ಬೆಂಗಳೂರು: ಪಶುಸಂಗೋಪನಾ ಇಲಾಖೆಯ ಹೆಸರಿನಲ್ಲಿ ನಕಲಿ ಅಧಿಸೂಚನೆಯನ್ನು ಹೊರಡಿಸಿ ನೇಮಕಾತಿ ನಡೆಸಲು ಮುಂದಾದ ಹಗರಣದ ರೂವಾರಿ ಸಿಕ್ಕಿಬಿದ್ದಿದ್ದಾನೆ. ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರಿಗೆ ಕನ್ನಡ ಕಲಿಸಲು ನೇಮಕಗೊಂಡಿದ್ದ ಜ್ಞಾನದೇವ್ ಯಾದವ್ ಎಂಬಾತನೇ ಈ ಹಗರಣ ಸೃಷ್ಟಿಸಿದ ಆರೋಪಿ.
ಜ್ಞಾನದೇವ ಯಾದವ್ ರಾಜ್ಯದ ಪಶು ಸಂಗೋಪನಾ ಇಲಾಖೆಯ ಹೆಸರಿನಲ್ಲಿ www.ahvs.kar.in ಎಂಬ ವೆಬ್‌ಸೈಟ್ ರಚಿಸಿ ಅದರಲ್ಲೇ ಅಧಿಸೂಚನೆ ಪ್ರಕಟಿಸಿದ್ದ. ಸಾಮಾನ್ಯವಾಗಿ ನೋಡುವವರಿಗೆ ಇದರಲ್ಲಿ ಯಾವುದೇ ವಂಚನೆ ಕಾಣುವುದಕ್ಕೆ ಸಾಧ್ಯವೇ ಇಲ್ಲ. ಇಲಾಖೆಯಲ್ಲಿ ವಿವಿಧ ಸಹಾಯಕ ಹುದ್ದೆಗಳು ಖಾಲಿ ಇವೆ ಎಂದು ಅದರಲ್ಲಿ ಹೇಳಲಾಗಿತ್ತು. ಅಧಿಸೂಚನೆಗೆ ಸಚಿವರದೇ ನಕಲಿ ಸಹಿಯನ್ನು ಕೂಡಾ ಹಾಕಲಾಗಿತ್ತು.
ಸಿಕ್ಕಿಬಿದ್ದಿದ್ದು ಹೇಗೆ?
ಈ ರೀತಿ ನಕಲಿ ಅಧಿಸೂಚನೆ ಹೊರಡಿಸಿದ್ದು ಪಶುಸಂಗೋಪನಾ ಇಲಾಖೆಗೆ ಗೊತ್ತೇ ಇರಲಿಲ್ಲ. ಇತ್ತೀಚೆಗೆ ಇಲಾಖೆಯ ಕಚೇರಿಗೆ ಯಾರೋ ಕರೆ ಮಾಡಿ ಅಧಿಸೂಚನೆಯಲ್ಲಿ ಪ್ರಕಟಿಸಲಾದ ಕೆಲವು ಹುದ್ದೆಗಳ ಬಗ್ಗೆ ವಿಚಾರಣೆ ನಡೆಸಿದರು. ಆಗ ವಿಚಾರಣೆ ನಡೆಸಿದಾಗ ಇದೊಂದು ನಕಲಿ ಅಧಿಸೂಚನೆ ಎಂದು ತಿಳಿಯಿತು. ಬಳಿಕ ಇಲಾಖೆಯ ವತಿಯಿಂದಲೇ ಠಾಣೆಗೆ ದೂರು ನೀಡಲಾಯಿತು. ಆಗ ಸಿಕ್ಕಿಬಿದ್ದವನೇ ಜ್ಞಾನದೇವ ಯಾದವ್.
ಸಾಕಷ್ಟು ಹಣ ದೋಚಿದ್ದ!
