನೆಯೇ ತಪಸ್. ವಿವಿಧ ಹಂತದ ಆಯ್ಕೆ ಪ್ರಕ್ರಿಯೆಗಳ ಮೂಲಕ ಆಯ್ದ ವಿದ್ಯಾರ್ಥಿಗಳಿಗೆ ಉಚಿತ ಪದವಿಪೂರ್ವ ಶಿಕ್ಷಣದೊಂದಿಗೆ ಐಐಟಿ, ಜೆಇಇ ತರಬೇತಿಯನ್ನು ನೀಡಲಾಗುತ್ತದೆ. ಉಚಿತ ವಸತಿ, ಊಟ, ಶಿಕ್ಷಣ ಹಾಗೂ ಇನ್ನಿತರೆ ಸವಲತ್ತುಗಳನ್ನೊದಗಿಸಿ ದೇಶದ ಪ್ರತಿಷ್ಠಿತ ಐಐಟಿ, ಎನ್‌ಐಟಿ ಮತ್ತು ಇತರೆ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ತಪಸ್ ಸಹಕರಿಸುತ್ತಿದೆ.
ಈ ವರೆಗೆ ಪ್ರವೇಶ ಪರೀಕ್ಷೆ ಬರೆದಿರುವ ಒಟ್ಟು ವಿದ್ಯಾರ್ಥಿಗಳು 26,181 ಆಗಿದ್ದು, ಪ್ರತಿವರ್ಷ ಸುಮಾರು 4000 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. 2022-24ನೇ ಸಾಲಿನ ತಪಸ್ ಪ್ರವೇಶ ಅರ್ಜಿಯನ್ನು ಬಿಡುಗಡೆ ಮಾಡಲಾಗಿದೆ. ಆಸಕ್ತರು ಸಪ್ಟೆಂಬರ್ 15ರಿಂದ ಆರಂಭಿಸಿ ಡಿಸೆಂಬರ್ 10ರ ವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್- www.tapassaadhana.org ಅಥವಾ ಮೊ. 9481201144/ 9844602529/ 7975913828ಗೆ ಸಂಪರ್ಕಿಸಬಹುದಾಗಿದೆ.
ಇದನ್ನೂ ಓದಿ | JEE Advanced Result | ಜೆಇಇ ಅಡ್ವಾನ್ಸ್ಡ್ನಲ್ಲಿ 26ನೇ ಶ್ರೇಯಾಂಕ ಪಡೆದ ವಿದ್ಯಾರ್ಥಿಯಲ್ಲಿದೆ ವಿಶೇಷತೆ