Site icon Vistara News

Just Save | ಸರ ಸರನೇ ಹರಿದು ಬಂದ ನಾಗರಹಾವಿನ ಮೇಲೆ ಕಾಲಿಟ್ಟ ಪುಟ್ಟ ಬಾಲಕ; ಪಾರಾಗಿದ್ದು ಹೇಗೆ?

just safe snake

ಮಂಡ್ಯ: ಇದೊಂದು ಮೈನವಿರೇಳಿಸುವ ಪ್ರಸಂಗ. ತಾಯಿಯೊಬ್ಬಳು ತನ್ನ ಮಗುವನ್ನು ರಕ್ಷಿಸಿದ ಘಟನೆ. ಆಕೆಯ ಸಮಯಪ್ರಜ್ಞೆಗೆ ಈಗ ಎಲ್ಲೆಡೆ ಪ್ರಶಂಸೆಯ ಮಾತುಗಳು ಬರಲಾರಂಭಿಸಿದೆ. ಒಂದೇ ಒಂದು ಕ್ಷಣ ಆಕೆ ಮೈಮರೆತಿದ್ದರೂ ಪುಟ್ಟ ಬಾಲಕ ಹಾವಿನ ಕಡಿತಕ್ಕೆ ಒಳಗಾಗಿ ಬಿಡುತ್ತಿದ್ದ. ಈಗ ತಾಯಿಯೊಬ್ಬಳು ಹಾವಿನಿಂದ ತನ್ನ ಮಗುವನ್ನು ಬಚಾವ್‌ ಮಾಡಿದ ವಿಡಿಯೊ ವೈರಲ್‌ ಆಗಿದ್ದು, ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇಲ್ಲಿನ ಮದ್ದೂರು ತಾಲೂಕಿನ ವೈದ್ಯನಾಥಪುರದ ಕೆಮ್ಮಣ್ಣು ಕಾಲುವೆ ರಸ್ತೆಯ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಮನೆಯಿಂದ ತಾಯಿ ಮತ್ತು ಮಗ ಹೊರಗೆ ಬಂದಿದ್ದಾರೆ. ಈ ವೇಳೆ ಆವರಣಕ್ಕೆ ಅಂಟಿಕೊಂಡಿರುವಂತೆ ಇರುವ ಮೆಟ್ಟಿಲಿನ ಕೆಳಗೆ ನಾಗರಹಾವೊಂದು ತೆವಳಿಕೊಂಡು ಬರುತ್ತಿತ್ತು. ಇದನ್ನು ಗಮನಿಸದ ಪುಟ್ಟ ಬಾಲಕ ಕಾಲನ್ನು ಎಂದಿನಂತೆ ಕೆಳಕ್ಕೆ ಇಟ್ಟಿದ್ದಾನೆ. ಕಾಲಿನ ಕೆಳಗೆ ಹಾವಿನ ತಲೆಯೂ ಇದ್ದು, ಅದು ತಟ್ಟನೆ ಹಿಂದೆ ಸರಿದಿದೆ. ಆದರೆ, ತಕ್ಷಣವೇ ತನ್ನ ಹೆಡೆ ಬಿಚ್ಚಿದೆ. ಈ ವೇಳೆ ಅಲ್ಲೇ ಇದ್ದ ತಾಯಿ ಇದನ್ನು ಹೆದರಿದ್ದಲ್ಲದೆ ಹಾವೆಂದು ಕೂಗಿ ಕೆಳಗೆ ಜಿಗಿದಿದ್ದಾರೆ. ತಾಯಿ ಕೂಗಿದ್ದರಿಂದ ಗಾಬರಿಗೊಂಡ ಬಾಲಕ ತಿರುಗಿ ಹಾವಿನತ್ತಲೇ ಓಡಿದ್ದಾನೆ. ಆಗ ತಕ್ಷಣವೇ ಮಗನ ಕೈಹಿಡಿದ ತಾಯಿಯು ತನ್ನ ಸೆಳೆದುಕೊಂಡಿದ್ದರಿಂದ ಹಾವಿನ ಕಡಿತದಿಂದ ಬಾಲಕ ಕ್ಷಣಮಾತ್ರದಲ್ಲಿ (Just Save) ಪಾರಾಗಿದ್ದಾನೆ.

Just Safe

ಎದೆ ಝಲ್ಲೆನಿಸುವ ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಹಾವನ್ನು ಕಂಡು ಬಾಲಕ ಚೀರಾಡಿದಾಗ, ಹೆಡೆ ಎತ್ತಿ ಕಚ್ಚಲು ಬರುವ ಹಾವಿನಿಂದ ಬಾಲಕನ ತಾಯಿ ಸಮಯಪ್ರಜ್ಞೆಯಿಂದ ಕ್ಷಣಮಾತ್ರದಲ್ಲಿ ಎಳೆದುಕೊಂಡು ಕಾಪಾಡಿದ್ದಾರೆ. ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಘಟನೆಯಿಂದ ನಮಗೆಲ್ಲ ಭಯವಾಗಿತ್ತು, ಅದೃಷ್ಟವಶಾತ್ ಯಾವುದೇ ಸಮಸ್ಯೆ ಆಗಲಿಲ್ಲ ಎಂದು ಬಾಲಕನ ತಂದೆ ವಿಷ್ಣು ಪ್ರಸಾದ್ ಪ್ರತಿಕ್ರಿಯಿಸಿದ್ದಾರೆ. ನನ್ನ ಪತ್ನಿ ಪ್ರಿಯಾ ಮಗನನ್ನು ಕಾಪಾಡಿದ್ದಾರೆ. ಘಟನೆಯಿಂದ ನನ್ನ ಪತ್ನಿಗೆ ತುಂಬ ಭಯವಾಗಿತ್ತು. ದೇವರ ದಯೆಯಿಂದ ನನ್ನ ಮಗು ಬದುಕಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | Snake Bite | ಮನೆಯಲ್ಲಿ ಮಲಗಿದ್ದಾಗ ಹಾವು ಕಚ್ಚಿ ಬಾಲಕಿ ಸಾವು

Exit mobile version