ಆದರೆ, ಇಲಾಖೆಗೆ ವಿಷಯ ಗೊತ್ತಾಗಿ, ಪೊಲೀಸರಿಗೆ ದೂರು ಹೋಗಿ, ತನಿಖೆ ಆರಂಭವಾಗುವ ಹೊತ್ತಿಗೆ ಆರೋಪಿ ಸಾಕಷ್ಟು ಅರ್ಜಿಗಳನ್ನು ಸ್ವೀಕರಿಸಿದ್ದ. ಅವರ ಪೈಕಿ ೬೩ ಮಂದಿಯನ್ನು ಆಯ್ಕೆ ಮಾಡಿದ್ದ. ಜುಲೈ 30ರ ಒಳಗೆ ಅಕ್ಷೇಪಗಳಿದ್ದರೆ ಅರ್ಜಿ ಸಲ್ಲಿಸುವಂತೆ ಇಲಾಖೆ ಹೆಸರಿನಲ್ಲಿ ಆದೇಶ ಹೊರಡಿಸಿದ್ದ. ಈ ನಡುವೆ ಕೆಲವರಿಂದ ೨ ಲಕ್ಷದಿಂದ ೪ ಲಕ್ಷ ರೂ. ವರೆಗೆ ವಸೂಲಿ ಕೂಡಾ ಮಾಡಿದ್ದ. ಒಟ್ಟು ೨೫ ಲಕ್ಷ ರೂ. ಆತನ ಕೈಗೆ ಬಂದಿತ್ತು.
ಸಚಿವರ ಆಪ್ತತೆಯ ದುರುಪಯೋಗ
ಪ್ರಭು ಚೌಹಾಣ್ ಅವರಿಗೆ ಮಠಾಠಿ, ಹಿಂದಿ ಚೆನ್ನಾಗಿ ಮಾತನಾಡುತ್ತಾರೆ. ಕನ್ನಡ ಸ್ವಲ್ಪ ಕಷ್ಟ. ಹೀಗಾಗಿ ಮಂತ್ರಿಯಾದಾಗ ಕನ್ನಡ ಕಲಿಯುವ ಆಸಕ್ತಿಯಿಂದ ಜಾಧವ್‌ನನ್ನು ನೇಮಕ ಮಾಡಿಕೊಂಡಿದ್ದ. ೨೦೧೯ರಿಂದ ಸುಮಾರು ಒಂದು ವರ್ಷ ಕಾಲ ಸಚಿವರಿಗೆ ಕನ್ನಡ ಕಲಿಸುತ್ತಾ ಅವರ ಆತ್ಮೀಯತೆಯನ್ನು ಸಂಪಾದಿಸಿದ್ದ. ಈ ನಡುವೆ, ಕೆಲಸ ಬಿಟ್ಟಿದ್ದ.
ಇದೀಗ ಅದೇ ಆತ್ಮೀಯತೆ ಮತ್ತು ಇಲಾಖೆಗಳ ಕಾರ್ಯವೈಖರಿಯ ಅರಿವನ್ನು ʻಚೆನ್ನಾಗಿʼ ಬಳಸಿಕೊಂಡು ಈ ನಕಲಿ ಉದ್ಯೋಗ ನೇಮಕಾತಿ ಜಾಲ ಸೃಷ್ಟಿಸಿದ್ದಾನೆ. ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳನ್ನು ಸಂಪರ್ಕಿಸುವಾಗ, ಸಚಿವರು ತನಗೆ ಆಪ್ತರು, ನಾನು ಅವರಿಗೆ ಕನ್ನಡ ಹೇಳಿಕೊಡುತ್ತಿದ್ದೇನೆ ಎಂದು ವಿಶ್ವಾಸ ಮೂಡಿಸಿ ಹಣ ಪಡೆದಿದ್ದ ಎಂದು ಪೊಲೀಸರು ಕಂಡುಕೊಂಡಿದ್ದಾರೆ.
ಇದನ್ನೂ ಓದಿ| ಪಶು ಸಂಗೋಪನಾ ಇಲಾಖೆ ಹೆಸರಲ್ಲಿ ನಕಲಿ ನೇಮಕಾತಿ ಅಧಿಸೂಚನೆ, ಭಾರಿ ವಂಚನೆ, ಜಾಲದ ಪತ್ತೆಗೆ ಶೋಧ