ಚಾಮರಾಜನಗರ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಿಷನ್ 150 ಗುರಿ ಹೊತ್ತು ಸಾಗುತ್ತಿರುವ ರಾಜ್ಯ ಬಿಜೆಪಿ ಮಾರ್ಚ್ 1ರಿಂದ 20ರವರೆಗೆ ರಾಜ್ಯದ ಎಲ್ಲ ಅಸೆಂಬ್ಲಿ ಕ್ಷೇತ್ರಗಳಲ್ಲೂ ಸಂಚರಿಸುವ ಬೃಹತ್ ರಥ ಯಾತ್ರೆಯ ಭಾಗವಾದ “ವಿಜಯ ಸಂಕಲ್ಪ ರಥಯಾತ್ರೆ”ಗೆ (BJP Rathayatre) ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಚಾಮರಾಜನಗರದ ಮಲೈ ಮಹದೇಶ್ವರ ದೇವಸ್ಥಾನದಿಂದ ಬುಧವಾರ (ಮಾ.1) ಚಾಲನೆ ನೀಡಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸೇರಿದಂತೆ ಇತರ ಪ್ರಮುಖರು ಸಾಥ್ ನೀಡಿದರು.
ಒಟ್ಟು ನಾಲ್ಕು ತಂಡಗಳ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು, ಈಗ ಚಾಮರಾಜನಗರದಲ್ಲಿ ಮೊದಲ ತಂಡಕ್ಕೆ ಚಾಲನೆಯನ್ನು ನೀಡಲಾಗಿದೆ. ಒಟ್ಟಾರೆಯಾಗಿ ಮಾರ್ಚ್ 25ರಂದು ದಾವಣಗೆರೆಯಲ್ಲಿ ನಡೆಯುವ ಬೃಹತ್ ಸಮಾವೇಶದೊಂದಿಗೆ ಈ ರಥಯಾತ್ರೆಗೆ ತೆರೆ ಬೀಳಲಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುವ ನಿರೀಕ್ಷೆ ಇದೆ.
ಈ ರಥಯಾತ್ರೆಯು 10 ಜಿಲ್ಲೆಗಳಾದ ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಸಂಚಾರ ಮಾಡಲಿದೆ.
ಇದನ್ನೂ ಓದಿ: Molasses Scam: ಕಾಕಂಬಿ ರಫ್ತು ಹಗರಣದಲ್ಲಿ ಸಿಎಂ, ಕೇಂದ್ರ ಸಚಿವರು ಭಾಗಿ: ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆ ಆರೋಪ
ಉಸ್ತುವಾರಿ ಸಚಿವ ವಿ. ಸೋಮಣ್ಣ ಗೈರು
ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಸಚಿವರಾದ ವಿ. ಸೋಮಣ್ಣ, ಕೆ.ಸಿ. ನಾರಾಯಣ ಗೌಡ, ವಿ. ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಆರಗ ಜ್ಞಾನೇಂದ್ರ, ಶಾಸಕ ಎನ್. ಮಹೇಶ್, ಸಂಸದ ಶ್ರೀನಿವಾಸ ಪ್ರಸಾದ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಅವರು ಇದರ ಸಾರಥಿಗಳಾಗಿದ್ದಾರೆ. ಆದರೆ, ಸಚಿವ ವಿ.ಸೋಮಣ್ಣ ಗೈರು ಹಾಜರಾಗಿದ್ದರು. ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬಂದರೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಸೋಮಣ್ಣ ಆಗಮಿಸದೇ ಇರುವುದು ಗೊಂದಲಕ್ಕೆ ಕಾರಣವಾಗಿದೆ. ಸಚಿವ ಸೋಮಣ್ಣ ನಡೆ ನಿಗೂಢವಾಗಿದೆ.
20 ದಿನ, 224 ಕ್ಷೇತ್ರಗಳು, 150 ರೋಡ್ ಶೋ, 4 ಕೋಟಿ ಜನ ಸಂಪರ್ಕ
ಯಾತ್ರೆಗಳಲ್ಲಿ 50ಕ್ಕೂ ಹೆಚ್ಚು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಬಿಜೆಪಿ ನಾಯಕರು ಪಾಲ್ಗೊಳ್ಳುತ್ತಾರೆ. ರಾಜ್ಯದ ಎಲ್ಲ 31 ಜಿಲ್ಲೆಗಳು ಮತ್ತು 224 ವಿಧಾನಸಭಾ ಕ್ಷೇತ್ರಗಳ ಸಂಪರ್ಕ ನಡೆಯಲಿದೆ. ನಾಲ್ಕು ರಥಗಳ ಮೂಲಕ ಒಟ್ಟು 8,000 ಕಿ.ಮೀ . ಯಾತ್ರೆ ಸಂಚರಿಸಲಿದೆ. ಯಾತ್ರೆಯ ಉದ್ದಕ್ಕೂ ಒಟ್ಟು 80ಕ್ಕೂ ಹೆಚ್ಚು ರ‍್ಯಾಲಿ ಮತ್ತು 75 ಸಾರ್ವಜನಿಕ ಸಭೆಗಳು ನಡೆಯಲಿವೆ. 150ಕ್ಕೂ ಹೆಚ್ಚು ರೋಡ್ ಶೋಗಳು ಸಹಾ ನಡೆಯಲಿವೆ. ಈ ಮೂಲಕ ನಾಡಿನ 4 ಕೋಟಿ ಜನರನ್ನು ಸಂಪರ್ಕಿಸುವ ಗುರಿಯನ್ನು ಹೊಂದಲಾಗಿದೆ. ಅಲ್ಲದೆ, ಯಾತ್ರೆಯ ಅವಧಿ 20 ದಿನಗಳಾಗಿದ್ದು, 150 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ರಣತಂತ್ರವನ್ನು ಹೆಣೆಯುತ್ತಿದೆ.
ಇದನ್ನೂ ಓದಿ: Govt Employees Strike : ಎನ್‌ಪಿಎಸ್ ರದ್ದು ಪರಿಶೀಲನೆಗೆ ವಿಶೇಷ ಸಮಿತಿ ರಚನೆ; ಸರ್ಕಾರಿ ಆದೇಶದಲ್ಲಿ ಹೇಳಿರುವುದೇನು?
ಮಾರ್ಚ್ 25ರಂದು ದಾವಣಗೆರೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಈ ಮೆಗಾ ರ‍್ಯಾಲಿ ನಡೆಯಲಿದೆ. ಬಿಜೆಪಿ ಸರ್ಕಾರಗಳ ಸಾಧನೆ, ಕಾಂಗ್ರೆಸ್‍ನ ಭರವಸೆಗಳು ಏನಾಗಿವೆ? ಎಂಬಿತ್ಯಾದಿ ವಿಷಯಗಳನ್ನು ತಿಳಿಸುವ ಉದ್ದೇಶವನ್ನು ಈ ರಥಯಾತ್ರೆ ಹೊಂದಿದೆ.