Site icon Vistara News

ಯಾರೆಷ್ಟೇ ವಿರೋಧಿಸಿದರೂ ಹೆಡಗೇವಾರ್ ‌ಪಾಠ ಸೇರ್ಪಡೆ ಖಚಿತ ಎಂದ ಬಿ.ಸಿ. ನಾಗೇಶ್

B C NAGESH

ತುಮಕೂರು: ಯಾರು ಎಷ್ಟೇ ವಿರೋಧಿಸಿದರೂ ಹತ್ತನೇ ತರಗತಿ ಪಠ್ಯ ಪುಸ್ತಕದಲ್ಲಿ ಆರ್‌ಎಸ್ಎಸ್ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ್‌ ಅವರ ವಿಚಾರದ ಪಠ್ಯವನ್ನು ಸೇರಿಸುವುದು ಖಚಿತ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಸ್ಪಷ್ಟಪಡಿಸಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಅವರು, ಹೆಡಗೇವಾರ್‌ ವಿಚಾರವನ್ನು ಸೇರಿಸುವುದನ್ನು ಮತ್ತೊಮ್ಮೆ ಖಚಿತಪಡಿಸಿದ್ದು, ಸೇರ್ಪಡೆಗೆ ಆಕ್ಷೇಪ ವ್ಯಕ್ತಪಡಿಸುವ ಪ್ರತಿಪಕ್ಷಗಳ ನಾಯಕ ಹೇಳಿಕೆಗಳಿಗೆ ಸೊಪ್ಪು ಹಾಕುವುದಿಲ್ಲ ಎಂದಿದ್ದಾರೆ.

ಹೆಗಡೇವಾರ್‌ ಕುರಿತ ಪಠ್ಯ ಯಾಕಿರಬೇಕು ಎಂಬ ಬಗ್ಗೆ ಹಲವು ಸಮರ್ಥನೆಗಳನ್ನು ನೀಡಿದ ಅವರು, ʼರಾಷ್ಟ್ರೀಯ ಸ್ವಯಂಸೇವಕ ಸಂಸ್ಥೆಯನ್ನು ಸ್ಥಾಪಿಸಿದ ಹೆಡಗೇವಾರ್ ಅವರು ತಮ್ಮ ಜೀವನವನ್ನು ಸಮಾಜದ ಏಳಿಗೆಗಾಗಿ ಮುಡಿಪಾಗಿಟ್ಟವರು. ಸ್ವಾತಂತ್ರ್ಯ ಹೋರಾಟದಲ್ಲಿ ಜೈಲಿಗೆ ಹೋಗಿದ್ದವರು. ಅಲ್ಲದೆ, ಬ್ರಿಟಿಷ್ ರಾಣಿಯ ಹುಟ್ಟಿದ ದಿನದಂದು ಕೊಟ್ಟಂತಹ ಮಿಠಾಯಿಯನ್ನು ನಿರಾಕರಿಸುವ ದೇಶಪ್ರೇಮವನ್ನು ಬಾಲ್ಯದಲ್ಲೇ ಪ್ರಕಟಿಸಿದ್ದರು. ಮತ್ತು ಇದಕ್ಕಾಗಿ ಶಿಕ್ಷೆಗೆ ಒಳಗಾಗಿದ್ದರುʼ ಎಂದು ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘ ಈಗ ಜಗತ್ತಿನ ಅತಿದೊಡ್ಡ ಸಂಘಟನೆ. 1925ರಲ್ಲಿ ಅವರು ಕಟ್ಟಿದ ಈ ಸಂಸ್ಥೆ ಶತಮಾನದ ಅಂಚಿನಲ್ಲಿದ್ದು ಇನ್ನೂ ಬೆಳೆಯುತ್ತಿದೆ. ಇಂತಹ ಸಂಘಟನೆಯನ್ನು ಕಟ್ಟಿದ ವ್ಯಕ್ತಿಯ ಬಗ್ಗೆ ಪಠ್ಯದಲ್ಲಿ ಬಂದರೆ ಏನು ತಪ್ಪು ಎಂದು ಬಿ.ಸಿ ನಾಗೇಶ್‌ ಪ್ರಶ್ನಿಸಿದ್ದಾರೆ.

ಟಿಪ್ಪು ಪಠ್ಯ ಯಾಕೆ ವಿರೋಧಿಸಿಲ್ಲ?
ʼಟಿಪ್ಪು ಸುಲ್ತಾನ್‌ ಬಗ್ಗೆ ಪಠ್ಯದಲ್ಲಿ ಸೇರಿಸಿದಾಗ ಯಾವುದೇ ವಿರೋಧ ಇರಲಿಲ್ಲ. ಟಿಪ್ಪು ಸುಲ್ತಾನ್ ಕೊಡಗಿನಲ್ಲಿ ಹಿಂದೂಗಳ ಮಾರಣಹೋಮ ಮಾಡಿದ್ದ ವ್ಯಕ್ತಿ. ಈ ದೇಶದ ಸಂಸ್ಕೃತಿಯನ್ನು ಹಾಳು ಮಾಡಿದವರ ಇತಿಹಾಸ ಹಾಕಿದಾಗ ಯಾವುದೇ ವಿರೋಧ ಇರಲಿಲ್ಲ. ಆದರೆ ದೇಶಕ್ಕಾಗಿ ಶ್ರಮಿಸಿದ ಆದರ್ಶ ವ್ಯಕ್ತಿಯಾದ ಹೆಡಗೇವಾರ್ ಬಗ್ಗೆ ಪಠ್ಯ ಸೇರಿಸುವುದಕ್ಕೆ ಇವರು ವಿರೋಧಿಸುತ್ತಿದ್ದಾರೆ. ಹೆಗಡೇವಾರ್‌ ವಿಚಾರಗಳನ್ನು ಕೋಟ್ಯಂತರ ಜನ ಓದಿದರೆ ಈ ದೇಶದಲ್ಲಿ ಕಮ್ಯುನಿಸ್ಟ್ ವಿಚಾರ ಎಲ್ಲಿ ಕಳೆದು ಹೋಗಿಬಿಡುತ್ತದೋ ಎಂಬ ಭಯ ಇವರಿಗೆʼ ಎಂದು ಬಿ.ಸಿ. ನಾಗೇಶ್‌ ಹೇಳಿದರು.

ಇದನ್ನೂ ಓದಿ: ರಸ್ತೆ ಬದಿಯ ಹೋಟೆಲ್‌ನಲ್ಲಿ ತಿಂಡಿ, ಚಹಾ ಸೇವಿಸಿ ಸರಳತೆ ಮೆರೆದ ಶಿಕ್ಷಣ ಸಚಿವ ನಾಗೇಶ್‌

Exit mobile version